ಬೆಂಗಳೂರಿನಿಂದ ಬಹಳ ವರ್ಷ ಹೊರಗಿದ್ದ ನನಗೆ ಕನ್ನಡ ಟಿ.ವಿ. ಸೀರಿಯಲ್‍ಗಳನ್ನು ನೋಡುವ ಅಭ್ಯಾಸವಿರಲಿಲ್ಲ. ಇತ್ತೀಚೆಗೆ ನಿವೃತ್ತ್ತ್ತನಾದ ಮೇಲೆ ಬಹಳ ಜನರ ಪ್ರಶಂಸೆ ಕೇಳಿ ಈ ಟೀವಿಯಲ್ಲಿ ಬರೋ “ಮಂಥನ” ದ ಕೆಲವು ಎಪಿಸೋಡ್‍ಗಳನ್ನು ನೋಡಿದೆ. ಹಿಂದಿನಿಂದಲೂ ನಾಟಕದ ಗೀಳು ಬೆಳೆಸಿಕೊಂಡಿದ್ದರಿಂದ ಸ್ವಾಭಾವಿಕವಾಗಿಯೆ ನನ್ನ ಮನಸ್ಸು ನಾಟಕದ ವಿಮರ್ಶೆ ಮಾಡತೊಡಗಿತು. ಮೇಲ್ನೋಟಕ್ಕೆ ನನಗೆ ಅನಿಸಿದ್ದನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಪ್ರಯತ್ನ ಇದು.
ಮೊದಲು ಪ್ರಸಾರವಾಗುತ್ತಿದ್ದ ಬಹಳ ಅತಿರೇಕದ ನಾಟಕೀಯತೆ ಹಾಗೂ ಅತಿಶಯೋಕ್ತಿಗಳಿಂದ ತುಂಬಿದ ಅನೇಕ melodramatic ಸೀರಿಯಲ್‍ಗಳಿಗೆ ಹೋಲಿಸಿದರೆ ಈ ನಾಟಕದ ಗುಣ ಮೌಲ್ಯಗಳು ಬಹಳ ಉತ್ತಮ ಅಂತನೇ ನಿರ್ಣಯಿಸಬೇಕು. ನಿಜವಾಗಿಯೂ ಶ್ರೀ ಸೇತುರಾಮ್‍ರವರು ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳ ನೋವು ನಲಿವುಗಳ ಬಗ್ಗೆ ಚಿಂತನೆಯೇನೋ ಬಹಳ ಚೆನ್ನಾಗಿ ಮಾಡಿ ವಿಶ್ಲೇಷಿಸಿದ್ದಾರೆ. ಆದರೆ ಅವರ ಪಾತ್ರಗಳ ಬಾಯಿಯಲ್ಲಿ ಬರುವ ಸತ್ಯವಚನಗಳು ಎಷ್ಟೇ ನಿಜ ಅನಿಸಿದರೂ ಸ್ವಾಭಾವಿಕ ಅಥವಾ ಸಹಜ ಅನ್ನಿಸಲಿಲ್ಲ.
ನಿಜವಾಗಿಯೂ ಜನರು ತಮ್ಮ ಮನಸ್ಸಿನಾಳದಲ್ಲಿನ ಅವ್ಯಕ್ತ ತುಮುಲ, ತಳಮಳ, ಭೀತಿ, ಆನಂದ ಇವುಗಳೆಲ್ಲವನ್ನೂ ಮಂಥನದಲ್ಲಿ ತೋರಿಸಿದಷ್ಟು ಸುಲಭವಾಗಿ ಸಂಭಾಷಿಸಿ ವ್ಯಕ್ತಪಡಿಸಬಹುದಾದ, ಹಾಗೆಯೇ ಉದ್ದೇಶಿತ ವ್ಯಕ್ತಿ ಕೂಡ ಅಷ್ಟೇ ಸಂಯಮದಿಂದ ಅವರ ಮಾತನ್ನು ಅಡ್ಡ ಹಾಕದೇ ಪೂರ್ತಿ ಕೇಳಿ ಉದ್ರೇಕಿತರಾಗದೆ ಪ್ರತಿಯೊಂದು ಸವಾಲಿಗೂ ಸರಿಯಾಗಿ ಪ್ರತಿಕ್ರಯಿಸುವ, ಮತ್ತೆ ತಾಳ್ಮೆಯಿಂದ ಅವರ ಪ್ರತಿಕ್ರಿಯೆಗೆ ಕಾಯುವ ಸಂಭಾವಿತ ನಡುವಳಿಕೆ ಬಹಳ ಅಸ್ವಾಭಾವಿಕ ಅನ್ನಿಸೋಲ್ಲವೆ? ಬೇರೆಯವರ ಮಾತನ್ನು ಪೂರ್ತಿ ಕೇಳದೇ, ಮನಸ್ಸಿನಲ್ಲಿ ಪೂರ್ವಾಗ್ರಹ ಪೀಡಿತರಾಗಿ ಏನನ್ನೋ ಅರ್ಥಯಿಸಿ, ಅಡ್ಡ ಬಾಯಿ ಹಾಕಿ ತಾಳ್ಮೆಯಿಲ್ಲದೆ ಬಡಬಡಿಸುವುದರಿಂದ ತಾನೇ ಜೀವನ ಇದಿಷ್ಟು unpredictable ಆಗಿರುವುದು. ನಿಜ ಜೀವನದಲ್ಲಿ ಇಷ್ಟು ಸಂಯಮ, ಶಿಸ್ತಿನ ಸಂಭಾವಿತ ನಡುವಳಿಕೆ ಇದ್ದಿದ್ದರೆ ಇಷ್ಟೊಂದು ಅನಿಶ್ಚಿತತೆ ಹಾಗೂ ವೈವಿಧ್ಯತೆ ಇರಲು ಸಾಧ್ಯವಿತ್ತೇ?
Melodrama ಬೇಡ ನಿಜ. ಆದರೂ dramatic ಆಗಿ ಇರಬೇಡವೇ? ಬಹಳ ಉತ್ತಮ ನಟವರ್ಗವಿದ್ದೂ Zombieಗಳ ಹಾಗೆ ನಟಿಸಿದ್ದು ಅದೇನೋ ವಿಚಿತ್ರವಾಗಿತ್ತು. ರೆಡ್ಡಿಯ ಪಾತ್ರ ಮಾತ್ರ ಲವಲವಿಕೆಯಿಂದ ಮೂಡಿಬಂದಿದೆ ಅನ್ನಿಸಿತು. ತಾಯಿ, ಮಗಳು ತೋರಿಸುವ composure, cold blooded ಸೊಸೆಯ ಬಾಯಲ್ಲಿ ಬರುವ ಮಾತುಗಳು ಬಹಳ ಕೃತಕವಾಗಿ ತೋರಿಬಂತು.
ನಮ್ಮ ಆಪ್ತರು , ಮಿತ್ರರೂ ಕೂಡ ಹೀಗೆಯೆ ವರ್ತಿಸಿದರೆ ಜೀವನ ಅದೆಷ್ಟು ನೀರಸವಲ್ಲವೇ? ನೀವೇನಂತೀರಿ?
No comments:
Post a Comment