Saturday, 29 December 2007

ಬಡವಾ ನೀ ಮಡಗಿದ ಹಾಂಗಿರು ! - ಒಂದು ತರಲೆ ಗುಬ್ಬಚ್ಚಿಯ ನೀತಿ ಕಥೆ.

( ಅನಾಮಧೇಯ ಇಂಗ್ಲೀಷ್ ಮೂಲದಿಂದ ಅನುವಾದಿತ)

- ನವರತ್ನ ಸುಧೀರ್.

ಗುಬ್ಬಚ್ಚಿ ಚಿಕ್ಕ ಪಕ್ಷಿ ಅದರ ರೆಕ್ಕೆ ಪುಕ್ಕಗಳು ಜಾಸ್ತಿಯಾಗಿಲ್ಲದಿರುವುದರಿಂದ ಹೆಚ್ಚಿನ ಚಳಿ ತಡೆಯಲಾಗುವುದಿಲ್ಲ. ಅದೇ ಕಾರಣಕ್ಕಾಗಿ ಉತ್ತರಭಾರತದ ಗುಬ್ಬಚ್ಚಿಗಳೆಲ್ಲವೂ ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿರುವ ದಕ್ಷಿಣ ಕ್ಕೆ ವಲಸೆ ಹೋಗುತ್ತವಂತೆ.

ಒಂದು ಗುಬ್ಬಚ್ಚಿ ಮಾತ್ರ ಎಲ್ಲರಿಗಿಂತಲೂ ತಾನು ಸ್ವಲ್ಪ ಜಾಸ್ತಿ ಬುದ್ಧಿವಂತ ಎಂದು ಅಹಂಭಾವವಿದ್ದು, ಎಲ್ಲರ ಹಾಗೆ ನಾನೇಕೆ ಮಾಡಬೇಕು? ಬದಲಾಗಿ ಈ ಬಾರಿ ಇಲ್ಲಿಯೇ ಉಳಿದು ಚಳಿಗಾಲದ ಆನಂದವನ್ನು ಸವಿಯೋಣ ಅಂದುಕೊಂಡು ತನ್ನ ಬಂಧು ಬಾಂಧವರ ಜೊತೆ ದಕ್ಷಿಣಕ್ಕೆ ಹೋಗದೆ ಉಳಿದುಕೊಂಡಿತು. ಚಳಿಗಾಲ ಶುರುವಾದ ಮೊದಲ ಕೆಲವು ದಿನಗಳಲ್ಲೇ ಆ ಗುಬ್ಬಚ್ಚಿಗೆ ಮೈ ಕೊರೆತ ಮತ್ತು ನಡುಕ ಆರಂಭವಾಗಿ ಹೆದರಿಕೆಯಾಗತೊಡಗಿತು. ಆರಂಭದಲ್ಲೇ ಹೀಗಾದರೆ ಮುಂದೇನು ಗತಿಯಪ್ಪಾ ಎಂದು ಯೋಚಿಸಿ ಸ್ವಲ್ಪ ತಡವಾಗಿದ್ದರೂ ಚಿಂತೆಯಿಲ್ಲ ಈಗಲಾದರೂ ದಕ್ಷಿಣಕ್ಕೆ ಹಾರಿಬಿಡೋಣ ಎಂದು ನಿರ್ಧಾರ ಮಾಡಿ ಬೆಳಕಾಗುವ ಮೊದಲೇ ದಕ್ಷಿಣಾಭಿಮುಖವಾಗಿ ಹಾರತೊಡಗಿತು. ರೆಕ್ಕೆಗಳ ಮೇಲೆ ಶೇಖರವಾಗಿದ್ದ ಮಂಜಿನ ತೆಳು ಪದರ ಆ ಚಳಿಯಲ್ಲಿಯೇ ಸ್ವಲ್ಪ ಹಿಮಗಟ್ಟಿ ರೆಕ್ಕೆ ಭಾರ ಎನಿಸತೊಡಗಿತು. ಬೇಗನೆ ಅಯಾಸವೂ ಆಯಿತು. ದಿಗಂತದಲ್ಲಿ ಸೂರ್ಯ ಆಗತಾನೆ ಮೇಲೇರುತ್ತಿದ್ದ. ಅವನ ಕಿರಣಗಳು ಇನ್ನೂ ಅಷ್ಟು ಪ್ರಖರವಾಗಿರಲಿಲ್ಲ. ಆಗಾಗ ಮಧ್ಯೆ ಸ್ವಲ್ಪ ಭೂಮಿಯ ಮೇಲಿಳಿದು ವಿಶ್ರಾಂತಿ ಪಡೆದು ಮುಂದುವರೆಯುವುದು ಒಳಿತು ಎಂದೆನಿಸಿ ಆ ಗುಬ್ಬಚ್ಚಿ ಒಂದು ಹುಲ್ಲು ಗಾವಲಿನ ಮೇಲಿಳಿಯಿತು. ಅಲ್ಲಿಯೇ ಮೇಯುತ್ತಿದ್ದ ಹಸುವೊಂದರ ಹಿಂದೆ ನೆರಳಿನಲ್ಲಿ ಕುಳಿತು ವಿಶ್ರಮಿಸತೊಡಗಿತು. ತನ್ನ ಹಿಂದೆ ಕಾಲ ಬಳಿ ಸಣ್ಣ ಗುಬ್ಬಚ್ಚಿಯೊಂದು ಕುಳಿತಿದೆ ಎಂಬ ಅರಿವಿಲ್ಲದ ಆ ಹಸು ತನ್ನ ಪ್ರಾತರ್ವಿಧಿಗನುಗುಣವಾಗಿ ಸೆಗಣಿ ಹಾಕಿತು. ತಪತಪನೆ ಬಿದ್ದ ಬಿಸಿ ಬಿಸಿ ಸೆಗಣಿಯಲ್ಲಿ ಆ ಚಳಿಯಿಂದ ನಡುಗುತ್ತಿದ್ದ ಗುಬ್ಬಿ ಸಂಪೂರ್ಣವಾಗಿ ಮುಳುಗಿಹೋಯಿತು.

ಸದೈವವಶಾತ್ ಆ ಬಿಸಿ ಸೆಗಣಿಯಿಂದ ಗುಬ್ಬಚ್ಚಿಯ ರೆಕ್ಕೆಯ ಮೇಲ್ಗಟ್ಟಿದ್ದ ಹಿಮ ಬೇಗನೆ ಕರಗಿ ಅದರ ದೇಹಕ್ಕೂ ಸ್ವಲ್ಪ ತಾಪ ತಟ್ಟಿ ಮೈ ಬೆಚ್ಚಗಾಯಿತು. ಮನಸ್ಸಿಗೆ ಅದೇನೋ ಹಿತವಾದ ಅನುಭವವಾಯಿತು. ಗುಬ್ಬಿಗೆ ಹಾಡಬೇಕೆನಿಸಿತು. ತನಗೆಷ್ಟು ಸಾಧ್ಯವೋ ಅಷ್ಟುಎತ್ತರದ ಧ್ವನಿಯಲ್ಲಿಸುಶ್ರಾವ್ಯವಾಗಿ ಹಾಡತೊಡಗಿತು.

ಅಲ್ಲಿ ಹತಿರದಲ್ಲಿಯೇ ನಡೆದು ಹೋಗುತ್ತಿದ್ದ ಒಂದು ಬೆಕ್ಕಿಗೆ ಈ ಹಾಡು ಕೇಳಿಸಿತು. ಈ ಹಾಡಿನ ಮೂಲ ಎಲ್ಲಿ ಎಂದು ಹುಡುಕಿದ ಆ ಬೆಕ್ಕು ಬೇಗನೆ ಆ ಸೆಗಣಿಯ ಕುಪ್ಪೆಯನ್ನು ಕೆದರಿಸಿ, ಅಲ್ಲಿ ಹುದುಗಿ ಹಾಡಿನಲ್ಲಿ ತನ್ಮಯವಾಗಿದ್ದ ಗುಬ್ಬಚ್ಚಿಯನ್ನು ಹಿಡಿದು ಕಚ್ಚಿ ನುಂಗಿಹಾಕಿತು.

ನೀತಿ ಪಾಠ ೧: ನಿಮ್ಮ ಮೇಲೆ ಸೆಗಣಿ ಹಾಕುವವರೆಲ್ಲರೂ ನಿಮ್ಮ ಶತ್ರುಗಳಲ್ಲ!

ನೀತಿ ಪಾಠ ೨: ನಿಮ್ಮನ್ನು ಸೆಗಣಿಯ ಕುಪ್ಪೆಯಿಂದ ಕೆದರಿ ಹೊರಗೆ ತೆಗಯುವರೆಲ್ಲರೂ ನಿಮ್ಮ ಮಿತ್ರರಲ್ಲ!

ನೀತಿ ಪಾಠ ೩: ನೀವು ಸೆಗಣಿಯ ರಾಶಿಯಲ್ಲಿ ಮುಳುಗಿದ್ದಾಗ್ಯೂ , ಬೆಚ್ಚನೆಯ ಅನುಭವವಾಗಿ ಮನಸ್ಸಿಗೆ
ಹಿತವೆನಿಸುತ್ತಿದ್ದರೆ ಬಾಯಿ ಮುಚ್ಚಿಕೊಂಡಿರಿ! ಹಾಡಬೇಡಿ! ಯಾರಾದರೂ ಉದ್ಧಾರ
ಮಾಡಿಯಾರು.ಎಚ್ಚರಿಕೆ!

***************************************

No comments: