Saturday 29 December 2007

ಬಡವಾ ನೀ ಮಡಗಿದ ಹಾಂಗಿರು ! - ಒಂದು ತರಲೆ ಗುಬ್ಬಚ್ಚಿಯ ನೀತಿ ಕಥೆ.

( ಅನಾಮಧೇಯ ಇಂಗ್ಲೀಷ್ ಮೂಲದಿಂದ ಅನುವಾದಿತ)

- ನವರತ್ನ ಸುಧೀರ್.

ಗುಬ್ಬಚ್ಚಿ ಚಿಕ್ಕ ಪಕ್ಷಿ ಅದರ ರೆಕ್ಕೆ ಪುಕ್ಕಗಳು ಜಾಸ್ತಿಯಾಗಿಲ್ಲದಿರುವುದರಿಂದ ಹೆಚ್ಚಿನ ಚಳಿ ತಡೆಯಲಾಗುವುದಿಲ್ಲ. ಅದೇ ಕಾರಣಕ್ಕಾಗಿ ಉತ್ತರಭಾರತದ ಗುಬ್ಬಚ್ಚಿಗಳೆಲ್ಲವೂ ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿರುವ ದಕ್ಷಿಣ ಕ್ಕೆ ವಲಸೆ ಹೋಗುತ್ತವಂತೆ.

ಒಂದು ಗುಬ್ಬಚ್ಚಿ ಮಾತ್ರ ಎಲ್ಲರಿಗಿಂತಲೂ ತಾನು ಸ್ವಲ್ಪ ಜಾಸ್ತಿ ಬುದ್ಧಿವಂತ ಎಂದು ಅಹಂಭಾವವಿದ್ದು, ಎಲ್ಲರ ಹಾಗೆ ನಾನೇಕೆ ಮಾಡಬೇಕು? ಬದಲಾಗಿ ಈ ಬಾರಿ ಇಲ್ಲಿಯೇ ಉಳಿದು ಚಳಿಗಾಲದ ಆನಂದವನ್ನು ಸವಿಯೋಣ ಅಂದುಕೊಂಡು ತನ್ನ ಬಂಧು ಬಾಂಧವರ ಜೊತೆ ದಕ್ಷಿಣಕ್ಕೆ ಹೋಗದೆ ಉಳಿದುಕೊಂಡಿತು. ಚಳಿಗಾಲ ಶುರುವಾದ ಮೊದಲ ಕೆಲವು ದಿನಗಳಲ್ಲೇ ಆ ಗುಬ್ಬಚ್ಚಿಗೆ ಮೈ ಕೊರೆತ ಮತ್ತು ನಡುಕ ಆರಂಭವಾಗಿ ಹೆದರಿಕೆಯಾಗತೊಡಗಿತು. ಆರಂಭದಲ್ಲೇ ಹೀಗಾದರೆ ಮುಂದೇನು ಗತಿಯಪ್ಪಾ ಎಂದು ಯೋಚಿಸಿ ಸ್ವಲ್ಪ ತಡವಾಗಿದ್ದರೂ ಚಿಂತೆಯಿಲ್ಲ ಈಗಲಾದರೂ ದಕ್ಷಿಣಕ್ಕೆ ಹಾರಿಬಿಡೋಣ ಎಂದು ನಿರ್ಧಾರ ಮಾಡಿ ಬೆಳಕಾಗುವ ಮೊದಲೇ ದಕ್ಷಿಣಾಭಿಮುಖವಾಗಿ ಹಾರತೊಡಗಿತು. ರೆಕ್ಕೆಗಳ ಮೇಲೆ ಶೇಖರವಾಗಿದ್ದ ಮಂಜಿನ ತೆಳು ಪದರ ಆ ಚಳಿಯಲ್ಲಿಯೇ ಸ್ವಲ್ಪ ಹಿಮಗಟ್ಟಿ ರೆಕ್ಕೆ ಭಾರ ಎನಿಸತೊಡಗಿತು. ಬೇಗನೆ ಅಯಾಸವೂ ಆಯಿತು. ದಿಗಂತದಲ್ಲಿ ಸೂರ್ಯ ಆಗತಾನೆ ಮೇಲೇರುತ್ತಿದ್ದ. ಅವನ ಕಿರಣಗಳು ಇನ್ನೂ ಅಷ್ಟು ಪ್ರಖರವಾಗಿರಲಿಲ್ಲ. ಆಗಾಗ ಮಧ್ಯೆ ಸ್ವಲ್ಪ ಭೂಮಿಯ ಮೇಲಿಳಿದು ವಿಶ್ರಾಂತಿ ಪಡೆದು ಮುಂದುವರೆಯುವುದು ಒಳಿತು ಎಂದೆನಿಸಿ ಆ ಗುಬ್ಬಚ್ಚಿ ಒಂದು ಹುಲ್ಲು ಗಾವಲಿನ ಮೇಲಿಳಿಯಿತು. ಅಲ್ಲಿಯೇ ಮೇಯುತ್ತಿದ್ದ ಹಸುವೊಂದರ ಹಿಂದೆ ನೆರಳಿನಲ್ಲಿ ಕುಳಿತು ವಿಶ್ರಮಿಸತೊಡಗಿತು. ತನ್ನ ಹಿಂದೆ ಕಾಲ ಬಳಿ ಸಣ್ಣ ಗುಬ್ಬಚ್ಚಿಯೊಂದು ಕುಳಿತಿದೆ ಎಂಬ ಅರಿವಿಲ್ಲದ ಆ ಹಸು ತನ್ನ ಪ್ರಾತರ್ವಿಧಿಗನುಗುಣವಾಗಿ ಸೆಗಣಿ ಹಾಕಿತು. ತಪತಪನೆ ಬಿದ್ದ ಬಿಸಿ ಬಿಸಿ ಸೆಗಣಿಯಲ್ಲಿ ಆ ಚಳಿಯಿಂದ ನಡುಗುತ್ತಿದ್ದ ಗುಬ್ಬಿ ಸಂಪೂರ್ಣವಾಗಿ ಮುಳುಗಿಹೋಯಿತು.

ಸದೈವವಶಾತ್ ಆ ಬಿಸಿ ಸೆಗಣಿಯಿಂದ ಗುಬ್ಬಚ್ಚಿಯ ರೆಕ್ಕೆಯ ಮೇಲ್ಗಟ್ಟಿದ್ದ ಹಿಮ ಬೇಗನೆ ಕರಗಿ ಅದರ ದೇಹಕ್ಕೂ ಸ್ವಲ್ಪ ತಾಪ ತಟ್ಟಿ ಮೈ ಬೆಚ್ಚಗಾಯಿತು. ಮನಸ್ಸಿಗೆ ಅದೇನೋ ಹಿತವಾದ ಅನುಭವವಾಯಿತು. ಗುಬ್ಬಿಗೆ ಹಾಡಬೇಕೆನಿಸಿತು. ತನಗೆಷ್ಟು ಸಾಧ್ಯವೋ ಅಷ್ಟುಎತ್ತರದ ಧ್ವನಿಯಲ್ಲಿಸುಶ್ರಾವ್ಯವಾಗಿ ಹಾಡತೊಡಗಿತು.

ಅಲ್ಲಿ ಹತಿರದಲ್ಲಿಯೇ ನಡೆದು ಹೋಗುತ್ತಿದ್ದ ಒಂದು ಬೆಕ್ಕಿಗೆ ಈ ಹಾಡು ಕೇಳಿಸಿತು. ಈ ಹಾಡಿನ ಮೂಲ ಎಲ್ಲಿ ಎಂದು ಹುಡುಕಿದ ಆ ಬೆಕ್ಕು ಬೇಗನೆ ಆ ಸೆಗಣಿಯ ಕುಪ್ಪೆಯನ್ನು ಕೆದರಿಸಿ, ಅಲ್ಲಿ ಹುದುಗಿ ಹಾಡಿನಲ್ಲಿ ತನ್ಮಯವಾಗಿದ್ದ ಗುಬ್ಬಚ್ಚಿಯನ್ನು ಹಿಡಿದು ಕಚ್ಚಿ ನುಂಗಿಹಾಕಿತು.

ನೀತಿ ಪಾಠ ೧: ನಿಮ್ಮ ಮೇಲೆ ಸೆಗಣಿ ಹಾಕುವವರೆಲ್ಲರೂ ನಿಮ್ಮ ಶತ್ರುಗಳಲ್ಲ!

ನೀತಿ ಪಾಠ ೨: ನಿಮ್ಮನ್ನು ಸೆಗಣಿಯ ಕುಪ್ಪೆಯಿಂದ ಕೆದರಿ ಹೊರಗೆ ತೆಗಯುವರೆಲ್ಲರೂ ನಿಮ್ಮ ಮಿತ್ರರಲ್ಲ!

ನೀತಿ ಪಾಠ ೩: ನೀವು ಸೆಗಣಿಯ ರಾಶಿಯಲ್ಲಿ ಮುಳುಗಿದ್ದಾಗ್ಯೂ , ಬೆಚ್ಚನೆಯ ಅನುಭವವಾಗಿ ಮನಸ್ಸಿಗೆ
ಹಿತವೆನಿಸುತ್ತಿದ್ದರೆ ಬಾಯಿ ಮುಚ್ಚಿಕೊಂಡಿರಿ! ಹಾಡಬೇಡಿ! ಯಾರಾದರೂ ಉದ್ಧಾರ
ಮಾಡಿಯಾರು.ಎಚ್ಚರಿಕೆ!

***************************************

Sunday 23 December 2007

ಕನ್ನಡ ನಾಡಿಗೆ, ಕನ್ನಡಿಗರಿಗೆ ನಿಮ್ಮ ಕೃತಜ್ನತೆ ತೋರಿಸಿ - ಗುರುಗಳ ಮಾರ್ಗದರ್ಶನ.

- ನವರತ್ನ ಸುಧೀರ್

ಬೆಂಗಳೂರಿನಲ್ಲಿ ನೆಲಸಿರುವ ಕೇರಳದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಒಕ್ಕೂಟ ಕಳೆದ ಭಾನುವಾರ ೨೫ ನವೆಂಬರ್ ೨೦೦೭ ರಂದು ತಮ್ಮ ವಾರ್ಷಿಕೋತ್ಸವವನ್ನು ಆಚರಿಸಿತು. ಸೆಂಟ್ರಲ್ ಕಾಲೇಜಿನ ಜ್ನಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭಕ್ಕೆ ಆಹ್ವಾನಿತ ಬೆರಳೆಣಿಕೆಯ ಕನ್ನಡಿಗರಲ್ಲಿ ನಾನೂ ಒಬ್ಬನಾಗಿದ್ದೆ.

ಬರೀ ಮಲಯಾಳಿಗಳಿಂದ ಕಿಕ್ಕಿರಿದಿದ್ದ ಸಭಾಂಗಣ. ಹೆಂಗಸರು ಮಕ್ಕಳಾದಿಯಾಗಿ ಕುಟುಂಬದ ಎಲ್ಲ ಸದಸ್ಯರೂ ಇದ್ದದ್ದರಿಂದ ಸಾಕಷ್ಟು ಗದ್ದಲವಿತ್ತು.

ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಫೋಸಿಸ್‍ನ ಮುಖ್ಯಸ್ಥ ಶ್ರೀ. ಕ್ರಿಸ್ ಗೋಪಾಲಕ್ರಿಷ್ಣನ್. ಗೌರವ ಅತಿಥಿಗಳಾಗಿ “ಕಾರ್ಟ್‍ಮನ್” ಎಂದು ವಿಖ್ಯಾತರಾದ ಪ್ರೊ. ಎನ್. ಎಸ್. ರಾಮಸ್ವಾಮಿ ಹಾಗೂ ಅಂದಿನ ಮುಖ್ಯ ಸ್ಪಾನ್ಸರ್ ಶ್ರೀ. ಬಿಜು ಜಾನ್. ಎಲ್ಲರೂ ಯಶಸ್ವಿ ಮಲೆಯಾಳಿಗಳು ಮಾತ್ರ.

ನಿರ್ವಾಹಕರು ಕಾರ್ಯಕ್ರಮವನ್ನು ಮಲಯಾಳಿಯಲ್ಲಿಯೇ ಕಾಂಪೇರ್ ಮಾಡುತ್ತ ನಡೆಸಿಕೊಟ್ಟರೂ, ಸಂಘದ ಅಧ್ಯಕ್ಷ ,ಕಾರ್ಯದರ್ಶಿಗಳು ಮತ್ತು ಮುಖ್ಯ ಅತಿಥಿಗಳಾದ ಕ್ರಿಸ್ ಗೋಪಾಲಕೃಷ್ಣನ್ ಎಲ್ಲರೂ ಇಂಗ್ಲೀಷ್ನಲ್ಲೇ ಭಾಷಣ ಮಾಡಿದರು. ಸ್ವಲ್ಪ ಬೋರಾಗುವಂತಿದ್ದ ಭಾಷಣಗಳನ್ನು ಕೇಳಿ ಸಭಿಕರ ಗದ್ದಲ ಸ್ವಲ್ಪ ನಿಧಾನವಾಗಿ ಏರುವಂತಿತ್ತು.

ಪ್ರೊ. ರಾಮಸ್ವಾಮಿಯವರು ತಮ್ಮ ಭಾಷಣ ಮಾತ್ರ ಮಲಯಾಳಂನಲ್ಲಿಯೇ ಅರಂಭಿಸಿದರು. ನನಗೆ ಅವರ ಭಾಷಣ ನೂರಕ್ಕೆ ನೂರರಷ್ಟು ಅರ್ಥವಾಗದಿದ್ದರೂ, ಒಟ್ಟಾರೆ ಅದರ ಸಾರಂಶವೇನು ಅನ್ನುವುದು ಚೆನ್ನಾಗಿಯೇ ತಿಳಿದುಬಂತು. ಮಲೆಯಾಳಿಗಳು ಎಲ್ಲಿ ಹೋದರು ತಮ್ಮ ಜನರನ್ನು ಒಟ್ಟು ಗೂಡಿಸಿಕೊಳ್ಳುವ ಅಪ್ರತಿಮ ಸಂಘಟನಕಾರರು, ತಾವು ವಲಸೆ ಹೋದ ಬೇರೆ ರಾಜ್ಯ ಅಥವಾ ದೇಶಗಳನ್ನು ತಮ್ಮ ಕಾಯಕ ಕೌಶಲಗಳಿಂದ ಅಭಿವೃಧ್ಧಿ ಮತ್ತು ಉಧ್ಧಾರ ಮಾಡುತ್ತ ತಮ್ಮ ಹುಟ್ಟು ಕೇರಳವನ್ನು ಮಾತ್ರ ಪ್ರಗತಿಯ ಪಥದಲ್ಲಿ ದೂಕಿ “ಹಾಳು ಮಾಡದೆ” ಔದ್ಯೋಗಿಕವಾಗಿ ಹಾಗೂ ಅರ್ಥಿಕವಾಗಿಯೂ ಹಿಂದೆ ಇಟ್ಟಿರುವ ಮಹಾನ್‍ದೇಶಭಕ್ತರು ಎಂದು ಕುಚೋದ್ಯ ಮಾಡುತ್ತ ತಿಳಿಹಾಸ್ಯದ ನೆರವಿನಿಂದ ಸಭಿಕರ ಮನಸೆಳೆದರು ಪ್ರೊ. ರಾಮಸ್ವಾಮಿಯವರು. ಅವರ ಪ್ರತಿಯೊಂದು ಮಾತಿಗೂ ನಗುತ್ತಿದ್ದ ಮಲಯಾಳಿ ಇಂಜಿನಿಯರ್ ಸಮುದಾಯಕ್ಕೆ ಹಿತವಚನ ನೀಡುತ್ತಿದ್ದಂತೆಯೇ, “ಈ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಕ್ಕೆ ಕೇವಲ ಮಲಯಾಳೀ ಆತಿಥೇಯರನ್ನು ಮಾತ್ರ ಕರೆದು ಆದರಿಸಿದ್ದು ಸರಿಯಲ್ಲ. ನೀವುಗಳು ಇರುವ ನಾಡು ಕರ್ನಾಟಕ. ಕುಡಿಯುವ ನೀರು ಅಲ್ಲಿಯದು. ಕನ್ನಡಿಗರಿಗೆ ನಿಮ್ಮ ಕೃತಜ್ನತೆಯ ಕುರುಹಾಗಿ ಇಂತಹ ಸಮಾರಂಭಗಳಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕನ್ನಡಿಗರನ್ನು ಆಹ್ವಾನಿಸಿ ಆದರಿಸಬೇಕು” ಎಂದು ಮಾರ್ಗದರ್ಶನ ನೀಡಿದರು. “ಮುಂದಿನ ವರ್ಷ ನಾನು ಈ ವೇದಿಕೆಯ ಮೇಲೆ ಕೇವಲ ಕನ್ನಡಿಗ ದಿಗ್ಗಜಗಳನ್ನು ನೋಡುವಹಾಗಿರಬೇಕು” ಎಂದರು. ಬರೀ ಮಲೆಯಾಳಿಗಳೇ ತುಂಬಿದ್ದ ಆ ಸಭೆಯಲ್ಲಿ ತಮ್ಮವರಿಗೇ ನೀಡಿದ ಅವರ ಈ ಸಂದೇಶ ಹೃದಯಪೂರ್ವಕವಾಗಿ ಬಂದು ಅಸ್ವಾರ್ಥತೆಯಿಂದ ತುಂಬಿದ್ದಂತೆ ತೋರಿತು.

ಇವರ ನಂತರ ಮಾತಾನಾಡಿದ ಯುವ ಉದ್ಯಮಿ ಬಿಜು ಜಾನ್ ಕೂಡ ಎಲ್ಲರಿಗೂ ಕನ್ನಡ ಕಲೆತು, ಕನ್ನ್ನಡಿಗರೊಂದಿಗೆ ಬೆರೆತು ಇರುವ ಸಂದೇಶ ನೀಡಿದರು.

ಅಧಿಕಾರ ಮೋಹ- ದಾಹ, ವಚನಭ್ರಷ್ಟತೆ, ಅನೀತಿಯುತ ವಿದ್ಯಮಾನಗಳ ಬಗ್ಗೆಯೇ ಕೇಳುತ್ತಿರುವ ಈ ಕಿವಿಗಳಿಗೆ, ಕೃತಾರ್ಥಭಾವದ ಗುರು ಸಂದೇಶ ಕೇಳಿ ಈ ಜಗತ್ತಿನ ಭವಿಷ್ಯ ನಾನಂದುಕೊಂಡಷ್ಟು ಕರಾಳವಿಲ್ಲ ಅನಿಸಿತು.

“ಯಾದ್ ವಶೇಮ್” - ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ.

- ನವರತ್ನ ಸುಧೀರ್

ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು.

“ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು ಪುಸ್ತಕಗಳನ್ನು ಓದಿ ನಾನು ಕಳಿಸಿದ ಅಭಿನಂದನಾಪೂರ್ವಕ ಈ ಮೇಲ್ ಮೂಲಕ ಪರಿಚಿತರಾದ ಶ್ರೀಮತಿ ನೇಮಿಚಂದ್ರರವರು, ನಾನು ಕಳಿಸಿದ್ದ ದೀಪಾವಳಿ ಶುಭಾಶಯಕ್ಕೆ ಪ್ರತ್ಯುತ್ತರವಾಗಿ ತಮ್ಮ ಹೊಸ ಕಾದಂಬರಿಯ ಬಗ್ಗೆ ಬರೆದು ಅದನ್ನು ಓದಲು ಪ್ರೇರೇಪಿಸಿದರು.

ಹೋದ ವಾರ ಗಾಂಧೀಬಜಾರ್ ನಲ್ಲಿನ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡುತಂದು ಇದೀಗ ಓದಿ ಮುಗಿಸಿದೆ. ನನ್ನ ಇತಿ ಮಿತಿಗಳ ಅರಿವಿರುವ ನಾನು ಈ ಕಾದಂಬರಿಯನ್ನು ವಿಶ್ಲೇಷಿಸಿ ವಿಮರ್ಶೆಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಓದಿ ಮುಗಿದ ನಂತರ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ಸಂಪದ ಸಮುದಾಯದಲ್ಲಿ ಹಂಚಿಕೊಳ್ಳುವ ಪ್ರಯತ್ನ ಈ ಕಿರುಲೇಖನ.

ಚಿಕ್ಕಂದಿನಿಂದಲೂ ದ್ವಿತೀಯ ಮಹಾಯುಧ್ಧ ಹಾಗೂ ಜರ್ಮನಿಯಲ್ಲಾದ ಹಾಲೋಕಾಸ್ಟ್ ಮಹಾಪಾತಕದ ಬಗ್ಗೆ ಬರೆಯಲ್ಪಟ್ಟ ಅನೇಕ ಪುಸ್ತಕ, ಕಾದಂಬರಿಗಳನ್ನು ಓದಿದ್ದೆ. ಎರಡೂ ವಿಶ್ವ ಸಮರಗಳಲ್ಲಿ ಬ್ರಿಟನ್‍ನ ಯುಧ್ಧಮಂತ್ರಿಯಾಗಿದ್ದ ಚರ್ಚಿಲ್‍ರ ದ್ವಿತೀಯ ಸಮರದ ಆರು ಹೊತ್ತಿಗೆಗಳಲ್ಲಿ ಪ್ರಕಟಿತ ಬರಹಗಳು, ಅಮೇರಿಕದ ಯಹೂದಿ ಮೂಲದ ಖ್ಯಾತ ಲೇಖಕರಾಗಿದ್ದ ಮ್ಯಾಕ್ಸ್ ಡಿಮಾಂಟ್, ಲಿಯಾನ್ ಉರಿಸ್‍ ಇತ್ಯಾದಿಯವರು ಬರೆದ ಪುಸ್ತಕಗಳು, ಕಾದಂಬರಿಗಳನ್ನು ಓದಿದ್ದ, ಮತ್ತು ಈ ವಿಷಯ ಕುರಿತ ಅನೇಕ ಚಲನಚಿತ್ರಗಳನ್ನು ನೋಡಿದ್ದ ನನಗೆ ಆಗ ನಡೆದಿದ್ದ ಘಟನೆಗಳ ಬಗ್ಗೆ ಒಂದು ನಿರ್ದಿಷ್ಟ ನಿಲುವು ರೂಪುಗೊಂಡಿತ್ತು. ಯಹೂದಿಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸ, ಬೇರೆಯವರ ದಬ್ಬಾಳಿಕೆಯಲ್ಲಿ ಅವರು ಪಟ್ಟ ಕಷ್ಟ ಕಾರ್ಪಣ್ಯಗಳು, ಇವೆಲ್ಲವನ್ನೂ ದಿಟ್ಟತನದಿಂದ ಎದೆಗುಂದದೆ ಎದುರಿಸಿ ಕಾಪಾಡಿಕೊಂಡ ತಮ್ಮ ಸಂಸ್ಕಾರ, ಮತ್ತು ಸಂಸ್ಕೃತಿ, ಶತೃರಾಷ್ಟ್ರಗಳಿಂದ ಸುತ್ತುವರಿದ್ದಿದ್ದರೂ ಇಸ್ರೇಲ್ ದೇಶದ ನಾಗರಿಕರ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳ ಬಗ್ಗೆ ಬಹಳ ಓದಿದ್ದ ನನಗೆ ಯಹೂದಿ ಜನಾಂಗದ ಬಗ್ಗೆ ಗೌರವಭಾವ ಬೆಳೆದಿತ್ತು. ಆದರೂ ಆಗಾಗ ಭಾವನಾತ್ಮಕವಾಗಿ ನನ್ನ ಮೇಲೆ ಯಹೂದಿಪರ ಏಕಪಕ್ಷೀಯ ಪರಿಣಾಮವಾಗಿದೆಯೇನೋ ಅಂತ ಅನಿಸಿದ್ದುಂಟು. ನನಗೆ ತಿಳಿದಂತೆ ಇದಕ್ಕೆ ವಿರುಧ್ಧ ದೃಷ್ಟಿಕೋಣವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಮಾಧ್ಯಮ ಸಾಕಷ್ಟು ಇರಲಿಲ್ಲ ಅಥವಾ ಇದ್ದರೂ ಅಷ್ಟೊಂದು ಜನಜನಿತವಾಗಿರಲಿಲ್ಲ.

ಮೊದಲ ನೋಟಕ್ಕೆ, ಜೆರೂಸಲೆಂನ ಗೋಳುಗೋಡೆ ಮತ್ತು ಮಸೀದಿಯ ವರ್ಣಚಿತ್ರವಿರುವ ನೇಮಿಚಂದ್ರರ ಕಾದಂಬರಿಯ ಮುಖಪುಟ ಬಹಳ ಆಕರ್ಷಕವಾಗಿ ಕಂಡಿತು. ಅಚ್ಚುಕಟ್ಟಾದ ಮುದ್ರಣ. ಯುಧ್ಧ ಮುಗಿದ ಅರವತ್ತು ವರ್ಷಗಳ ನಂತರ ಬಹುಚರ್ಚಿತ ಹಾಲೋಕಾಸ್ಟ್ ಬಗ್ಗೆ ಬೆಂಗಳೂರಿನ ಈ ಇಂಜಿನಿಯರ್ ಲೇಖಕಿ ಅದೇನು ಹೊಸದಾಗಿ ಬರೆದಿರುತ್ತಾರೋ ನೋಡುವಾ ಎಂದು ಸ್ವಲ್ಪ ಸಂಶಯಪೂರಿತ ಕುತೂಹಲದಿಂದಲೆ ಓದಲಾರಂಭಿಸಿದೆ. ಮೊದಲ ಹತ್ತು ಹದಿನೈದು ಪುಟಗಳಲ್ಲೇ ಕಾದಂಬರಿ ನನ್ನನ್ನು ಸೆರೆಹಿಡಿಯಿತು. ನಮ್ಮ ಚಾಮರಾಜಪೇಟೆ, ಗೋರಿಪಾಳ್ಯ, ಸೌತ್ ಪರೇಡ್, ಕೋನೇನ ಅಗ್ರಹಾರಗಳಲ್ಲಿ ಶುರುವಾದ ಕಥೆ ಜರ್ಮನಿಯ ಡಕಾವ್, ಅಲ್ಲಿಂದ ಅಮೇರಿಕ, ಇಸ್ರೇಲ್‍ನ ಟೆಲ್ ಅವಿವ್ ಮತ್ತು ಜೆರೂಸಲೆಂ ಎಲ್ಲಾ ಸುತ್ತಿಕೊಂಡು ಮರಳಿ ಚಾಮರಾಜಪೇಟೆಯಲ್ಲಿಯೇ ಮುಕ್ತಾಯವಾಯಿತು. ಅಲ್ಲಲ್ಲಿಯೇ ಸೂಕ್ತವಾಗಿ ಮುದ್ರಿಸಿದ ಉಲ್ಲೇಖಿತ ಸ್ಥಳಗಳ, ಮನೆಗಳ ಕಪ್ಪು ಬಿಳುಪು ಛಾಯಾಚಿತ್ರಗಳ ನೆರವಿನಿಂದ ಮನಃಪಟಲದ ಮೇಲಣ ಚಲನಚಿತ್ರವಾಗಿ ತೋರತೊಡಗಿತು. ಅವರ ಸರಳ ಸುಂದರ ಕನ್ನಡ, ವಿವರಣಾ ಶೈಲಿ, ಕಥೆಯಲ್ಲಿ ಬಂದ ಆಕಸ್ಮಿಕ ತಿರುವುಗಳು, ಚಿರಪರಿಚಿತ ನಂಬಲರ್ಹ ಪಾತ್ರಗಳು, ನಲವತ್ತರಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಔದ್ಯೋಗಿಕ ಇತಿಹಾಸ, ಎಲ್ಲವನ್ನು ಚಾಣಾಕ್ಷತೆಯಿಂದ ಹೆಣೆದ ರೀತಿ ನಿಜಕ್ಕೂ ಪ್ರಶಂಶಾರ್ಹ. ನಾನು ಹಿಂದೆ ಓದಿದ್ದ ನೆವಿಲ್ ಶ್ಯೂಟ್ ಕಾದಂಬರಿಗಳಲ್ಲಿನ ಸಾಧಾರಣ ಭಾವೋದ್ವೇಗಗಳಿರುವ ಹುಲುಮಾನವ ಪಾತ್ರಗಳು ನೆನಪಿಗೆ ಬಂದವು. ಹಾಗೆಯೆ, ಫ್ರೆಡರಿಕ್ ಫೋರ್‍ಸೈಥ್‍ ಕಾದಂಬರಿಗಳಂತೆ ಕಾಲಚಕ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಹೋಗಿಬರುತ್ತ ಕಥೆ ಈಗಿನ ಇಪ್ಪತ್ತೊಂದನೇ ಶತಮಾನಕ್ಕೆ ಬಂದು ಸೇರಿ ಈಗಿನ ವಿದ್ಯಮಾನಗಳನ್ನು ಆ ಹಳೆಯ ಇತಿಹಾಸದ ಬೆಳಕಿನಲ್ಲಿನೋಡುವ ಪ್ರಯತ್ನ ಮಾಡುತ್ತದೆ. ನಾನು ಕಾದಂಬರಿಯ ಕಥೆಯನ್ನು ಹೇಳಿ ಓದುಗರ ಸ್ವಾರಸ್ಯವನ್ನು ಕಡಿಮೆ ಮಾಡಬಯಸುವುದಿಲ್ಲ.

ನನಗೆ ಬಹಳ ಮೆಚ್ಚಿಗೆಯಾದ ಅಂಶ ಉತ್ತರಾರ್ಧದಲ್ಲಿ ಕಾದಂಬರಿಯ ನಾಯಿಕೆಯ ಮನಸ್ಸಿನಾಳದ ಚಿಂತನ. ಮೊದಮೊದಲು ವಿಧಿಯ ಹೊಡೆತಕ್ಕೆ ಸಿಕ್ಕಿ ದಿಕಾಪಾಲಾಗಿದ್ದ ಹೆಣ್ಣೊಬ್ಬಳು, ಹೊರದೇಶದಲ್ಲಿ ಕಷ್ಟದ ಕುಲುಮೆಯಲ್ಲಿ ಬೆಂದರೂ ಧೃತಿಗೆಡದೆ, ಸುತ್ತಲಿನವರ ನಿರಪೇಕ್ಷ, ನಿಷ್ಕಾಮ ಪ್ರೀತಿ ವಾತ್ಸಲ್ಯಗಳ ನೆರವಿನಿಂದ ತನ್ನತನ ಕಂಡುಕೊಳ್ಳುತ್ತಾಳೆ. ತನ್ನವರ ಬಗ್ಗೆ ಅಪಾರ ಪ್ರೀತಿ ಅನುಕಂಪ ಇದ್ದಾಗ್ಯೂ, ಯಾವ ಭಾವಾತ್ಮಕ ಒತ್ತಡಕ್ಕೂ ಈಡಾಗದೆ ಯಾವ ಒಂದು ಪೂರ್ವಗ್ರಹವಿಲ್ಲದೆ, ಏಕಪಕ್ಷೀಯವಾಗಿಲ್ಲದ ತಾರ್ಕಿಕವಾದ ಒಂದು ದಿಟ್ಟ ನಿಲುವು ತಳಿಯುತ್ತಾಳೆ. ಯಹೂದಿಯಾದರೂ ತನ್ನವರ ನಂಬಿಕೆ, ತಾತ್ವಿಕ ನಿಲುವು, ಬೇರೆಯವರ ಬಗ್ಗೆ ಅವರ ನಡತೆ, ವರ್ತನೆ, ಯಾವುದೂ ಪ್ರಶ್ನಾತೀತವಲ್ಲ ಅವಳಿಗೆ.

ನೇಮಿಚಂದ್ರರವರಿಗೆ ಇತಿಹಾಸ ಒಂದು ನೆಪಮಾತ್ರ. ಬೇರೆ ಅನೇಕ ಕಾದಂಬರಿಗಳಂತೆ ಯಾವುದೋ ಒಂದು ಜಾಡು ಹಿಡಿದು, ಕಾದಂಬರಿಕಾರರ ಪೂರ್ವಗ್ರಹಗಳನ್ನು ಓದುಗರ ಮೇಲೆ ಹೇರುವ ಪ್ರಯತ್ನವಿಲ್ಲ. ಓದುಗರನ್ನು ಸಕಾರಾತ್ಮಕವಾಗಿ ಚಿಂತಿಸಲು ಪ್ರಚೋದಿಸುವ ಪ್ರಾಮಾಣಿಕ ಪ್ರಯತ್ನ ಈ ಕಾದಂಬರಿಯದು ಅಂತ ನನ್ನ ಅನಿಸಿಕೆ.

ಕಥೆಯ ಬೆನ್ನು ಹತ್ತಿ ಇವರು ಮಾಡಿದ ಸಂಶೋಧನೆ, ಸ್ವಂತ ಹಣ ಖರ್ಚುಮಾಡಿ ಕಥೆ ನಡೆಯುವ ಬೇರೆ ಬೇರೆ ಖಂಡಗಳ ಪ್ರತಿಯೊಂದು ನಗರಗಳಿಗೂ, ಸ್ಥಳಗಳಿಗೂ ಭೇಟಿಯಿತ್ತು, ಅಲ್ಲಿಯ ಜನರನ್ನು ಹುಡುಕಿ ಸಂದರ್ಶಿಸಿ, ಅಂತರ್ಜಾಲದಲ್ಲಿ ತಡಕಾಡಿ, ಅನೇಕ ಪುಸ್ತಕ, ಹೊತ್ತಿಗೆಗಳನ್ನು ಓದಿ ಎಲ್ಲವೂ “ ಆಥೆಂಟಿಕ್” ಆಗಿರಬೇಕೆಂಬ ಹಟ ಸಾಧಿಸಿ ತೋರಿಸಿದ ಇವರ ಪ್ರಯತ್ನ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಎಚ್. ಎ. ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು, ಸಂಸಾರ ಮತ್ತು ವೃತ್ತಿಜೀವನದ ಸಾಮರಸ್ಯ ಕಾಪಾಡಿಕೊಳ್ಳುತ್ತ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಾರ್ಯ ಅಸಾಧಾರಣವಲ್ಲದೆ ಮತ್ತೇನು?

ನವಕರ್ನಾಟಕ ಪ್ರಕಾಶನದ ಈ ಕಾದಂಬರಿ ಓದಿ ನೋಡಿ ಅಂತ ಆಗ್ರಹಿಸಲು ನನಗೆ ಸ್ವಲ್ಪವೂ ಸಂಕೋಚವಿಲ್ಲ.


( ಮೇಲ್ಕಂಡ ಪುಸ್ತಕ ಪರಿಚಯ ಮೊದಲು ಬಾರಿ "ಸಂಪದ" -ಅಂತರ್ಜಾಲ -ಪತ್ರಿಕೆಯಲ್ಲಿ ೨೨-೧೨-೨೦೦೭ರಂದು ಪ್ರಕಟವಾಯಿತು. http://sampada.net/article/6756 )

Friday 23 November 2007

ಟ್ವೆಂಟಿ ಟ್ವೆಂಟಿ ವರ್ಲ್ಡ್ ಕಪ್ ವಿಜಯಾನಂತರ ರವಿ ಶಾಸ್ತ್ರಿ ಧೋಣಿ ಸಂದರ್ಶನ -

( ಮೂಲ - ಇಂಗ್ಲೀಷ್‍ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ)
- ನವರತ್ನ ಸುಧೀರ್

ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ.
ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು
ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!”
ಧೋ: ಧನ್ಯವಾದ ರವಿ, ಪಂದ್ಯದ ಕೊನೆ ನಿಜಕ್ಕೂ ರೋಮಾಂಚಕವಾಗಿತ್ತು. ನಮ್ಮ ಹುಡುಗರು ಕೊನೆಯವರೆಗೂ
ಧೈರ್ಯಗುಂದಲಿಲ್ಲ. ಅದೇ ಕಾರಣದಿಂದ ನಾವು ಕಪ್ ಗೆದ್ದದ್ದು.
ರ: ನಿಮ್ಮ ಅಭಿಪ್ರಾಯದಲ್ಲಿ ನಿಮ್ಮ ಈ ವಿಜಯಕ್ಕೆ ಮುಖ್ಯ ಕಾರಣ ಯಾರು?
ಧೋ: ನಾವೆಲ್ಲರೂ ಚೆನ್ನಾಗಿಯೇ ಆಡಿದ್ದೆವು. ಆದರೆ ನನ್ನ ಅಭಿಪ್ರಾಯದಲ್ಲಿ ಪಂದ್ಯ ಗೆಲ್ಲಲು ಮುಖ್ಯ ಕಾರಣರಾದವರು
ಅಜಿತ್ ಅಗರ್ಕರ್.
ರ: (ಕಕ್ಕಾಬಿಕ್ಕಿಯಾಗಿ) ಅಜಿತ್ ಅಗರ್ಕರ್!!! ಅವರು ಫೈನಲ್ನಲ್ಲಿ ಆಡಲೇ ಇಲ್ಲವಲ್ಲ!!!!
ಧೋ: ಅದಕ್ಕೇ ಹೇಳಿದ್ದು. ಅಷ್ಟು ಕಡಿಮೆ ಸ್ಕೋರಿನ ಮ್ಯಾಚ್ನಲ್ಲಿ ಅವರೇನಾದರೂ ಆಡಿದ್ದರೆ, ಅವರ ನಾಲ್ಕು ಓವರ್‍ಗಳಲ್ಲಿ
ಖಂಡಿತ ಭರ್ಜರಿ ರನ್ ಮಾಡಿ ಪಾಕಿಸ್ತಾನ ಗೆಲ್ಲೋದು ಖಚಿತವಾಗುತ್ತಿತ್ತು.
ರ: (ಉಗುಳು ನುಂಗಿ) ಸರಿ.. ಸರಿ..ಈ ವಿಜಯಕ್ಕಾಗಿ ನೀವು ಮತ್ತೆ ಯಾರಿಗೆ ಧನ್ಯವಾದ ಕೊಡಲಿಚ್ಚಿಸುತ್ತೀರಿ?
ಧೋ: ನಮ್ಮೆಲ್ಲರ ಧನ್ಯವಾದಗಳು ಮೊದಲು ನಮ್ಮ ಟೀಮ್ ಡಾಕ್ಟರ್‍ರವರಿಗೇ ಸಲ್ಲಬೇಕು. ನಮ್ಮ ಫೈನಲ್ ಮುನ್ನ

ತಯಾರಿಗೆ ಅವರು ಸಲ್ಲಿಸಿದ ಸೇವೆ ಅಮೋಘ!
ರ: (ತಬ್ಬಿಬ್ಬಾಗಿ) ನನಗಿದ್ಯಾಕೋ ಅರ್ಥವಾಗಿಲ್ಲ. ಕನ್‍ಫ್ಯೂಸ್ ಆಗ್ತಿದೆ. ನಿಮ್ಮ ಡಾಕ್ಟರ್ ಅದೇನು ಸಹಾಯ ಮಾಡಿದರು?
ನಿಮ್ಮ ಕೋಚ್ ಅಥವಾ ಫಿಷಿಯೋ ಸಹಾಯ ಅಂದರೆ ಒಪ್ಪಿಕೋಬಹುದು… ಆದರೇ….
ಧೋ: (ಅಡ್ಡ ಬಾಯಿ ಹಾಕುತ್ತ) ಇದರಲ್ಲಿ ಕನ್‍ಫ್ಯೂಸ್ ಆಗೋ ಮಾತೇನಿದೆ? ಅವರು ಸೆಹ್ವಾಗ್‍ನನ್ನು ಫಿಟ್‍ನೆಸ್

ಟೆಸ್ಟ್‍ನಲ್ಲಿ ಫೇಲ್ ಮಾಡಿದ್ದೆ ನಮ್ಮ ಟೀಮ್‍ಗೆ ಕೊಟ್ಟ ಅಮೋಘ ಅನುದಾನ. ನಾವೆಲ್ಲರೂ ಮೈದಾನದಲ್ಲಿ ಮಾಡಿದ್ದಕ್ಕಿಂತಲೂ
ಹೆಚ್ಚಿನ ಶ್ರೇಯ ಅವರಿಗೇ ಹೋಗಬೇಕು. ಅವರು ನಮ್ಮ ಟೀಮ್‍ನ ಟ್ಯಾಕ್‍ಟಿಕ್ಸ್‍ನ ಮುಖ್ಯ ಭಾಗ.
ರ: (ತಲೆ ಕೊಡವುತ್ತ) ಹೂಂ! ಹೋಗಲಿ ಬಿಡಿ! ಈ ನಿಮ್ಮ ವಿಜಯದ ಸಂಕೇತವಾದ ಕಪ್ ಯಾರಿಗೆ ಡೆಡಿಕೇಟ್ ಮಾಡ್ತೀರಿ?
ಧೋ: ನಾನು ಮತ್ತು ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನೂ ಕೂಡ ಒಮ್ಮತದಿಂದ ಈ ಕಪ್ ಅನ್ನು ಸಚಿನ್, ಗಂಗೂಲಿ

ಮತ್ತು ಡ್ರಾವಿಡ್‍ರವರಿಗೆ……..
ರ: (ಮಧ್ಯೆ ಬಾಯಿ ಹಾಕುತ್ತ) ನಿಜವಾಗಿಯೂ ನೀವುಗಳು ಬಹಳ ಪ್ರಶಂಸಾರ್ಹರು. ನಿಮಗೆಲ್ಲ ನಿಮ್ಮ ಹಿರಿಯರ ಬಗ್ಗೆ ಇಷ್ಟು
ಗೌರವ ಮತ್ತು ಅಭಿಮಾನವಿರುವುದು ಕಂಡು……..
ಧೋ: ಸ್ವಲ್ಪ ತಡೆಯಿರಿ ರವಿ! ನಾನು ಹೇಳುವುದನ್ನು ಪೂರ್ತಿ ಕೇಳಿಸಿಕೊಳ್ಳಿ! ಅವರೇನಾದರೂ ಈ ಪಂದ್ಯಾವಳಿಯಲ್ಲಿ
ಆಡಿದ್ದಿದ್ದರೆ ನಾವು ಮೊದಲನೇ ಸುತ್ತಿನಲ್ಲೇ ಮನೆಯ ಮುಖ ನೋಡುತ್ತಿದ್ದೆವು. ಅವರುಗಳು ತಾವಾಗಿಯೆ ಈ

ಪಂದ್ಯಾವಳಿಯಲ್ಲಿ ಆಡದಿರಲು ನಿರ್ಧಾರ ತೆಗೆದುಕೊಂಡದ್ದಕ್ಕೆ ನಾವೆಲ್ಲರೂ ಭಗವಂತನಿಗೆ ವಂದಿಸಬೇಕು. ಅವರ
ರಾಜಕೀಯವಿಲ್ಲದ ಕಾರಣ ನಮಗೆಲ್ಲರಿಗೂ ಕ್ರಿಕೆಟ್ ಉತ್ತಮವಾಗಿ ಆಡಿ ಕಪ್ ಗೆಲ್ಲಲು ಸಾಧ್ಯವಾಯಿತು.
ರ: ಹೋಗಲಿ ಬಿಡಿ. ಅಂತೂ ಪಂದ್ಯ ಕೊನೆಯ ಓವರ್‍ವರೆಗೂ ಬಹಳ ರೋಚಕವಾಗಿತ್ತು. ಕೊನೆಯಲ್ಲಿ ಪಾಕಿಸ್ತಾನದ

ಮಿಸ್‍ಬಾಹ್ ಮಾಡಿದ ಸಣ್ಣದೊಂದು ತಪ್ಪಿನಿಂದಾಗಿ ಕಪ್ ನಮ್ಮ ವಶವಾಯಿತು.
ಧೋ: ಸಣ್ಣದೊಂದು ತಪ್ಪು? ಇದೇನು ಹೀಗೆ ಹೇಳುತ್ತೀರಿ ರವಿ! ಆ ಶಾಟ್ ಹೊಡೆದ ಕೂದಲೆ ಆ ಮಿಸ್‍ಬಾಹ್ ನನಗೆ ಹೇಳಿದ
ಮಾತು -ನೋಡೋ ಧೋಣಿ. ನಾನು ಯಾರೂ ಇಲ್ಲದ ಕಡೆ ಯಲ್ಲಿ ಶಾಟ್ ಹೊಡೆದಿದ್ದೇನೆ ! ಅಂತ. ಪಾಪ ಆ

ಮುಂಡೇದರ ಮಹಾ ತಪ್ಪು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಮಲೆಯಾಳಿಗಳಿರುತ್ತಾರೆ ಅನ್ನುವುದನ್ನು ಮರೆತದ್ದು!

ಈ ಎಕ್ಸ್ಪ್ಲನೇಷನ್ ಕೇಳುತ್ತಿದ್ದಂತೆಯೇ ಸಂದರ್ಶಕ ರವಿ ಶಾಸ್ತ್ರಿ ಜ್ನಾನ ತಪ್ಪಿ ಕೆಳಗುರುಳಿದ. ಧೋಣಿ ಕಪ್ ಎತ್ತಿಕೊಂಡು ಮುನ್ನಡೆದ ಜಂಬದ ಕೋಳಿಯ ರೀತಿಯಲಿ.

*************
( ಈ ಸಂದರ್ಶನ ಬಹಳ ಹಿಂದೆ ಅಕ್ಟೋಬರ್ ೩ ನೇ ತಾರೀಕು "ಸಂಪದ " ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿತ್ತು.) http://sampada.net/article/5838

“ಕರ್”- ನಾಟಕದ ರಾಜಕೀಯ, ವಿಸರ್ಜನೆ, ಕರ್ನಾಟಕದ ರಕ್ಷಣೆ ಇತ್ಯಾದಿ ವಿಚಾರಗಳ ಬಗ್ಗೆ ಕಾಡುಹರಟೆ

- ನವರತ್ನ ಸುಧೀರ್

“ಪ್ರಸಕ್ತ ಪರಿಸ್ಠಿತಿಯಲ್ಲಿ ಕರ್ನಾಟಕದ ವಿಧಾನಸಭೆಯನ್ನು ವಿಸರ್ಜನೆ ಮಾಡುವದೇ ಸೂಕ್ತ ಎಂಬ ತಮ್ಮ ಅಭಿಮತವನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳಿಸಿರುವ ಸಂದೇಶ ದಲ್ಲಿ ವ್ಯಕ್ತಪಡಿಸಿದ್ದಾರೆ”” ಅನ್ನುವ ಶೀರ್ಷಿಕೆ ಓದುತ್ತಿದ್ದಂತೆ ಅದು ಯಾಕೆ ವಿಸರ್ಜನೆ, ವಿಧಾನಸಭಾಭಂಗವೇಕಾಗಲಿಲ್ಲ? ಬಹುಷಃ ಭಂಗವಾಗಲು ಅದು ತಪಸ್ಸಲ್ಲ ಅಂತಿರಬಹುದೇ? ಹೀಗೇ ಏನೇನೋ ಪ್ರಶ್ನೆಗಳು ಮನಸ್ಸಿನಲ್ಲಿ. ಈ ವಿಚಾರ ಮಂಥನದ ಫಲ ಈ ಹರಟೆಯ ಬರಹ.

ಮೊದಲು For the sake of good order ಅನ್ನೋಹಾಗೆ ನನ್ನ ಈ (ತಲೆ) ಹರಟೆಯ ಲೇಖನಕ್ಕೆ ಅನ್ವಯಿಸುವ ಕೆಲವು definitions ಕೊಡುವುದು ಸೂಕ್ತ ಅಂತ ಅನಿಸಿಕೆ.

“ಕರ್” ನಾಟಕದಲ್ಲಿನ ಕರ್‍ ಹಿಂದಿಯ “ಮಾಡು” ಅಲ್ಲ. ಹಾಗೆಯೇ ಮರಾಠಿಯ ವೆಂಗ್ಸಾರ್- , ಗವಾ- ಮತ್ತು ಟೆಂಡುಲ್- ಗೆ ಸೇರಿಸುವ ಕರ್‍ ಕೂಡ ಅಲ್ಲ. ಅದು ಇಂಗ್ಲೀಷ್ ನ ಕೀಳಾರ್ಥದ Cur= ನಾಯಿಕುನ್ನಿ ಅಂತ. ಗೌರವಯುತವಾದ “ನಾಯಿಮರಿ” ಅನ್ನೋ ಸಂಬೋಧನೆ pet ಆದರೆ ಮಾತ್ರ ಅಂತ ನನ್ನ ನಂಬೋಣ.
ನಾಟಕ - ಹೆಚ್ಚು ಅರ್ಥೈಸುವ ಅಗತ್ಯವಿಲ್ಲ. ಇದನ್ನೂ ಆಡುವುದರಿಂದ ಒಂದು ಆಟವೂ ಹೌದು. ರಾಜಕಾರಣಿಗಳಿಗೆ ಎಲ್ಲವೂ ಆಟವೇ. ದೊಂಬರಾಟ ಮಾತ್ರ ನಾಟಕವಲ್ಲ.
ವರ್ಜ್ಯ - ಬಿಡಲು ಯೋಗ್ಯವಾದದ್ದು, ತ್ಯಾಜ್ಯ - something to be avoided, something which merits rejection ಅಂತ.
ತ್ಯಾಜ್ಯ - ವರ್ಜ್ಯ , ಬಿಡಲು ಯೋಗ್ಯವಾದದ್ದು -unaccepatable, undesirable, something to be eschewed ಅಂತ
ಅರೆ ವರ್ಜ್ಯ ಅಂದರೆ ತ್ಯಾಜ್ಯ, ತ್ಯಾಜ್ಯ ಅಂದರೆ ವರ್ಜ್ಯ. ಇದೇನ್ರೀ ಅಂತ ಕೇಳಬೇಡಿ. ನನಗೂ ಸ್ವಲ್ಪ ನಿಮ್ಮಂತೆಯೇ confusion.( ಕನ್ನಡಕಸ್ತೂರಿ.ಕಾಂ ನ ನಿಘಂಟು ಇದರ ಮೂಲ)
ಸದ್ಯಕ್ಕೆ ಅದು ಹಾಗೇ ಲೂಸ್ ಆಗಿ ಅರ್ಥ ಇರಲಿ.
ವಿಸರ್ಜನೆ - ಚೆದರಿಕೆ, ಸಭೆ- ಸಮಿತಿ ಮೊದಲಾದವುಗಳ ಮುಕ್ತಾಯ , cession, dissolution ಅಂತ ಒಂದು; - ಬಿಡುವುದು, ತ್ಯಜಿಸುವುದು - abandoning, getting rid of, giving up, quitting ಅಂತ ಇನ್ನೊಂದು.

ಒಟ್ಟಿನಲ್ಲಿ ವಿಸರ್ಜನೆ ಮಾಡೋದು ವರ್ಜ್ಯ ಮತ್ತು ತ್ಯಾಜ್ಯ ವಸ್ತುಗಳನ್ನು ಅಂತ ಭಾವಾರ್ಥ.

ಅದರೆ ಈ ಎರಡೂ ಅರ್ಥಗಳು ಪಾಪ ನಮ್ಮೆಲ್ಲರಿಗೂ ಬೇಕಾದ ಗಣಪತಿಯ ವಿಸರ್ಜನೆಗೆ ಅದು ಹೇಗೆ ಅನ್ವಯಿಸುತ್ತೋ ಆ ದೇವರೇ ಬಲ್ಲ. ಯಾಕೆಂದರೆ ಗಣಪತಿ ವರ್ಜ್ಯವೂ ಅಲ್ಲ, ತ್ಯಾಜ್ಯವೂ ಅಲ್ಲ.

ನಮ್ಮ ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದಾಗ, ಅದರಲ್ಲೂ ಮುಖ್ಯ ಭೂಮಿಕೆ ವಹಿಸಿದವರನ್ನು ಕುರಿತು ಇಂಗ್ಲೀಷ್ ಮೂಲದ “cur” ಪದದ ಉಪಯೋಗ ಅದೆಷ್ಟು ಸೂಕ್ತವೋ ನಿರ್ಣಯಿಸುವುದು ಕಷ್ಟ. ನಮ್ಮ ನಾಡಿನ ರಾಜಕಾರಣಿಗಳ ಬಗ್ಗೆ ವ್ಯಾಖ್ಯಾನಿಸುವಾಗ ಸಂದರ್ಭಾನುಸಾರ ಸರ್ವಭಕ್ಷಕ ಹಂದಿಗಳಿಗೋ, ಯಾವಾಗಲೂ ಕಚ್ಚಾಡುವ ನಾಯಿಗಳಿಗೋ, ಸತ್ತವರನ್ನೂ ಬಿಡದೆ ಕಿತ್ತಾಡುವ ರ(ಹ)ಣಹದ್ದುಗಳಿಗೋ, ಯಾರು ಏನೇ ಹೊಡಕೊಳ್ಳಲಿ ನಾವು ಮಾತ್ರ ದೇಶ “ಶೇವೇ” ಮಾಡುತ್ತೇವೆ ಅಂತ ನಿರಾತಂಕವಾಗಿ ಒಡಾಡಿಕೊಂಡಿರುವ ಕೋಣಗಳಿಗೋ ಹೋಲಿಸುವುದು ಸರ್ವೇ ಸಾಮಾನ್ಯ. ಬಿಹಾರದ ಲಾಲೂ ಪ್ರಸಾದರು ದನಕರುಗಳಿಗೇ ಮೀಸಲಾದ ಭೂಸಾ ಖರೀದಿಯಲ್ಲಿಯೇ ಕೋಟ್ಯಾಂತರ ರೂಪಾಯಿ ಭಕ್ಷಿಸಿ ಹಗರಣ ಮಾಡಿದ್ದು ಮರೆಯೋದಕ್ಕಾಗುತ್ಯೇ?

ಅದೊಂದು ಕಾಲವಿತ್ತು. ನರಸಿಂಹಸ್ವಾಮಿಯವರ ಕವಿತೆಯಲ್ಲಿನ ಮಲ್ಲಿಗೆ; ಕುವೆಂಪುರವರ ಸಹ್ಯಾದ್ರಿಯ ಶ್ರೀಗಂಧ, ಮಂಡ್ಯದ ಮೈಶುಗರ್‍ ನ ಕಬ್ಬಿನ ಸಕ್ಕರೆ ಇವೆಲ್ಲ ಮೈಸೂರಿನ ಹೆಸರೆತ್ತಿದಾಗಲೆಲ್ಲ ಸುವಾಸನೆ ಮತ್ತು ಸಿಹಿಯ ನೆನಪು ತರುವಂತಿತ್ತು.

ಆದರೆ ಈಗಿನ ರಾಜಕಾರಣದ ಕೆಸರಿನಲ್ಲಿ ,ಕೆಸರೇ ಕೋಣಗಳ ತಾಣವೂ ಅನ್ನೋದನ್ನ ಮರೆತು, ಅಲ್ಲಿಯೇ ಕಮಲವನ್ನರಳಿಸಹೋಗಿ, ಚಡ್ಡಿ ಕಳೆದುಕೊಂಡ ಯಡ್ಡಿಯೂರಪ್ಪನವರ ದುಸ್ಸಾಹಸದ ದುರಂತ ಮತ್ತು ಅದರಿಂದ ಹರಡಿದ ದುರ್ಗಂಧದ ಮೈಸೂರು “ಸ್ಮೆಲ್ಲಿ”ಗೆ ಎಲ್ಲರೂ ಮೂಗು ಹಿಡಿಯುವಂತಾಗಿದೆ. (ತಿರುಚಿದ ಮೈಸೂರು ಸ್ಮೆಲ್ಲಿಗೆ ಕವನಗಳು ಬೇರೆಡೆ ಅಂತರ್ಜಾಲದ “ಸಂಪದ”ದಲ್ಲಿಯೇ ಪ್ರಕಟಿತ.)

ದುರ್ಗಂಧಕ್ಕೂ ವಿಸರ್ಜನೆಗೂ ಅದೆಂಥ ನಂಟು? ವರ್ಜ್ಯವಾದದ್ದನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ತ್ಯಾಜ್ಯವಾಗಿ ದೇಹದಿಂದ ವಿಸರ್ಜನೆಯಾದಾಗ ದುರ್ಗಂಧ ಜೊತೆಯಲ್ಲಿರುವುದು ಗೊತ್ತೇ ಇದೆ. ವಿಧಾನಸಭೆಯೂ ತ್ಯಾಜ್ಯವಾದಾಗ ವಿಸರ್ಜಿಸಲರ್ಹ ಅಂತ ರಾಜ್ಯಪಾಲರ ಅಭಿಪ್ರಾಯ. ಅಂತೂ ಎರಡೂ ಹೇಸಿಗೆ ಕೆಲಸಗಳೇ!

ಹಾಗೆಯೇ ವಿಸರ್ಜನೆಗೂ ನೀರಿಗೂ ನಂಟಿದೆಯಲ್ಲವೇ. ಮತ್ತೆ ಮೊದಲಿಗೆ ನಮ್ಮಲ್ಲಿ ಗಣಪತಿ ಮತ್ತು ಬಂಗಾಳದಲ್ಲಿನ ದುರ್ಗಾ ವಿಸರ್ಜನೆ ಜ್ನಾಪಕಕ್ಕೆ ಬರುತ್ತಲ್ಲವೇ. ದೈಹಿಕ ವಿಸರ್ಜನೆಗಳಾದಾಗ ನೀರಿನಿಂದ ಫ್ಲಷ್ ಮಾಡಿ ಒಳಚರಂಡಿಗೆ ಕಳುಹಿಸುವ ವ್ಯವಸ್ಥೆ ಇರುವುದು ಎಲ್ಲರಿಗೂ ಗೊತ್ತು. ಇದರಿಂದ ಆ ವಿಸರ್ಜಿತ ತ್ಯಾಜ್ಯ ಅದೇ ರೂಪದಲ್ಲಿ recycle ಆಗುವ ಸಂಭಾವನೆ ಇಲ್ಲವೇ ಇಲ್ಲ ಅನ್ನಲಾಗದಿದ್ದರೂ ಅಪರೂಪ. ಇದೇ ವ್ಯವಸ್ಥೆಯನ್ನು ವಿಧಾನಸಭೆಯ ವಿಸರ್ಜನೆಗೂ ಅಳವಡಿಸಿ ಈಗಿನ ರಾಜಕಾರಣಿಗಳನ್ನು ಪರ್ಮನೆಂಟ್ ಆಗಿ ಒಳಚರಂಡಿಗೆ ಕಳಿಸುವ ಹಾಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅನ್ನಿಸೋಲ್ಲವೇ! ಇಲ್ಲೂ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಈಚೀಚೆಗೆ ಸಮಾಜದ ಒಳಚರಂಡಿಗಳಲ್ಲೇ ಓಡಾಡುತ್ತ , drain inspector ಗಳಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರೊಬ್ಬರು ಕುಟುಂಬದವರೆಲ್ಲರೂ ಕೂತು ನೋಡುವಂಥ “ಉತ್ತಮ ಅಭಿರುಚಿಯ” ಸಿನಿಮಾ ಮಾಡುತ್ತೇನೆ ಎಂದು ಹೆದರಿಸಿ ಆ ನಿಟ್ಟಿನಲ್ಲಿ ಒಳಚರಂಡಿಯಲ್ಲಿರುವುದನ್ನು ಬಯಲಿಗೆಳೆದು ತಮ್ಮ ವೈಯುಕ್ತಿಕ ತೆವಲು ತೀರಿಸಿಕೊಂಡರೆ ಗಬ್ಬು ನಾತ ಇನ್ನೂ ಎಲ್ಲೆಡೆ ಹರಡುವುದು ಮಾತ್ರ ಖಂಡಿತ.

ಮರುಚುನಾವಣೆ. ಮತ್ತದೇ ಖೊಟಾ ನಾಣ್ಯಗಳ ಮರುಚಲಾವಣೆ. ಅದೇ ಬೀಜಾಸುರರ ಹಾಗೂ ಮಹಿಷಾಸುರರ ಜನನ. ನಮ್ಮ ಕನ್ನಡಿಗರ ಬುಧ್ಧಿಮತ್ತೆ ಮತ್ತು ಜಾಣತನ ನೋಡಿದರೆ ಮತ್ತೊಮ್ಮೆ ಈ ಭ್ರಷ್ಟ ರಾಜಕಾರಣಿಗಳೇ ಇನ್ನೂ ಹೆಚ್ಚಿನ ಬಹುಮತದಿಂದ ಚುನಾಯಿತರಾಗಿ ಬರುವ ಸಂಭಾವನೆಯನ್ನು ಖಂಡಿತ ತಳ್ಳಿಹಾಕುವಂತಿಲ್ಲ. ಈಗಿನ ರಾಜಕಾರಣಿಗಳು ಸ್ವಲ್ಪವೂ ಸಂವೇದನೆಯಿಲ್ಲದವರು. ಇವರುಗಳ ನಿಘಂಟಿನಲ್ಲಿ ಮಾನ,ಮರ್ಯಾದೆ, ನೀತಿ, ನ್ಯಾಯ, ಸ್ವಾಭಿಮಾನ, ದೇಶಪ್ರೇಮ, ದೇಶಭಕ್ತಿ, ಇತ್ಯಾದಿಗಳು ಕಾಣುವುದೇ ಇಲ್ಲವಂತೆ. ಹಾದರ ಮಾಡಿ ಬಂದ ಕೆಲವೇ ತಾಸುಗಳಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದೆ TV9 ಸ್ಟೂಡಿಯೋನಲ್ಲಿ ಕುಳಿತು ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಉಧ್ಧಟತನ ಕಂಡಿಲ್ಲವೇ? ಯಾರೇ ಎಷ್ಟೇ ಉಗಿಯಲಿ, ತೆಗಳಲಿ, ಅದ್ಯಾವುದೂ ಅವರಿಗೆ ತಟ್ಟುವುದಿಲ್ಲ. ಕೋಣದ ಮೈ ಮೇಲಿನ ನೀರಿನಂತೆ. ಒದರಿಕೊಂಡು ಮುಂದೆ ಹೋಗುವುದು.

ಒಂದು ಹಳೆಯ ಇಂಗ್ಲೀಷ್ ಜೋಕ್ ಜ್ನಾಪಕಕ್ಕೆ ಬಂತು. ಒಮ್ಮೆ ಒಬ್ಬ ಪೇದೆ ಬಂದು ಹಿರಿಯ ಅಧಿಕಾರಿಗಳಿಗೆ ಹೇಳಿದನಂತೆ’ Sir, there was a Sindhi gentleman who had come to see you” ಅಂತ. ಆಗ ಅವರು “It can’t be! Either he is a Sindhi or a Gentleman and can’t be both” ಅಂತ ಉದ್ಗರಿಸಿದ್ದರಂತೆ. ಹಾಗೇ ರಾಜಕಾರಣಿ ಅಂದಮೇಲೆ ಜೊತೆಗೆ ಪ್ರಾಮಾಣಿಕ ಅಂತ ಸೇರಿಸಹೋದರೆ ನಗೆಪಾಟಲಿಗೀಡಾಗುತ್ತೇವೆ. ಪ್ರಾಮಾಣಿಕ ರಾಜಕಾರಣಿ ಚತುರ್ಭುಜೆ ಲಕ್ಷ್ಮಿಯಷ್ಟೇ ಅಪರೂಪ, ಅಲಭ್ಯ. ಭ್ರಷ್ಟತೆಯೇ ಅವರ ಹುಟ್ಟುಗುಣ ಅನ್ನೋದು ಜನಜನಿತ.

ರಾಜಕಾರಣ ಇವರಿಗೆಲ್ಲ ಒಂದು ರೀತಿಯ ಆಟವಂತೆ. ಅದಕ್ಕೇ ಇರಬಹುದು “The games politicians play” ಅನ್ನೋ ಪ್ರಚಲಿತ ಹೇಳಿಕೆ. ಇಲ್ಲಿ “ ಏನಾದರೂ ಆಗಬಹುದು” ; “politics is art of the possible”; ‘ there are no permanent friends and foes in politics” ಎಂದೆಲ್ಲ ತಮ್ಮನ್ನು ಸಮರ್ಥಿಸಿಕೋತಾರೆ ಈ ಮಾನಗೆಟ್ಟವರು.

ಒಂದು sport ಅಂದ ಮೇಲೆ ಪ್ರಶಸ್ತಿಗಳು ಬೇಡವೇ. ಇನ್ನು ಸ್ವಲ್ಪೇ ದಿನಗಳಲ್ಲಿ ರಾಜಕೀಯ ದಾಳದಾಟದ ಕೋಚ್‍ಗಳಿಗೆ ಸಲ್ಲುವ ಪ್ರಥಮ “ದ್ರೋಹಾಚಾರ್ಯ ಪ್ರಶಸ್ತಿ” ನಮ್ಮ ದೇವೇಗೌಡರಿಗೇ ಸಿಗುವುದು ಖಚಿತ ಅಂತ ಸುದ್ದಿ. ಹಾಗೆಯೇ ಗೌಡರಮುಂದೆ “ಮಂಡಿಯೂರಪ್ಪ” ನಾಗಲು ಇಚ್ಛಿಸದೆ ಯಡ್ಡಿಯೂರಪ್ಪ ಅಂತ ಹೆಸರು ಬದಲಿಸಿಕೊಂಡ ಯಡಿಯೂರಪ್ಪನವರಿಗೆ ಚಕ್ರವ್ಯೂಹವನ್ನು ಭೇದಿಸಲಾಗದ “ಅಭಿಮನ್ಯು ಪ್ರಶಸ್ತಿ” ಕೂಡ ಖಂಡಿತ. ಇತ್ತ ಅಪ್ಪನೂ ಬೇಕು, ಅತ್ತ ಶಾಸಕರೂ ಬೇಕು, ಅಧಿಕಾರವೂ ಬೇಕು ಎಂದು ತೀರ್ಮಾನಿಸಲಾಗದೆ ನರ್ತಿಸುತ್ತಿದ್ದ ಕುಮಾರಸ್ವಾಮಿಗೆ “ಅರ್ಜುನ ಪ್ರಶಸ್ತಿ” ಬದಲಾಗಿ ಇವನೂ ಅಲ್ಲದ ಅವಳೂ ಅಲ್ಲದ “ಬೃಹನ್ನಳಾ ಪ್ರಶಸ್ತಿ” ಕೊಡುತ್ತಾರಂತೆ. ಶಾಸಕರನ್ನು ಕೆಡವಲು ದೇವೇಗೌಡರಿಂದ ಮುಂದೆ ಮಾಡಲ್ಪಟ್ಟ ಪ್ರಕಾಶ್‍ರವರಿಗೆ “ಶಿಖಂಡಿ ಪ್ರಶಸ್ತಿ” ಯೂ ತೀರ್ಮಾನವಾಗಿದೆಯಂತೆ.

ಹೊಯ್ಸಳರ ಕಾಲದಿಂದಲೂ ಸಾಹಿತ್ಯ, ಕಲೆ, ಶಿಲ್ಪಗಳಿಗೆ ಪ್ರಖ್ಯಾತವಾದ ಹಾಸನದ ಹೆಸರನ್ನು ಕೆಸರಾಗಿಸಿದ, ಅಲ್ಲಿಯೇ ಉದ್ಭವವಾದ ಹರದನಹಳ್ಳಿಯ ಮಹಿಷತ್ರಯರ ನಿರ್ಮೂಲನ ಹೇಗೆ? ಆ ಚಾಮುಂಡೇಶ್ವರಿಯೇ ಮತ್ತೊಮ್ಮೆ ಅವತರಿಸಬೇಕಾದೀತೇನೋ! ಈ ಐಡಿಯಾ ಕೇಳಿಸಿಕೊಂಡ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳು ಸೋನಿಯಾರವರಿಗೆ ಚಾಮುಂಡಿಯ ಮೇಕಪ್ ಮಾಡಿ ಅವರ ಕಾಲ ಕೆಳಗಿನ ಮಹಿಷನ ತಲೆಯ ಜಾಗದಲ್ಲಿ ಹಿರಿಯ ಗೌಡರ ತಲೆ ಅಂಟಿಸಿ ಪೋಸ್ಟರ್ ಕೂಡ ಛಪಾಯಿಸಿ ಅಷ್ಟರಲ್ಲೇ ತಮ್ಮ ಸ್ವಾಮಿ(ನಿ)ಭಕ್ತಿ ಪ್ರಸರಿಸುವ ಸಾಧ್ಯತೆಗಳುಂಟು. ರಾಜಾಸ್ಥಾನದಲ್ಲಿ ವಸುಂಧರಾ ರಾಜೆಯವರಿಗೆ ಅನ್ನಪೂರ್ಣೆಯ ವೇಶ ಹಾಕಿಸಿದ ಭಾಜಪ ಮತ್ತು ಇಂತಹದೇ ಕೆಲಸಕ್ಕೆ ಕೈ ಹಾಕಿ ಸೋನಿಯಾಗೆ ದುರ್ಗಾ ವೇಶ ಹಾಕಿಸಿದ ಉತ್ತರಪ್ರದೇಶದ ಕಾಂಗೈ ಪ್ರಯತ್ನದ ನೆನಪುಗಳಿನ್ನೂ ಹಸಿರಾಗಿದೆಯಲ್ಲವೇ?

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕಿರುವ ಜನಸಾಮಾನ್ಯನಿಗೆ, ಆಯ್ಕೆಯಾದ ಮೇಲೆ ಅವನ ಮೇಲೆ ಯಾವ ರೀತಿಯ ಹತೋಟಿಯೂ ಇಲ್ಲದಿರುವುದು ಅದೆಂಥ ವಿಪರ್ಯಾಸ? ಚುನಾಯಿತನಾದ ಕೂಡಲೆ ತನ್ನ ನಿಜವಾದ ಬಣ್ಣ ತೋರಿಸುತ್ತ, ಕುರ್ಚಿಗೆ ಅಂಟಿಕೊಂಡು ಪೂರ್ಣ ಅವಧಿಯಲ್ಲಿ ತನ್ನನ್ನು ಆರಿಸಿದವರನ್ನು ಉಪೇಕ್ಷಿಸುವ ರಾಜಕಾರಣಿಯ ಧೈರ್ಯ ಅದೆಷ್ಟು? ನಿಜವಾಗಿಯೂ ಯಾರು ಬಲಿಷ್ಠರು? ಅವರನ್ನು ಚುನಾಯಿಸುವ ನಾವೋ? ರಾಜಕಾರಣಿಗಳೋ? ಬಾಟೆಲಿನಲ್ಲಿದ್ದ ಭೂತವನ್ನು ಹೊರಗೆ ಬಿಟ್ಟು ಮತ್ತೆ ಒಳಗೆ ತೂರಿಸಲಾಗದಂತಹ ಅಸಹಾಯಕರು ನಾವು. ಮೇರಿ ಶೆಲ್ಲಿ ತನ್ನ ಹತ್ತೊಂಬತ್ತರ ವಯಸ್ಸಿನಲ್ಲಿ ಬರೆದ Frankenstein ಕಾದಂಬರಿಯಲ್ಲಿ ವರ್ಣಿಸಿದ ಸೃಷ್ಟಿಕರ್ತನಿಗೇ ಮುಳುವಾದ ರಾಕ್ಷಸನ ನೆನಪಾಗುತ್ತೆ ಈ ರಾಜಕಾರಣಿಗಳನ್ನು ನೋಡಿದಾಗಲೆಲ್ಲ.

ಪರಭಾಷಿಗರ ದಾಳಿಯಿಂದ ಕನ್ನಡವನ್ನು ರಕ್ಷಿಸುವ ಪಣ ತೊಟ್ಟಿರುವ ಕರ್ನಾಟಕ ರಕ್ಷಣಾ ವೇದಿಕೆ ಏಕೆ ತಮ್ಮ ನಿಗದಿತ ಕಾರ್ಯಕ್ರಮದಿಂದ ಸ್ವಲ್ಪ ಹೊರಬಂದು ಕರ್ನಾಟಕವನ್ನು ನಮ್ಮ ಭ್ರಷ್ಟ ರಾಜಕಾರಣಿಗಳಿಂದಲೇ ರಕ್ಷಿಸುವ ಕಾರ್ಯ ಹಮ್ಮಿಕೊಂಡರೆ ಚೆನಾಗಿರುತ್ತಲ್ಲವೇ? ವೇದಿಕೆ ಪಕ್ಷಾತೀತ ಅಂತ ನಮ್ಮ ನಂಬಿಕೆ ತಪ್ಪಲ್ಲ ತಾನೆ? ಮಣ್ಣಿನ ಮಕ್ಕಳನ್ನು ಮತ್ತೆ ಮಣ್ಣಿಗೆ ಮರಳಿಸುವಂಥ ಪವಿತ್ರವಾದ ಕೆಲಸ ಮಾಡಿದರೆ ನಾವೆಲ್ಲ ಅವರಿಗೆ ಚಿರಋಣಿಗಳಾಗಬಹುದಲ್ಲ!

ಮೈಸೂರು ಸ್ಮೆಲ್ಲಿಗೆ … ಗಟ್ಟಿ ಹಿಡಿಯಿರಿ ಮೂಗನು!

( ದಿವಂಗತ ನರಸಿಂಹಸ್ವಾಮಿಯವರನ್ನು ನೆನೆಸಿ, ನಮಿಸಿ, ಕ್ಷಮೆಯಾಚಿಸುತ್ತ)
- ನವರತ್ನ ಸುಧೀರ್

ನೋಡಿರಣ್ಣ ಹೇಗಿದೆ ಕರ್‍… ನಾಟಕ

ಮದುವೆ ಮುರಿದು ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ಯಡ್ಡಿ ಕೂಗಿದಾಗಲೆಲ್ಲ ಬರುವನಣ್ಣ ಕುಮಾರನು
ಹಿಂದೆ ಮುಂದೆ ನೋಡದೆ ಗೌಡರ ಮಾತ ಕೇಳದೆ

ಯಾರೆ ಎಷ್ಟು ಉಗಿದರೇನು ಬಿದ್ದು ಬಿದ್ದು ನಕ್ಕರೇನು
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಮರಳಿ ಅರಳಿ ಭಾಜಪವನು ತಾನೆ ಕೂಗಿ ಬೇಡಿ ಕರೆದು
ಅವರ ಹರಸಿ ಕರೆವುದು ಬಂಧುಮಿತ್ರ ಎನುವುದು
ಕೆಂದಾವರೆಯನು ಅರಳಿಸಿ ಅಪ್ಪಿ ಮುತ್ತನಿಡುವುದು.

ಇಂದು ಮುತ್ತನ್ನಿಡುವುದು ನಾಳೆ ಕಚ್ಚಾಡುವುದು
ನಮ್ಕುಮಾರನ್ ನಾಟಕ ಮಾಡೋದೆಲ್ಲಾ ಪಾತಕ
ಇವನದದೆಂಥಾ ಜಾತಕ ಕರ್ -ನಾಟಕದ ಕಂಟಕ
ನೋಡಿರಣ್ಣ ಹೇಗಿದೆ ಕರುನಾಡ ಭಾಗ್ಯ ಹೀಗೇಕಿದೆ?

**********************************

ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು.

ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು
ಚಂದ್ರನೆ ಕಾಣದ ಬಾನಿನಲೆಲ್ಲಾ ಮುಗಿಲೇ ತುಂಬಿತ್ತು
ಬಾನಲಿ ಕಾರ್ಮುಗಿಲು ಕವಿದಿತ್ತು.

ಗೌಡರಮನೆಯಲಿ ಹಳಸಿದ ಸಾರಿನ ನಾತವೆ ತುಂಬಿತ್ತು.
ಹೊರಗೆನಿಂತ ಜನಜಂಗುಳಿಯಿದ್ದೂ ಒಳಗಡೆ ದೀಪವಾರಿ ನೀರವ ಕವಿದಿತ್ತು.

ರೇವಣ್ಣನ ಗುಸುಪಿಸು ಮಾತನು ಕೇಳುತ ಕೂತಿದ್ದರು ಗೌಡ
ಕುರ್ಚಿಯ ಕನಸಲಿ ಮುಳುಗಿದ ಯಡ್ಡಿಗೆ ಸ್ವರ್ಗವೇ ದಕ್ಕಿತ್ತು.

ಪ್ರಮಾಣ ವಚನಕೆ ಕರೆಯಲು ಬಂದೆನು ನಿಮ್ಮನು ನಾನೆನುತ ಯಡ್ಡಿಯು ಹೇಳಲು
ಊರಲ್ಲಿದ್ದರೆ ಖಂಡಿತ ಬರುವೆನು ಎಂದರು ಗೌಡರು ಬಿಗುವಿನಲಿ

ಹೊತ್ತಾಯಿತು ಸರಿ ಹೊರಡುವೆನೆಂದರು ಯಡ್ಡಿಯು ಹರುಷದಲಿ
ಹೋಗೋ ಮಗನೆ ಹೋಗುವೆ ಎಲ್ಲಿಗೆ ನೋಡುವೆ ಅಂದರು ಗೌಡರು ಮನಸಿನಲಿ.
**************************************************

ನಿನ್ನ ಪ್ರೇಮದ ಪರಿಯ ನಾನರಿಯೆ...

ನಿನ್ನ ಪ್ರೇಮದಪರಿಯ ನಾನರಿಯೆ ಕುಮಾರಣ್ಣ
ನಿನ್ನೊಳಿದೆ ನನ್ನ ಮನಸು
ಅಧಿಕಾರದಾಸೆಯಿಂದುಕ್ಕುವುದು ಕಡಲಾಗಿ
ನಿನ್ನ ಬೆಂಬಲವನರಸಿ
ನಿನ್ನೊಳಿದೆ ನನ್ನ ಮನಸು

ಗೌಡರಾ ಹೃದಯದಲಿ ಸ್ವಲ್ಪವೂ ಒಲವಿಲ್ಲ
ಅಂತರಿತು ಯಾರೇನೆಲ್ಲ ಹೇಳಿದರೂ
ನಿನ್ನ ಬೆಂಬಲವರಸಿ
ನಾನು ಬಂದಿಹೆನು
ನಿನ್ನೊಳಿದೆ ನನ್ನ ಮನಸು

ನಂಬಿ ಕೆಟ್ಟವರಿಲ್ಲ ಎಂಬ ಮಾತನು ನಂಬಿ
ನೀ ಹೇಳಿದನು ನಂಬಿ
ಮಾನ ಮನೆಯಲಿ ಬಿಟ್ಟು
ಜೊತೆಸೇರುವೆನು
ನಿನ್ನೊಳಿದೆ ನನ್ನ ಮನಸು
**************************************

Friday 2 November 2007

ಮುಖೇಶ್ ವಿಶ್ವದ ನಂ.1ಕುಬೇರ: ಈ ಸುದ್ದಿ ನಂಬಬೇಡಿ!

thatskannada.com ಬುಧವಾರ, 31 ಅಕ್ಟೋಬರ್ 2007, 12:7 Hrs (IST) ಮೇಲಿನ ಶೀರ್ಶಿಕೆಯಲ್ಲಿ ಕೆಳಕಂಡ ಸುದ್ದಿ ಪ್ರಕಟಿಸಿತ್ತು.

ನವದೆಹಲಿ, ಅ.31 : ಗೂಟ ಕಿತ್ತುಕೊಂಡು ಓಡಿದ ಗೂಳಿಯ ವೇಗಕ್ಕೆ ಷೇರುಪೇಟೆ ತಲ್ಲಣಗೊಂಡಿದ್ದು, ಪತ್ರಿಕೆಗಳೂ ಸೇರಿದಂತೆ ಸಮಸ್ತ ಮಾಧ್ಯಮ ‘ವಿಶ್ವದ ನಂ.1 ಶ್ರೀಮಂತ ಮುಖೇಶ್ ಅಂಬಾನಿ" ಎನ್ನುವ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ಸುಳ್ಳು ಎಂದು ರಿಲಯನ್ಸ್ ತಿಳಿಸಿದೆ.

ಹಲವು ಓದುಗರ ಪ್ರತಿಕ್ರಿಯೆಗಳು ಕೆಳಗಿನಂತಿದ್ದವು.

amavaasye gowda IP: 99.247.108.22
Mukesh Ambani viswada athi dooda srimanthanagodu, namma Mandyada beedi nayige avali javali hennu santhana aagodoo ella onde. Papi sampadane parara paalige anno haage Bharathada badathana inthavarinda hechagideye vinah berilla.
(Posted on: Wednesday 31st of October 2007 07:56:12 PM)

madhu IP: 221.135.55.5
if Mukesh ambani becomes richest person on world what is the use.For information bill gates giving lot of his wealth to poor people around the world.what about ambani's?.only satisfaction we indians will have he is indian!!!
(Posted on: Wednesday 31st of October 2007 12:24:08 PM)

--Gowda IP: 125.17.137.181 192.168.42.88
Yes, u r right.Bill Gates has also donated so much to poor people in India. Most of the people are misguided by today's newspaper headlines and will the newspapers correct the error???We need to find it out tomorrow...else people would think he is the richest.

ನನ್ನ ಪ್ರತಿಕ್ರಿಯೆ ಕೆಳಗಿದೆ ಓದಿ.

ನವರತ್ನ ಸುಧೀರ್ IP: 122.167.3.48
ನಾವು ಅವರನ್ನು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಅಂತ ಪರಿಗಣಿಸುತ್ತೀವೋ ಇಲ್ಲವೋ ಎನ್ನುವುದರ ಬಗ್ಗೆ ಮುಕೇಶ್ ಅಂಬಾನಿಯವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ! ಆಶ್ಚರ್ಯದ ವಿಚಾರ ಏನು ಅಂದರೆ ಅವರ ಶ್ರೀಮಂತಿಕೆ ಬಗ್ಗೆ ಜನಸಾಮಾನ್ಯರಲ್ಲಿರುವ ಅಸೂಯೆ. ಯಾರಾದರೂ ಐಶ್ವರ್ಯವಂತರಾದರೂ ಅಂತ ತಿಳಿದ ಕೂಡಲೆ ನಾಲಿಗೆಗಳು ಸಡಿಲವಾಗಿ ಹರಿದು ಅವನು ಹಾಗೆ ಮಾಡಿರಬೇಕು ಹೀಗೆ ಮಾಡಿರಬೇಕು ಇಲ್ಲದಿದ್ದರೆ ಯಾರಾದರೂ ಕಷ್ಟ ಪಟ್ಟು ಅವನಷ್ಟು ಐಶ್ವರ್ಯ ಗಳಿಸಲು ಸಾಧ್ಯವೆ ಅಂತ ಕೊಂಕು ಮಾತುಗಳು ಶುರುವಾಗಿಬಿಡುತ್ತೆ. ಅದೇಕೆ ಹೀಗೆ? ಅವರು ಈ ಮಟ್ಟಕ್ಕೆ ಬರಲು ಅವರು ಪಟ್ಟ ಕಷ್ಟ, ಅವರ ಮನಸ್ಸಿನ ಧೃಢತೆ, ಸಾಧಿಸಿಯೇ ತೀರುವ ಛಲ, ಸಾಮಾನ್ಯರು ಊಹಿಸಲೂ ಆಗದಂಥ ವಿರಾಟ್ ಸ್ವಪ್ನ ನೋಡಿ ಅದನ್ನು ಸಾಕಾರಗೊಳಿಸಲು ಕಾರ್ಯಶೀಲರಾಗುವ ಎದೆಗಾರಿಕೆ, ದಾರಿಯಲ್ಲಿ ಬರುವ ಅಡ್ಡಿ ಆತಂಕಗಳಿಂದ ನಿರಾಶರಾಗದೆ ತಮ್ಮ ಗುರಿಯತ್ತ ನಡೆಯುವ ಏಕಾಗ್ರತೆಗಳು ನಮಗೇಕೆ ಗೋಚರವಾಗುವುದಿಲ್ಲ? ನಮ್ಮ ರಾಜಕಾರಣಿಗಳು ಸೋಷ್ಯಲಿಸಂ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನುಬಡವ ಹಾಗೂ ಶ್ರೀಮಂತ ಅಂತ ಒಡೆದು ಶ್ರೀಮಂತರು ಹಾಗೂ ಔದ್ಯಮಿಗಳೆಲ್ಲರೂ ಬಡವರ ರಕ್ತ ಹೀರಿಯೇ ಸಂಭ್ರಮಿಸುವ ಲಾಭಕೋರರು , ವ್ಯವಹಾರದಲ್ಲಿ “ಲಾಭ” ಮಾಡುವುದೆಂದರೆ ಬಹಳ ಹೀನ ಅಪರಾಧ ಎಂದೆಲ್ಲ ತಪ್ಪು ಭಾವನೆಗಳನ್ನು ಪ್ರಸರಿಸಿ, ಬಡತನದಲ್ಲಿರುವ ಅಥವಾ ಇಲ್ಲದೆಯೂ ಇರಬಹುದಾದ ಸತ್ಯತೆ ಹಾಗೂ ಪ್ರಾಮಾಣಿಕತೆಯ ಗುಣಗಾನ ಮಾಡುತ್ತ, ಕೆಲಸ ಮಾಡದ ಬಡವನಿಗೂ, ಸೋಮಾರಿಗಳಿಗೂ ಸಮಾಜದ ಸಂಪತ್ತಿನಲ್ಲಿ ಸಮಾನ ಪಾಲಿರುವ ಹಕ್ಕಿನ ದುರಾಸೆ ತೋರಿಸಿ ಇರುವವರದನ್ನು ಕಿತ್ತುಕೊಂಡು ಇರದವರಿಗೆ ಹಂಚುವ ಸಂಚು ನಡಿಸುತ್ತಿರುವುದು ನಮಗೆ ಕಾಣುವುದಿಲ್ಲವೇ? ಹಣ ಸಂಪಾದಿಸಲು ತಪ್ಪು ಹಾದಿ ಹಿಡಿದು ಅನ್ಯಾಯವಾಗಿ ಕಾನೂನು ಬಾಹಿರ ಹಾದಿ ತುಳಿದವರು ಅನೇಕರಿರಬಹುದು. ಆದರೆ ಎಲ್ಲರಿಗೂ ಸಮಾನ ಪಾಲು ಕೊಡಲಾಗಲು ಇನ್ನೂ ಹೆಚ್ಚಿನ ಸಂಪತ್ತು ಸೃಷ್ಟಿ ಮಾಡುವ ಸಕಾರಾತ್ಮಕ ಕೆಲಸ ಮಾಡುವ ಸದುದ್ದೇಶದ ಉದ್ಯಮಿಗಳೆಲ್ಲರನ್ನೂ ಹೀನರೂ, ಖೂಳರೂ, ಸಮಾಜದ ಶತ್ರುಗಳು ಅಂತ ಒಂದೇ ಬಣ್ಣ ಬಳಿಯುವುದು ಯಾವ ನ್ಯಾಯ? ನಾನು ನೀತಿವಂತ, ಪ್ರಾಮಾಣಿಕ ಅನ್ನೋಕ್ಕೆ “ಬಡತನ”ದ ಸರ್ಟಿಫಿಕೇಟ್ ಬೇಕೆ? ಪ್ರಪಂಚದ ಬೇರೆಡೆಯಲ್ಲೆಲ್ಲ ಉತ್ತಮ ಗುಣಮಟ್ಟಕ್ಕಾಗಿ ಶ್ರಮಿಸುತ್ತಿದ್ದಾಗ ನಮ್ಮ ದೇಶದಲ್ಲಿ ಮಾತ್ರ ’ಮೆರಿಟೋಕ್ರೆಸಿ’ಗೆ ಎಳ್ಳು ನೀರು ಬಿಟ್ಟು “ ಮೀಡಿಯೋಕ್ರಿಟಿ” ಗೆ ಆಹ್ವಾನ ಕೊಡುತ್ತಿದ್ದೇವಲ್ಲ? ಒಬ್ಬರ ಯಶಸ್ಸನ್ನು ಕಂಡು ಸಂಭ್ರಮಿಸೋ ಗುಣ ನಮಗೆ ಯಾವಾಗ ಬರುತ್ತೆ? ಐ. ಟಿ. ಕ್ಷೇತ್ರದಲ್ಲಿ ಬೆಳಗಿ ಕಷ್ಟ ಪಟ್ಟು ದುಡಿದು ಭಾರತದಲ್ಲೂ ಹಾಗೂ ವಿದೇಶಗಳಲ್ಲೂ ಐಶ್ವರ್ಯವಂತರಾಗುತ್ತಿರುವ ನಮ್ಮದೇ ಕನ್ನಡದ ಮಕ್ಕಳನ್ನೂ ನಾವು ಹೀಗೆ ಅಸೂಯೆಯಿಂದ ಹೀನಾಯಿಸುತ್ತೀವಾ? ಅಂಬಾನಿ ಅದೆಷ್ಟು ಹಣ ಸಮಾಜಕ್ಕೆ ಗೌಪ್ಯವಾಗಿ ದಾನ ಮಾಡಿದ್ದಾರೋ ಯಾರಿಗೆ ಗೊತ್ತು? ಎಲ್ಲರೂ ಅಮೃತಶಿಲೆಯ ಫಲಕ ಅಪೇಕ್ಷಿಸುವುದಿಲ್ಲ.
(Posted on: Thursday 01st of November 2007 07:34:30 PM)

Friday 26 October 2007

ಕನ್ನಡ ನಾಡು, ನುಡಿ , ಜನ, ಸಂಸ್ಕೃತಿ- ಪರಭಾಷೀಯರು ಏಕೆ ಗೌರವಿಸಬೇಕು?

ಕನ್ನಡಿಗರೂ ಅಂದಮೇಲೆ ಕನ್ನಡ ನಾಡು, ನುಡಿ, ಜನಗಳ ಬಗ್ಗೆ ಹೆಮ್ಮೆ, ಅಭಿಮಾನ, ಗೌರವ ಇವೆಲ್ಲವೂ ಇರಲೇಬೇಕು, ನಿಜ. ಆದರೆ ಇದನ್ನು ಯಾವ ರೀತಿ ಪ್ರದರ್ಶಿಸ ಬೇಕು ಅನ್ನೋ ಬಗ್ಗೆ ಇನ್ನೂ ಒಮ್ಮತ ಇದ್ದಂತಿಲ್ಲ.

ಬೇರೆಯವರು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಅಷ್ಟಾಗಿ ಗೌರವಿಸುತ್ತಿಲ್ಲ, ನಮ್ಮ ನಾಡಿನಲ್ಲಿ ನಾವೇ ಹೊರಗಿನವರಂತಾಗಿದ್ದೇವೆ ಅನ್ನೋ ದುಃಖ ನಮ್ಮಲ್ಲನೇಕರಿಗಿದೆ. ನಮ್ಮನ್ನು ಅನಾಗರೀಕರು ಅಸಂಸ್ಕೃತರೂ ಅಂತ ಅಂದುಕೊಂಡರೂ ಪರವಾಗಿಲ್ಲ ಪರಭಾಷೀಯರಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಅಂತ ಹಲವರು. ಎಲ್ಲಾ ನಾಮಫಲಕಗಳೂ ಕನ್ನಡದಲ್ಲಿರಬೇಕು ಅಂತ ಹಲವರು. ಕನ್ನಡದ ಕವಿತೆಗಳಿರುವ ಟೀ ಶರ್ಟ್ ಹಾಕಿಕೊಂಡು ನಿಮ್ಮ ಕನ್ನಡ ಪ್ರೇಮ ಮೆರೆಯಿರಿ ಅಂತ ಇತರರು. ನಮ್ಮ ನಾಡಿನಲ್ಲೇ ನಮ್ಮ ನಾಡಿನ ನೆಲ, ಜಲ, ಗಾಳಿ, ಸವಲತ್ತುಗಳನ್ನು ಬಳಸಿಕೊಂಡು ಹೊರಗಿನಿಂದ ಬಂದು ವಲಸೆಯಾದ ಪರಭಾಷೀಯರು ನಮ್ಮ ಭಾಷೆ ಕಲಿಯದೆ ಅಗೌರವ ಸೂಚಿಸುತ್ತಿದ್ದಾರೆ ಅಂತ ಬೇರೆ ಕನ್ನಡ ಪ್ರಾಧೀಕಾರದ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯನವರು ಇತ್ತೀಚೆಗೆ ಹೇಳಿಕೆಯೊಂದನ್ನಿತ್ತಿದ್ದಾರೆ. ನಮಗೆ ಬೇರೆಯವರು ಕನ್ನಡ ಕಲಿಯುವುದು ಮುಖ್ಯವೋ ಅಥವಾ ಅವರು ನಮ್ಮ ನಾಡು , ಜನ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವದಿಂದ ಕಾಣಬೇಕು ಅನ್ನುವುದು ಜಾಸ್ತಿ ಮುಖ್ಯವೋ ನಾವು ಮೊದಲು ನಿರ್ಧರಿಸಬೇಕು.

ಬರೀ ಕನ್ನಡ ಕಲಿತರೆ ಗೌರವ ಸೂಚಿಸಿದ ಹಾಗೆಯೇ? ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಗೌರವ ವ್ಯಕ್ತಪಡಿಸಲು ಬೇರಾವ ಅವಶ್ಯಕತೆಯೂ ಇಲ್ಲವೇ? ಹಾಗೆಯೇ ಗೌರವಭಾವವನ್ನು ಬಲವಂತವಾಗಿ ಹೇರಲಾದೀತೆ? ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ “ಲೀಡ್ ಇಂಡಿಯಾ” ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಂಗಾಲಿ ಯುವತಿಯೊಬ್ಬಳು ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿಯೇ ಇಲ್ಲ ಅಂತ ಉಧ್ಧಟತನದಿಂದ ಹೇಳುವ ಧೈರ್ಯ ಮಾಡಿದ್ದು ಕನ್ನಡಿಗರ ಸಹಿಷ್ಣುತೆ ಮತ್ತು ಉದಾರತೆಯ ದುರುಪಯೋಗ ಪಡೆದಂತಲ್ಲವೇ? ಯಾರೂ ಇದನ್ನು ಪ್ರತಿಭಟಿಸಲಿಲ್ಲವೇಕೆ? ನಮ್ಮನ್ನು ನಾವೇ ಅದೆಷ್ಟು ಗೌರವಿಸುತ್ತೇವೆ, ನಮ್ಮ ಆತ್ಮಾಭಿಮಾನ ಅದೆಷ್ಟಿದೆ ಎಂದು ಹೊರಗಿನವರು ಛೇಡಿಸಿ, ಪ್ರಚೋದಿಸಿದರೂ ನಮ್ಮ ರಕ್ತ ಕುದಿಯದಷ್ಟು ನಿಸ್ತ್ರಾಣಿಗಳಗಿದ್ದೇವೆಯೇ ನಾವು? ಇದಕ್ಕೆಲ್ಲ ಉತ್ತರ ಬರೀ ಕಡ್ಡಾಯ ಕಲಿಕೆ , ಪ್ರತಿಭಟನೆ, ಕಪ್ಪುಬಾವುಟ ಪ್ರದರ್ಶನವೇ ಅಥವಾ ಬೇರಾವುದಾದರೂ ಮಾರ್ಗಗಳಿವೆಯೇ ಎಂದು ಯೋಚಿಸುವುದುಚಿತ.

ಒಂದು ನಗರದಲ್ಲಿ ಬೇರೆ ಬೇರೆ ಭಾಷೆಯ ಜನ ಒಟ್ಟಿಗೆ ಇರುವಾಗ, ಎಲ್ಲರೊಡನೆ ಸುಲಭವಾಗಿ ಕಲೆತು, ಬೆರತು ಸೌಹಾರ್ದತೆಯಿಂದ ಜೀವನ ನಡೆಸಲು ಸ್ಥಳೀಯ ಭಾಷೆ ಕಲೆಯುವುದು ಒಂದು ಹಂತದವರೆಗೂ ಅನುಕೂಲಕರ ನಿಜ. ಆದರೆ ಕಲಿಯಬೇಕೆ ಬೇಡವೇ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಅನುಭವದ ಮೇಲೆ ತಾನೆ ನಿರ್ಭರ? ನಮ್ಮ ಭಾರತೀಯರಲ್ಲಿ ಯಾವುದೇ ಭಾಷಾ ಜನಾಂಗಕ್ಕೆ ಸೀಮಿತವಲ್ಲದ ಒಂದು ರೀತಿಯ ghetto mentality ಇದೆ. ಇದರಿಂದ ಕಲ್ಕತ್ತದಲ್ಲಿ ಬಹುಪಾಲು ಕನ್ನಡಿಗರೂ ತಮಿಳರೂ, ತೆಲುಗರೆಲ್ಲರೂ ದಕ್ಷಿಣ ಕಲ್ಕತ್ತದ ಲೇಕ್ ಗಾರ್ಡೆನ್, ಗರಿಯಾಹಾಟ್ ಸುತ್ತ ಮುತ್ತವೇ ಸೇರಿಕೊಳ್ಳುತ್ತಾರೆ. ಬಂಗಾಳಿಗಳು ಜಾಸ್ತಿ ಇರುವ ಜಾಗಗಳಲ್ಲಿ ಅವರೊಡನೆ ಬೆರೆತು ಇರುವದು ಅಪರೂಪ. ಹಾಗೆಯೇ ಮುಂಬೈನಲ್ಲಿ ಮಾಟುಂಗಾ, ಸಯಾನ್, ಚೆಂಬೂರ್‍ಗಳಲ್ಲಿ ದಕ್ಷಿಣಭಾರತೀಯರ ಗುಂಪು. ದೆಹಲಿಯಲ್ಲಿ ಬಂಗಾಳಿಗಳು ಬಹುಸಂಖ್ಯೆಯಲ್ಲಿ ಚಿತ್ತರಂಜನ್ ಪಾರ್ಕ್‍ನಲ್ಲಿ ಕಾಣಬಹುದು. ಅದೇ ರೀತಿ ಬೆಂಗಳೂರಿನಲ್ಲಿಯೂ ಸಣ್ಣ ಸಣ್ಣ ಭಾಷಾ ಕ್ಷೇತ್ರಗಳಿವೆ. ಶಿವಾಜಿನಗರ ಅಥವಾ ಹಲಸೂರಿನಲ್ಲಿರುವ ತಮಿಳು ಭಾಷೀಯರು ದೈನಂದಿನ ಜೀವನದಲ್ಲಿ ಮುಕ್ಕಾಲು ಮೂರು ಪಾಲು ತಮಿಳಿನಲ್ಲೇ ವ್ಯವಹರಿಸಿ ಸುಲಲಿತ ಜೀವನ ನಡೆಸಬಹುದು. ಅವರೇಕೆ ಶ್ರಮವಹಿಸಿ ಕನ್ನಡ ಕಲಿಯಬೇಕು? ಕೇವಲ ಕನ್ನಡಕ್ಕೆ ಗೌರವ ಸೂಚಿಸಲೇ? ಇಲ್ಲಿಯವರು ಅಲ್ಲಿಗೆ ಹೋಗೋಲ್ಲ. ಹಾಗೆಯೇ ಅಲ್ಲಿಯವರು ಇಲ್ಲಿಗೆ ಬರೋಲ್ಲ. ನಿಮ್ಮ ಹಂಗು ನಮಗಿಲ್ಲ, ನಮ್ಮ ಹಂಗು ನಿಮಗೇಕೆ ಅಂತ ನಿರ್ಲಿಪ್ತ ಮನೋಭಾವ.

ಬೇರೆಯವರು ನಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಅನ್ನುವ ನೋವು ನಮ್ಮ ಕನ್ನಡಿಗರಿಗೆ ಮಾತ್ರವೇ ಅಥವಾ ಬೇರೆರಾಜ್ಯಗಳಲ್ಲೂ ಇಂತಹ ಸಮಸ್ಯೆಗಳಿವೆಯೇ?

ಕನ್ನಡಿಗರೂ ಸೇರಿದಂತೆ ಎಲ್ಲರಿಗೂ ಭಾಷೆಯ ಸಮಸ್ಯೆ ಅತಿ ಹೆಚ್ಚಾಗಿ ಎದುರಾಗುವದು ದ್ರಾವಿಡ ರಾಜ್ಯವಾದ ತಮಿಳುನಾಡಿನಲ್ಲಿ. ಬಹು ಪಾಲು ಜನರ ಮಾತೃಭಾಷೆಯಾದ ತಮಿಳಿನ ಹೆಗ್ಗಳಿಕೆಯ ಬಗ್ಗೆ ಸ್ಥಳೀಯರಿಗೆ ಸ್ವಲ್ಪವೂ ಸಂಶಯವಿಲ್ಲ. ಅಲ್ಲಿ ತಮಿಳಿನ ಸ್ಥಾನದ ಬಗ್ಗೆ ಯಾರೂ ಸೊಲ್ಲೆತ್ತುವಂತಿಲ್ಲ. ನಿಮಗೆ ಅಲ್ಲಿ ಇರಬೇಕಾದರೆ ತಮಿಳು ಕಲಿಯುವುದು ಅತಿ ಅವಶ್ಯಕ. ಅಲ್ಪಾವಧಿಯ ಪ್ರವಾಸಕ್ಕೆ ಹರಕು ಮುರಕು ಇಂಗ್ಲೀಷ್ ಕೂಡ ನಡೆಯುತ್ತದೆ. ಉತ್ತರಭಾರತದಲ್ಲೆಲ್ಲೂ ಹರಕು ಮುರಕು ಹಿಂದಿ ಅಥವಾ ಹಿಂದುಸ್ತಾನಿಯಿಂದ ಕೆಲಸ ಸಾಧಿಸಿಕೊಳ್ಳಬಹುದು.

ಮುಂಬೈನಲ್ಲಿ ಇರಬೇಕಾದರೆ ಮರಾಠಿ ಕಲಿಯಲೇಬೇಕಿಲ್ಲ. ಬೆಂಗಳೂರಿನಲ್ಲಿ ಹೇಗೆ ಕನ್ನಡಿಗರೋ ಹಾಗೆಯೇ ಮುಂಬೈನಲ್ಲಿ ಮರಾಠಿಗರು ಅಲ್ಪಸಂಖ್ಯಾತರು. ಅನೇಕ ದಶಕಗಳಿಂದ ದೇಶದ ವ್ಯಾವಹಾರಿಕ ರಾಜಧಾನಿಯಾಗಿದ್ದರಿಂದ ಶಿವ ಸೇನೆ ಅದೆಷ್ಟು ತಿಪ್ಪರಲಾಗ ಹಾಕಿದರೂ ಮರಾಠಿಗರ ಬೇಳೆ ಅಲ್ಲಿ ಅಷ್ಟು ಬೇಯದು. ಮುಂಬೈಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ನಿಜವಾಗಿಯೂ ಹೇಳಬೇಕೆಂದರೆ ಪುಣೆ ನಗರ ಮರಾಠಿ ಸಂಸ್ಕೃತಿಯ ನಿಜವಾದ ನೆಲೆ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ಮರಾಠಿ ನಾಟಕ, ಸಾಹಿತ್ಯ, ಸಂಗೀತ, ಲಾವಣಿ, ಜಾನಪದದ ರುಚಿ ಬೇಕಾದರೆ ಹೋಗಬೇಕಾದ್ದು ಪುಣೆಗೆ ಮುಂಬೈಗಲ್ಲ.

ಬೆಂಗಳೂರಿನ ಸಮಸ್ಯೆ ಹೆಚ್ಚೂಕಡಿಮೆ ಮುಂಬೈನಂತೆಯೇ. ರಾಜಕಾರಣ ಮತ್ತು ಆಡಳಿತ ಹೊರತಾಗಿ ಬೇರೆಲ್ಲ ಮುಖ್ಯ ವಹಿವಾಟುಗಳೂ ವ್ಯವಹಾರಗಳೂ ಪರಭಾಷೀಯರ ಕೈಯಲ್ಲಿದೆ. ನಾವು ಹೆಸರಿಗೆ ಮಾತ್ರ ಆಳುವ ಜನರು. ಖಜಾನೆಯ ಬೀಗದಕೈ ಎಲ್ಲಾ ಬೇರೆಯವರ ಬಳಿಯಲ್ಲಿ. ಬೆಂಗಳೂರ ಹೊರತಾಗಿ ಮತ್ಯಾವ ದೊಡ್ಡ ನಗರವೂ ಕನ್ನಡ ಸಂಸ್ಕೃತಿಯ ಆಗರ ಎಂದು ಹೇಳಿಕೊಳ್ಳುವಷ್ಟು ಪ್ರಗತಿಸಿಲ್ಲ. ಇನ್ನು ನಮ್ಮ ಕನ್ನಡದ ರಾಜಕಾರಣಿಗಳು ತಮ್ಮ ಜವಾಬ್ದಾರಿಯನ್ನು ಅದೆಷ್ಟು ಸುಂದರವಾಗಿ ಗೌರವಯುತವಾಗಿ ನಿಭಾಯಿಸುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚಿಗೆ ಹೇಳುವುದು ಅನುಚಿತ.

ಪೂರ್ವದ ನಗರಿ ಕಲ್ಕತ್ತದಲ್ಲಿ ಬಂಗಾಲಿಗಳು ಬಹುಸಂಖ್ಯಾತರು ಆದ್ದರಿಂದ ಭಾಷಾ ಗೊಂದಲದ ಗೋಜಿಲ್ಲ. ಒಂದು ಕಾಲದಲ್ಲಿ ದೇಶಭಕ್ತಿ, ಸಾಹಿತ್ಯ, ಕಲೆ, ಬುಧ್ಧಿಮತ್ತೆ ಎಲ್ಲದರಲ್ಲೂ ಬಂಗಾಳದ ಜನ ಬಹಳ ಮುಂದೆ ಎಂಬ ಪ್ರತೀತಿ ಇತ್ತು. ಆದರೆ ಈಗಿನ ಕಥೆಯೇ ಬೇರೆ. ಶಶಿ ತರೂರ್ ತನ್ನ ’great Indian tale” ನಲ್ಲಿ ಭಾರತದ ಬಗ್ಗೆ ಬರೆದ “- a higly developed civilization in an advanced state of decay” ಅನ್ನುವ ಉಕ್ತಿ ಇಂದಿನ ಬಂಗಾಳಕ್ಕೂ ಅನ್ವಯಿಸುತ್ತೆ. ಬಂಗಾಳದ ರಾಜಧಾನಿ ಕಲ್ಕತ್ತ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಹೋಲಿಸಿದರೆ, ಅನೇಕ ಸಾಮ್ಯತೆಗಳು ಕಂಡು ಬರುತ್ತೆ. ಅಲ್ಲಿಯೂ ಅನ್ಯ ಭಾಷೀಯರು ಬೇರೆ ಬೇರೆ ಸ್ವಯಂಕಲ್ಪಿತ ಪ್ರದೇಶಗಳಲ್ಲಿ ನಿಶ್ಚಿಂತರಾಗಿರುತ್ತಾರೆ. ಅಲ್ಲಿಯ ಸರ್ಕಾರದಲ್ಲಿಯೂ ಸ್ಥಳಿಯರೇ ಬಹುಸಂಖ್ಯಾತರು. ಸರ್ಕಾರದ ಕೆಲಸದಲ್ಲಿ ಇಲ್ಲಿಯಂತೆಯೇ ನಿಷ್ಕ್ರಿಯತೆ, ಭ್ರಷ್ಟಾಚಾರದ ಪಿಡುಗಿದೆ. ಸೋಮಾರಿಗಳು, ಪ್ರತಿಭಟನಾಪ್ರಸಕ್ತರು. ನಿರಾಸಕ್ತ ಬುಧ್ಧಿಜೀವಿಗಳು ಸುತ್ತ ಮುತ್ತಲಿನದೆಲ್ಲವನ್ನು ಉಪೇಕ್ಷಿಸುತ್ತ ದೂರದೆಲ್ಲಿಯದೋ ಸಮಸ್ಯೆಗಳ ಬಗ್ಗೆ ಗಾಢ ಚಿಂತನೆಮಾಡುತ್ತ ತಮ್ಮದೇ ಕನಸಿನ ಪ್ರಪಂಚದಲ್ಲಿ ವಿಹರಿಸುತ್ತಲಿರುವುದು, ಸರಿಯಾಗಿ ಓದಿಲ್ಲದ ಕೆಲಸ ಕಾರ್ಯವಿಲ್ಲದ ಯುವಕರು ಪುಂಡು ಪೋಕರಿ ಮಾಡುತ್ತ ಸ್ಥಳೀಯ ರಾಜಕಾರಣಿಗಳ ಪಗಡೆಕಾಯಿಗಳಾಗಿ ಯಾವ ರೀತಿಯ ಸಕಾರಾತ್ಮಕ ಕ್ರಿಯೆಗಳಲ್ಲೂ ಭಾಗವಹಿಸದಿರುವುದು. ನಗರದೆಲ್ಲೆಡೆ ಕೊಳಕು, ಮೂಲಭೂತ ಸೌಲಭ್ಯಗಳ ಕೊರತೆ, ಸ್ವಛ್ಛತೆಯ ಅಭಾವ, ಅನಿಯಂತ್ರಿತ ಸಾರಿಗೆ ವ್ಯವಸ್ಥೆ, ಬೆಳೆಯುತ್ತಿರುವ ಅಪರಾಧ , ದಿನನಿತ್ಯದ ಪ್ರತಿಭಟನೆ, ಹೊಡೆದಾಟ, ಕಪ್ಪು ಬಾವುಟ ಪ್ರದರ್ಶನ ಎಲ್ಲವೂ ಒಂದೇ ಬಗೆ. ಹೀಗೇ ಒಂದೇ ಎರಡೇ ಸಾಮ್ಯತೆಗಳು?

ಆದರೆ ಭಿನ್ನತೆಯಿರುವುದು ಒಂದು ಮುಖ್ಯ ವಿಷಯದಲ್ಲಿ. ಅಲ್ಲಿ ನಿಮಗಿಷ್ಟವಿಲ್ಲದಿದ್ದರೆ ಬಂಗಾಲಿ ಭಾಷೆ ಕಲಿಯಬೇಕಿಲ್ಲ. ನಿಮ್ಮನ್ನು ಯಾರೂ ಭಾಷೆ ಕಲಿಯಲು ಹೆದರಿಸಿ ಬೆದರಿಸಿ ಕಡ್ಡಾಯ ಮಾಡುವುದಿಲ್ಲ. ಪರಭಾಷೀಯರ ಬಗ್ಗೆ ಇಲ್ಲಿ ಕಾಣುವಷ್ಟು ಉದ್ರೇಕ, ಕೋಪ ತಾಪಗಳಿಲ್ಲ. ಬಂಗಾಲಿ ಭಾಷೆಯ ಬಗೆಗಾಗಲಿ, ಬೇರೆಯವರು ತಮ್ಮ ಸಂಸ್ಕೃತಿಗೆ ಬೆಲೆನೀಡುತ್ತಿಲ್ಲ ಎಂಬ ಅಳುಕಾಗಲಿ ಅಲ್ಲಿ ಕಾಣುವುದಿಲ್ಲ. ಆದರೂ ಬಹಳಷ್ಟು ಹೊರಗಿನ ಜನ ಬೇಗ ಬಂಗಾಲಿ ಕಲಿತು ಮಾತನಾಡುವಷ್ಟಂತೂ ಪ್ರಬುಧ್ಧರಾಗುತ್ತಾರೆ.

ಬಂಗಾಳದಲ್ಲಿ ಎಲ್ಲವೂ ಒಳ್ಳೆಯದು ಅಂತ ಹೇಳುತ್ತಿಲ್ಲ. ಆದರೆ ಒಳ್ಳೆಯದಿರುವುದನ್ನು ಮಾತ್ರ ನಾವು ಕಲಿಯಬಹುದಲ್ಲ!
ಅದೇಕೆ ಅಲ್ಲಿ ಹಾಗೆ. ನಮ್ಮಲ್ಲಿ ಏಕೆ ಹೀಗೆ? ಯೋಚಿಸಬೇಕಾದ ವಿಚಾರ.

ಅಲ್ಲಿಯ ಜನರಿಗೆ ತಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿಗಳ ಹಿರಿಮೆಯ ಬಗ್ಗೆ ಎಳ್ಳಷ್ಟೂ ಸಂಶಯವಿಲ್ಲ. ಸರ್ವೋತ್ಕೃಷ್ಟ ಸಂಸ್ಕೃತಿ ತಮ್ಮದು ಅನ್ನೋ ಅಹಂಭಾವ ಇದೆ ಅಂದರೂ ತಪ್ಪಾಗಲಾರದು. ಪ್ರತಿಯೊಂದು ಮನೆಯಲ್ಲೂ ಮಾತನಾಡುವ ಭಾಷೆ ಬಂಗಾಲಿ. ಮಕ್ಕಳೆಲ್ಲರಿಗೂ ಬಂಗಾಲಿ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ. ಕುಟುಂಬದ ಬಹುಪಾಲು ಸದಸ್ಯರು ಗಂಡಾಗಲಿ ಹೆಣ್ಣಾಗಲಿ ರಬೀಂದ್ರ ಸಂಗೀತ ಕಲಿತಿರುತ್ತಾರೆ. ಸಂಗೀತವಿಲ್ಲದಿದ್ದರೆ, ಚಿತ್ರಕಲೆ, ಶಿಲ್ಪ, ಸಾಹಿತ್ಯಾಭಿರುಚಿ ಹೀಗೆ ಏನಾದರೂ ಇದ್ದದ್ದೆ. ಹವ್ಯಾಸಿ ನಾಟಕರಂಗದಲ್ಲಿ ದಿನ ನಿತ್ಯ ನೂತನ ಪ್ರಯೋಗಗಳಾಗುತ್ತಿರುತ್ತವೆ. ಬಂಗಾಲಿ ಸಾಹಿತ್ಯದಲ್ಲಿ ಅನೇಕ ಕೃತಿಗಳು ಬಿಡುಗಡೆಯಾದರೂ ಓದುವರ ಸಂಖ್ಯೆ ಕಮ್ಮಿಯೇನೂ ಆಗುವುದಿಲ್ಲ. ಬಹುತೇಕ ಹಬ್ಬಗಳೆಲ್ಲವನ್ನು ಸಾಮೂಹಿಕವಾಗಿ ಆಚರಿಸುತ್ತ, ಆಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಬೀಂದ್ರ ಸಂಗೀತ, ನೃತ್ಯ, ನಾಟಕಗಳಲ್ಲಿ ಮಕ್ಕಳಾದಿಯಾಗಿ ಪಾಲ್ಗೊಂಡು ತಮ್ಮ ನಾಡಿನ ಮತ್ತು ಭಾಷೆಯ ಹೆಗ್ಗಳಿಕೆ ತೋರಬಯಸುತ್ತಾರೆ. ಅವರ ಸಾಹಿತ್ಯ, ಸಂಗೀತ, ಕಲೆ ನಿಜಕ್ಕೂ ಹಿರಿಮೆಯುಳ್ಳದ್ದಾಗಿದ್ದು, ಯಾರಿಗೂ ತಮ್ಮ ಬಗ್ಗೆ ಕೀಳರಿಮೆ ಅನ್ನಿಸುವ ಸಮಸ್ಯೆಯೇ ಇಲ್ಲ. ಈ ಸಾಮೂಹಿಕ ಆಚರಣೆಯ ಕಾರಣ ಅವರಲ್ಲಿ ಪರಸ್ಪರ ಬಾಂಧವ್ಯ ಒಗ್ಗಟ್ಟು ಹೆಚ್ಚಿರುವುದು ಖಂಡಿತ. ಪರಭಾಷೀಯರು ಇದರಲ್ಲಿ ಪಾಲ್ಗೊಂಡರೇ ಇಲ್ಲವೇ ಎಂಬುದರ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಪಾಲ್ಗೊಂಡರೆ ಮುಕ್ತ ಕಂಠದಿಂದ ಪ್ರಶಂಶಿಸುತ್ತಾರೆ. ಪಾಲ್ಗೊಳ್ಳದಿದ್ದರೆ ತೆಗಳುವುದಂತೂ ಇಲ್ಲ.

ಒಳ್ಳೆಯ ಕಥಾವಸ್ತು, ಉತ್ತಮ ಅಭಿನಯಗಳಿಂದ ಸಮೃಧ್ಧ ವಾದ ಅಲ್ಲಿಯ ಹಳೆಯ ಚಲನಚಿತ್ರಗಳ ಮತ್ತು ನಾಟಕಗಳ ಗುಣಮಟ್ಟ ಅದೆಷ್ಟು ಹೆಚ್ಚಿತ್ತೆಂದರೆ ಅವನ್ನು ನೋಡಿ ಅರ್ಥ ಮಾಡಿಕೊಳ್ಳಲೆಂದೇ ಅನೇಕರು ಬಂಗಾಲಿ ಕಲಿತದ್ದುಂಟು. ಸತ್ಯಜಿತ್ ರೇ, ರಿತ್ವಿಕ್ ಘಟಕ್, ತಪನ್ ಸಿನ್ಹಾ, ಮೃಣಾಳ್ ಸೇನ್, ಋತುಪರ್ಣ ಘೋಷ್ ಮುಂತಾದವರು ಅತ್ಯುತ್ತಮ ಚಲನ ಚಿತ್ರಗಳನ್ನು ನೀಡಿದ್ದಾರೆ.
( ಈತ್ತೀಚಿನ ವಿಷಯವೇನೋ ಸ್ವಲ್ಪ ಬೇರೆಯೇ ಆಗಿದೆ. ಅಲ್ಲಿಯೂ ಪ್ರೇಕ್ಷಕರ ಉತ್ಪ್ರೇಕ್ಷೆಯಿಂದಾಗಿ ಕೀಳು ಸಂಸ್ಕೃತಿಯ ಮೇಲುಗೈ ಆಗುತ್ತಿದೆ.)

ಮೇಲಿನ ಉದಾಹರಣೆಯಿಂದ ವಿದಿತವಾಗುವುದದೇನೆಂದರೆ, ಪರಭಾಷೀಯರು ಬಂಗಾಲಿಯನ್ನು ಕಲಿಯುವುದು ಯಾವ ಒತ್ತಾಯ ಹಾಗೂ ಕಡ್ಡಾಯದಿಂದಲೂ ಅಲ್ಲ. ಕೇವಲ ಆ ಭಾಷೆಯ ಮತ್ತು ಸಂಸ್ಕೃತಿಯ ಮೇಲಣ ಗೌರವದಿಂದ ಎನ್ನುವುದು.

ಹಾಗಿದ್ದರೆ ನಮ್ಮಲ್ಲೇನು ಕೊರತೆ? ನಮ್ಮ ಸಾಹಿತ್ಯ, ಸಂಸ್ಕೃತಿ, ಕಲೆ ಅವರದಷ್ಟು ಸಮೃಧ್ಧ ಹಾಗೂ ಶ್ರೀಮಂತವಲ್ಲವೇ?
ನಮ್ಮ ಸಾಹಿತ್ಯ, ಸಂಸ್ಕೃತಿಗಳಿಗೆ ಯಾವ ಕಮ್ಮಿಯೂ ಇಲ್ಲ. ಭಾರತದಲ್ಲೇ ಅತಿಹೆಚ್ಚು ಜ್ನಾನಪೀಠ ಪ್ರಶಸ್ತಿ ಗಳಿಸಿರುವ ಏಕೈಕ ಭಾಷಾ ಸಾಹಿತ್ಯ ಕನ್ನಡದ್ದು. ಕರ್ನಾಟಕ ಸಂಗೀತದ ಬುನಾದಿ ಹಾಕಿದ್ದು ಕನ್ನಡದ ಪುರಂದರದಾಸರು.

ಅಭಾವವಿರುವುದು ನಮ್ಮ ಕನ್ನಡಿಗರಲ್ಲಿ ಹಿರಿಮೆಯನ್ನು ಎತ್ತಿ ತೋರಿಸುವ ಪ್ರಜ್ನೆ, ಕೌಶಲ್ಯ ಮತ್ತು ಕ್ಷಮತೆಯದು. ನಮ್ಮ ದೈನಂದಿನ ಜೀವನದಲ್ಲಿ ನಮ್ಮದೇ ಸಂಸ್ಕೃತಿಯ ವಿಶಿಷ್ಟವಾದದ್ದೇನಾದರೂ ಬೇರೆಯವರು ಬೆರಗಾಗುವಂತೆ ಎತ್ತಿ ತೋರಿಸುತ್ತಿದ್ದೇವೆಯೇ ಎಂದು ಯೋಚಿಸಬೇಕು.

ನಮ್ಮಲ್ಲಿ ಹಬ್ಬಗಳನ್ನು ಆದಷ್ಟು ಮನೆಪೂರ್ತಿ ಮಾಡಿಕೊಂಡು ಕುಟುಂಬದವರಿಗೋ ಆಪ್ತ ಮಿತ್ರರಿಗೋ ಸೀಮಿತವಾಗಿಟ್ಟುಕೊಳ್ಳುವದು ಹೆಚ್ಚು. ಸಾರ್ವಜನಿಕ ಹಾಗೂ ಸಾಮೂಹಿಕ ಸಮಾರಂಭಗಳನ್ನು , ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯ ಪುಢಾರಿಗಳು ಉಪಯೋಗಿಸಿಕೊಂಡು ಅಲ್ಲಿ ಸಂಸ್ಕೃತಿಯ ಪ್ರದರ್ಶನಕ್ಕಿಂತ ರಾಜಕೀಯವೇ ಹೆಚ್ಚು. ಅಮಾಯಕ ನಿರುದ್ಯೋಗಿ ಯುವಕರನ್ನು ಉಪಯೋಗಿಸಿಕೊಳ್ಳುವ ಇಂಥ ಸಮಾರಂಭಗಳಲ್ಲಿ ಭಾಗವಹಿಸಲು ಸುಸಂಸ್ಕೃತ ಮರ್ಯಾದಸ್ಥ ಜನ ಮುಂದೆ ಬರುವುದೇ ಕಡಿಮೆ. ಇದರಿಂದಾಗಿ ಇಲ್ಲಿ ಜಾಸ್ತಿ ಪ್ರದರ್ಶನವಾಗುವದು ಕೀಳು ಮಟ್ಟದ ಸಿನಿಮಾ ಸಂಸ್ಕೃತಿ ಮಾತ್ರ.
ನಮ್ಮ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವಲ್ಲಿ ಸೃಜನ ಶೀಲತೆ ಹಾಗೂ ನಿರ್ವಹಣೆಯ ಗುಣಮೌಲ್ಯಗಳ ಕೊರತೆಯಿಂದ ಆ ಕಲೆ ಹಾಗೂ ಕಲಾವಿದರ ಅಭಿವೃಧ್ಧಿ ಸಮರ್ಪಕವಾಗಿಲ್ಲ. ಕಾರ್ಯಕ್ರಮಗಳನ್ನು ಸಾದರಪಡಿಸುವ ಕಲೆ ಇನ್ನೂ ಕರಗತವಾದಂತಿಲ್ಲ.
ಬೆಂಗಳೂರಿನ ಚಿತ್ರ ಕಲಾ ಪ್ರಪಂಚದಲ್ಲೂ ಪರಭಾಷೀಯರದೇ ಮೇಲುಗೈ. ಯಾವ ಗ್ಯಾಲರಿಗೆ ಭೇಟಿಯಿತ್ತರೂ, ಹೊರನಾಡಿನ ಕಲಾವಿದರೇ ಜಾಸ್ತಿ. ನಮ್ಮ ಕನ್ನಡದ ಕಲಾವಿದರೇಕೆ ಹೆಚ್ಚು ಸಂಖ್ಯೆಯಲ್ಲಿಲ್ಲ?
ಕರ್ನಾಟಕ ಶಾಸ್ತ್ರೀಯ ಸಂಗೀತದ ತವರು ಕರ್ನಾಟಕ. ಆದರೆ ಕನ್ನಡಿಗರಾದ ವಿದುಷಿ ವಿದ್ವಾಂಸರು ಈಗ ಬೆರಳೆಣಿಕೆಯಷ್ಟು.. ತಮಿಳುನಾಡಿನ ಕಲಾವಿದರು ನಮ್ಮ ಪುರಂದರ ದಾಸರ ಕೃತಿಗಳನ್ನು ತಪ್ಪು ತಪ್ಪಾಗಿ ಹಾಡುತ್ತ ಅವರ ಕೊಲೆ ಮಾಡುತ್ತಿದ್ದರೆ ಹೊಟ್ಟೆ ಉರಿಯೋಲ್ಲವೇ? ಅವರುಗಳ ಕಚೇರಿಗಳಿಗೆ ಹಣ ಕೊಟ್ಟು ಕಿಕ್ಕಿರಿದ ಜನಸಂದಣಿ. ನಮ್ಮವರೇ ಹಾಡಿದರೆ ಬಿಟ್ಟಿಯಾದರೂ ಕೇಳುವರಿರೋಲ್ಲ. ಇದಕ್ಕೇನು ಕಾರಣ ಅಂತ ತಿಳಿದವರು ಹೇಳಬೇಕಷ್ಟೆ.
ಅತಿರೇಕದ ಕ್ರೌರ್ಯ, ಅಶ್ಲೀಲತೆ, ಕೀಳುಮಟ್ಟದ ಹಾಸ್ಯ, ಹುರುಳಿಲ್ಲದ ಕಥಾವಸ್ತು, ಅಸಹ್ಯದ ಹಾಡುಗಳು ಎಂಬೆಲ್ಲ ಕಾರಣಗಳಿಂದಾಗಿ ನಮ್ಮಲ್ಲಿ ಎಷ್ಟೋ ಜನ ಕನ್ನಡದ ಚಲನಚಿತ್ರಗಳನ್ನು ನೋಡಹೋಗುವುದಿಲ್ಲ. ಇದೊಂದು ಬೀಜ ವೃಕ್ಷ ಸಮಸ್ಯೆ. ಎಲ್ಲಿಯವರೆಗೂ ಸುಸಂಸ್ಕೃತ ಪ್ರೇಕ್ಷಕವರ್ಗ ಉತ್ತಮ ದರ್ಜೆಯ ಚಿತ್ರಗಳಿಗಾಗಿ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಒಳ್ಳೆಯ ಚಲನಚಿತ್ರಗಳೂ ತಯಾರಾಗುವುದಿಲ್ಲ. ಈ ಉದ್ಯಮದ ಆರೋಗ್ಯಕರ ಬೆಳವಣಿಗೆಗೆ ಬಹಳಷ್ಟು ಶ್ರಮಿಸಬೇಕಾಗಿದೆ.
ಅನೇಕ ಕನ್ನಡಿಗರ ಮನೆಗಳಲ್ಲಿ ಮಕ್ಕಳು ಕನ್ನಡ ಕಲಿಯದಿದ್ದರೂ ಸರಿಯೇ ಇಂಗ್ಲೀಷ್ ಮಾತ್ರ ಕಡ್ಡಾಯವಾಗಿ ಕಲಿಸುವುದುಂಟು. ಮಕ್ಕಳು ಬಿಡಿ ದೊಡ್ದವರೇ ಕನ್ನಡದ ಪುಸ್ತಕಗಳನ್ನು ಓದುವುದಿಲ್ಲ. ನೀವು ಅದೇನು ಓದುತ್ತೀರಿ ಎಂದರೆ ಇಂಗ್ಲೀಷ್ ಪುಸ್ತಕಗಳ ದೊಡ್ಡ ಪಟ್ಟಿಯೇ ಸಿಗುತ್ತೆ. ಇವೆಲ್ಲದರ ಜೊತೆಯಲ್ಲಿಯೇ ನಮ್ಮ ಮನೆಗಳಲ್ಲಿ ನಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿಸಿ, ಒಳ್ಳೆಯ ಸಾಹಿತ್ಯ ಓದಲು ಪ್ರೇರೇಪಿಸಿ ಕನ್ನಡದ ಬಗ್ಗೆ ಅಭಿಮಾನ ಬೆಳಸುವುದು ಬಹುಮುಖ್ಯ. ಈಚೆಗೆ ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳ ಗುಣಮಟ್ಟ ಮೊದಲಿಗಿಂತ ಅನೇಕ ಪಟ್ಟು ಹೆಚ್ಚಿವೆ. ಓದುಗರ ಅಭಾವವೊಂದೇ ಸಮಸ್ಯೆ.
ಕನ್ನಡಿಗರು ಹಣಕೊಟ್ಟು ಪ್ರೋತ್ಸಾಹಿಸಿ ಸದಭಿರುಚಿಯ ರಂಗಭೂಮಿಯ ಬೆಳವಣಿಗೆಗೆ ಮತ್ತು ಹೊಸ ನಾಟಕಗಳ ಪ್ರಯೋಗಗಳಿಗೆ ಕಾರಣವಾಗಬೇಕು. ಹವ್ಯಾಸಿ ರಂಗಭೂಮಿಗೆ ಯುವಕರನ್ನು ಆಕರ್ಷಿಸುವಲ್ಲಿ ಮತ್ತಿಷ್ಟು ಪ್ರಯತ್ನವಾಗಬೇಕಿದೆ.
ನಮ್ಮ ಟಿ. ವಿ ಮತ್ತು ರೇಡಿಯೊ ಮಾಧ್ಯಮಗಳಲ್ಲಿ ಉತ್ತಮ ಅಭಿರುಚಿಯ ಕಾರ್ಯಕ್ರಮಗಳನ್ನು ರೂಪಿಸಿ ಉತ್ತಮ ರೀತಿಯಲ್ಲಿ ಪ್ರಸ್ತುತ ಪಡಿಸಬೇಕು. ಸಾಹಿತ್ಯ ಶುಧ್ಧತೆ ಹಾಗೂ ಭಾಷಾ ಶುಧ್ಧಿಯ ಕಡೆಗೆ ಹೆಚ್ಚು ಗಮನ ಕೊಡಬೇಕು. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಅನ್ನುವುದನ್ನು ಮರೆಯಬಾರದು. ಈ ದಿಕ್ಕಿನಲ್ಲಿ ನಮ್ಮ ಕಲಾವಿದರ ಹಲವು ಪ್ರಯತ್ನಗಳು ಶ್ಲಾಘನೀಯ. ಆದರೆ ಬಹುಪಾಲು ಕಾರ್ಯಕ್ರಮಗಳು ಕಳಪೆ ಮಟ್ಟದ್ದಾಗಿವೆ.

ಹೀಗೆ ನಮ್ಮ ಸಂಸ್ಕೃತಿಯನ್ನು ನಾವೇ ಸರಿಯಾಗಿ ಪ್ರತಿಬಿಂಬಿಸದಿರುವಾಗ ಪರಭಾಷೀಯರು ಅದನ್ನು ಆದರಿಸಿ ಗೌರವಿಸಿಲ್ಲ ಎಂದು ಅತ್ತರೇನು ಫಲ?

ಎಲ್ಲಕ್ಕಿಂತ ಹೆಚ್ಚಾಗಿ, ಕನ್ನಡಿಗರು ತಮ್ಮ ಹಬ್ಬ, ಹರಿದಿನ ಸಮಾರಂಭಗಳಲ್ಲಿ ಪರಭಾಷೀಯರನ್ನು ಆಮಂತ್ರಿಸಿ, ನಮ್ಮ ಭಾಷೆ, ಸಾಹಿತ್ಯ, ನಮ್ಮ ಜಾನಪದ, ನಮ್ಮ ಅಡಿಗೆಯ ಬಗ್ಗೆ ಪರಿಚಯಮಾಡಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಪರಸ್ಪರ ಸೌಹಾರ್ದತೆ ಹೆಚ್ಚಿ ನಮ್ಮ ಭಾಷೆಯನ್ನು ಅವರು ತಾವಾಗಿಯೇ ಕಲಿಯಬೇಕೆಂದು ಅನ್ನಿಸಬಹುದು. ಈಗ ಬೆಂಗಳೂರಿನಲ್ಲಿರುವ ಅನೇಕ ಭಾಷೀಯ ಹಾಗೂ ಸಾಂಸ್ಕೃತಿಕ ಪ್ರಪಂಚಗಳು overlap ಆಗಿ “cross cultural influences” ಹೆಚ್ಚುವುದಲ್ಲವೇ? ಹಾಗೆಯೇ ಅವರೇನಾದರೂ ಸ್ಪಂದಿಸಿ ತಮ್ಮ ಸಂಸ್ಕೃತಿಯನ್ನು ನಮಗೆ ಪರಿಚಯ ಮಾಡಿಸಿ ಕೊಟ್ಟರೆ ಜೀವನ ಇನ್ನೂ ವೈವಿಧ್ಯಮಯವಾಗುವ ಸಾಧ್ಯತೆ ಇದೆ!

ಪ್ರತಿಭಟನೆ, ಕಡ್ದಾಯ ಇತ್ಯಾದಿ ಯೋಜನೆಗಳಿಗಿಂತ, ನಮ್ಮ ಸಮಾಜ ಮತ್ತು ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸುವ ಸಕಾರಾತ್ಮಕವಾದ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಕನ್ನಡದ ಉಧ್ಧಾರ ಖಂಡಿತ ಅಂತ ನನ್ನ ಅನಿಸಿಕೆ. ನೀವೇನಂತೀರಾ!

******************************************************
An abridged version of this article had been published on 24-10-2007 by thatskannada.com
http://thatskannada.oneindia.in/literature/my_karnataka/2007/2410-kannada-multi-lingual-setup.html

Friday 12 October 2007

"ಮಂಥನ" ದ ಬಗ್ಗೆ ಸ್ವಲ್ಪ ಚಿಂತನ!

ಬೆಂಗಳೂರಿನಿಂದ ಬಹಳ ವರ್ಷ ಹೊರಗಿದ್ದ ನನಗೆ ಕನ್ನಡ ಟಿ.ವಿ. ಸೀರಿಯಲ್‍ಗಳನ್ನು ನೋಡುವ ಅಭ್ಯಾಸವಿರಲಿಲ್ಲ. ಇತ್ತೀಚೆಗೆ ನಿವೃತ್ತ್ತ್ತನಾದ ಮೇಲೆ ಬಹಳ ಜನರ ಪ್ರಶಂಸೆ ಕೇಳಿ ಈ ಟೀವಿಯಲ್ಲಿ ಬರೋ “ಮಂಥನ” ದ ಕೆಲವು ಎಪಿಸೋಡ್‍ಗಳನ್ನು ನೋಡಿದೆ. ಹಿಂದಿನಿಂದಲೂ ನಾಟಕದ ಗೀಳು ಬೆಳೆಸಿಕೊಂಡಿದ್ದರಿಂದ ಸ್ವಾಭಾವಿಕವಾಗಿಯೆ ನನ್ನ ಮನಸ್ಸು ನಾಟಕದ ವಿಮರ್ಶೆ ಮಾಡತೊಡಗಿತು. ಮೇಲ್ನೋಟಕ್ಕೆ ನನಗೆ ಅನಿಸಿದ್ದನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಪ್ರಯತ್ನ ಇದು.

ಮೊದಲು ಪ್ರಸಾರವಾಗುತ್ತಿದ್ದ ಬಹಳ ಅತಿರೇಕದ ನಾಟಕೀಯತೆ ಹಾಗೂ ಅತಿಶಯೋಕ್ತಿಗಳಿಂದ ತುಂಬಿದ ಅನೇಕ melodramatic ಸೀರಿಯಲ್‍ಗಳಿಗೆ ಹೋಲಿಸಿದರೆ ಈ ನಾಟಕದ ಗುಣ ಮೌಲ್ಯಗಳು ಬಹಳ ಉತ್ತಮ ಅಂತನೇ ನಿರ್ಣಯಿಸಬೇಕು. ನಿಜವಾಗಿಯೂ ಶ್ರೀ ಸೇತುರಾಮ್‍ರವರು ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳ ನೋವು ನಲಿವುಗಳ ಬಗ್ಗೆ ಚಿಂತನೆಯೇನೋ ಬಹಳ ಚೆನ್ನಾಗಿ ಮಾಡಿ ವಿಶ್ಲೇಷಿಸಿದ್ದಾರೆ. ಆದರೆ ಅವರ ಪಾತ್ರಗಳ ಬಾಯಿಯಲ್ಲಿ ಬರುವ ಸತ್ಯವಚನಗಳು ಎಷ್ಟೇ ನಿಜ ಅನಿಸಿದರೂ ಸ್ವಾಭಾವಿಕ ಅಥವಾ ಸಹಜ ಅನ್ನಿಸಲಿಲ್ಲ.

ನಿಜವಾಗಿಯೂ ಜನರು ತಮ್ಮ ಮನಸ್ಸಿನಾಳದಲ್ಲಿನ ಅವ್ಯಕ್ತ ತುಮುಲ, ತಳಮಳ, ಭೀತಿ, ಆನಂದ ಇವುಗಳೆಲ್ಲವನ್ನೂ ಮಂಥನದಲ್ಲಿ ತೋರಿಸಿದಷ್ಟು ಸುಲಭವಾಗಿ ಸಂಭಾಷಿಸಿ ವ್ಯಕ್ತಪಡಿಸಬಹುದಾದ, ಹಾಗೆಯೇ ಉದ್ದೇಶಿತ ವ್ಯಕ್ತಿ ಕೂಡ ಅಷ್ಟೇ ಸಂಯಮದಿಂದ ಅವರ ಮಾತನ್ನು ಅಡ್ಡ ಹಾಕದೇ ಪೂರ್ತಿ ಕೇಳಿ ಉದ್ರೇಕಿತರಾಗದೆ ಪ್ರತಿಯೊಂದು ಸವಾಲಿಗೂ ಸರಿಯಾಗಿ ಪ್ರತಿಕ್ರಯಿಸುವ, ಮತ್ತೆ ತಾಳ್ಮೆಯಿಂದ ಅವರ ಪ್ರತಿಕ್ರಿಯೆಗೆ ಕಾಯುವ ಸಂಭಾವಿತ ನಡುವಳಿಕೆ ಬಹಳ ಅಸ್ವಾಭಾವಿಕ ಅನ್ನಿಸೋಲ್ಲವೆ? ಬೇರೆಯವರ ಮಾತನ್ನು ಪೂರ್ತಿ ಕೇಳದೇ, ಮನಸ್ಸಿನಲ್ಲಿ ಪೂರ್ವಾಗ್ರಹ ಪೀಡಿತರಾಗಿ ಏನನ್ನೋ ಅರ್ಥಯಿಸಿ, ಅಡ್ಡ ಬಾಯಿ ಹಾಕಿ ತಾಳ್ಮೆಯಿಲ್ಲದೆ ಬಡಬಡಿಸುವುದರಿಂದ ತಾನೇ ಜೀವನ ಇದಿಷ್ಟು unpredictable ಆಗಿರುವುದು. ನಿಜ ಜೀವನದಲ್ಲಿ ಇಷ್ಟು ಸಂಯಮ, ಶಿಸ್ತಿನ ಸಂಭಾವಿತ ನಡುವಳಿಕೆ ಇದ್ದಿದ್ದರೆ ಇಷ್ಟೊಂದು ಅನಿಶ್ಚಿತತೆ ಹಾಗೂ ವೈವಿಧ್ಯತೆ ಇರಲು ಸಾಧ್ಯವಿತ್ತೇ?

Melodrama ಬೇಡ ನಿಜ. ಆದರೂ dramatic‍ ಆಗಿ ಇರಬೇಡವೇ? ಬಹಳ ಉತ್ತಮ ನಟವರ್ಗವಿದ್ದೂ Zombieಗಳ ಹಾಗೆ ನಟಿಸಿದ್ದು ಅದೇನೋ ವಿಚಿತ್ರವಾಗಿತ್ತು. ರೆಡ್ಡಿಯ ಪಾತ್ರ ಮಾತ್ರ ಲವಲವಿಕೆಯಿಂದ ಮೂಡಿಬಂದಿದೆ ಅನ್ನಿಸಿತು. ತಾಯಿ, ಮಗಳು ತೋರಿಸುವ composure, cold blooded ಸೊಸೆಯ ಬಾಯಲ್ಲಿ ಬರುವ ಮಾತುಗಳು ಬಹಳ ಕೃತಕವಾಗಿ ತೋರಿಬಂತು.

ನಮ್ಮ ಆಪ್ತರು , ಮಿತ್ರರೂ ಕೂಡ ಹೀಗೆಯೆ ವರ್ತಿಸಿದರೆ ಜೀವನ ಅದೆಷ್ಟು ನೀರಸವಲ್ಲವೇ? ನೀವೇನಂತೀರಿ?

Wednesday 3 October 2007

ನಮ್ಮ ನಾಟ್ಕದ್ ಮೇಷ್ಟ್ರು - ನಾರಾಯಣ ರಾವ್

ಸೆಪ್ಟೆಂಬರ್ ೨೫ನೇ ತಾರೀಖು ನಮ್ಮ ನಾಟ್ಕದ್ ಮೇಷ್ಟ್ರಾಗಿದ್ದ ಬಿ.ಎಸ್.ನಾರಾಯಣ ರಾವ್‍ರ ಜನ್ಮದಿನ ಅಂತ ನನಗೆ ಅರಿವಾದದ್ದು ಬೆಳಿಗ್ಗೆ ಕಾಫಿ ಕುಡಿಯುವಾಗ “ ವಿಜಯ ಕರ್ನಾಟಕ” ದಲ್ಲಿ ವೈ. ಎನ್. ಗುಂಡೂರಾಯರ “ ಈ ದಿನ - ಈ ಜನ” ಅಂಕಣ ಓದಿದಾಗ.

ಅವರ ಕಿರು ಲೇಖನ ಓದುತ್ತಿದ್ದಂತೆಯೇ ಕಳೆದ ಐವತ್ತು ವರ್ಷಗಳ ನೆನಪಿನ ಸುರಳಿಗಳು ಒಂದೊಂದಾಗಿ ತೆರೆದುಕೊಂಡವು.

೧೯೭೨ರಲ್ಲೇ ಉದರನಿಮಿತ್ತ ಬೆಂಗಳೂರು ಬಿಡಬೇಕಾದ ನನಗೆ ರಾಯರ ಜೊತೆಗೆ ಎಲ್ಲ ಸಂಬಂಧಗಳೂ ಕಡಿದುಹೋಗಿತ್ತು. ಸೇವಾನಿವೃತ್ತನಾಗಿ ಇತ್ತೀಚೆಗೆ ಬೆಂಗಳೂರಿಗೆ ಹಿಂತಿರುಗಿದ ನನಗೆ ಹಳೆಯ ನೆನಪುಗಳು ಮರುಕಳಿಸಿ ರಾಯರ ಬಗ್ಗೆ ತಿಳಿಯುವ ತವಕವಿತ್ತು. ಆದರೆ ಯಾರೊಬ್ಬ ಹಳೆಯ ಸ್ನೇಹಿತರೂ ಪತ್ತೆಯಾಗಲಿಲ್ಲ. ಅಂತರ್ಜಾಲದಲ್ಲಿ ತಡಕಾಡಿದರೂ ಎಲ್ಲಿಯೂ ಅವರ ಬಗ್ಗೆ ಸೊಲ್ಲಿಲ್ಲ. ಹವ್ಯಾಸಿ ಕನ್ನಡ ರಂಗಭೂಮಿಯ ಬೆಳವಣಿಗೆಯ ಕುರಿತ ಲೇಖನಗಳಲ್ಲೂ ನಾರಾಯಣ ರಾಯರ ಬಗ್ಗೆ ಯಾವೊಂದು ಉಲ್ಲೇಖ ಕಾಣಿಸಲಿಲ್ಲ. ಬಹಳ ಖೇದವಾಗಿತ್ತು. ಆದರೆ ಶ್ರೀ ಗುಂಡೂರಾಯರ ಲೇಖನ ಬಹಳ ಸಂತಸ ತಂದಿತು. ಕೈಲಾಸಂರಂತಹವರನ್ನು ನಮಗೆ ಪರಿಚಯಿಸಿದ ವ್ಯಕ್ತಿಯೊಬ್ಬರನ್ನು ಜ್ನಾಪಿಸಿಕೊಳ್ಳುವುದೇ ಒಂದು ರೀತಿಯ ಮಜಾ.

ಬಸವನಗುಡಿಯಲ್ಲಿ ವಾಸಿಸುತ್ತಿದ್ದ ನನಗೆ ನಾರಾಯಣ ರಾಯರ ಪರಿಚಯವಾದದ್ದು ೧೯೫೮ ರಲ್ಲಿ. ಅವರು ಆಗ ಗಾಂಧೀಬಜಾರಿನಲ್ಲಿ ತಮ್ಮ ಹಿರಿಯ ಮಗನ ಹೆಸರಿಸಿದ ಪ್ರಕಾಶ್ ಪ್ರಿಂಟರ್ಸ್ ಎಂಬ ಒಂದು ಸಣ್ಣ ಮುದ್ರಣಾಲಯವನ್ನು ನಡೆಸುತ್ತಿದ್ದರು. ನಮ್ಮ ತಂದೆಯ ಬಾಲ್ಯ ಸ್ನೇಹಿತರೂ ಹಾಗೂ ಸಹಪಾಠಿಗಳೂ ಆಗಿದ್ದರಿಂದ ಆಗಾಗ ಅವರನ್ನು ನೋಡುವ ಸಂದರ್ಭ ಒದಗಿಬರುತ್ತಿತ್ತು. ಬ್ಯೂಗಲ್ ರಾಕ್‍ನ ಬಂಡೆಗಳ ನಡುವೆ ಆಗ ಇದ್ದ ಸಣ್ಣ ಮೈದಾನದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸೇವಾದಳದ ಸದಸ್ಯನಾದಮೇಲಂತೂ ಅವರನ್ನು ಇನ್ನೂ ಹತ್ತಿರದಿಂದ ಅರಿಯುವ ಯೋಗವಾಯಿತು. ರಾಷ್ತ್ರೀಯ ಸೇವಾದಳದಲ್ಲಿ ನನ್ನ ಹಿರಿಯ ಸ್ನೇಹಿತ ಕಾನಕಾನ್ ಹಳ್ಳಿ ಗೋಪಿಯ ನೇತೃತ್ವದಲ್ಲಿ ನಾವು ಹಳ್ಳಿಯ ಕೋಲಾಟದ ತಂಡವೊಂದನ್ನು ಕಟ್ಟಿಕೊಂಡಿದ್ದೆವು. ಸೇವಾದಳಕ್ಕೂ ಪೋಲಿಸ್ ಸ್ಟೇಷನ್ ರಸ್ತೆಯ ಮನೆಯೊಂದರ ಮೇಲಿನ ಕೋಣೆಯಲ್ಲಿ ರಿಹರ್ಸಲ್‍ಗಾಗಿ ಸೇರುತ್ತಿದ್ದ ರವಿ ಕಲಾವಿದರ ತಂಡಕ್ಕೂ ಗಾಢ ಸಂಬಂಧವಿತ್ತು. ಒಂದು ಗೋಪಿ ಅಲ್ಲಿಯ ಸಕ್ರಿಯ ಸದಸ್ಯರಾಗಿ ಇದ್ದದ್ದು. ಮತ್ತೊಂದು ಅಲ್ಲಿಯ ನಾಟಕಗಳಿಗೆ ಬೇಕಾದ ಸಣ್ಣ ಹುಡುಗರ ಪಾತ್ರಗಳಿಗೆ ಸೇವಾದಳ ಒಂದು ಕ್ಯಾಪ್ಟಿವ್ ಸೋರ್ಸ್. ಪಂಚವಾರ್ಷಿಕ ಯೋಜನೆಯ ಪಬ್ಲಿಸಿಟಿಗಾಗಿ ಕೇಂದ್ರ ಸರ್ಕಾರದ ಸಾಂಗ್ ಅಂಡ್ ಡ್ರಾಮಾ ವಿಭಾಗದ ವತಿಯಿಂದ ರವಿ ಕಲಾವಿದರು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಆಡುತ್ತಿದ್ದ ’ಜಾಗೃತ ಭಾರತಿ” ; ’ನಮ್‍ಹಳ್ಳಿ” ನಾಟಕಗಳಲ್ಲೆಲ್ಲ ಹೇಗಾದರೂ ಮಾಡಿ ನಮ್ಮ ಕೋಲಾಟವನ್ನು ಸೇರಿಸಲಾಗುತ್ತಿತ್ತು. ರವಿ ಕಲಾವಿದರ ನಾಟಕಗಳಲ್ಲೆಲ್ಲ ನಿರ್ದೇಶನದ ಹೊಣೆ ನಾರಾಯಣ ರಾಯರದು. ಸತಃ ಬಹಳ ಉತ್ತಮ ನಟರಾಗಿದ್ದಲ್ಲದೆ, ಎಂಥವರನ್ನು ಕೂಡ ನಿರ್ದೇಶಿಸಿ ಅವರಿಂದ ಉತ್ತಮ ಅಭಿನಯ ಮಾಡಿಸುವ ಚಾತುರ್ಯ ಅವರಿಗಿತ್ತು. ಹೀಗಾಗಿ ಆರಂಭವಾದ ನನ್ನ ಅವರ ಸಂಬಂಧ ಇನ್ನೂ ಕುದುರಿದ್ದು ೧೯೬೦ರಲ್ಲಿ.

ನಾನಾಗ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್‍ನಲ್ಲಿ ಓದುತ್ತಿದ್ದೆ. ಆಗ ನಮಗೆ “ಟೈಲರಿಂಗ್‘ ಅಥವಾ ’ಡ್ರಾಮಾಟಿಕ್ಸ್’ ನಡುವೆ ಯಾವುದಾದರೂ ಒಂದನ್ನು ಅಭ್ಯಸಿಸುವ ಆಯ್ಕೆಇತ್ತು. ನಾಟಕದ ರುಚಿ ಹತ್ತಿದ್ದ ನನಗೆ ನಿರ್ಧರಿಸುವುದು ಕಷ್ಟವೇನಾಗಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಕಲಿಸುವ ಮೇಷ್ಟ್ರು ಶ್ರೀ ನಾರಾಯಣ ರಾಯರು. ನೋಡಲು ಬಹಳ ಸರಳ ಸ್ವಭಾವದ, ಮೃದುಭಾಷೀಯರಾಗಿ ಕಂಡರೂ ನಾಟಕದ ಪುಸ್ತಕ ಅವರ ಕೈಗೆ ಸಿಕ್ಕಿದರೆ ಸಾಕು ಅವರ ಅವತಾರವೇ ಬದಲಾಗುತ್ತಿತ್ತು. ನಮಗೆ ಮೇಕಪ್ ಮಾಡುವ ತಂತ್ರ, ಪರದೆ ಕಟ್ಟುವ ಅನೇಕ ಬಗೆಯ ವಿನ್ಯಾಸ, ಪ್ರಾಪ್ಸ್, ಲೈಟಿಂಗ್, ರಂಗಸಜ್ಜೆಯ ಅನೇಕ ಸೂತ್ರಗಳನ್ನು ಹೇಳಿಕೊಡುವ ಜೊತೆಯಲ್ಲಿಯೇ, ಅನೇಕ ಕನ್ನಡ ನಾಟಕಗಳ ಪರಿಚಯ ಮಾಡಿಕೊಟ್ಟವರು ಅವರೇ. ಬೇರೆ ಯಾವ ಕ್ಲಾಸಿಗೆ ಚಕ್ಕರ್ ಹೊಡೆದರೂ ಅವರ ಕ್ಲಾಸಿಗೆ ಮಾತ್ರ ನೂರಕ್ಕೆ ನೂರು ಪಾಲು ಹಾಜರಿಯಿರುತ್ತಿತ್ತು. ಕೈಲಾಸಮ್‍ರವರ ನಾಟಕಗಳ ಪರಿಚಯ ಅವರಿಗಿಂತ ಬೇರೆ ಯಾರು ತಾನೇ ಚೆನ್ನಾಗಿ ಮಾಡಿಕೊಡಬಲ್ಲರು? ಕ್ಲಾಸಿನಲ್ಲಿ ಟೊಳ್ಳು ಗಟ್ಟಿ; ಹೋಮ್‍ರೂಲು; ಬಂಡ್ವಾಳ್ವಿಲ್ಲದ್ಬಡಾಯಿ; ಪೋಲಿಕಿಟ್ಟಿ; ಸೂಳೆ; ಹುತ್ತದಲ್ಲಿ ಹುತ್ತ; Karna; Keechaka; Purpose ಇವೆಲ್ಲ ನಾಟಕಗಳನ್ನೂ ಭಾವಪೂರ್ಣವಾಗಿ ಓದಿ ಹೇಳಿ ನಮಗೆಲ್ಲ ಕ್ಲಿಷ್ಟವೆನಿಸಿದ್ದ ಕೈಲಾಸಂ ಕನ್ನಡವನ್ನು ಓದಲು ಹಾಗೂ ಮಾತನಾಡಲು ಸುಲಭವಾಗಿಸಿದ ಶ್ರೇಯ ರಾಯರದ್ದು.ಅವರ ಸಂವಾದದ ಧೋರಣೆ, ಧ್ವನಿಯ ಮಾಡ್ಯುಲೇಷನ್, ಥ್ರೋ ಅದೆಷ್ಟು ಪರಿಣಾಮಕಾರಿಯಾಗಿರುತ್ತಿತ್ತು ಎಂದು ಬಣ್ಣಿಸುವುದು ಕಷ್ಟ. ಇವರ ಕ್ಲಾಸು ದಿನದ ಅಂತ್ಯದಲ್ಲಿ ಇದ್ದಿದ್ದರಿಂದ ಅದೆಷ್ಟೊ ದಿನ ಕ್ಲಾಸು ಎರಡು ತಾಸಿಗೂ ಮೀರಿ ನಡೆಯುತ್ತಿತ್ತು. ನನಗೆ ನೆನಪಾದಂತೆ ಅವರು ಆನಂದ ರಚಿತ “ವೀರಯೋಧ” ನಾಟಕ ಓದಿದ್ದಾಗ , ಕ್ಲಾಸಿನಲ್ಲಿ ತೇವವಾಗದ ಕಣ್ಣುಗಳಿರಲಿಲ್ಲ.

ರಾಯರ ನಿರ್ದೇಶನದಲ್ಲಿಯೇ ನನ್ನ ರಂಗಪ್ರವೇಶದ ಸುಯೋಗವೂ ಬಂದೊದಗಿತು. ಡಾ. ಎಚ್. ಕೆ. ರಂಗನಾಥ್‍ರವರು ಆಲ್ ಇಂಡಿಯಾ ರೇಡಿಯೋದ ನಿರ್ದೇಶಕರಾಗಿದ್ದಾಗ “ರೇಡಿಯೋ ಸಪ್ತಾಹ” ಆಚರಣೆಯ ಅಂಗವಾಗಿ ಪ್ರೊ. ಕೆ. ವಿ. ಅಯ್ಯರ್ ವಿರಚಿತ ನಾಟಕ ’ಚೇಳು ಅಜ್ಜಾ ಚೇಳು” ವನ್ನು ರವಿ ಕಲಾವಿದರ ಮೂಲಕ ಅಭಿನಯಿಸಲು ಆಯ್ದುಕೊಂಡರು. ನನ್ನನ್ನೂ ಸೇರಿಕೊಂಡು ನನ್ನ ಸಹಪಾಠಿಗಳಾದ ಜಿ. ಕೆ. ಜಗದೀಶ್ (ಆಗಲೇ ಹೆಸರಾಂತ ಭರತನಾಟ್ಯಪಟು ಕೂಡ. ಈಗೆಲ್ಲಿದ್ದಾನೋ ಗೊತ್ತಿಲ್ಲ.) ಮತ್ತು ಬಿ.ಜಿ. ದ್ವಾರಕಾನಾಥ್‍ ( ಈಗ ಟೈಟಾನ್‍ ನಲ್ಲಿ ಸೀನಿಯರ್ ವೈಸ್‍ಪ್ರೆಸಿಡೆಂಟ್-ಹೊರೋಲಜಿ) ರನ್ನು ನಾಟಕದ ಮೂರು ಮಕ್ಕಳ ಪಾತ್ರಕ್ಕಾಗಿ ಆಯಲಾಯಿತು. ನಮ್ಮ ಅದೃಷ್ಟವೋ ಅದೃಷ್ಟ. ಅಜ್ಜನ ಪಾತ್ರದಲ್ಲಿ ನಾರಾಯಣ ರಾಯರು. ಅವರ ಮಗಳ ಪಾತ್ರದಲ್ಲಿ ಶ್ರೀಮತಿ ವಿಜಯ. ಮೊಮ್ಮಗನ ಪಾತ್ರ ಜಗದೀಶನ ಪಾಲಾಯಿತು. ನಿರ್ದೇಶನ ಖುದ್ದಾಗಿ ಪ್ರೊ. ಕೆ. ವಿ. ಅಯ್ಯರ್‍ ಅವರದ್ದು. ರಿಹರ್ಸಲ್ ಎಲ್ಲವೂ ಆಗ ಜೆ.ಸಿ. ರಸ್ತೆಯಲ್ಲಿದ್ದ ’ವ್ಯಾಯಾಮಶಾಲಾ’ದ ಹಿಂದೆ ಇದ್ದ ಅಯ್ಯರ್‍ರವರ ಮನೆಯಲ್ಲಿ. ಬಿರಿಯುವ ಮಾಂಸಖಂಡಗಳಿಂದ ತುಂಬಿದ, ನೋಡಲು ಎಷ್ಟು ಕಠೋರ ಎಂದು ಕಾಣುತ್ತಿದ್ದ ಅಯ್ಯರ್‍ರವರ ನಿಜವಾದ ಮೃದುವಾದ ವ್ಯಕ್ತಿತ್ವವನ್ನು ಅರಿಯುವ ಅವಕಾಶ ನಮಗಾಗಿತ್ತು. ನಿರ್ದೇಶನದಲ್ಲಿ ಅವರು ಕಠಿಣ ’ಟಾಸ್ಕ್ ಮಾಸ್ಟರ್”. ಜೊತೆಗೇ ಡಾ. ರಂಗನಾಥ್ ರವರು ಕನಿಷ್ಠ ಪಕ್ಷ ಅರ್ಧಕ್ಕೂ ಹೆಚ್ಚಿನ ರಿಹರ್ಸಲ್‍ಗಳಿಗೆ ಬಂದು ನಮ್ಮನ್ನು ಹುರಿದುಂಬಿಸುತ್ತಿದ್ದರು. ರಿಹರ್ಸಲ್ಗೆ ಬಂದ “ಸಣ್ಣ ಹುಡುಗರಿಗಾಗಿ” ಅಂತ ಶ್ರೀಮತಿ ಅಯ್ಯರ್ ತಯಾರಿಸುತ್ತಿದ್ದ ಬಿಸಿ ಬಿಸಿ ಬೋಂಡ ಕಾಫಿಗಳ ನೆನಪಾದಾಗಲೆಲ್ಲ ಬಾಯಿ ನೀರೂರುತ್ತದೆ. ನಾರಾಯಣ ರಾವ್‍ರವರ ಅಜ್ಜನ ಪಾತ್ರದ ಅಭಿನಯ ಅದೆಷ್ಟು ಹೃದಯಸ್ಪರ್ಶಿಯಾಗಿತ್ತೆಂದರೆ, ಆ ನಾಟಕ ನೋಡಲು ಬಂದವರಾರೂ ಒಣಗಿದ ಕಣ್ಣಲ್ಲಿ ಮನೆಗೆ ಹೋದ ನೆನಪಿಲ್ಲ. ಈ ನಾಟಕ ನಾವು ಕೇವಲ ಮೂರು ಬಾರಿ ರಂಗದ ಮೇಲೆ ತಂದದ್ದು.

ಅಯ್ಯರ್‍ರವರ ನಾಟಕ ಪ್ರೇಮ ಅದೆಷ್ಟಿತ್ತೆಂದರೆ, ರವಿ ಕಲಾವಿದರು ಅಭಿನಯಿಸಲು ಒಂದು ರಂಗಮಂದಿರವನ್ನೇ ಕಟ್ಟಿಸಿಕೊಟ್ಟಿದ್ದರು. ಅವರ ಅಧ್ಯಕ್ಷತೆಯಲ್ಲಿ ರವಿ ಕಲಾವಿದರು ತಮ್ಮ ’ಪೇಟ್ರನ್” ಗಳಿಗಾಗಿ ಪ್ರತಿ ತಿಂಗಳೂ ಒಂದು ನಾಟಕದ ಪ್ರಯೋಗ ಮಾಡುತ್ತಿದ್ದರು. ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಕೂಡಿಡಲು ಉಗ್ರಾಣದ ವ್ಯವಸ್ಥೆ ಕೂಡ ಮಾಡಿ ಕೊಟ್ಟಿದ್ದರು ಶ್ರೀ ಅಯ್ಯರ್.

೧೯೬೧ -೬೨ರಲ್ಲಿ ನ್ಯಾಷನಲ್ ಹೈಸ್ಕೂಲಿನಲ್ಲಿ ನಾರಾಯಣ ರಾಯರ ನಿರ್ದೇಶನದಲ್ಲಿ ಕಟ್ಟಿದ ಹೊಸ ರಂಗಭೂಮಿಯ ಅನಾವರಣಕ್ಕೆ ಆಯ್ಕೆಯಾದ ನಾಟಕ ಕೈಲಾಸಂರವರ ಇಂಗ್ಲೀಷ್ನಲ್ಲಿ ಬರೆದ ‘Purpose’ ನ ಕನ್ನಡ ಅನುವಾದ “ಏಕಲವ್ಯ”. ಈ ನಾಟಕದಲ್ಲಿ ಮೊದಲ ಸೀನಿನಲ್ಲಿಯೇ ಮೊದಲ ಮಾತಾಡುವ ಸಹದೇವನ ಪಾತ್ರಧಾರಿಯಾದ ನನಗೆ ದಕ್ಕಿತ್ತು. ಸ್ನೇಹಿತರಾದ ದ್ವಾರಕಿ, ಮತ್ತು ಜಗದೀಶ್ ಕೂಡ ಇದ್ದ ಈ ನಾಟಕದಲ್ಲಿ ಏಕಲವ್ಯನ ಪಾತ್ರದಲ್ಲಿ ಮೆರೆದವರು ಶ್ರೀ ನಾರಾಯಣ ರಾವ್. ದ್ರೋಣನಾಗಿ ಅಲ್ಲಿಯ ಇನ್ನೊಬ್ಬ ಮೇಷ್ಟ್ರು ಶ್ರೀ ಜಿ. ಕೆ. ನಾಗರಾಜನ್. ಅರ್ಜುನನ ಪಾತ್ರಧಾರಿ ಈಗಿನ ಪ್ರಖ್ಯಾತ ನಟ ಶ್ರೀನಾಥ್.

ಅವರ ಶಿಷ್ಯನಾದಮೇಲಂತೂ, ರವಿ ಕಲಾವಿದರು ಅಭಿನಯಿಸಿದ ಅನೇಕ ನಾಟಕಗಳಲ್ಲಿ ಅನುಭವಿಸುವ ಸುಯೋಗ ದೊರಕಿತು. ಬಂಡ್ವಾಳ್ವಿಲ್ಲದ್ಬಡಾಯಿಯ ಮುದ್ಮಣಿ; ಬಹದ್ದೂರ್ ಗಂಡಿನ ಶಿವು ಇಂಥದೇ ಮೊದಲಾದ ಚಿಕ್ಕ ಹುಡುಗನ ಪಾತ್ರಗಳು ಸಂದವು. ಬಂಡ್ವಾಳ್ವಿಲ್ಲದ್ಬಡಾಯಿಯ ಅಹೋಬ್ಲು ಪಾತ್ರದಲ್ಲಿ ನಾರಾಯಣ ರಾಯರ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಕೈಲಾಸಂರವರ ನಾಟಕದಲ್ಲಿನ ಸಂಭಾಷಣೆಗಳು ಅವರ ನಾಲಿಗೆಯಲ್ಲಿ ಅದೆಷ್ಟು ಸುಲಲಿತವಾಗಿ ಹೊರಳುತ್ತಿತ್ತು ಅಂತ ವರ್ಣಿಸುವುದೇ

ಕಷ್ಟ. ನಾನು ಮುದ್ಮಣಿಯಾಗಿ ಅನೇಕ ರಿಹರ್ಸಲ್ಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರೂ ಅವರೊಂದಿಗೆ ಪ್ರತಿ ಬಾರಿ ಅಭಿನಯಿಸುವಾಗಲೂ ನಗು ತಡೆ ಹಿಡಿಯುವುದೇ ಕಷ್ಟ ವಾಗಿರುತ್ತಿತ್ತು. ಪ್ರತಿ ಬಾರಿಯೂ ಒಂದು ಹೊಸ ಧಾಟಿ. ಇಂಪ್ರೊವೈಸೇಷನ್!

ಅದೆಷ್ಟೋ ಬಾರಿ ಭಾನುವಾರದಂದು ನನಗೆ ಪಾತ್ರವಿಲ್ಲದಿದ್ದರೂ , ನಾರಾಯಣ ರಾಯರ ಮಾತಿನ ಮೋಡಿಯನ್ನು ಕೇಳಲು ಅವರು ರಿಹರ್ಸಲ್ ಮಾಡುತ್ತಿದ್ದ ರೂಮಿಗೆ ಹೋಗಿ ಗಂಟೆಗಟ್ಟಲೆ ಕೂತಿದ್ದುಂಟು. ಸರಿಯಾದ ರೀತಿಯಲ್ಲಿ ಡೈಲಾಗ್ ನೀಡದಿದ್ದರೆ ಪದೇ ಪದೇ ಹೇಳಿಸಿ ತಮಗೆ ಬೇಕಾದ ರೀತಿಯಲ್ಲಿ ಹೇಳಿದ ಮೇಲೆಯೆ ಅವರು ಮುಂದೆ ಸಾಗುತ್ತಿದ್ದದ್ದು. “ಮೈಕ್ನಲ್ಲಿ ಮಾತಾಡ್ಬೇಕಾದ್ರೆ ನಿಧಾನವಾಗಿ ಮಾತನಾಡಬೇಕು. ಇಲ್ಲದಿದ್ರೆ ಪದಗಳು ’ರೋಲ್’ ಆಗುತ್ತೆ.” ಜೋರಾಗಿ ಮಾತನಾಡಬೇಕು. ಮೈಕ್ ಇಲ್ಲದಿದ್ರೂ ಕೇಳಿಸೋ ಥರ ಇರಬೇಕು” ’ ಕೈ ಕಾಲು ಆಡಿಸೋ ಬಗ್ಗೆ ನಿಗಾ ಇರಲಿ” ಹೀಗೆ ಅನೇಕ ಸಲಹೆಗಳು, ಟಿಪ್ಸು ಇತ್ಯಾದಿ. ಮರೆಯುವಹಾಗಿಲ್ಲ. ನಾಟಕದಲ್ಲಿನ ಸಂಭಾಷಣೆಯಲ್ಲಿ ಎಲ್ಲೆಲ್ಲಿ Pause ಇರಬೇಕು, ಎಲ್ಲಿ emphasis ಇರಬೇಕು, ಇಲ್ಲದಿದ್ದರೆ ಹೇಗೆ ಅಭಾಸವಾಗುತ್ತೆ ಎಂದು ಹೇಳಿ ಅಭಿನಯಿಸಿ ತೋರಿಸುತ್ತಿದ್ದರು.

ರಾಯರು ಅಭಿನಯಿಸಿದ ಪಾತ್ರಗಳಲ್ಲಿ ನಾನು ಮರೆಯಲಾಗದ್ದು “ವೀರಯೋಧ” ದ ಖೈದಿ. ಆನಂದ ವಿರಚಿತ ಈ ನಾಟಕದಲ್ಲಿ ಗಲ್ಲಿಗೆ ಹೋಗಲಿರುವ ಒಬ್ಬ ಖೈದಿ ಮತ್ತು ಅವನೇ ಚಿಕ್ಕಂದಿನಲ್ಲಿ ಕಳೆದು ಹೋಗಿದ್ದ ತನ್ನ ಅಣ್ಣ ಎಂದು ಅರಿಯಲಾಗದ ತಂಗಿಯ ಮುಗ್ಧ ಪ್ರೇಮದ ಮಾರ್ಮಿಕ ಕಥೆ. ತಂಗಿಗೆ ಮೊದಲು ತನ್ನಮೇಲಿದ್ದ ಅಭಿಮಾನ ಹಾಳಾಗಬಾರದೆಂದು ತನ್ನ ಪರಿಚಯ ಮಾಡಿಕೊಳ್ಳಲಾಗದೆ ತೊಳಲಾಡಿದ ಖೈದಿಯ ಪಾತ್ರದಲ್ಲಿ ಪ್ರತಿ ಬಾರಿ ಆಡಿದಾಗಲು ಅವರು ನಿಜವಾಗಿಯೂ ಅತ್ತದ್ದುಂಟು. ಅವರೊಂದಿಗೇ ಪ್ರೇಕ್ಷಕರು ಕೂಡ ಕಂಬನಿಯಿಡುತ್ತಿದ್ದರು. ಶೇಕ್ಸ್‌ಪಿಯರ್‍ನ “ಟೇಮಿಂಗ್ ಆಫ್ ದಿ ಶ್ರೂ” ನಾಟಕದಿಂದ ಪ್ರೇರಿತ ಪರ್ವತವಾಣಿಯವರ ನಾಟಕ “ಬಹದ್ದೂರ್ ಗಂಡ”ದ ಭೀಮುವಿನ ಪಾತ್ರದಲ್ಲಿ ನಿಜವಾಗಿಯೂ ಒಬ್ಬ ಇಂಗ್ಲೀಷ್ “Rake”ನಂತೆ ಅಭಿನಯಿಸುತ್ತಿದ್ದರು. “ಕಾಕನಕೋಟೆ”ಯ ರಣಧೀರ ಕಂಠೀರವ ಕೂಡ ಅವರ ಸ್ಮರಣೀಯ ಪಾತ್ರಗಳಲ್ಲೊಂದಾಗಿತ್ತು. ಅದರಲ್ಲಿ ಕಾನಕಾನ್ ಹಳ್ಳಿ ಗೋಪಿಯ ಕರಿಹೈದನ ನೃತ್ಯ ಮತ್ತು ನಮ್ಮ ತಂಡದ ಕೋಲಾಟ ಎಲ್ಲವೂ ಕಣ್ಣಿಗೆ ಕಟ್ಟಿದಂತಿವೆ. ಅವರು ಅಭಿನಯಿಸದಿದ್ದರೂ ಅವರ ವಿಶೇಷ ಛಾಪು ಅವರ ನಿರ್ದೇಶನದ ನಾಟಕಗಳಲ್ಲಿ ಕಂಡು ಬರುತ್ತಿತ್ತು. ಖ್ಯಾತ ಮರಾಠಿ ನಾಟಕಕಾರ ಪದ್ಮಶ್ರೀ ಪು. ಲ. ದೇಶಪಾಂಡೆಯವರ ಕನ್ನಡದಲ್ಲಿ ಅನುವಾದಿತ “ತನುವೂ ನಿನ್ನದೆ ಮನವೂ ನಿನ್ನದೆ” ನಾಟಕದಲ್ಲಿ ಆಗಿನ ತಂಡದಲ್ಲಿ ಹವ್ಯಾಸಿ ಕಲಾವಿದರಾಗಿದ್ದ ಸಿ. ಎಚ್. ಲೋಕ್‍ನಾಥ್ ( ವೀರಯೋಧದ ಇಂಸ್ಪೆಕ್ಟರ್ ಕೂಡ ) ಕಾಕಾಜಿಯ ಪಾತ್ರದಲ್ಲಿ ವಿಜೃಂಭಿಸಿದರು. ಅವರ ಸಂಭಾಷಣಾ ಶೈಲಿ ಯಲ್ಲಿ ನಾರಯಾಣರಾಯರ ತಾಲೀಮಿನ ಪಾತ್ರ ಬಹಳ ಮುಖ್ಯವಾದದ್ದು. ಇವರು ಮುಂದೆ ಹೆಸರಾಂತ ಚಲನಚಿತ್ರ ನಟರಾದರು. ಇದೇ ನಾಟಕದಲ್ಲಿ ಸ್ವಾಮೀಜಿಯ ಪಾತ್ರದಲ್ಲಿಬಹಳ ಹೆಸರು ಮಾಡಿದ ವ್ಯಕ್ತಿ ಶ್ರೀ ಸಿ. ವಿಶ್ವನಾಥ್ ( ಖ್ಯಾತ ಗಾಯಕ ಅಶ್ವಥ್‍ರವರ ಅಣ್ಣ, ಮುಂದೆ ನಾರಾಯಣರಾಯರ ಮಗ ಪ್ರಕಾಶ್‍ನ ಮಾವ ಕೂಡ).

೧೯೬೩ ರಲ್ಲಿ ನ್ಯಾಷನಲ್ ಕಾಲೇಜ್ ಸೇರಿದ ನಾನು ಅಲ್ಲಿಯ ನಾಟಕಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಾರಣದಿಂದ ನಾರಾಯಣ ರಾವ್ ರವರ ಸಂಪರ್ಕ ಬಹಳ ಕಡಿಮೆಯಾಯಿತು. ಅದೂ ಅಲ್ಲದೆ ಆಗ ಹಿಸ್ಟ್ರಿಯಾನಿಕ್ ಕ್ಲಬ್‍ನ ನೇತೃತ್ವ ಆಗ ತಾನೆ ಲಂಡನ್‍ನಲ್ಲಿ ನಾಟಕ ಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದು ಹಿಂತಿರುಗಿದ ಬಿ. ಎನ್. ನಾರಾಯಣ್ ( ಮೇಕಪ್ ನಾಣಿ) ಯವರದ್ದಾಗಿತ್ತು. ಅದೇನೋ ಏಕೋಈ ಗುಂಪಿನವರು ಆ ಗುಂಪಿನಲ್ಲಿರುತ್ತಿರಲಿಲ್ಲ. ನಾಣಿ ಗುಂಪಿನಲ್ಲಿ ಪ್ರಮುಖರಾಗಿದ್ದವರು, ಬಿ. ಆರ್. ಜಯರಾಮ್, ಎಸ್. ಆರ್. ಸೀತಾರಾಂ, ಸಿ. ಆರ್. ಸಿಂಹ, ಶ್ರೀನಿವಾಸ್ ಕಪ್ಪಣ್ಣ ಮುಂತಾದವರು. ನನಗೆ ತಿಳಿದ ಮಟ್ಟಿಗೆ ಶ್ರೀನಾಥ್ ಮಾತ್ರ ಎರಡೂ ಬಣಗಳಲ್ಲಿ ಆರಾಮಾಗಿ ಬೆರೆತವರು.


ನಾರಾಯಣ ರಾವ್‍ರವರ ವೈಯುಕ್ತಿಕ ಜೀವನದ ಬಗ್ಗೆ ನಮಗ್ಯಾರಿಗೂ ಅಷ್ಟೊಂದು ತಿಳಿದಿರಲಿಲ್ಲ. ಚಿಕ್ಕ ವಯಸ್ಸಿನ ಮಗನೊಬ್ಬನ ಅಕಾಲ ಮರಣ ಅವರನ್ನು ಬಾಧಿಸುತ್ತಿದ್ದಾಗಲೂ ಹೊರಗಡೆ ಯಾವಾಗಲೂ ಮಂದಸ್ಮಿತರಾಗಿ ಲವಲವಿಕೆಯಿಂದ ಒಡನಾಡುತ್ತಿದ್ದರು. ಅವರ ಹಾಸ್ಯ ಪ್ರವೃತ್ತಿ ನಿಜಕ್ಕೂ ಅಮೋಘವಾಗಿತ್ತು. ಹುಡುಗರಾಗಿದ್ದಾಗ ನಾವುರವಿ ಕಲಾವಿದರ ತಂಡದಲ್ಲಿ ಸೇರಿ KNS Bus Service ನ ಬಸ್ ಮಾಡಿಕೊಂಡು ಹಳ್ಳಿ ಹಳ್ಳಿಗಳಲ್ಲಿ ತಿರುಗಿದ್ದು, ದಿನವೆಲ್ಲ ಬಸ್ ಪ್ರಯಾಣ, ಮಧ್ಯಾಹ್ನ ಅಥವಾ ಸಂಜೆ ಸ್ಟೇಜ್ ಕಟ್ಟುವುದು, ಪೆಟ್ರೋಮ್ಯಾಕ್ಸ್ ದೀಪದಲ್ಲಿ ಬ್ಯಾಟರಿ ಯಿಂದ ನಡೆಯುವ ಮೈಕ್‍ಸೆಟ್ ಉಪಯೋಗಿಸಿ ರಾತ್ರಿ ೯ ಅಥವಾ ೧೦ ಘಂಟೆಗೆ ಶುರುವಾಗಿ ಬೆಳಗಿನ ಜಾವ ಮುಗಿಯುವ ನಾಟಕಗಳು, ಬಸ್‍ನಲ್ಲಿ ನಾರಾಯಣರಾವ್ ಮತ್ತಿತ್ತರರ ಜೋಕ್ಸ್ ಎಲ್ಲವೂ ನಿನ್ನೆ ಮೊನ್ನೆ ನಡೆದಂತಿವೆ.

ರವಿ ಕಲಾವಿದರ ಉಪಾಧ್ಯಕ್ಷರೂ ಹಾಗೂ ನಿರ್ದೇಶಕರೂ ಆಗಿ ರಾಯರು ಅನೇಕ ರಂಗ ಕಲಾವಿದರ ಏಳಿಗೆಗೆ ಕಾರಣರಾಗಿದ್ದರು. ಬಿ. ಎಮ್. ಎಸ್ ಕಾಲೇಜಿನ ವೈ. ವಿ. ರಾಮದಾಸ್, ಪ್ರಜಾವಾಣಿಯ ಜಿ. ಎಸ್. ರಾಮರಾವ್, ಶಿವನೆ ಗೋಪಾಲಿ, ಕಾನಕಾನಹಳ್ಳಿ ಗೋಪಿ, ಪ್ರಸನ್ನ, ಆನಂದೂ; ಮೂರ್ತಿ; ಶಂಕ್ರೂ; ಕೇಶವ; ಡಿ.ಎಲ್.ನರಸಿಂಹ ಮೂರ್ತಿ; ಶ್ರಿಮತಿ ಶಾಂತಾ ಭಾರದ್ವಾಜ್, ಶ್ರೀಮತಿ ಸರೋಜ ಹೀಗೆ ಅನೇಕ ಹವ್ಯಾಸಿ ಕಲಾವಿದರು ನಾರಾಯಣ ರಾಯರ ಕೃಪೆಯಿಂದ ಕೃತಾರ್ಥರಾದರು. ನಾರಾಯಣ ರಾಯರೇ ಬೆನ್ನೆಲುಬಾಗಿದ್ದ ರವಿ ಕಲಾವಿದರ ತಂಡ ಸುಮಾರು ೧೯೭೩-೭೪ ರಲ್ಲಿ ರಜತಜಯಂತಿ ಆಚರಿಸಿದ ಕೆಲವೇದಿನಗಳಲ್ಲಿ ಮುಚ್ಚಿಹೋಯಿತು.

ಐವತ್ತರ ಮತ್ತು ಅರವತ್ತರ ದಶಕಗಳಲ್ಲಿ ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ಮೆರೆದ ಇಂತಹ ವ್ಯಕ್ತಿಯ ಸ್ಮಾರಕವಾಗಿ ಏನೊಂದು ಕುರುಹೂ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಬಹುಶಃ ಅವರ ವ್ಯಕ್ತಿತ್ವವೇ ಎಲೆ ಮರೆಯ ಕಾಯಿಯಾಗಿ ಉಳಿಯುವಂತಹುದಾಗಿತ್ತೋ ಏನೋ. Flamboyance ಅವರ ಜಾಯಮಾನದ್ದಾಗಿರಲಿಲ್ಲ.

ಏನೇ ಇರಲಿ. Thanks ಗುಂಡೂರಾಯರೇ! ನಿಮ್ಮ ಲೇಖನ “has made my day.”

*************************************************************************************

Friday 28 September 2007

ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ

- ನವರತ್ನ ಸುಧೀರ್

ಇಸವಿ ಕ್ರಿಸ್ತ ಶಕ ೨೦೦೭. ಸೆಪ್ಟೆಂಬರ್ ತಿಂಗಳಿನ ಒಂದು ದಿನ. ಇವತ್ತೇ ಎಂದಿಟ್ಟುಕೊಳ್ಳಿ. ಶ್ರೀ ರಾಮ ಹನುಮಂತನೊಂದಿಗೆ ರಾಮೇಶ್ವರದ ತಟದಲ್ಲಿ ನಿಂತು ದೂರದಿಂದಲೇ ರಾಮ ಸೇತುವೆಯನ್ನು ಸಿಂಹಾವಲೋಕನ ಮಾಡುತ್ತಿದ್ದ.

“ಪ್ರಿಯ ಹನುಮಾನ್, ನೀನು ಬೇರೆ ಕಪಿಗಳ ಸಹಾಯದಿಂದ ನಿರ್ಮಿಸಿದ ಈ ಸೇತುವೆ ಸಾವಿರಾರು ವರ್ಷಗಳ ಕಾಲ ಅದೆಷ್ಟು ಸುಭದ್ರ ಹಾಗೂ ಸುರಕ್ಷಿತವಾಗಿದೆಯಲ್ಲ! ಅದೇ ನೋಡು ಹೈದರಾಬಾದಿನಲ್ಲಿ ಮೊನ್ನೆ ಮೊನ್ನೆ ತಾನೆ ಗ್ಯಾಮನ್ ಕಂಪನಿಯವರು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಕಟ್ಟಿದ ಸೇತುವೆ ಹೇಗೆ ಕುಸಿದುಬಿದ್ದಿತು?”

ಹನುಮಾನ್ ಹೇಳಿದ “ಸ್ವಾಮಿಗಳೇ, ನಾವೆಲ್ಲರೂ ನಿಮ್ಮ ಮೇಲಿನ ಭಕ್ತಿಯೊಂದರ ಅಧಾರದ ಮೇಲೆ ಪ್ರತಿಯೊಂದು ಕಲ್ಲಿನ ಮೇಲೆಯೂ ನಿಮ್ಮ ನಾಮ ಮಾತ್ರವೊಂದನ್ನು ಬರೆದು ಸಮುದ್ರದಲ್ಲಿ ಎಸೆದಿದ್ದೆವು. ಅವೆಲ್ಲ ಒಂದಾಗಿ ಈ ಸೇತುವೆಯ ನಿರ್ಮಾಣವಾಯಿತು. ನಮಗೆ ನಿಮ್ಮ ಭಕ್ತಿಯೊಂದು ಬಿಟ್ಟು ಯಾವ ಟಾಟಾ ಸ್ಟೀಲ್‍ರವರ ಉಕ್ಕು ಅಥವಾ ಅಂಬುಜ ಕಂಪನಿಯ ಸಿಮೆಂಟ್‍ನ ಅವಶ್ಯಕತೆ ಇರಲಿಲ್ಲ. ಅದು ಸರಿ, ಈಗೇಕೆ ಅಷ್ಟು ಹಳೆಯ ವಿಷಯದ ಪ್ರಸ್ತಾಪ?”

“ ಅಲ್ಲವೋ ಹನುಮಾನ್, ನಿನಗೇಕೆ ಅರ್ಥವಾಗುತ್ತಿಲ್ಲ? ಈಗ ಭಾರತದಲ್ಲಿ ಕೆಲವರು ಈ ಸೇತುವೆಯನ್ನು ಕೆಡವಿ ಒಂದು ಮಹಾ ಕಾಲುವೆ ಕಟ್ಟಲು ಹೊರಟಿದ್ದಾರೆ. ಸೇತುವೆ ಕೆಡವುವ ಗುತ್ತಿಗೆ ಕೊಡುವುದರಲ್ಲಿ ಬಹಳ ಹಣ ಗಳಿಸಬಹುದು. ಇನ್ನು ಕಾಲುವೆ ಮಾಡುವ ಗುತ್ತಿಗೆಯಲ್ಲಿ ಇನ್ನೂ ಜಾಸ್ತಿ ಹಣ ಗಳಿಸಬಹುದು. ಅರ್ಥವಾಯಿತೆ ವಾನರರಾಜರಿಗೆ?” ರಾಮ ಉವಾಚ.

ಹನುಮಂತನಿಗೆ ಇನ್ನೂ ಅರ್ಥವಾಗಲಿಲ್ಲ. “ ನಾವು ಸ್ವತಃ ಸರ್ಕಾರದ ಮುಂದೆ ಹೋಗಿ ಮನವಿ ಸಲ್ಲಿಸಿದರೆ ಹೇಗೆ? ಆಗಲಾದರೂ ನಂಬಬೇಕಲ್ಲವೇ?”

ಶ್ರೀ ರಾಮ ನಕ್ಕು ಹೇಳಿದ “ ಅಯ್ಯಾ ಆಂಜನೇಯ, ಇದು ಕಲಿ ಯುಗ. ಎಲ್ಲ ಬದಲಾಗಿದೆ? ನಾವೀಗ ಅಲ್ಲಿಗೆ ಹೋದರೆ ಅವರಿಗೆ ಏಜ್ ಪ್ರೂಫ್ -ಅಂದರೆ ವಯಸ್ಸಿನ ಪುರಾವೆ ಗಾಗಿ ಬರ್ಥ್ ಸರ್ಟಿಫಿಕೇಟ್ ಅಥವಾ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಕೇಳುತ್ತಾರೆ. ಅದೆಲ್ಲಿಂದ ತರ್ತೀಯಾ? ಎಲ್ಲ ಕಡೆಯೂ ಬರಿಗಾಲಿನಲ್ಲಿ ಅಥವಾ ಎತ್ತಿನ ಬಂಡಿಯಲ್ಲೋ ಓಡಾಡಿದ ನಮಗೆ ಡ್ರೈವಿಂಗ್ ಲೈಸೆನ್ಸ್ ಕೂಡ ಇಲ್ಲ.
ಇನ್ನು ಅಡ್ರೆಸ್ ಪ್ರೂಫ್ ಗಾಗಿ ರೇಷನ್ ಕಾರ್ಡ್ ಕೂಡ ಇಲ್ಲ. ಹುಟ್ಟಿ ಬೆಳೆದ ಅಯೋಧ್ಯೆ ಇದೆಯೋ ಇಲ್ಲವೋ ಅಂತ ಇತಿಹಾಸಕಾರರು ಕಳೆದ ೫೦ ವರ್ಷಗಳಿಂದಲೂ ಹೊಡೆದಾಡುತ್ತಿದ್ದಾರೆ. ಇನ್ನು ನಾನು ಬಿಲ್ಲು ಬಾಣ ಹಿಡಿದು ದೆಹಲಿಗೆ ಹೋದೆನೋ, ಸಾಧಾರಣ ಮನುಷ್ಯ ನನ್ನನ್ನು ಗುರುತಿಸಿದರೂ, ಮಂತ್ರಿ ಅರ್ಜುನ್ ಸಿಂಗ್ ಮಾತ್ರ ನಾನು ಯಾವುದೋ ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂದುಕೊಂಡು ಯಾವುದೋ ಐ.ಐ ಟಿ ಯಲ್ಲಿ ಸುರಕ್ಷಿತ ಕೋಟಾದಲ್ಲಿ ಸೀಟ್ ಕೊಡಬಹುದಷ್ಟೇ.! ನಾರಾಯಣಮೂರ್ತಿಗಳ ಹಾಗೆ ಒಂದು “ತ್ರೀ ಪೀಸ್ ಸೂಟ್” ಹಾಕಿ ಕೊಂಡೇನಾದರೂ ಹೋದರೆ ಭಕ್ತರು ಕೂಡ ನನ್ನನ್ನು ನಂಬುವುದಿಲ್ಲ. ಒಂದು ವಿಚಿತ್ರ ರೀತಿಯ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ.”

ಹನುಮಾನ್ ಉವಾಚ. “ನಾನೇ ನಿಮ್ಮ ಪರವಾಗಿ ಹೋಗಿ ಈ ಸೇತುವೆ ಕಟ್ಟಿದವನು ನಾನೆ ಎಂದು ಡಿಕ್ಲೇರ್ ಮಾಡಿದರೆ?”

“ ಅಯ್ಯಾ ಪವನಸುತಾ! ನಿನಗೆ ಅದೇನು ಹೇಳಲಿ? ಅಲ್ಲಿ ನಿನ್ನ ಯಾವ ಬೇಳೆಯೂ ಬೇಯುವುದಿಲ್ಲ. ಅವರು ನಿನಗೆ ಸೇತುವೆಯ ನಕ್ಷೆ, ಸಂಪೂರ್ಣ ಪ್ರಾಜೆಕ್ಟ್ ರಿಪೋರ್ಟ್, ಒಟ್ಟು ಹಣ ಹೂಡಿಕೆಯ ವಿವರಗಳು ಇತ್ಯಾದಿ ಅನೇಕ ವಿವರ, ದಾಖಲೆಗಳನ್ನು ಸಲ್ಲಿಸಲು ಹೇಳುತ್ತಾರೆ. ವಿತ್ತ ಮಂತ್ರಿ ಚಿದಂಬರಂ ಕೂಡ ಅಷ್ಟು ಹಣ ಕಪಿಗಳಾದ ನಿಮಗೆಲ್ಲಿಂದ ಬಂತು? ಟ್ಯಾಕ್ಸ್ ಕೊಟ್ಟಿದ್ದೀರಾ? ಯಾವುದಾದರೂ ಹೊರ ದೇಶದಿಂದ ಹಣದ ಸಹಾಯವಿತ್ತೇ? ಹೀಗೇ ಏನೇನೋ ಕೇಳಿ ಸತಾಯಿಸುತ್ತಾರೆ. ಕೊನೆಗೆ ಕಂಪ್ಲೀಷನ್ ಸರ್ಟಿಫಿಕೇಟ್ ಎಲ್ಲಿ? ಯಾರು ಕೊಟ್ಟದ್ದು? ಯಾವಾಗ ಕೊಟ್ಟದ್ದು? ದಾಖಲೆಗಳಿಲ್ಲವೋ ನೀ ಸತ್ತೆ! ನಿನಗೆ ಕೆಮ್ಮು ಇರಬಹುದು. ಆದರೆ ಡಾಕ್ಟರ್ ಹೇಳಬೇಕು. ಪೆಂಷನ್ ತೊಗೊಳ್ಳುವಾಗಲೂ ನಿಮ್ಮ ಬ್ಯಾಂಕ್ ಮ್ಯಾನೇಜರ್ ನೀನು ಬದುಕಿರುವೆ ಎಂಬ ಸರ್ಟಿಫಿಕೇಟ್ ಕೊಡಬೇಕು! ನೀನಂದುಕೊಂಡಷ್ಟು ಸುಲಭವಲ್ಲ ಜೀವನ ಈಗಿನ ಭಾರತದಲ್ಲಿ” ಎಂದ ಶ್ರೀ ರಾಮ.

ಹನುಮಾನ್ ಹತಾಶನಾಗಿ “ನನಗೆ ಈ ಇತಿಹಾಸಕಾರರ ವರ್ತನೆಯೇ ಅರ್ಥವಾಗುವದಿಲ್ಲ. ನೀವು ಆಗಿಂದಾಗ್ಗೆ ಭೂಮಿಯಲ್ಲಿ ಅವತರಿಸಿ ಸಂತ ಸೂರದಾಸ, ತುಳಸೀದಾಸ, ತ್ಯಾಗರಾಜ, ಜಯದೇವ, ಭದ್ರಾಚಲ ರಾಮದಾಸ, ತುಕಾರಾಮ್ ಮುಂತಾದವರಿಗೆ ದರ್ಶನ ನೀಡಿದ್ದರೂ ಕೂಡ, ರಾಮಯಣ ಕೇವಲ ಕಾಲ್ಪನಿಕ, ಶ್ರೀ ರಾಮ ಯಾವದೋ ಕವಿಯ ಕಾಲ್ಪನಿಕ ಸೃಷ್ಟಿ ಎಂದೆಲ್ಲ ಹೇಳುತ್ತಾರಲ್ಲ. ಇವರಿಗೆ ಬೆಂಡೆತ್ತುವುದು ಹೇಗೆ? ನನಗೆ ತೋಚುವುದೊಂದೇ ಉಪಾಯ. ಭೂಮಿಯ ಮೇಲೆ ರಾಮಾಯಣದ ಪುನರಾವರ್ತನೆ ಮಾಡಿದರೆ ಹೇಗೆ? ಆಗಲಾದರೂ ನಂಬಲೇಬೇಕಲ್ಲ!”

ಶ್ರೀ ರಾಮ ಕರುಣಾಭರಿತ ದೃಷ್ಟಿಯಿಂದ ಹನುಮಂತನ ಕಡೆ ನೋಡುತ್ತ “ ಅಯ್ಯೋ ಮಂಕೇ ( ಮಂಕಿಯೇ?), ನನಗೂ ಈ ಐಡಿಯಾ ಮುಂಚೆಯೇ ಹೊಳೆದಿತ್ತು. ಆದರೆ ರಾವಣನ ಪ್ರಕಾರ ಆ ಬೃಹದ್ರಾಕ್ಷಸ ಕರುಣಾನಿಧಿಯ ತುಲನೆಯಲ್ಲಿ ರಾವಣ ಕೂಡ ಓರ್ವ ಸಂತನಂತೆ ಕಂಡುಬಂದು ಅವನೇ ನನ್ನ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಬಹುದು ಎಂಬ ಹೆದರಿಕೆಯಂತೆ. ಸುವರ್ಣ ಜಿಂಕೆಯಾಗಿ ಸೀತೆಯನ್ನು ಆಕರ್ಷಿಸಿದ ಅವನ ಮಾವ ಮಾರೀಚನೂ ಕೂಡ ಹಿಂದೀ ಚಲನಚಿತ್ರ ನಟ ಸಲ್ಮಾನ್ ಖಾನ್ ಬೇಲ್ ಮೇಲೆ ಇರುವವರೆಗೂ ನಾನು ಭೂಮಿಯಮೇಲೆ ಕಾಲಿಡುವುದಿಲ್ಲ ಅಂತ ಪ್ರತಿಜ್ನೆ ಮಾಡಿದ್ದಾನಂತೆ. ಹೀಗಿರಲು ರಾಮಾಯಣದ ಪುನರಾವರ್ತನೆ ಹೇಗೆ ತಾನೆ ಸಾಧ್ಯ?” ಎಂದು ಹೇಳಿ ತಲೆಯ ಮೇಲೆ ಕೈ ಇಟ್ಟು ಕುಳಿತುಕೊಂಡ.

**********************************************

A slightly modified version of above article was published by Thatskannada.com on 27th Sep 2007 . See the link below -
http://thatskannada.oneindia.in/column/humor/280907-Siyaram-Jaihanuman-Humor-Essay.html

Tuesday 18 September 2007

ನರಸಿಂಹಾವತಾರದ್ Dilemma! ಆಗಿರೋದು ನಮ್ಮ ವಿಜ್ನಾನಿಗಳಿಗೆ!

To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ ಇರಬಹುದು ಅವರ Dilemma.

Dilemma ದ ಸರಿಯಾದ ಕನ್ನಡ ಭಾವಾರ್ಥ ಏನು? ತುಮುಲ, ದ್ವಂದ್ವ, - ಎರಡೂ ಆಗಬಹುದಾದರೂ ನನಗಿರುವ ಡಿಲೆಮ್ಮ ಎಂದರೆ ಕನ್ನಡದ ಎರಡು ಪದವೋ ಅಥವಾ ಇಂಗ್ಲೀಷಿನ ಒಂದು ಪದವೋ? I was on the horns of a dilemma! ಅಂದರೆ ಡಿಲೆಮ್ಮ ಅನ್ನೋದು ಒಂದು ಗೂಳಿಯೇ ಅಂತ ನನ್ನನ್ನು ಕೇಳಬೇಡಿ. ಶೀರ್ಷಿಕೆಯಲ್ಲಿ ಡಿಲೆಮ್ಮ ಎಂದು ಉದ್ಗರಿಸಿರೋದ್ರಿಂದ ಇಂಗ್ಲೀಷ್ ಡಿಲೆಮ್ಮದ ಅರ್ಥದಲ್ಲಿಯೇ ಮುಂದುವರಿಸುತ್ತೇನೆ.

ಈ ಡಿಲೆಮ್ಮ ಏನೋ ತೀರ್ಮಾನವಾಯಿತು. ಆದರೆ ಈ ನರಸಿಂಹ ಎಲ್ಲಿಂದ ಬಂದ?

ಭಕ್ತ ಪ್ರಹ್ಲಾದನ ಕಥೆ ಕೇಳಿದವರೆಲ್ಲರಿಗೂ ಅವನ ತಂದೆ ಹಿರಣ್ಯಕಶಿಪುವಿನ ಬ್ರಹ್ಮನಿಂದ ತಪಸ್ಸು ಮಾಡಿ ಪಡೆದ ವರ ಚೆನ್ನಾಗಿಯೇ ಗೊತ್ತಿರಬಹುದು. “ದೇವರಿಂದಾಗಲೀ, ಪ್ರಾಣಿಗಳಿಂದಾಗಲೀ, ಮನುಷ್ಯರಿಂದಾಗಲೀ, ಹಗಲಾಗಲೀ, ಇರುಳಾಗಲೀ, ಮನೆಯ ಹೊರಗಾಗಲೀ, ಒಳಗಾಗಲೀ, ಯಾವುದೇ ಅಯುಧದಿಂದಾಗಲೀ ತನಗೆ ಸಾವು ಬರಕೂಡದು.”

ಆಮೇಲೆ ಅವನ ಹಾವಳಿ ತಡೆಯಲಾಗದೆ, ಶ್ರಿಮನ್ನಾರಾಯಣನೆನಿಸಿಕೊಂಡ ಮಹಾವಿಷ್ಣು ಒಳ್ಳೆಯ ಡಿಲೆಮ್ಮದಲ್ಲಿ ಸಿಲುಕಿದ್ದ. ದೇವರಾದ್ದರಿಂದ ಈ ಡಿಲೆಮ್ಮದಿಂದ ಮುಕ್ತನಾಗಲು, ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ, ರಾತ್ರಿಯೂ ಅಲ್ಲದ ( ಸೂರ್ಯಾಸ್ತವಾಗುವ ) ಹೊತ್ತು ಮುಳುಗುವ ಹೊತ್ತಿನಲ್ಲಿ, ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ ಮನುಷ್ಯನಾಗಲೀ ಅಲ್ಲದ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ನಿಶ್ಚಿಂತನಾದ.

ಈಗ ಗೊತ್ತಾಯಿತೇ ಈ ಉದ್ದದ ಪೀಠಿಕೆಯ reference to the context? ಭಾರತದಲ್ಲಿ ಈಗ ಡಿಲೆಮ್ಮಗಳ ಸೀಸನ್. ಎಲ್ಲಿ ನೋಡಿದರಲ್ಲಿ ಡಿಲೆಮ್ಮವೇ ಡಿಲೆಮ್ಮ.

ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಿ.ಪಿ.ಎಮ್ ಮುಖಂಡರಿಗೆ ಅಣುಶಕ್ತಿ ಒಪ್ಪಂದ ಅಥವ ಮಧ್ಯಂತರ ಚುನಾವಣೆಯ ಡಿಲೆಮ್ಮ. ನಮ್ಮ ಕರ್ನಾಟಕದಲ್ಲಿಯೂ ಅಧಿಕಾರ ಹಸ್ತಾಂತರ ಕುರಿತು ದೇವೇಗೌಡರಿಗೆ, ಅವರ ಕುಮಾರ ಕಂಠೀರವರಿಗೆ, ಯೆಡಿಯೂರಪ್ಪನವರಿಗೆ ಬೇರೆ ಬೇರೆ ತರಹದ ಡಿಲೆಮ್ಮಗಳು. ಕ್ರಿಕೆಟ್ ಆಟಗಾರರಿಗೆ ಬಿ.ಸಿ.ಸಿ.ಐ ಅಥವ ಐ.ಸಿ.ಎಲ್ ನಡುವಣ ಡಿಲೆಮ್ಮ; ರಾಹುಲ್ ದ್ರಾವಿಡ್‍ಗೆ ಕಪ್ತಾನನ ಪಟ್ಟದ ಡಿಲೆಮ್ಮ; ಬಿ.ಸಿ.ಸಿ.ಐ ಗೆ ಸಚಿನ್, ಗಂಗೂಲಿ ಮತ್ತು ಧೋಣಿ ಬಗ್ಗೆ ಡಿಲೆಮ್ಮ .( ಟ್ರಿಲೆಮ್ಮ ಎನ್ನಬಹುದೋ ಇಲ್ಲವೋ ಗೊತ್ತಿಲ್ಲ.)

ಹೀಗೆ ಪಟ್ಟಿ ಹಾಕುತ್ತ ಹೋದಲ್ಲೆಲ್ಲ ಇನ್ನೂ ಉದ್ದವಾಗಿ ಬೆಳೆಯುತ್ತ ಹೋಗುತ್ತೆ. ಆದರೆ ಸಮಯ ಕಳೆಯುತ್ತಲೆಲ್ಲ ಇವೆಲ್ಲ ಡಿಲೆಮ್ಮಗಳು ಟೇಮಾಗಿ ಬಗೆಹರಿಯುತ್ತವೆ. ಆದರೆ ಹೊಸದಾಗಿ ಹುಟ್ಟಿಕೊಂಡಿರುವ ಒಂದು ಡಿಲೆಮ್ಮ ಮಾತ್ರ ಬೃಹದಾಕಾರವಾಗಿ ಬೆಳೆಯುವ ಲಕ್ಷಣಗಳಿದ್ದು ಕ್ಷುಲ್ಲಕ ಮಾನವ ಮಾತ್ರರಿಂದ ಬಗೆಹರಿಯಲು ಸಾಧ್ಯವಾಗುವುದೋ ಎಂದು ಶಂಕೆಯನ್ನುಂಟು ಮಾಡುತ್ತಿದೆ.

ಇದ್ಯಾವುದಪ್ಪ ಇಂಥ ನರಸಿಂಹಾವತಾರದ ಡಿಲೆಮ್ಮ ಅಂತ ಯೊಚಿಸುತ್ತಿದ್ದೀರೇನೋ. ನಮ್ಮ ಅನಂತಮೂರ್ತಿಯವರೇನೋ ಬಹಳ ಸುಲಭವಾಗಿ “ ನಮ್ಮ ವಿಜ್ನಾನಿಗಳಿಗೇನಾಗಿದೆ?” ಅಂತ ಪ್ರಶ್ನೆ ಕೇಳಿ ತಮ್ಮ ಕೈ ತೊಳೆದುಕೊಂಡಿದ್ದಾರೆ. ಚಾಮಲಾಪುರದ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕಾಗಿ ಆಯ್ದುಕೊಂಡಿರುವ ಜಾಗ, ಅದರಿಂದ ಪರಿಸರ ಹಾಗೂ ಪಶು, ಪಕ್ಷಿ, ಜಲಚರಗಳಿಗೆ ಆಗಬಹುದಾದ ಅಥವ ಆಗದೇ ಇರಬಹುದಾದ ಸಮಗ್ರ ಹಾನಿಯ ಬಗ್ಗೆ ಎಲ್ಲರೂ ಸ್ವಛ್ಛಂದವಾಗಿ ವ್ಯಾಖ್ಯಾನಿಸುವ ಮೂಲಕ ಒಂದು ಅತಿ ದೊಡ್ಡ ಡಿಲೆಮ್ಮ ವಿ(ಅ)ಜ್ನಾನಿಗಳ ಮುಂದೊಡ್ಡಿದ್ದಾರೆ. ಕರಾವಳಿಯಲ್ಲಿ ಬೇಡ. ಒಳನಾಡಿನಲ್ಲಿ ಬೇಡ. ಮಲೆನಾಡಿನಲ್ಲಿ ಬೇಡ. ನೀರಿದ್ದಲ್ಲಿ ಬೇಡ, ಅಲ್ಲಿ ಬೇಡ, ಇಲ್ಲಿ ಬೇಡ. ಕಡೆಗೆ ಸುಡುಗಾಡಿನಲ್ಲಿಯೂ ಜಾಗ ಸಿಕ್ಕುವುದು ಕಷ್ಟ. ನಿಜವಾಗಿಯೂ ಸುಡುಗಾಡೆ ಆಯ್ದರೂ, ಅದು ಹಿಂದುಗಳದೋ, ಬೇರಾರದೋ ಎಂದು ಕಿತ್ತಾಟದ ಆರಂಭ ಖಚಿತ.

ಸ್ಥಾವರದ ಜಾಗದ ಡಿಲೆಮ್ಮ ಬಗೆಹರಿಸಿದರೆ ಆಯಿತೆ? ಇಲ್ಲ. ಇದ್ದಿಲಿನಿಂದ ಶಾಖೋತ್ಪನ್ನವೋ ಅಥವ ಅಣುಶಕ್ತಿಯಿಂದ ಶಾಖೋತ್ಪನ್ನವೋ ಎಂಬುದರ ಬಗ್ಗೆ ಎರಡೂ ವಿಧಾನಗಳ ಗಂಧವೂ ಹತ್ತದ ಪಂಡಿತರಿಂದ ಪತ್ರಿಕೆಗಳಲ್ಲಿ, ಎಲ್ಲಿ ಕಂಡಲ್ಲಿ ಚರ್ಚೆ ಶುರುವಾಗುತ್ತದೆ. ಅಂತರ್ಜಾಲದ ಹಾವಳಿಯಿಂದ ನಮ್ಮ ಸಾಧಾರಣ ನಾಗರಿಕನ ಜ್ನಾನ ಅದೆಷ್ಟು ಮಟ್ಟಿಗೆ ಹೆಚ್ಚಿದೆಯೆಂದರೆ, ನಮ್ಮ ವಿಜ್ನಾನಿಗಳೆಲ್ಲ ಅಜ್ನಾನಿಗಳೆಂದು ಅನಂತಮೂರ್ತಿಯವರು ಸಂಶಯಿಸಿದ ಹಾಗೆಯೇ ಋಜುವಾತಾಗಿ ಹೋಗಿಬರುವ ಸಂಭವ ದೂರವಿಲ್ಲ.
ಎಲ್ಲ ಬಲ್ಲವರೇ ನಮ್ಮೂರಿನಲ್ಲಿ, ವಿಜ್ನಾನಿಗಳು ಮತ್ತು ಎಂಜಿನಿಯರ್‍ಗಳನ್ನು ಹೊರೆತು.

ವಿದ್ಯುತ್ ಮಾತ್ರ ಎಲ್ಲರಿಗೂ ಬೇಕು. ಆದರೆ ಉತ್ಪಾದನೆ ನಮ್ಮ ಹಿತ್ತಲಲ್ಲಿ ಬೇಡ. ಬೆಂಗಳೂರಿಗೆ ಬೇಕಾದ ವಿದ್ಯುತ್ತನ್ನು ಮಂಗಳೂರಿನ ಸ್ಥಾವರವೇಕೆ ನೀಡಬೇಕು ಅಂತ ಕರಾವಳಿ ಪರಿಸರವಾದಿಗಳ ಬೊಬ್ಬೆ. ಹಾಗೆಯೇ ಹೆಚ್. ಡಿ. ಕೋಟೆಯವರಿಗೆ ತಮ್ಮ ಪರಿಸರದ ಕಾಳಜಿ. ಯಾರಿಗೂ ಆಧುನಿಕ ವಿದ್ಯುತ್ ಸ್ಥಾವರಗಳ ವಿನ್ಯಾಸದ ಪರಿಕಲ್ಪನೆಯಾಗಲೀ; ಹೇಗೆ ತಂತ್ರಜ್ನರು ಕಳೆದ ವರ್ಷಗಳಲ್ಲಿ ನಿರಂತರ ಸಂಶೋಧನೆಯಿಂದ ಪರಿಸರ ಮಾಲಿನ್ಯದ ತೀವ್ರತೆಯನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದರ ಬಗೆಯಾಗಲೀ ತಿಳುವಳಿಕೆ ಇದ್ದಂತಿಲ್ಲ. ಹಿಂದಿಯಲ್ಲಿ ಹೇಳುವ ಹಾಗೆ “ಜಿಸ್ ಕಿ ಲಾಠಿ, ಉಸ್‍ಕಿ ಭೈನ್ಸ್” ( ಯಾರ ಕೈಯಲ್ಲಿ ದೊಣ್ಣೆಯಿದೋ, ಕೋಣ ಅವನದ್ದು). ನಿಮ್ಮಲ್ಲಿ ಬೊಬ್ಬೆ ಹೊಡೆಯುವ ಜನರನ್ನು ಕೂಡಿ ಹಾಕುವ ಸಾಮರ್ಥ್ಯವಿದ್ದರೆ ಸಾಕು. ನೀವು ಹೇಳಿದ್ದೇ ವೇದ, ಪುರಾಣ ಎಲ್ಲ. ಎಲ್ಲ ಬುಧ್ಧಿಜೀವಿಗಳೂ ಮಂಕಾಗಿ ನರಸತ್ತವರಾಗುತ್ತಾರೆ.

ಒಟ್ಟಾಗಿ ಹೇಳುವುದಾದರೆ, ಇದ್ದಲು ಹಾಗು ಅಣುಶಕ್ತಿಯಿಂದಾಗುವ ಪರಿಸರ ಮತ್ತನೇಕ ಮಾಲಿನ್ಯಗಳಿಂದ ಮುಕ್ತಿ ಸಿಗಬೇಕಾದರೆ ನಮ್ಮಲ್ಲಿಯ ವಿಜ್ನಾನಿಗಳು ಬೇರೆ ಯಾವುದಾದರೂ ಶಾಖೋತ್ಪನ್ನ ವಿಧಾನವನ್ನು ಕಂಡು ಹಿಡಿಯಬೇಕು. ನಮ್ಮ ಪತ್ರಿಕೆಗಳಲ್ಲಿಉತ್ಪತ್ತಿಯಾಗುವ ಶಾಖದಿಂದ ( ಅವನ್ನು ಸುಡುವುದರಿಂದಲ್ಲ; ಚರ್ಚೆಯ ತೀಕ್ಶ್ಣತೆ ಯಿಂದ) ವಿದ್ಯುತ್ಪಾದನೆ ಮಾಡಲು ಸಾಧ್ಯವೋ ಎಂದು ಕೂಡ ನಮ್ಮ ವಿಜ್ನಾನಿಗಳಿಗೆ ಸಲಹೆ ಮಾಡುತ್ತಾನೆ ನನ್ನೊಬ್ಬ ಕಿಡಿಗೇಡಿ ಸ್ನೇಹಿತ.

ಅಂತೂ ನಮ್ಮ ವಿಜ್ನಾನಿಗಳಿಗಿದೆ ಆಪತ್ತು - “ ಎ ಡಿಲೆಮ್ಮ ಆಫ್ ಮಾನ್ಯುಮೆಂಟಲ್ ಪ್ರಪೋರ್ಷನ್ಸ್.”

ಇಂತಹ ನರಸಿಂಹಾವತಾರದ ಡಿಲೆಮ್ಮದಿಂದ ಬಚಾವಾಗಲು ಅವರಿಗೆ ನಮ್ಮ ನರಸಿಂಹನೇ (ನೋ ಹೌ) ಜ್ನಾನ ದಯಪಾಲಿಸಬೇಕು. ಅಥವಾ ಸಾಕ್ಷಾತ್ ಶ್ರೀ ವಿಷ್ಣುವೇ ವಿದ್ಯುತ್ ಘಟಕದ ಚೀಫ್ ಡಿಸೈನರ್ ರೂಪದಲ್ಲಿ ಅವತರಿಸಿದರೆ ಮತ್ತಿಷ್ಟು ಚಂದ.

*************************************************************************

Friday 14 September 2007

ಹನುಮಾನ್ - ಹಿಂದುವೋ? ಮುಸಲ್ಮಾನನೋ?

(ಮೂಲ: ಎಲ್ಲಿಯೋ ಕೇಳಿದ್ದು.)
ನಿನ್ನೆ ಮೊನ್ನೆಯ ಮಾತು. ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ನಡಿಯಲೇ ಇಲ್ಲ, ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು ನೀವೆಲ್ಲ ಕೇಳಿದಿರಷ್ಟೆ?

ಮೊದಲೂ ಒಂದು ಬಾರಿ ಶ್ರೀ ಮನಮೋಹನ್ ಸಿಂಗ್ ಇಂತಹುದೇ ಕೆಲಸ ಮಾಡಿದ್ದರಂತೆ. ಮುಂದೆ ಓದಿ ನೋಡಿ. ನಿಮಗೇ ವೇದ್ಯವಾಗುತ್ತೆ.



ರಾಮಜನ್ಮಭೂಮಿಯಲ್ಲಿ ಬಾಬರನ ಮಸೀದಿ ಉರುಳಿದ ಕೆಲವೇ ದಿನಗಳ ನಂತರ ವಿಶ್ವ ಹಿಂದೂ ಪರಿಷತ್ ಬೆಂಬಲ ಪಡೆದ ಹಿಂದುಗಳ ಗುಂಪೊಂದು ಆ ಜಾಗದಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ಬೇಡುವ ಮನವಿ ಸಲ್ಲಿಸಲು ಆಗಿನ ಪ್ರಧಾನ ಮಂತ್ರಿಗಳಾದ ನರಸಿಂಹರಾವ್ ಬಳಿ ಹೋಗಲು ನಿಶ್ಚಯಿಸಿತು. ಇದರ ಸುಳಿವಾದೊಡನೆಯೆ ದೆಹಲಿಯ ಜುಮ್ಮಾ ಮಸೀದಿಯ ಇಮಾಮರ ನೇತೃತ್ವದಲ್ಲಿ ಮುಸಲ್ಮಾನರ ಗುಂಪು ಕೂಡ ಉರುಳಿದ ಮಸೀದಿಯ ಪುನರ್ನಿರ್ಮಾಣದ ಆಗ್ರಹ ಮಾಡುವ ಉದ್ದೇಶ್ಯದಿಂದ ಪ್ರಧಾನಿಯವರ ಮನೆಗೆ ಲಗ್ಗೆ ಹಾಕಿತು.

ಎಂದೂ ನಿರ್ಧಾರ ತೊಗೊಳ್ಳಲಾರದ ರಾಯರು, ಎರಡೂ ಬಣಗಳ ಅಹವಾಲನ್ನು ಕೇಳಿ ಇಕ್ಕಟ್ಟಿಗೆ ಸಿಕ್ಕಿ , ನುಣಿಚಿಕೊಳ್ಳುವ ಹಾಗೂ ಸ್ವಲ್ಪ ಕಾಲಾವಕಾಶ ಕಲ್ಪಿಸಲು ಉಪಾಯ ಹುಡುಕಿದರು. ತಮ್ಮ ಏನೇ ನಿರ್ಧಾರವು ಆರ್ಕೆಯಲಾಜಿಕಲ್ ಸರ್ವೆ ಆಫ್ ಇಂಡಿಯಾದವರಿಂದ ಆ ಸ್ಥಳದ ಉತ್ಖನನ ನಡಿಸಿದ ನಂತರ ಅಲ್ಲಿ ಸಿಕ್ಕಬಹುದಾದ ಪ್ರಮಾಣಗಳ ಆಧಾರದ ಮೇಲೆ ಅವಲಂಬಿಸುತ್ತದೆ. ಅಲ್ಲಿಯ ವರೆಗೂ ತಾಳ್ಮೆಯಿಂದಿರಿ ಎಂದು ಸ್ಪಷ್ಟ ಪಡಿಸಿದರು.

ಆರ್ಕೆಯಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಅಗೆಯಲು ಪ್ರಾರಂಭಿಸಿದ ಹಲವು ದಿನಗಳ ನಂತರ ಅಲ್ಲಿ ಹೂತಿಕೊಂಡಿದ್ದ ಹನುಮಾನ್ ವಿಗ್ರಹವೊಂದು ದೊರಕಿದೆ ಎಂಬ ವರದಿ ಪ್ರಕಟವಾಗುತ್ತಿದ್ದಂತೆಯೆ ಹಿಂದುಗಳು ಜಯ ನಮಗೇ ಎಂದು ಸಂತೋಷದಿಂದ ಕುಣಿದು ಕುಪ್ಪಳಿಸಲಾರಂಭಿಸಿದರು.

ಇತ್ತಕಡೆ, ಮುಸಲ್ಮಾನರ ತಂಡದವರು ಕೂಡ ಹನುಮಾನ್ ಹೆಸರೇ ಸೂಚಿಸುವಂತೆ ಮುಸಲ್ಮಾನನೆಂದೂ, ಅವನ ವಿಗ್ರಹ ಅಲ್ಲಿದ್ದದ್ದು, ಮಸೀದಿಯ ಪುನರ್ನಿರ್ಮಾಣಕ್ಕೆ ಪುರಾವೆ ಕೊಟ್ಟಂತಿವೆ ಎಂದು ಸಂಭ್ರಮಿಸಲು ಆರಂಭಿಸಿದರು. ಕಾರಣ, ಉಸ್ಮಾನ್, ರಹಮಾನ್, ಸುಲೇಮಾನ್, ಹನುಮಾನ್ ಎಲ್ಲವೂ ಮುಸ್ಲಿಮರ ಹೆಸರುಗಳು ಎಂದು ಅವರ ವಾದ.

ಬೆದರಿ ಕಂಗಾಲಾದ ನರಸಿಂಹರಾಯರಿಗೆ ಏನು ಮಾಡಬೇಕೋ ತೋಚದಿದ್ದಾಗ, ಅವರ ಆಪ್ತ ಕಾರ್ಯದರ್ಶಿಗಳ ಸಲಹೆಯ ಮೇರೆಗೆ ಎರಡೂ ಬಣದವರನ್ನು ಕರೆದು “ ನೋಡಿ, ಇದೊಂದು ಬಹಳ ಜಟಿಲವಾದ ಪ್ರಶ್ನೆ. ನಿರ್ಣಯ ಮಾಡುವ ಮುನ್ನ ಬಹಳ ವಿವೇಚನೆಯಿಂದ ಸಂಶೋಧನೆ ಮಾಡಿ ಮುನ್ನಡೆಯಬೇಕಾಗಿದೆ. ನಮ್ಮ ಪಾರ್ಟಿಯಲ್ಲಿಯ ಅತಿ ಮೇಧಾವಿ ಶ್ರೀ ಮನಮೋಹನ್ ಸಿಂಗ್ ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿ. ನೀವೆಲ್ಲರೂ ಅವರ ಮುಂದೆ ನಿಮ್ಮ ಸಾಕ್ಷಿ ಪುರಾವೆಗಳನ್ನು ಮಂಡಿಸಿ. ಅವರ ಅಭಿಪ್ರಾಯ ಅರಿತ ನಂತರ ನಿರ್ಧಾರ ಮಾಡುತ್ತೇನೆ.” ಎಂದು ಹೇಳಿ ತಮಗೆ ಬಂದ ಸಂಕಟವನ್ನು ಬಡಪಾಯಿ ಸಿಂಗ್‍ರವರ ತಲೆಗೆ ಅಂಟಿಸಿ ಸದ್ಯಕ್ಕಂತೂ ಬಚಾವಾದರು.

ಪಾಪ ಪ್ರಾಧ್ಯಾಪಕ ಮನಮೋಹನ್ ಸಿಂಗ್‍ರವರು ಅನೇಕ ದಿನಗಳ ಕಾಲ ರಾಮಾಯಣದ ಎಲ್ಲ ರೂಪಗಳ (ತುಳಸಿ; ವಾಲ್ಮೀಕಿ, ಕಂಬ, ಇತರೆ ಇತರೆ… ) ಅಧ್ಯಯನ ಮಾಡಿದ ನಂತರ ಕೊರಾನ್, ಬಾಬರ್‍ನಾಮ ಮತ್ತು ಇತರೇ ಪರ್ಷಿಯನ್ ಗ್ರಂಥಗಳ ಕೂಲಂಕಷ ತನಿಖೆ ನಡೆಸಿದರು. ಅನೇಕ ಪಂಡಿತರುಗಳ, ವಿದ್ವಾಂಸರುಗಳ ಜೊತೆಗೇ ಎರಡೂ ಬಣದವರ ವಾದ ವಿವಾದಗಳನ್ನೆಲ್ಲ ತಾಳ್ಮೆಯಿಂದ ಕೇಳಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ನರಸಿಂಹರಾಯರಿಗೆ ತಿಳಿಸಿದರು.

ಅವರ ಪ್ರಕಾರ ಹನುಮಾನ್ ಹಿಂದುವೂ ಅಲ್ಲ! ಮುಸಲ್ಮಾನನೂ ಅಲ್ಲ! ಕಕ್ಕಾಬಿಕ್ಕಿಯಾಗಿ ಗಾಬರಿಯಿಂದ ಅವರ ಕಡೆ ನೋಡಿದ ರಾಯರಿಗೆ ಶ್ರೀ ಮನಮೋಹನ್ ಸಿಂಗ್ ಹೇಳಿದ್ದು ಹೀಗೆ. “ ನೋಡಿ ಸ್ವಾಮಿ. ಯಾರದೋ ಹೆಂಡತಿಯನ್ನು ಹುಡುಕಲು ಹೊರಟು, ತನ್ನ ಬಾಲಕ್ಕೇ ಬೆಂಕಿ ಹಚ್ಚಿಕೊಂಡು, ಬೇರಾರದೋ ಮನೆಮಠ ಸುಟ್ಟು ಹಾಕುವಂಥ ವ್ಯಕ್ತಿ ಒಬ್ಬ ಸರ್ದಾರ್ಜಿಯಲ್ಲದೆ ಮತ್ಯಾರು ಆಗಿರಲು ಸಾಧ್ಯ? ನೀವೆ ಯೋಚಿಸಿ! ಹಿಂದುವೂ ಅಲ್ಲ. ಮುಸಲ್ಮಾನನೂ ಅಲ್ಲ! ಅವನು ಹನುಮಾನ್ ಸಿಂಗ್. ನೀವು ಸುಮ್ಮನೆ ಆ ಜಾಗದಲ್ಲಿ ಒಂದು ಗುರುದ್ವಾರ ಕಟ್ಟಿಸಿಬಿಡಿ. ಈ ಗೊಂದಲ ತಾನೇ ನಿಂತು ಹೋಗತ್ತೆ.”

ನರಸಿಂಹರಾಯರ ಮುಖ ನೋಡುವಂತಿತ್ತು.

***********************************************************
Published on the web - http://www.ourkarnataka.com/kannada/articles/muslim07.htm

ಜೀವನ ರಹಸ್ಯ

( ಯಾರಿಂದಲೋ ಕೇಳಿ ತಿಳಿದದ್ದು. )

ಭಗವಂತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಮಾಡಿದ ಮೊದಲ ಕೆಲಸ ನಾಲ್ಕು ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದ್ದಂತೆ. ಅವೆಂದರೆ - ಮನುಷ್ಯ; ಕತ್ತೆ; ನಾಯಿ ಮತ್ತು ಎರೆಹುಳ. ಇವೆಲ್ಲದರಲ್ಲೂ ಮನುಷ್ಯನೊಬ್ಬನಿಗೆ ಮಾತ್ರ ಯೊಚನಾಶಕ್ತಿಯಿರುವ (ವಿಪರೀತ!!) ಮಿದುಳಿತ್ತು.

ಎಷ್ಟಾದರೂ ಭಗವಂತನಲ್ಲವೇ! ನಿಷ್ಪಕ್ಷಪಾತಿ! ಎಲ್ಲರಿಗೂ ಕೇವಲ ನಲವತ್ತು ವರುಷಗಳ ಆಯುಸ್ಸು ಕೊಟ್ಟನಂತೆ. ಎಲ್ಲರೂ ಈ ನಿರ್ಣಯವನ್ನು ಒಪ್ಪಿಕೊಂಡರಾದರೂ, ಬುಧ್ಧಿ ಜಾಸ್ತಿಯಿರುವ ಮನುಷ್ಯನಿಗೆ ತೃಪ್ತಿಯಾಗಲಿಲ್ಲ. ತನಗಿರುವ ಬುಧ್ಧಿ ಮತ್ತು ಚಾಲಾಕಿ ಉಪಯೋಗಿಸುವ ಹಂಚಿಕೆ ಹಾಕಿ, ಬೇರೆ ಪ್ರಾಣಿಗಳ ಆಯುಸ್ಸಿನ ಸ್ವಲ್ಪ ಭಾಗವನ್ನು ಒತ್ತುವರಿ ಮಾಡಲೆತ್ನಿಸಿದ.

ಮೊದಲಿಗೆ ಅವನು ಕತ್ತೆಯನ್ನು ಬಳಿಗೆ ಕರೆದು, ಅದರ ಬೆನ್ಸವರಿ, “ ಅಯ್ಯಾ ಕತ್ತೆ, ಎಂತಹುದಯ್ಯಾ ನಿನ್ನ ಜೀವನ! ಎಲ್ಲರ ಕೈಯಲ್ಲಿ ಭಾರ ಹೊರಸಿಕೊಂಡು, ತಿಪ್ಪೆಯಲ್ಲಿ ಬಿದ್ದಿದ್ದು, ಕಸ ಕಡ್ಡಿ ತಿಂದುಕೊಂಡು, ಮೈಮುರಿಸಿಕೊಳ್ಳುವ ಹಾಗೆ ಹೊಡಿಸಿಕೊಂಡು, ಎಲ್ಲರ ತಿರಸ್ಕಾರಕ್ಕೂ ಪಾತ್ರವಾಗುತ್ತೀಯಲ್ಲ. ನಲವತ್ತು ವರ್ಷ ಹೀಗೇಕೆ ಬದುಕಬೇಕು? ನನಗಾದರೋ ಬುಧ್ಧಿ ಇದೆ. ಅದನ್ನು ಉಪಯೋಗಿಸಿಕೊಂಡು ಜೀವನವನ್ನು ಸ್ವಲ್ಪ ಸುಖವಾಗಿಸಬಲ್ಲೆ. ನಿನ್ನ ಅರ್ಧ ಆಯುಸ್ಸನ್ನು ನನಗೇಕೆ ಕೊಡಬಾರದು ? " ಅಂತ ಪುಸಲಾಯಿಸಿ, ಅದರ ಇಪ್ಪತ್ತು ವರ್ಷ ಆಯುಸ್ಸನ್ನು ತನಗೆ ಸೇರಿಸಿಕೊಂಡ.

ಆಮೇಲೆ ನಾಯಿಯನ್ನು ಕರೆದು, “ ಎಲೇ ನಾಯಿ, ಎಲ್ಲರ ಎಂಜಲು ತಿಂದುಕೊಂಡು, ಎಲ್ಲರ ಬಳಿ ಒದಿಸಿಕೊಂಡು, ಕುಯ್ಯೋ ಮರ್ರೋ ಅಂತ ಗೋಳಾಡುತ್ತ, ಬೇರೆ ನಾಯಿಗಳ ಸಂಗಡ ಕಚ್ಚಾಡಿಕೊಂಡು, ಬೊಗಳಿಕೊಂಡೂ ಅದೆಷ್ಟು ಸುಖ ಪಡುತ್ತೀಯೋ ನಾ ಬೇರೆ ಕಾಣೆ. ನಿನಗೇಕೆ ನಲವತ್ತು? ನನಗೆ ಕೊಡು ಅದರಲ್ಲರ್ಧ ಇಪ್ಪತ್ತು” ಎಂದು ಪ್ರೇರೇಪಿಸಿದ. ಪೆದ್ದ ನಾಯಿ ಅವನ ಮಾತಿಗೆ ಮರುಳಾಗಿ, ತನ್ನ ಇಪ್ಪತ್ತು ವರ್ಷ ಅಯುಸ್ಸನ್ನು ಮನುಷ್ಯನಿಗೆ ಕೊಟ್ಟಿತು.

ಕತ್ತೆ ಮತ್ತು ನಾಯಿಗಳೇ ಮನುಷ್ಯನ ಮಾತಿನ ಮೋಡಿಗೆ ಮರುಳಾದ ಮೇಲೆ ಎರೆ ಹುಳದ ಸಾಸಿವೆ ಗಾತ್ರದ ಮಿದುಳದೆಷ್ಟುತಾನೆ ತಡೆದೀತು. ಅದರ ಇಪ್ಪತ್ತು ವರ್ಷ ಅಯುಸ್ಸನ್ನು ತನಗೆ ಜೋಡಿಸ್ಕೊಂಡ ಆ ಪಾಕಡಾ ಮನುಷ್ಯ. ಹೀಗೆ ತನ್ನದೇ ಆದ ನಲವತ್ತಕ್ಕೆ ಎರವಲು ಪಡೆದ ಅರವತ್ತನ್ನು ಜೋಡಿಸಿಕೊಂಡು ಮನುಷ್ಯನ ಆಯುಸ್ಸು ನೂರಾಯಿತಂತೆ.

ಅಂದಿನಿಂದ ಮನುಷ್ಯ ಮೊದಲ ನಲವತ್ತು ವರ್ಷ ಗಳ ಕಾಲ , ತಂದೆತಾಯಿಗಳಿಗೆ ವಿಧೇಯನಾಗಿ ಇದ್ದು, ಉತ್ತಮ ವಿದ್ಯಾಭ್ಯಾಸ ಪಡೆದು , ಕೆಲಸ ಹಿಡಿದು, ಮದುವೆಯಾಗಿ ಮನುಷ್ಯನಂತೆ ಜೀವಿಸುತ್ತಾನಂತೆ.

ನಲವತ್ತರಿಂದ ಅರವತ್ತರವರೆಗೆ, ಮಕ್ಕಳ ಮತ್ತು ಹೆಂಡತಿಯ ಸುಖಕ್ಕಾಗಿ ಹೆಣಗಿ, ಸಾಲ ಸೋಲ ಮಾಡಿಯಾದರೂ ಮಕ್ಕಳ ಮದುವೆ, ಮನೆ ಮಠ ಮಾಡಿಕೊಳ್ಳುವ ಸಲುವಾಗಿ ಕತ್ತೆಯಂತೆ ದುಡಿಯುತ್ತಾನಂತೆ.

ಆರವತ್ತಕ್ಕೂ ಹೆಚ್ಚು ವರ್ಷ ಬದುಕಿದ್ದರೆ, ನಿವೃತ್ತನಾಗಿದ್ದು, ಮನೆಯಲ್ಲಿ ತನ್ನ ಅಂತಸ್ತು ಬದಲಾಗಿರುವ ಅರಿವಿಲ್ಲದೆಯೇ, ತಾನಿನ್ನೂ ಮನೆಯ ಯಜಮಾನ, ತನ್ನ ಹೆಂಡತಿ ಮತ್ತು ಮಕ್ಕಳಿಗೆ ತಾನಿನ್ನೂ ಬೇಕಾದವ ಎಂಬ ಭ್ರಮೆಯಲ್ಲಿದ್ದುಕೊಂಡು, ತನ್ನ ಮಾತುಗಳನ್ನು ಯಾರೂ ಕಿವಿಗೆ ಕಾಕಿಕೊಳ್ಳುತ್ತಿಲ್ಲ ಎಂಬ ಜ್ನಾನವೂ ಇಲ್ಲದೆ ನಾಯಿಯಂತೆ ಬೊಗಳಿಕೊಂಡು ಜೀವಿಸುತ್ತಾನಂತೆ.

ಇನ್ನು ಎಂಭತ್ತಕ್ಕೂ ಹೆಚ್ಚು ವರ್ಷ ಬದುಕಿದನೋ, ಆ ವೇಳೆಗಾಗಲೇ ತಾನೇನು, ತನ್ನ ಅಂತಸ್ತು ಮತ್ತು ಯೋಗ್ಯತೆಯೇನು ಎಂಬ ಜ್ನಾನೋದಯವಾಗಿ ಎರೆ ಹುಳ ತನ್ನ ತಲೆಯನ್ನು ಮಣ್ಣೊಳಗೆ ಹುದುಗಿಕೊಂಡಿರುವ ಹಾಗೆ ಮುಳು ಮುಳು ಎಂದುಕೊಂಡು ಬದುಕಿರುತ್ತಾನಂತೆ.

**********************************
Published on the web - http://www.ourkarnataka.com/kannada/articles/rahasya07.htm

Thursday 13 September 2007

ಮರಳಿ ಮಣ್ಣಿಗೆ - ನನ್ನ ಗೋಳು

ನನ್ನ ಕನ್ನಡದ ಲೇಖನ " ಮರಳಿ ಮಣ್ಣಿಗೆ- ಏನಾಗಿದೆ ಚೆಲುವ ಕನ್ನಡ ನಾಡಿಗೆ? " ಯನ್ನು OurKarnataka.com ನಲ್ಲಿ ಓದಬಹುದು. ಅದರ ಕೊಂಡಿ - http://www.ourkarnataka.com/kannada/articles/whatwrong.htm.

ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.

Height of Photography

Ismail or (i)smile?
(Courtesy : S.R. Pandrinath)

ಸ್ವಾಮಿ ರಿಷಿ (೨)


Contemplation?


Cocking a snook?

ಸ್ವಾಮಿ ರಿಷಿ (೧)