( ದಿವಂಗತ ನರಸಿಂಹಸ್ವಾಮಿಯವರನ್ನು ನೆನೆಸಿ, ನಮಿಸಿ, ಕ್ಷಮೆಯಾಚಿಸುತ್ತ)
- ನವರತ್ನ ಸುಧೀರ್
ನೋಡಿರಣ್ಣ ಹೇಗಿದೆ ಕರ್… ನಾಟಕ
ಮದುವೆ ಮುರಿದು ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ಯಡ್ಡಿ ಕೂಗಿದಾಗಲೆಲ್ಲ ಬರುವನಣ್ಣ ಕುಮಾರನು
ಹಿಂದೆ ಮುಂದೆ ನೋಡದೆ ಗೌಡರ ಮಾತ ಕೇಳದೆ
ಯಾರೆ ಎಷ್ಟು ಉಗಿದರೇನು ಬಿದ್ದು ಬಿದ್ದು ನಕ್ಕರೇನು
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಮರಳಿ ಅರಳಿ ಭಾಜಪವನು ತಾನೆ ಕೂಗಿ ಬೇಡಿ ಕರೆದು
ಅವರ ಹರಸಿ ಕರೆವುದು ಬಂಧುಮಿತ್ರ ಎನುವುದು
ಕೆಂದಾವರೆಯನು ಅರಳಿಸಿ ಅಪ್ಪಿ ಮುತ್ತನಿಡುವುದು.
ಇಂದು ಮುತ್ತನ್ನಿಡುವುದು ನಾಳೆ ಕಚ್ಚಾಡುವುದು
ನಮ್ಕುಮಾರನ್ ನಾಟಕ ಮಾಡೋದೆಲ್ಲಾ ಪಾತಕ
ಇವನದದೆಂಥಾ ಜಾತಕ ಕರ್ -ನಾಟಕದ ಕಂಟಕ
ನೋಡಿರಣ್ಣ ಹೇಗಿದೆ ಕರುನಾಡ ಭಾಗ್ಯ ಹೀಗೇಕಿದೆ?
**********************************
ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು.
ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು
ಚಂದ್ರನೆ ಕಾಣದ ಬಾನಿನಲೆಲ್ಲಾ ಮುಗಿಲೇ ತುಂಬಿತ್ತು
ಬಾನಲಿ ಕಾರ್ಮುಗಿಲು ಕವಿದಿತ್ತು.
ಗೌಡರಮನೆಯಲಿ ಹಳಸಿದ ಸಾರಿನ ನಾತವೆ ತುಂಬಿತ್ತು.
ಹೊರಗೆನಿಂತ ಜನಜಂಗುಳಿಯಿದ್ದೂ ಒಳಗಡೆ ದೀಪವಾರಿ ನೀರವ ಕವಿದಿತ್ತು.
ರೇವಣ್ಣನ ಗುಸುಪಿಸು ಮಾತನು ಕೇಳುತ ಕೂತಿದ್ದರು ಗೌಡ
ಕುರ್ಚಿಯ ಕನಸಲಿ ಮುಳುಗಿದ ಯಡ್ಡಿಗೆ ಸ್ವರ್ಗವೇ ದಕ್ಕಿತ್ತು.
ಪ್ರಮಾಣ ವಚನಕೆ ಕರೆಯಲು ಬಂದೆನು ನಿಮ್ಮನು ನಾನೆನುತ ಯಡ್ಡಿಯು ಹೇಳಲು
ಊರಲ್ಲಿದ್ದರೆ ಖಂಡಿತ ಬರುವೆನು ಎಂದರು ಗೌಡರು ಬಿಗುವಿನಲಿ
ಹೊತ್ತಾಯಿತು ಸರಿ ಹೊರಡುವೆನೆಂದರು ಯಡ್ಡಿಯು ಹರುಷದಲಿ
ಹೋಗೋ ಮಗನೆ ಹೋಗುವೆ ಎಲ್ಲಿಗೆ ನೋಡುವೆ ಅಂದರು ಗೌಡರು ಮನಸಿನಲಿ.
**************************************************
ನಿನ್ನ ಪ್ರೇಮದ ಪರಿಯ ನಾನರಿಯೆ...
ನಿನ್ನ ಪ್ರೇಮದಪರಿಯ ನಾನರಿಯೆ ಕುಮಾರಣ್ಣ
ನಿನ್ನೊಳಿದೆ ನನ್ನ ಮನಸು
ಅಧಿಕಾರದಾಸೆಯಿಂದುಕ್ಕುವುದು ಕಡಲಾಗಿ
ನಿನ್ನ ಬೆಂಬಲವನರಸಿ
ನಿನ್ನೊಳಿದೆ ನನ್ನ ಮನಸು
ಗೌಡರಾ ಹೃದಯದಲಿ ಸ್ವಲ್ಪವೂ ಒಲವಿಲ್ಲ
ಅಂತರಿತು ಯಾರೇನೆಲ್ಲ ಹೇಳಿದರೂ
ನಿನ್ನ ಬೆಂಬಲವರಸಿ
ನಾನು ಬಂದಿಹೆನು
ನಿನ್ನೊಳಿದೆ ನನ್ನ ಮನಸು
ನಂಬಿ ಕೆಟ್ಟವರಿಲ್ಲ ಎಂಬ ಮಾತನು ನಂಬಿ
ನೀ ಹೇಳಿದನು ನಂಬಿ
ಮಾನ ಮನೆಯಲಿ ಬಿಟ್ಟು
ಜೊತೆಸೇರುವೆನು
ನಿನ್ನೊಳಿದೆ ನನ್ನ ಮನಸು
**************************************
No comments:
Post a Comment