Wednesday, 3 October 2007

ನಮ್ಮ ನಾಟ್ಕದ್ ಮೇಷ್ಟ್ರು - ನಾರಾಯಣ ರಾವ್

ಸೆಪ್ಟೆಂಬರ್ ೨೫ನೇ ತಾರೀಖು ನಮ್ಮ ನಾಟ್ಕದ್ ಮೇಷ್ಟ್ರಾಗಿದ್ದ ಬಿ.ಎಸ್.ನಾರಾಯಣ ರಾವ್‍ರ ಜನ್ಮದಿನ ಅಂತ ನನಗೆ ಅರಿವಾದದ್ದು ಬೆಳಿಗ್ಗೆ ಕಾಫಿ ಕುಡಿಯುವಾಗ “ ವಿಜಯ ಕರ್ನಾಟಕ” ದಲ್ಲಿ ವೈ. ಎನ್. ಗುಂಡೂರಾಯರ “ ಈ ದಿನ - ಈ ಜನ” ಅಂಕಣ ಓದಿದಾಗ.

ಅವರ ಕಿರು ಲೇಖನ ಓದುತ್ತಿದ್ದಂತೆಯೇ ಕಳೆದ ಐವತ್ತು ವರ್ಷಗಳ ನೆನಪಿನ ಸುರಳಿಗಳು ಒಂದೊಂದಾಗಿ ತೆರೆದುಕೊಂಡವು.

೧೯೭೨ರಲ್ಲೇ ಉದರನಿಮಿತ್ತ ಬೆಂಗಳೂರು ಬಿಡಬೇಕಾದ ನನಗೆ ರಾಯರ ಜೊತೆಗೆ ಎಲ್ಲ ಸಂಬಂಧಗಳೂ ಕಡಿದುಹೋಗಿತ್ತು. ಸೇವಾನಿವೃತ್ತನಾಗಿ ಇತ್ತೀಚೆಗೆ ಬೆಂಗಳೂರಿಗೆ ಹಿಂತಿರುಗಿದ ನನಗೆ ಹಳೆಯ ನೆನಪುಗಳು ಮರುಕಳಿಸಿ ರಾಯರ ಬಗ್ಗೆ ತಿಳಿಯುವ ತವಕವಿತ್ತು. ಆದರೆ ಯಾರೊಬ್ಬ ಹಳೆಯ ಸ್ನೇಹಿತರೂ ಪತ್ತೆಯಾಗಲಿಲ್ಲ. ಅಂತರ್ಜಾಲದಲ್ಲಿ ತಡಕಾಡಿದರೂ ಎಲ್ಲಿಯೂ ಅವರ ಬಗ್ಗೆ ಸೊಲ್ಲಿಲ್ಲ. ಹವ್ಯಾಸಿ ಕನ್ನಡ ರಂಗಭೂಮಿಯ ಬೆಳವಣಿಗೆಯ ಕುರಿತ ಲೇಖನಗಳಲ್ಲೂ ನಾರಾಯಣ ರಾಯರ ಬಗ್ಗೆ ಯಾವೊಂದು ಉಲ್ಲೇಖ ಕಾಣಿಸಲಿಲ್ಲ. ಬಹಳ ಖೇದವಾಗಿತ್ತು. ಆದರೆ ಶ್ರೀ ಗುಂಡೂರಾಯರ ಲೇಖನ ಬಹಳ ಸಂತಸ ತಂದಿತು. ಕೈಲಾಸಂರಂತಹವರನ್ನು ನಮಗೆ ಪರಿಚಯಿಸಿದ ವ್ಯಕ್ತಿಯೊಬ್ಬರನ್ನು ಜ್ನಾಪಿಸಿಕೊಳ್ಳುವುದೇ ಒಂದು ರೀತಿಯ ಮಜಾ.

ಬಸವನಗುಡಿಯಲ್ಲಿ ವಾಸಿಸುತ್ತಿದ್ದ ನನಗೆ ನಾರಾಯಣ ರಾಯರ ಪರಿಚಯವಾದದ್ದು ೧೯೫೮ ರಲ್ಲಿ. ಅವರು ಆಗ ಗಾಂಧೀಬಜಾರಿನಲ್ಲಿ ತಮ್ಮ ಹಿರಿಯ ಮಗನ ಹೆಸರಿಸಿದ ಪ್ರಕಾಶ್ ಪ್ರಿಂಟರ್ಸ್ ಎಂಬ ಒಂದು ಸಣ್ಣ ಮುದ್ರಣಾಲಯವನ್ನು ನಡೆಸುತ್ತಿದ್ದರು. ನಮ್ಮ ತಂದೆಯ ಬಾಲ್ಯ ಸ್ನೇಹಿತರೂ ಹಾಗೂ ಸಹಪಾಠಿಗಳೂ ಆಗಿದ್ದರಿಂದ ಆಗಾಗ ಅವರನ್ನು ನೋಡುವ ಸಂದರ್ಭ ಒದಗಿಬರುತ್ತಿತ್ತು. ಬ್ಯೂಗಲ್ ರಾಕ್‍ನ ಬಂಡೆಗಳ ನಡುವೆ ಆಗ ಇದ್ದ ಸಣ್ಣ ಮೈದಾನದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸೇವಾದಳದ ಸದಸ್ಯನಾದಮೇಲಂತೂ ಅವರನ್ನು ಇನ್ನೂ ಹತ್ತಿರದಿಂದ ಅರಿಯುವ ಯೋಗವಾಯಿತು. ರಾಷ್ತ್ರೀಯ ಸೇವಾದಳದಲ್ಲಿ ನನ್ನ ಹಿರಿಯ ಸ್ನೇಹಿತ ಕಾನಕಾನ್ ಹಳ್ಳಿ ಗೋಪಿಯ ನೇತೃತ್ವದಲ್ಲಿ ನಾವು ಹಳ್ಳಿಯ ಕೋಲಾಟದ ತಂಡವೊಂದನ್ನು ಕಟ್ಟಿಕೊಂಡಿದ್ದೆವು. ಸೇವಾದಳಕ್ಕೂ ಪೋಲಿಸ್ ಸ್ಟೇಷನ್ ರಸ್ತೆಯ ಮನೆಯೊಂದರ ಮೇಲಿನ ಕೋಣೆಯಲ್ಲಿ ರಿಹರ್ಸಲ್‍ಗಾಗಿ ಸೇರುತ್ತಿದ್ದ ರವಿ ಕಲಾವಿದರ ತಂಡಕ್ಕೂ ಗಾಢ ಸಂಬಂಧವಿತ್ತು. ಒಂದು ಗೋಪಿ ಅಲ್ಲಿಯ ಸಕ್ರಿಯ ಸದಸ್ಯರಾಗಿ ಇದ್ದದ್ದು. ಮತ್ತೊಂದು ಅಲ್ಲಿಯ ನಾಟಕಗಳಿಗೆ ಬೇಕಾದ ಸಣ್ಣ ಹುಡುಗರ ಪಾತ್ರಗಳಿಗೆ ಸೇವಾದಳ ಒಂದು ಕ್ಯಾಪ್ಟಿವ್ ಸೋರ್ಸ್. ಪಂಚವಾರ್ಷಿಕ ಯೋಜನೆಯ ಪಬ್ಲಿಸಿಟಿಗಾಗಿ ಕೇಂದ್ರ ಸರ್ಕಾರದ ಸಾಂಗ್ ಅಂಡ್ ಡ್ರಾಮಾ ವಿಭಾಗದ ವತಿಯಿಂದ ರವಿ ಕಲಾವಿದರು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಆಡುತ್ತಿದ್ದ ’ಜಾಗೃತ ಭಾರತಿ” ; ’ನಮ್‍ಹಳ್ಳಿ” ನಾಟಕಗಳಲ್ಲೆಲ್ಲ ಹೇಗಾದರೂ ಮಾಡಿ ನಮ್ಮ ಕೋಲಾಟವನ್ನು ಸೇರಿಸಲಾಗುತ್ತಿತ್ತು. ರವಿ ಕಲಾವಿದರ ನಾಟಕಗಳಲ್ಲೆಲ್ಲ ನಿರ್ದೇಶನದ ಹೊಣೆ ನಾರಾಯಣ ರಾಯರದು. ಸತಃ ಬಹಳ ಉತ್ತಮ ನಟರಾಗಿದ್ದಲ್ಲದೆ, ಎಂಥವರನ್ನು ಕೂಡ ನಿರ್ದೇಶಿಸಿ ಅವರಿಂದ ಉತ್ತಮ ಅಭಿನಯ ಮಾಡಿಸುವ ಚಾತುರ್ಯ ಅವರಿಗಿತ್ತು. ಹೀಗಾಗಿ ಆರಂಭವಾದ ನನ್ನ ಅವರ ಸಂಬಂಧ ಇನ್ನೂ ಕುದುರಿದ್ದು ೧೯೬೦ರಲ್ಲಿ.

ನಾನಾಗ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್‍ನಲ್ಲಿ ಓದುತ್ತಿದ್ದೆ. ಆಗ ನಮಗೆ “ಟೈಲರಿಂಗ್‘ ಅಥವಾ ’ಡ್ರಾಮಾಟಿಕ್ಸ್’ ನಡುವೆ ಯಾವುದಾದರೂ ಒಂದನ್ನು ಅಭ್ಯಸಿಸುವ ಆಯ್ಕೆಇತ್ತು. ನಾಟಕದ ರುಚಿ ಹತ್ತಿದ್ದ ನನಗೆ ನಿರ್ಧರಿಸುವುದು ಕಷ್ಟವೇನಾಗಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಕಲಿಸುವ ಮೇಷ್ಟ್ರು ಶ್ರೀ ನಾರಾಯಣ ರಾಯರು. ನೋಡಲು ಬಹಳ ಸರಳ ಸ್ವಭಾವದ, ಮೃದುಭಾಷೀಯರಾಗಿ ಕಂಡರೂ ನಾಟಕದ ಪುಸ್ತಕ ಅವರ ಕೈಗೆ ಸಿಕ್ಕಿದರೆ ಸಾಕು ಅವರ ಅವತಾರವೇ ಬದಲಾಗುತ್ತಿತ್ತು. ನಮಗೆ ಮೇಕಪ್ ಮಾಡುವ ತಂತ್ರ, ಪರದೆ ಕಟ್ಟುವ ಅನೇಕ ಬಗೆಯ ವಿನ್ಯಾಸ, ಪ್ರಾಪ್ಸ್, ಲೈಟಿಂಗ್, ರಂಗಸಜ್ಜೆಯ ಅನೇಕ ಸೂತ್ರಗಳನ್ನು ಹೇಳಿಕೊಡುವ ಜೊತೆಯಲ್ಲಿಯೇ, ಅನೇಕ ಕನ್ನಡ ನಾಟಕಗಳ ಪರಿಚಯ ಮಾಡಿಕೊಟ್ಟವರು ಅವರೇ. ಬೇರೆ ಯಾವ ಕ್ಲಾಸಿಗೆ ಚಕ್ಕರ್ ಹೊಡೆದರೂ ಅವರ ಕ್ಲಾಸಿಗೆ ಮಾತ್ರ ನೂರಕ್ಕೆ ನೂರು ಪಾಲು ಹಾಜರಿಯಿರುತ್ತಿತ್ತು. ಕೈಲಾಸಮ್‍ರವರ ನಾಟಕಗಳ ಪರಿಚಯ ಅವರಿಗಿಂತ ಬೇರೆ ಯಾರು ತಾನೇ ಚೆನ್ನಾಗಿ ಮಾಡಿಕೊಡಬಲ್ಲರು? ಕ್ಲಾಸಿನಲ್ಲಿ ಟೊಳ್ಳು ಗಟ್ಟಿ; ಹೋಮ್‍ರೂಲು; ಬಂಡ್ವಾಳ್ವಿಲ್ಲದ್ಬಡಾಯಿ; ಪೋಲಿಕಿಟ್ಟಿ; ಸೂಳೆ; ಹುತ್ತದಲ್ಲಿ ಹುತ್ತ; Karna; Keechaka; Purpose ಇವೆಲ್ಲ ನಾಟಕಗಳನ್ನೂ ಭಾವಪೂರ್ಣವಾಗಿ ಓದಿ ಹೇಳಿ ನಮಗೆಲ್ಲ ಕ್ಲಿಷ್ಟವೆನಿಸಿದ್ದ ಕೈಲಾಸಂ ಕನ್ನಡವನ್ನು ಓದಲು ಹಾಗೂ ಮಾತನಾಡಲು ಸುಲಭವಾಗಿಸಿದ ಶ್ರೇಯ ರಾಯರದ್ದು.ಅವರ ಸಂವಾದದ ಧೋರಣೆ, ಧ್ವನಿಯ ಮಾಡ್ಯುಲೇಷನ್, ಥ್ರೋ ಅದೆಷ್ಟು ಪರಿಣಾಮಕಾರಿಯಾಗಿರುತ್ತಿತ್ತು ಎಂದು ಬಣ್ಣಿಸುವುದು ಕಷ್ಟ. ಇವರ ಕ್ಲಾಸು ದಿನದ ಅಂತ್ಯದಲ್ಲಿ ಇದ್ದಿದ್ದರಿಂದ ಅದೆಷ್ಟೊ ದಿನ ಕ್ಲಾಸು ಎರಡು ತಾಸಿಗೂ ಮೀರಿ ನಡೆಯುತ್ತಿತ್ತು. ನನಗೆ ನೆನಪಾದಂತೆ ಅವರು ಆನಂದ ರಚಿತ “ವೀರಯೋಧ” ನಾಟಕ ಓದಿದ್ದಾಗ , ಕ್ಲಾಸಿನಲ್ಲಿ ತೇವವಾಗದ ಕಣ್ಣುಗಳಿರಲಿಲ್ಲ.

ರಾಯರ ನಿರ್ದೇಶನದಲ್ಲಿಯೇ ನನ್ನ ರಂಗಪ್ರವೇಶದ ಸುಯೋಗವೂ ಬಂದೊದಗಿತು. ಡಾ. ಎಚ್. ಕೆ. ರಂಗನಾಥ್‍ರವರು ಆಲ್ ಇಂಡಿಯಾ ರೇಡಿಯೋದ ನಿರ್ದೇಶಕರಾಗಿದ್ದಾಗ “ರೇಡಿಯೋ ಸಪ್ತಾಹ” ಆಚರಣೆಯ ಅಂಗವಾಗಿ ಪ್ರೊ. ಕೆ. ವಿ. ಅಯ್ಯರ್ ವಿರಚಿತ ನಾಟಕ ’ಚೇಳು ಅಜ್ಜಾ ಚೇಳು” ವನ್ನು ರವಿ ಕಲಾವಿದರ ಮೂಲಕ ಅಭಿನಯಿಸಲು ಆಯ್ದುಕೊಂಡರು. ನನ್ನನ್ನೂ ಸೇರಿಕೊಂಡು ನನ್ನ ಸಹಪಾಠಿಗಳಾದ ಜಿ. ಕೆ. ಜಗದೀಶ್ (ಆಗಲೇ ಹೆಸರಾಂತ ಭರತನಾಟ್ಯಪಟು ಕೂಡ. ಈಗೆಲ್ಲಿದ್ದಾನೋ ಗೊತ್ತಿಲ್ಲ.) ಮತ್ತು ಬಿ.ಜಿ. ದ್ವಾರಕಾನಾಥ್‍ ( ಈಗ ಟೈಟಾನ್‍ ನಲ್ಲಿ ಸೀನಿಯರ್ ವೈಸ್‍ಪ್ರೆಸಿಡೆಂಟ್-ಹೊರೋಲಜಿ) ರನ್ನು ನಾಟಕದ ಮೂರು ಮಕ್ಕಳ ಪಾತ್ರಕ್ಕಾಗಿ ಆಯಲಾಯಿತು. ನಮ್ಮ ಅದೃಷ್ಟವೋ ಅದೃಷ್ಟ. ಅಜ್ಜನ ಪಾತ್ರದಲ್ಲಿ ನಾರಾಯಣ ರಾಯರು. ಅವರ ಮಗಳ ಪಾತ್ರದಲ್ಲಿ ಶ್ರೀಮತಿ ವಿಜಯ. ಮೊಮ್ಮಗನ ಪಾತ್ರ ಜಗದೀಶನ ಪಾಲಾಯಿತು. ನಿರ್ದೇಶನ ಖುದ್ದಾಗಿ ಪ್ರೊ. ಕೆ. ವಿ. ಅಯ್ಯರ್‍ ಅವರದ್ದು. ರಿಹರ್ಸಲ್ ಎಲ್ಲವೂ ಆಗ ಜೆ.ಸಿ. ರಸ್ತೆಯಲ್ಲಿದ್ದ ’ವ್ಯಾಯಾಮಶಾಲಾ’ದ ಹಿಂದೆ ಇದ್ದ ಅಯ್ಯರ್‍ರವರ ಮನೆಯಲ್ಲಿ. ಬಿರಿಯುವ ಮಾಂಸಖಂಡಗಳಿಂದ ತುಂಬಿದ, ನೋಡಲು ಎಷ್ಟು ಕಠೋರ ಎಂದು ಕಾಣುತ್ತಿದ್ದ ಅಯ್ಯರ್‍ರವರ ನಿಜವಾದ ಮೃದುವಾದ ವ್ಯಕ್ತಿತ್ವವನ್ನು ಅರಿಯುವ ಅವಕಾಶ ನಮಗಾಗಿತ್ತು. ನಿರ್ದೇಶನದಲ್ಲಿ ಅವರು ಕಠಿಣ ’ಟಾಸ್ಕ್ ಮಾಸ್ಟರ್”. ಜೊತೆಗೇ ಡಾ. ರಂಗನಾಥ್ ರವರು ಕನಿಷ್ಠ ಪಕ್ಷ ಅರ್ಧಕ್ಕೂ ಹೆಚ್ಚಿನ ರಿಹರ್ಸಲ್‍ಗಳಿಗೆ ಬಂದು ನಮ್ಮನ್ನು ಹುರಿದುಂಬಿಸುತ್ತಿದ್ದರು. ರಿಹರ್ಸಲ್ಗೆ ಬಂದ “ಸಣ್ಣ ಹುಡುಗರಿಗಾಗಿ” ಅಂತ ಶ್ರೀಮತಿ ಅಯ್ಯರ್ ತಯಾರಿಸುತ್ತಿದ್ದ ಬಿಸಿ ಬಿಸಿ ಬೋಂಡ ಕಾಫಿಗಳ ನೆನಪಾದಾಗಲೆಲ್ಲ ಬಾಯಿ ನೀರೂರುತ್ತದೆ. ನಾರಾಯಣ ರಾವ್‍ರವರ ಅಜ್ಜನ ಪಾತ್ರದ ಅಭಿನಯ ಅದೆಷ್ಟು ಹೃದಯಸ್ಪರ್ಶಿಯಾಗಿತ್ತೆಂದರೆ, ಆ ನಾಟಕ ನೋಡಲು ಬಂದವರಾರೂ ಒಣಗಿದ ಕಣ್ಣಲ್ಲಿ ಮನೆಗೆ ಹೋದ ನೆನಪಿಲ್ಲ. ಈ ನಾಟಕ ನಾವು ಕೇವಲ ಮೂರು ಬಾರಿ ರಂಗದ ಮೇಲೆ ತಂದದ್ದು.

ಅಯ್ಯರ್‍ರವರ ನಾಟಕ ಪ್ರೇಮ ಅದೆಷ್ಟಿತ್ತೆಂದರೆ, ರವಿ ಕಲಾವಿದರು ಅಭಿನಯಿಸಲು ಒಂದು ರಂಗಮಂದಿರವನ್ನೇ ಕಟ್ಟಿಸಿಕೊಟ್ಟಿದ್ದರು. ಅವರ ಅಧ್ಯಕ್ಷತೆಯಲ್ಲಿ ರವಿ ಕಲಾವಿದರು ತಮ್ಮ ’ಪೇಟ್ರನ್” ಗಳಿಗಾಗಿ ಪ್ರತಿ ತಿಂಗಳೂ ಒಂದು ನಾಟಕದ ಪ್ರಯೋಗ ಮಾಡುತ್ತಿದ್ದರು. ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಕೂಡಿಡಲು ಉಗ್ರಾಣದ ವ್ಯವಸ್ಥೆ ಕೂಡ ಮಾಡಿ ಕೊಟ್ಟಿದ್ದರು ಶ್ರೀ ಅಯ್ಯರ್.

೧೯೬೧ -೬೨ರಲ್ಲಿ ನ್ಯಾಷನಲ್ ಹೈಸ್ಕೂಲಿನಲ್ಲಿ ನಾರಾಯಣ ರಾಯರ ನಿರ್ದೇಶನದಲ್ಲಿ ಕಟ್ಟಿದ ಹೊಸ ರಂಗಭೂಮಿಯ ಅನಾವರಣಕ್ಕೆ ಆಯ್ಕೆಯಾದ ನಾಟಕ ಕೈಲಾಸಂರವರ ಇಂಗ್ಲೀಷ್ನಲ್ಲಿ ಬರೆದ ‘Purpose’ ನ ಕನ್ನಡ ಅನುವಾದ “ಏಕಲವ್ಯ”. ಈ ನಾಟಕದಲ್ಲಿ ಮೊದಲ ಸೀನಿನಲ್ಲಿಯೇ ಮೊದಲ ಮಾತಾಡುವ ಸಹದೇವನ ಪಾತ್ರಧಾರಿಯಾದ ನನಗೆ ದಕ್ಕಿತ್ತು. ಸ್ನೇಹಿತರಾದ ದ್ವಾರಕಿ, ಮತ್ತು ಜಗದೀಶ್ ಕೂಡ ಇದ್ದ ಈ ನಾಟಕದಲ್ಲಿ ಏಕಲವ್ಯನ ಪಾತ್ರದಲ್ಲಿ ಮೆರೆದವರು ಶ್ರೀ ನಾರಾಯಣ ರಾವ್. ದ್ರೋಣನಾಗಿ ಅಲ್ಲಿಯ ಇನ್ನೊಬ್ಬ ಮೇಷ್ಟ್ರು ಶ್ರೀ ಜಿ. ಕೆ. ನಾಗರಾಜನ್. ಅರ್ಜುನನ ಪಾತ್ರಧಾರಿ ಈಗಿನ ಪ್ರಖ್ಯಾತ ನಟ ಶ್ರೀನಾಥ್.

ಅವರ ಶಿಷ್ಯನಾದಮೇಲಂತೂ, ರವಿ ಕಲಾವಿದರು ಅಭಿನಯಿಸಿದ ಅನೇಕ ನಾಟಕಗಳಲ್ಲಿ ಅನುಭವಿಸುವ ಸುಯೋಗ ದೊರಕಿತು. ಬಂಡ್ವಾಳ್ವಿಲ್ಲದ್ಬಡಾಯಿಯ ಮುದ್ಮಣಿ; ಬಹದ್ದೂರ್ ಗಂಡಿನ ಶಿವು ಇಂಥದೇ ಮೊದಲಾದ ಚಿಕ್ಕ ಹುಡುಗನ ಪಾತ್ರಗಳು ಸಂದವು. ಬಂಡ್ವಾಳ್ವಿಲ್ಲದ್ಬಡಾಯಿಯ ಅಹೋಬ್ಲು ಪಾತ್ರದಲ್ಲಿ ನಾರಾಯಣ ರಾಯರ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಕೈಲಾಸಂರವರ ನಾಟಕದಲ್ಲಿನ ಸಂಭಾಷಣೆಗಳು ಅವರ ನಾಲಿಗೆಯಲ್ಲಿ ಅದೆಷ್ಟು ಸುಲಲಿತವಾಗಿ ಹೊರಳುತ್ತಿತ್ತು ಅಂತ ವರ್ಣಿಸುವುದೇ

ಕಷ್ಟ. ನಾನು ಮುದ್ಮಣಿಯಾಗಿ ಅನೇಕ ರಿಹರ್ಸಲ್ಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರೂ ಅವರೊಂದಿಗೆ ಪ್ರತಿ ಬಾರಿ ಅಭಿನಯಿಸುವಾಗಲೂ ನಗು ತಡೆ ಹಿಡಿಯುವುದೇ ಕಷ್ಟ ವಾಗಿರುತ್ತಿತ್ತು. ಪ್ರತಿ ಬಾರಿಯೂ ಒಂದು ಹೊಸ ಧಾಟಿ. ಇಂಪ್ರೊವೈಸೇಷನ್!

ಅದೆಷ್ಟೋ ಬಾರಿ ಭಾನುವಾರದಂದು ನನಗೆ ಪಾತ್ರವಿಲ್ಲದಿದ್ದರೂ , ನಾರಾಯಣ ರಾಯರ ಮಾತಿನ ಮೋಡಿಯನ್ನು ಕೇಳಲು ಅವರು ರಿಹರ್ಸಲ್ ಮಾಡುತ್ತಿದ್ದ ರೂಮಿಗೆ ಹೋಗಿ ಗಂಟೆಗಟ್ಟಲೆ ಕೂತಿದ್ದುಂಟು. ಸರಿಯಾದ ರೀತಿಯಲ್ಲಿ ಡೈಲಾಗ್ ನೀಡದಿದ್ದರೆ ಪದೇ ಪದೇ ಹೇಳಿಸಿ ತಮಗೆ ಬೇಕಾದ ರೀತಿಯಲ್ಲಿ ಹೇಳಿದ ಮೇಲೆಯೆ ಅವರು ಮುಂದೆ ಸಾಗುತ್ತಿದ್ದದ್ದು. “ಮೈಕ್ನಲ್ಲಿ ಮಾತಾಡ್ಬೇಕಾದ್ರೆ ನಿಧಾನವಾಗಿ ಮಾತನಾಡಬೇಕು. ಇಲ್ಲದಿದ್ರೆ ಪದಗಳು ’ರೋಲ್’ ಆಗುತ್ತೆ.” ಜೋರಾಗಿ ಮಾತನಾಡಬೇಕು. ಮೈಕ್ ಇಲ್ಲದಿದ್ರೂ ಕೇಳಿಸೋ ಥರ ಇರಬೇಕು” ’ ಕೈ ಕಾಲು ಆಡಿಸೋ ಬಗ್ಗೆ ನಿಗಾ ಇರಲಿ” ಹೀಗೆ ಅನೇಕ ಸಲಹೆಗಳು, ಟಿಪ್ಸು ಇತ್ಯಾದಿ. ಮರೆಯುವಹಾಗಿಲ್ಲ. ನಾಟಕದಲ್ಲಿನ ಸಂಭಾಷಣೆಯಲ್ಲಿ ಎಲ್ಲೆಲ್ಲಿ Pause ಇರಬೇಕು, ಎಲ್ಲಿ emphasis ಇರಬೇಕು, ಇಲ್ಲದಿದ್ದರೆ ಹೇಗೆ ಅಭಾಸವಾಗುತ್ತೆ ಎಂದು ಹೇಳಿ ಅಭಿನಯಿಸಿ ತೋರಿಸುತ್ತಿದ್ದರು.

ರಾಯರು ಅಭಿನಯಿಸಿದ ಪಾತ್ರಗಳಲ್ಲಿ ನಾನು ಮರೆಯಲಾಗದ್ದು “ವೀರಯೋಧ” ದ ಖೈದಿ. ಆನಂದ ವಿರಚಿತ ಈ ನಾಟಕದಲ್ಲಿ ಗಲ್ಲಿಗೆ ಹೋಗಲಿರುವ ಒಬ್ಬ ಖೈದಿ ಮತ್ತು ಅವನೇ ಚಿಕ್ಕಂದಿನಲ್ಲಿ ಕಳೆದು ಹೋಗಿದ್ದ ತನ್ನ ಅಣ್ಣ ಎಂದು ಅರಿಯಲಾಗದ ತಂಗಿಯ ಮುಗ್ಧ ಪ್ರೇಮದ ಮಾರ್ಮಿಕ ಕಥೆ. ತಂಗಿಗೆ ಮೊದಲು ತನ್ನಮೇಲಿದ್ದ ಅಭಿಮಾನ ಹಾಳಾಗಬಾರದೆಂದು ತನ್ನ ಪರಿಚಯ ಮಾಡಿಕೊಳ್ಳಲಾಗದೆ ತೊಳಲಾಡಿದ ಖೈದಿಯ ಪಾತ್ರದಲ್ಲಿ ಪ್ರತಿ ಬಾರಿ ಆಡಿದಾಗಲು ಅವರು ನಿಜವಾಗಿಯೂ ಅತ್ತದ್ದುಂಟು. ಅವರೊಂದಿಗೇ ಪ್ರೇಕ್ಷಕರು ಕೂಡ ಕಂಬನಿಯಿಡುತ್ತಿದ್ದರು. ಶೇಕ್ಸ್‌ಪಿಯರ್‍ನ “ಟೇಮಿಂಗ್ ಆಫ್ ದಿ ಶ್ರೂ” ನಾಟಕದಿಂದ ಪ್ರೇರಿತ ಪರ್ವತವಾಣಿಯವರ ನಾಟಕ “ಬಹದ್ದೂರ್ ಗಂಡ”ದ ಭೀಮುವಿನ ಪಾತ್ರದಲ್ಲಿ ನಿಜವಾಗಿಯೂ ಒಬ್ಬ ಇಂಗ್ಲೀಷ್ “Rake”ನಂತೆ ಅಭಿನಯಿಸುತ್ತಿದ್ದರು. “ಕಾಕನಕೋಟೆ”ಯ ರಣಧೀರ ಕಂಠೀರವ ಕೂಡ ಅವರ ಸ್ಮರಣೀಯ ಪಾತ್ರಗಳಲ್ಲೊಂದಾಗಿತ್ತು. ಅದರಲ್ಲಿ ಕಾನಕಾನ್ ಹಳ್ಳಿ ಗೋಪಿಯ ಕರಿಹೈದನ ನೃತ್ಯ ಮತ್ತು ನಮ್ಮ ತಂಡದ ಕೋಲಾಟ ಎಲ್ಲವೂ ಕಣ್ಣಿಗೆ ಕಟ್ಟಿದಂತಿವೆ. ಅವರು ಅಭಿನಯಿಸದಿದ್ದರೂ ಅವರ ವಿಶೇಷ ಛಾಪು ಅವರ ನಿರ್ದೇಶನದ ನಾಟಕಗಳಲ್ಲಿ ಕಂಡು ಬರುತ್ತಿತ್ತು. ಖ್ಯಾತ ಮರಾಠಿ ನಾಟಕಕಾರ ಪದ್ಮಶ್ರೀ ಪು. ಲ. ದೇಶಪಾಂಡೆಯವರ ಕನ್ನಡದಲ್ಲಿ ಅನುವಾದಿತ “ತನುವೂ ನಿನ್ನದೆ ಮನವೂ ನಿನ್ನದೆ” ನಾಟಕದಲ್ಲಿ ಆಗಿನ ತಂಡದಲ್ಲಿ ಹವ್ಯಾಸಿ ಕಲಾವಿದರಾಗಿದ್ದ ಸಿ. ಎಚ್. ಲೋಕ್‍ನಾಥ್ ( ವೀರಯೋಧದ ಇಂಸ್ಪೆಕ್ಟರ್ ಕೂಡ ) ಕಾಕಾಜಿಯ ಪಾತ್ರದಲ್ಲಿ ವಿಜೃಂಭಿಸಿದರು. ಅವರ ಸಂಭಾಷಣಾ ಶೈಲಿ ಯಲ್ಲಿ ನಾರಯಾಣರಾಯರ ತಾಲೀಮಿನ ಪಾತ್ರ ಬಹಳ ಮುಖ್ಯವಾದದ್ದು. ಇವರು ಮುಂದೆ ಹೆಸರಾಂತ ಚಲನಚಿತ್ರ ನಟರಾದರು. ಇದೇ ನಾಟಕದಲ್ಲಿ ಸ್ವಾಮೀಜಿಯ ಪಾತ್ರದಲ್ಲಿಬಹಳ ಹೆಸರು ಮಾಡಿದ ವ್ಯಕ್ತಿ ಶ್ರೀ ಸಿ. ವಿಶ್ವನಾಥ್ ( ಖ್ಯಾತ ಗಾಯಕ ಅಶ್ವಥ್‍ರವರ ಅಣ್ಣ, ಮುಂದೆ ನಾರಾಯಣರಾಯರ ಮಗ ಪ್ರಕಾಶ್‍ನ ಮಾವ ಕೂಡ).

೧೯೬೩ ರಲ್ಲಿ ನ್ಯಾಷನಲ್ ಕಾಲೇಜ್ ಸೇರಿದ ನಾನು ಅಲ್ಲಿಯ ನಾಟಕಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಾರಣದಿಂದ ನಾರಾಯಣ ರಾವ್ ರವರ ಸಂಪರ್ಕ ಬಹಳ ಕಡಿಮೆಯಾಯಿತು. ಅದೂ ಅಲ್ಲದೆ ಆಗ ಹಿಸ್ಟ್ರಿಯಾನಿಕ್ ಕ್ಲಬ್‍ನ ನೇತೃತ್ವ ಆಗ ತಾನೆ ಲಂಡನ್‍ನಲ್ಲಿ ನಾಟಕ ಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದು ಹಿಂತಿರುಗಿದ ಬಿ. ಎನ್. ನಾರಾಯಣ್ ( ಮೇಕಪ್ ನಾಣಿ) ಯವರದ್ದಾಗಿತ್ತು. ಅದೇನೋ ಏಕೋಈ ಗುಂಪಿನವರು ಆ ಗುಂಪಿನಲ್ಲಿರುತ್ತಿರಲಿಲ್ಲ. ನಾಣಿ ಗುಂಪಿನಲ್ಲಿ ಪ್ರಮುಖರಾಗಿದ್ದವರು, ಬಿ. ಆರ್. ಜಯರಾಮ್, ಎಸ್. ಆರ್. ಸೀತಾರಾಂ, ಸಿ. ಆರ್. ಸಿಂಹ, ಶ್ರೀನಿವಾಸ್ ಕಪ್ಪಣ್ಣ ಮುಂತಾದವರು. ನನಗೆ ತಿಳಿದ ಮಟ್ಟಿಗೆ ಶ್ರೀನಾಥ್ ಮಾತ್ರ ಎರಡೂ ಬಣಗಳಲ್ಲಿ ಆರಾಮಾಗಿ ಬೆರೆತವರು.


ನಾರಾಯಣ ರಾವ್‍ರವರ ವೈಯುಕ್ತಿಕ ಜೀವನದ ಬಗ್ಗೆ ನಮಗ್ಯಾರಿಗೂ ಅಷ್ಟೊಂದು ತಿಳಿದಿರಲಿಲ್ಲ. ಚಿಕ್ಕ ವಯಸ್ಸಿನ ಮಗನೊಬ್ಬನ ಅಕಾಲ ಮರಣ ಅವರನ್ನು ಬಾಧಿಸುತ್ತಿದ್ದಾಗಲೂ ಹೊರಗಡೆ ಯಾವಾಗಲೂ ಮಂದಸ್ಮಿತರಾಗಿ ಲವಲವಿಕೆಯಿಂದ ಒಡನಾಡುತ್ತಿದ್ದರು. ಅವರ ಹಾಸ್ಯ ಪ್ರವೃತ್ತಿ ನಿಜಕ್ಕೂ ಅಮೋಘವಾಗಿತ್ತು. ಹುಡುಗರಾಗಿದ್ದಾಗ ನಾವುರವಿ ಕಲಾವಿದರ ತಂಡದಲ್ಲಿ ಸೇರಿ KNS Bus Service ನ ಬಸ್ ಮಾಡಿಕೊಂಡು ಹಳ್ಳಿ ಹಳ್ಳಿಗಳಲ್ಲಿ ತಿರುಗಿದ್ದು, ದಿನವೆಲ್ಲ ಬಸ್ ಪ್ರಯಾಣ, ಮಧ್ಯಾಹ್ನ ಅಥವಾ ಸಂಜೆ ಸ್ಟೇಜ್ ಕಟ್ಟುವುದು, ಪೆಟ್ರೋಮ್ಯಾಕ್ಸ್ ದೀಪದಲ್ಲಿ ಬ್ಯಾಟರಿ ಯಿಂದ ನಡೆಯುವ ಮೈಕ್‍ಸೆಟ್ ಉಪಯೋಗಿಸಿ ರಾತ್ರಿ ೯ ಅಥವಾ ೧೦ ಘಂಟೆಗೆ ಶುರುವಾಗಿ ಬೆಳಗಿನ ಜಾವ ಮುಗಿಯುವ ನಾಟಕಗಳು, ಬಸ್‍ನಲ್ಲಿ ನಾರಾಯಣರಾವ್ ಮತ್ತಿತ್ತರರ ಜೋಕ್ಸ್ ಎಲ್ಲವೂ ನಿನ್ನೆ ಮೊನ್ನೆ ನಡೆದಂತಿವೆ.

ರವಿ ಕಲಾವಿದರ ಉಪಾಧ್ಯಕ್ಷರೂ ಹಾಗೂ ನಿರ್ದೇಶಕರೂ ಆಗಿ ರಾಯರು ಅನೇಕ ರಂಗ ಕಲಾವಿದರ ಏಳಿಗೆಗೆ ಕಾರಣರಾಗಿದ್ದರು. ಬಿ. ಎಮ್. ಎಸ್ ಕಾಲೇಜಿನ ವೈ. ವಿ. ರಾಮದಾಸ್, ಪ್ರಜಾವಾಣಿಯ ಜಿ. ಎಸ್. ರಾಮರಾವ್, ಶಿವನೆ ಗೋಪಾಲಿ, ಕಾನಕಾನಹಳ್ಳಿ ಗೋಪಿ, ಪ್ರಸನ್ನ, ಆನಂದೂ; ಮೂರ್ತಿ; ಶಂಕ್ರೂ; ಕೇಶವ; ಡಿ.ಎಲ್.ನರಸಿಂಹ ಮೂರ್ತಿ; ಶ್ರಿಮತಿ ಶಾಂತಾ ಭಾರದ್ವಾಜ್, ಶ್ರೀಮತಿ ಸರೋಜ ಹೀಗೆ ಅನೇಕ ಹವ್ಯಾಸಿ ಕಲಾವಿದರು ನಾರಾಯಣ ರಾಯರ ಕೃಪೆಯಿಂದ ಕೃತಾರ್ಥರಾದರು. ನಾರಾಯಣ ರಾಯರೇ ಬೆನ್ನೆಲುಬಾಗಿದ್ದ ರವಿ ಕಲಾವಿದರ ತಂಡ ಸುಮಾರು ೧೯೭೩-೭೪ ರಲ್ಲಿ ರಜತಜಯಂತಿ ಆಚರಿಸಿದ ಕೆಲವೇದಿನಗಳಲ್ಲಿ ಮುಚ್ಚಿಹೋಯಿತು.

ಐವತ್ತರ ಮತ್ತು ಅರವತ್ತರ ದಶಕಗಳಲ್ಲಿ ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ಮೆರೆದ ಇಂತಹ ವ್ಯಕ್ತಿಯ ಸ್ಮಾರಕವಾಗಿ ಏನೊಂದು ಕುರುಹೂ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಬಹುಶಃ ಅವರ ವ್ಯಕ್ತಿತ್ವವೇ ಎಲೆ ಮರೆಯ ಕಾಯಿಯಾಗಿ ಉಳಿಯುವಂತಹುದಾಗಿತ್ತೋ ಏನೋ. Flamboyance ಅವರ ಜಾಯಮಾನದ್ದಾಗಿರಲಿಲ್ಲ.

ಏನೇ ಇರಲಿ. Thanks ಗುಂಡೂರಾಯರೇ! ನಿಮ್ಮ ಲೇಖನ “has made my day.”

*************************************************************************************

No comments: