Thursday 15 July 2010

ಕೆಂಡಸಂಪಿಗೆಯಲ್ಲಿ ನನ್ನ ಬರಹ " ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ"


ಸುಮಾರು ೨೦ ತಿಂಗಳು ಯಾಕೋ ಏನೋ, ಏನನ್ನೂ ಬರೆದಿರಲಿಲ್ಲ. ಇದ್ದಕ್ಕಿದ್ದ ಹಾಗೆ ಮತ್ತೆ ಬರೆಯುವ ತೆವಲು! ಇದರ ಪರಿಣಾಮ ನಿನ್ನೆ ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಕೆಳಕಂಡ ಬರೆಹ ........

ದಕ್ಷಿಣ ಆಫ್ರಿಕಾದಲ್ಲಿ ಮೂವತ್ತು ದಿನಗಳಿಂದ ನಡೆಯುತ್ತಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಕಳೆದ ಭಾನುವಾರ ಮುಕ್ತಾಯವಾಯಿತು. ಮರಿ ಮೊಮ್ಮಗಳ ಅಕಾಲ ಮರಣದಿಂದ ಪಂದ್ಯಾವಳಿಯ ಆರಂಭಿಕ ಸಮಾರೋಹಕ್ಕೆ ಬರಲಾಗದಿದ್ದ ನೆಲ್ಸನ್ ಮಂಡೇಲಾ ತಮ್ಮ ಪತ್ನಿಯೊಡನೆ ಫೈನಲ್ ವೀಕ್ಷಿಸಲು ಬಂದದ್ದು ಎಲ್ಲರಿಗೂ, ಅದಕ್ಕೂ ಹೆಚ್ಚಾಗಿ ಸ್ಥಳೀಯರಿಗೆ ತುಂಬಾ ಸಂತೋಷದ ಸಂಗತಿಯಾಗಿತ್ತು.

ಕಾಕತಾಳೀಯವೇನೊ ಎಂಬಂತೆ ಸುಮಾರು ಹದಿನೈದು ದಿನಗಳ ಹಿಂದೆಯಷ್ಟೆ ಓರ್ವ ಸ್ನೇಹಿತನ ಶಿಫಾರಸಿನ ಮೇರೆಗೆ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶಿತ ಇಂಗ್ಲೀಷ್ ಚಲನ ಚಿತ್ರ `ಇನ್ವಿಕ್ಟಸ್' (INVICTUS) ನೋಡಿದ್ದೆ. ಈ ಚಲನಚಿತ್ರದ ಚಿತ್ರಕಥೆ ನೆಲ್ಸನ್ ಮಂಡೇಲಾರವರು ಆಜೀವ ಕಾರಾವಾಸದಿಂದ ಬಿಡುಗಡೆಯಾಗಿ, ಅವರ್ಣೀಯ ದಕ್ಷಿಣ ಆಫ್ರಿಕಾ ಸರ್ಕಾರದ ಪ್ರಪ್ರಥಮ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ಹಲವೇ ತಿಂಗಳ ನಂತರ 1995 ರಲ್ಲಿ ಜೋಹಾನಸ್ ಬರ್ಗ್ ನಲ್ಲಿ ನಡೆದ ರಗ್ಬಿ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ನಡೆದ ಹಲವು ಘಟನೆಗಳ ಮೇಲೆ ಆಧಾರಿತವಾಗಿದೆ.

ಸುಮಾರು ಮೂವತ್ತು ವರ್ಷಗಳ ಕಾಲ ಬಿಳಿಯರ ದಬ್ಬಾಳಿಕೆಯಲ್ಲಿ ಕಾರಾವಾಸ ಅನುಭವಿಸಿದ ನಂತರವೂ, ಧೀಮಂತ ವ್ಯಕ್ತಿತ್ವದ ಮಂಡೇಲಾ ಸ್ವತ: ಅನುಭವಿಸಿದ ಕಹಿಯನ್ನೆಲ್ಲ ಬದಿಗೊತ್ತಿ, ತಮ್ಮ ದೇಶ ಜಗತ್ತಿನ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗಬೇಕಾದರೆ ಬಿಳಿಯರೂ ಮತ್ತು ವರ್ಣೀಯರು ತಮ್ಮ ಹಗೆಯನ್ನು ಮರೆತು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರೆ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡರು. ಶತಮಾನಗಳ ಕಾಲ ಬಿಳಿಯರ...