- ನವರತ್ನ ಸುಧೀರ್
ಬೆಂಗಳೂರಿನಲ್ಲಿ ನೆಲಸಿರುವ ಕೇರಳದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಒಕ್ಕೂಟ ಕಳೆದ ಭಾನುವಾರ ೨೫ ನವೆಂಬರ್ ೨೦೦೭ ರಂದು ತಮ್ಮ ವಾರ್ಷಿಕೋತ್ಸವವನ್ನು ಆಚರಿಸಿತು. ಸೆಂಟ್ರಲ್ ಕಾಲೇಜಿನ ಜ್ನಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭಕ್ಕೆ ಆಹ್ವಾನಿತ ಬೆರಳೆಣಿಕೆಯ ಕನ್ನಡಿಗರಲ್ಲಿ ನಾನೂ ಒಬ್ಬನಾಗಿದ್ದೆ.
ಬರೀ ಮಲಯಾಳಿಗಳಿಂದ ಕಿಕ್ಕಿರಿದಿದ್ದ ಸಭಾಂಗಣ. ಹೆಂಗಸರು ಮಕ್ಕಳಾದಿಯಾಗಿ ಕುಟುಂಬದ ಎಲ್ಲ ಸದಸ್ಯರೂ ಇದ್ದದ್ದರಿಂದ ಸಾಕಷ್ಟು ಗದ್ದಲವಿತ್ತು.
ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಫೋಸಿಸ್‍ನ ಮುಖ್ಯಸ್ಥ ಶ್ರೀ. ಕ್ರಿಸ್ ಗೋಪಾಲಕ್ರಿಷ್ಣನ್. ಗೌರವ ಅತಿಥಿಗಳಾಗಿ “ಕಾರ್ಟ್‍ಮನ್” ಎಂದು ವಿಖ್ಯಾತರಾದ ಪ್ರೊ. ಎನ್. ಎಸ್. ರಾಮಸ್ವಾಮಿ ಹಾಗೂ ಅಂದಿನ ಮುಖ್ಯ ಸ್ಪಾನ್ಸರ್ ಶ್ರೀ. ಬಿಜು ಜಾನ್. ಎಲ್ಲರೂ ಯಶಸ್ವಿ ಮಲೆಯಾಳಿಗಳು ಮಾತ್ರ.
ನಿರ್ವಾಹಕರು ಕಾರ್ಯಕ್ರಮವನ್ನು ಮಲಯಾಳಿಯಲ್ಲಿಯೇ ಕಾಂಪೇರ್ ಮಾಡುತ್ತ ನಡೆಸಿಕೊಟ್ಟರೂ, ಸಂಘದ ಅಧ್ಯಕ್ಷ ,ಕಾರ್ಯದರ್ಶಿಗಳು ಮತ್ತು ಮುಖ್ಯ ಅತಿಥಿಗಳಾದ ಕ್ರಿಸ್ ಗೋಪಾಲಕೃಷ್ಣನ್ ಎಲ್ಲರೂ ಇಂಗ್ಲೀಷ್ನಲ್ಲೇ ಭಾಷಣ ಮಾಡಿದರು. ಸ್ವಲ್ಪ ಬೋರಾಗುವಂತಿದ್ದ ಭಾಷಣಗಳನ್ನು ಕೇಳಿ ಸಭಿಕರ ಗದ್ದಲ ಸ್ವಲ್ಪ ನಿಧಾನವಾಗಿ ಏರುವಂತಿತ್ತು.
ಪ್ರೊ. ರಾಮಸ್ವಾಮಿಯವರು ತಮ್ಮ ಭಾಷಣ ಮಾತ್ರ ಮಲಯಾಳಂನಲ್ಲಿಯೇ ಅರಂಭಿಸಿದರು. ನನಗೆ ಅವರ ಭಾಷಣ ನೂರಕ್ಕೆ ನೂರರಷ್ಟು ಅರ್ಥವಾಗದಿದ್ದರೂ, ಒಟ್ಟಾರೆ ಅದರ ಸಾರಂಶವೇನು ಅನ್ನುವುದು ಚೆನ್ನಾಗಿಯೇ ತಿಳಿದುಬಂತು. ಮಲೆಯಾಳಿಗಳು ಎಲ್ಲಿ ಹೋದರು ತಮ್ಮ ಜನರನ್ನು ಒಟ್ಟು ಗೂಡಿಸಿಕೊಳ್ಳುವ ಅಪ್ರತಿಮ ಸಂಘಟನಕಾರರು, ತಾವು ವಲಸೆ ಹೋದ ಬೇರೆ ರಾಜ್ಯ ಅಥವಾ ದೇಶಗಳನ್ನು ತಮ್ಮ ಕಾಯಕ ಕೌಶಲಗಳಿಂದ ಅಭಿವೃಧ್ಧಿ ಮತ್ತು ಉಧ್ಧಾರ ಮಾಡುತ್ತ ತಮ್ಮ ಹುಟ್ಟು ಕೇರಳವನ್ನು ಮಾತ್ರ ಪ್ರಗತಿಯ ಪಥದಲ್ಲಿ ದೂಕಿ “ಹಾಳು ಮಾಡದೆ” ಔದ್ಯೋಗಿಕವಾಗಿ ಹಾಗೂ ಅರ್ಥಿಕವಾಗಿಯೂ ಹಿಂದೆ ಇಟ್ಟಿರುವ ಮಹಾನ್‍ದೇಶಭಕ್ತರು ಎಂದು ಕುಚೋದ್ಯ ಮಾಡುತ್ತ ತಿಳಿಹಾಸ್ಯದ ನೆರವಿನಿಂದ ಸಭಿಕರ ಮನಸೆಳೆದರು ಪ್ರೊ. ರಾಮಸ್ವಾಮಿಯವರು. ಅವರ ಪ್ರತಿಯೊಂದು ಮಾತಿಗೂ ನಗುತ್ತಿದ್ದ ಮಲಯಾಳಿ ಇಂಜಿನಿಯರ್ ಸಮುದಾಯಕ್ಕೆ ಹಿತವಚನ ನೀಡುತ್ತಿದ್ದಂತೆಯೇ, “ಈ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಕ್ಕೆ ಕೇವಲ ಮಲಯಾಳೀ ಆತಿಥೇಯರನ್ನು ಮಾತ್ರ ಕರೆದು ಆದರಿಸಿದ್ದು ಸರಿಯಲ್ಲ. ನೀವುಗಳು ಇರುವ ನಾಡು ಕರ್ನಾಟಕ. ಕುಡಿಯುವ ನೀರು ಅಲ್ಲಿಯದು. ಕನ್ನಡಿಗರಿಗೆ ನಿಮ್ಮ ಕೃತಜ್ನತೆಯ ಕುರುಹಾಗಿ ಇಂತಹ ಸಮಾರಂಭಗಳಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕನ್ನಡಿಗರನ್ನು ಆಹ್ವಾನಿಸಿ ಆದರಿಸಬೇಕು” ಎಂದು ಮಾರ್ಗದರ್ಶನ ನೀಡಿದರು. “ಮುಂದಿನ ವರ್ಷ ನಾನು ಈ ವೇದಿಕೆಯ ಮೇಲೆ ಕೇವಲ ಕನ್ನಡಿಗ ದಿಗ್ಗಜಗಳನ್ನು ನೋಡುವಹಾಗಿರಬೇಕು” ಎಂದರು. ಬರೀ ಮಲೆಯಾಳಿಗಳೇ ತುಂಬಿದ್ದ ಆ ಸಭೆಯಲ್ಲಿ ತಮ್ಮವರಿಗೇ ನೀಡಿದ ಅವರ ಈ ಸಂದೇಶ ಹೃದಯಪೂರ್ವಕವಾಗಿ ಬಂದು ಅಸ್ವಾರ್ಥತೆಯಿಂದ ತುಂಬಿದ್ದಂತೆ ತೋರಿತು.
ಇವರ ನಂತರ ಮಾತಾನಾಡಿದ ಯುವ ಉದ್ಯಮಿ ಬಿಜು ಜಾನ್ ಕೂಡ ಎಲ್ಲರಿಗೂ ಕನ್ನಡ ಕಲೆತು, ಕನ್ನ್ನಡಿಗರೊಂದಿಗೆ ಬೆರೆತು ಇರುವ ಸಂದೇಶ ನೀಡಿದರು.
ಅಧಿಕಾರ ಮೋಹ- ದಾಹ, ವಚನಭ್ರಷ್ಟತೆ, ಅನೀತಿಯುತ ವಿದ್ಯಮಾನಗಳ ಬಗ್ಗೆಯೇ ಕೇಳುತ್ತಿರುವ ಈ ಕಿವಿಗಳಿಗೆ, ಕೃತಾರ್ಥಭಾವದ ಗುರು ಸಂದೇಶ ಕೇಳಿ ಈ ಜಗತ್ತಿನ ಭವಿಷ್ಯ ನಾನಂದುಕೊಂಡಷ್ಟು ಕರಾಳವಿಲ್ಲ ಅನಿಸಿತು.
No comments:
Post a Comment