To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ ಇರಬಹುದು ಅವರ Dilemma.
Dilemma ದ ಸರಿಯಾದ ಕನ್ನಡ ಭಾವಾರ್ಥ ಏನು? ತುಮುಲ, ದ್ವಂದ್ವ, - ಎರಡೂ ಆಗಬಹುದಾದರೂ ನನಗಿರುವ ಡಿಲೆಮ್ಮ ಎಂದರೆ ಕನ್ನಡದ ಎರಡು ಪದವೋ ಅಥವಾ ಇಂಗ್ಲೀಷಿನ ಒಂದು ಪದವೋ? I was on the horns of a dilemma! ಅಂದರೆ ಡಿಲೆಮ್ಮ ಅನ್ನೋದು ಒಂದು ಗೂಳಿಯೇ ಅಂತ ನನ್ನನ್ನು ಕೇಳಬೇಡಿ. ಶೀರ್ಷಿಕೆಯಲ್ಲಿ ಡಿಲೆಮ್ಮ ಎಂದು ಉದ್ಗರಿಸಿರೋದ್ರಿಂದ ಇಂಗ್ಲೀಷ್ ಡಿಲೆಮ್ಮದ ಅರ್ಥದಲ್ಲಿಯೇ ಮುಂದುವರಿಸುತ್ತೇನೆ.
ಈ ಡಿಲೆಮ್ಮ ಏನೋ ತೀರ್ಮಾನವಾಯಿತು. ಆದರೆ ಈ ನರಸಿಂಹ ಎಲ್ಲಿಂದ ಬಂದ?
ಭಕ್ತ ಪ್ರಹ್ಲಾದನ ಕಥೆ ಕೇಳಿದವರೆಲ್ಲರಿಗೂ ಅವನ ತಂದೆ ಹಿರಣ್ಯಕಶಿಪುವಿನ ಬ್ರಹ್ಮನಿಂದ ತಪಸ್ಸು ಮಾಡಿ ಪಡೆದ ವರ ಚೆನ್ನಾಗಿಯೇ ಗೊತ್ತಿರಬಹುದು. “ದೇವರಿಂದಾಗಲೀ, ಪ್ರಾಣಿಗಳಿಂದಾಗಲೀ, ಮನುಷ್ಯರಿಂದಾಗಲೀ, ಹಗಲಾಗಲೀ, ಇರುಳಾಗಲೀ, ಮನೆಯ ಹೊರಗಾಗಲೀ, ಒಳಗಾಗಲೀ, ಯಾವುದೇ ಅಯುಧದಿಂದಾಗಲೀ ತನಗೆ ಸಾವು ಬರಕೂಡದು.”
ಆಮೇಲೆ ಅವನ ಹಾವಳಿ ತಡೆಯಲಾಗದೆ, ಶ್ರಿಮನ್ನಾರಾಯಣನೆನಿಸಿಕೊಂಡ ಮಹಾವಿಷ್ಣು ಒಳ್ಳೆಯ ಡಿಲೆಮ್ಮದಲ್ಲಿ ಸಿಲುಕಿದ್ದ. ದೇವರಾದ್ದರಿಂದ ಈ ಡಿಲೆಮ್ಮದಿಂದ ಮುಕ್ತನಾಗಲು, ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ, ರಾತ್ರಿಯೂ ಅಲ್ಲದ ( ಸೂರ್ಯಾಸ್ತವಾಗುವ ) ಹೊತ್ತು ಮುಳುಗುವ ಹೊತ್ತಿನಲ್ಲಿ, ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ ಮನುಷ್ಯನಾಗಲೀ ಅಲ್ಲದ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ನಿಶ್ಚಿಂತನಾದ.
ಈಗ ಗೊತ್ತಾಯಿತೇ ಈ ಉದ್ದದ ಪೀಠಿಕೆಯ reference to the context? ಭಾರತದಲ್ಲಿ ಈಗ ಡಿಲೆಮ್ಮಗಳ ಸೀಸನ್. ಎಲ್ಲಿ ನೋಡಿದರಲ್ಲಿ ಡಿಲೆಮ್ಮವೇ ಡಿಲೆಮ್ಮ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಿ.ಪಿ.ಎಮ್ ಮುಖಂಡರಿಗೆ ಅಣುಶಕ್ತಿ ಒಪ್ಪಂದ ಅಥವ ಮಧ್ಯಂತರ ಚುನಾವಣೆಯ ಡಿಲೆಮ್ಮ. ನಮ್ಮ ಕರ್ನಾಟಕದಲ್ಲಿಯೂ ಅಧಿಕಾರ ಹಸ್ತಾಂತರ ಕುರಿತು ದೇವೇಗೌಡರಿಗೆ, ಅವರ ಕುಮಾರ ಕಂಠೀರವರಿಗೆ, ಯೆಡಿಯೂರಪ್ಪನವರಿಗೆ ಬೇರೆ ಬೇರೆ ತರಹದ ಡಿಲೆಮ್ಮಗಳು. ಕ್ರಿಕೆಟ್ ಆಟಗಾರರಿಗೆ ಬಿ.ಸಿ.ಸಿ.ಐ ಅಥವ ಐ.ಸಿ.ಎಲ್ ನಡುವಣ ಡಿಲೆಮ್ಮ; ರಾಹುಲ್ ದ್ರಾವಿಡ್‍ಗೆ ಕಪ್ತಾನನ ಪಟ್ಟದ ಡಿಲೆಮ್ಮ; ಬಿ.ಸಿ.ಸಿ.ಐ ಗೆ ಸಚಿನ್, ಗಂಗೂಲಿ ಮತ್ತು ಧೋಣಿ ಬಗ್ಗೆ ಡಿಲೆಮ್ಮ .( ಟ್ರಿಲೆಮ್ಮ ಎನ್ನಬಹುದೋ ಇಲ್ಲವೋ ಗೊತ್ತಿಲ್ಲ.)
ಹೀಗೆ ಪಟ್ಟಿ ಹಾಕುತ್ತ ಹೋದಲ್ಲೆಲ್ಲ ಇನ್ನೂ ಉದ್ದವಾಗಿ ಬೆಳೆಯುತ್ತ ಹೋಗುತ್ತೆ. ಆದರೆ ಸಮಯ ಕಳೆಯುತ್ತಲೆಲ್ಲ ಇವೆಲ್ಲ ಡಿಲೆಮ್ಮಗಳು ಟೇಮಾಗಿ ಬಗೆಹರಿಯುತ್ತವೆ. ಆದರೆ ಹೊಸದಾಗಿ ಹುಟ್ಟಿಕೊಂಡಿರುವ ಒಂದು ಡಿಲೆಮ್ಮ ಮಾತ್ರ ಬೃಹದಾಕಾರವಾಗಿ ಬೆಳೆಯುವ ಲಕ್ಷಣಗಳಿದ್ದು ಕ್ಷುಲ್ಲಕ ಮಾನವ ಮಾತ್ರರಿಂದ ಬಗೆಹರಿಯಲು ಸಾಧ್ಯವಾಗುವುದೋ ಎಂದು ಶಂಕೆಯನ್ನುಂಟು ಮಾಡುತ್ತಿದೆ.
ಇದ್ಯಾವುದಪ್ಪ ಇಂಥ ನರಸಿಂಹಾವತಾರದ ಡಿಲೆಮ್ಮ ಅಂತ ಯೊಚಿಸುತ್ತಿದ್ದೀರೇನೋ. ನಮ್ಮ ಅನಂತಮೂರ್ತಿಯವರೇನೋ ಬಹಳ ಸುಲಭವಾಗಿ “ ನಮ್ಮ ವಿಜ್ನಾನಿಗಳಿಗೇನಾಗಿದೆ?” ಅಂತ ಪ್ರಶ್ನೆ ಕೇಳಿ ತಮ್ಮ ಕೈ ತೊಳೆದುಕೊಂಡಿದ್ದಾರೆ. ಚಾಮಲಾಪುರದ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕಾಗಿ ಆಯ್ದುಕೊಂಡಿರುವ ಜಾಗ, ಅದರಿಂದ ಪರಿಸರ ಹಾಗೂ ಪಶು, ಪಕ್ಷಿ, ಜಲಚರಗಳಿಗೆ ಆಗಬಹುದಾದ ಅಥವ ಆಗದೇ ಇರಬಹುದಾದ ಸಮಗ್ರ ಹಾನಿಯ ಬಗ್ಗೆ ಎಲ್ಲರೂ ಸ್ವಛ್ಛಂದವಾಗಿ ವ್ಯಾಖ್ಯಾನಿಸುವ ಮೂಲಕ ಒಂದು ಅತಿ ದೊಡ್ಡ ಡಿಲೆಮ್ಮ ವಿ(ಅ)ಜ್ನಾನಿಗಳ ಮುಂದೊಡ್ಡಿದ್ದಾರೆ. ಕರಾವಳಿಯಲ್ಲಿ ಬೇಡ. ಒಳನಾಡಿನಲ್ಲಿ ಬೇಡ. ಮಲೆನಾಡಿನಲ್ಲಿ ಬೇಡ. ನೀರಿದ್ದಲ್ಲಿ ಬೇಡ, ಅಲ್ಲಿ ಬೇಡ, ಇಲ್ಲಿ ಬೇಡ. ಕಡೆಗೆ ಸುಡುಗಾಡಿನಲ್ಲಿಯೂ ಜಾಗ ಸಿಕ್ಕುವುದು ಕಷ್ಟ. ನಿಜವಾಗಿಯೂ ಸುಡುಗಾಡೆ ಆಯ್ದರೂ, ಅದು ಹಿಂದುಗಳದೋ, ಬೇರಾರದೋ ಎಂದು ಕಿತ್ತಾಟದ ಆರಂಭ ಖಚಿತ.
ಸ್ಥಾವರದ ಜಾಗದ ಡಿಲೆಮ್ಮ ಬಗೆಹರಿಸಿದರೆ ಆಯಿತೆ? ಇಲ್ಲ. ಇದ್ದಿಲಿನಿಂದ ಶಾಖೋತ್ಪನ್ನವೋ ಅಥವ ಅಣುಶಕ್ತಿಯಿಂದ ಶಾಖೋತ್ಪನ್ನವೋ ಎಂಬುದರ ಬಗ್ಗೆ ಎರಡೂ ವಿಧಾನಗಳ ಗಂಧವೂ ಹತ್ತದ ಪಂಡಿತರಿಂದ ಪತ್ರಿಕೆಗಳಲ್ಲಿ, ಎಲ್ಲಿ ಕಂಡಲ್ಲಿ ಚರ್ಚೆ ಶುರುವಾಗುತ್ತದೆ. ಅಂತರ್ಜಾಲದ ಹಾವಳಿಯಿಂದ ನಮ್ಮ ಸಾಧಾರಣ ನಾಗರಿಕನ ಜ್ನಾನ ಅದೆಷ್ಟು ಮಟ್ಟಿಗೆ ಹೆಚ್ಚಿದೆಯೆಂದರೆ, ನಮ್ಮ ವಿಜ್ನಾನಿಗಳೆಲ್ಲ ಅಜ್ನಾನಿಗಳೆಂದು ಅನಂತಮೂರ್ತಿಯವರು ಸಂಶಯಿಸಿದ ಹಾಗೆಯೇ ಋಜುವಾತಾಗಿ ಹೋಗಿಬರುವ ಸಂಭವ ದೂರವಿಲ್ಲ.
ಎಲ್ಲ ಬಲ್ಲವರೇ ನಮ್ಮೂರಿನಲ್ಲಿ, ವಿಜ್ನಾನಿಗಳು ಮತ್ತು ಎಂಜಿನಿಯರ್‍ಗಳನ್ನು ಹೊರೆತು.
ವಿದ್ಯುತ್ ಮಾತ್ರ ಎಲ್ಲರಿಗೂ ಬೇಕು. ಆದರೆ ಉತ್ಪಾದನೆ ನಮ್ಮ ಹಿತ್ತಲಲ್ಲಿ ಬೇಡ. ಬೆಂಗಳೂರಿಗೆ ಬೇಕಾದ ವಿದ್ಯುತ್ತನ್ನು ಮಂಗಳೂರಿನ ಸ್ಥಾವರವೇಕೆ ನೀಡಬೇಕು ಅಂತ ಕರಾವಳಿ ಪರಿಸರವಾದಿಗಳ ಬೊಬ್ಬೆ. ಹಾಗೆಯೇ ಹೆಚ್. ಡಿ. ಕೋಟೆಯವರಿಗೆ ತಮ್ಮ ಪರಿಸರದ ಕಾಳಜಿ. ಯಾರಿಗೂ ಆಧುನಿಕ ವಿದ್ಯುತ್ ಸ್ಥಾವರಗಳ ವಿನ್ಯಾಸದ ಪರಿಕಲ್ಪನೆಯಾಗಲೀ; ಹೇಗೆ ತಂತ್ರಜ್ನರು ಕಳೆದ ವರ್ಷಗಳಲ್ಲಿ ನಿರಂತರ ಸಂಶೋಧನೆಯಿಂದ ಪರಿಸರ ಮಾಲಿನ್ಯದ ತೀವ್ರತೆಯನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದರ ಬಗೆಯಾಗಲೀ ತಿಳುವಳಿಕೆ ಇದ್ದಂತಿಲ್ಲ. ಹಿಂದಿಯಲ್ಲಿ ಹೇಳುವ ಹಾಗೆ “ಜಿಸ್ ಕಿ ಲಾಠಿ, ಉಸ್‍ಕಿ ಭೈನ್ಸ್” ( ಯಾರ ಕೈಯಲ್ಲಿ ದೊಣ್ಣೆಯಿದೋ, ಕೋಣ ಅವನದ್ದು). ನಿಮ್ಮಲ್ಲಿ ಬೊಬ್ಬೆ ಹೊಡೆಯುವ ಜನರನ್ನು ಕೂಡಿ ಹಾಕುವ ಸಾಮರ್ಥ್ಯವಿದ್ದರೆ ಸಾಕು. ನೀವು ಹೇಳಿದ್ದೇ ವೇದ, ಪುರಾಣ ಎಲ್ಲ. ಎಲ್ಲ ಬುಧ್ಧಿಜೀವಿಗಳೂ ಮಂಕಾಗಿ ನರಸತ್ತವರಾಗುತ್ತಾರೆ.
ಒಟ್ಟಾಗಿ ಹೇಳುವುದಾದರೆ, ಇದ್ದಲು ಹಾಗು ಅಣುಶಕ್ತಿಯಿಂದಾಗುವ ಪರಿಸರ ಮತ್ತನೇಕ ಮಾಲಿನ್ಯಗಳಿಂದ ಮುಕ್ತಿ ಸಿಗಬೇಕಾದರೆ ನಮ್ಮಲ್ಲಿಯ ವಿಜ್ನಾನಿಗಳು ಬೇರೆ ಯಾವುದಾದರೂ ಶಾಖೋತ್ಪನ್ನ ವಿಧಾನವನ್ನು ಕಂಡು ಹಿಡಿಯಬೇಕು. ನಮ್ಮ ಪತ್ರಿಕೆಗಳಲ್ಲಿಉತ್ಪತ್ತಿಯಾಗುವ ಶಾಖದಿಂದ ( ಅವನ್ನು ಸುಡುವುದರಿಂದಲ್ಲ; ಚರ್ಚೆಯ ತೀಕ್ಶ್ಣತೆ ಯಿಂದ) ವಿದ್ಯುತ್ಪಾದನೆ ಮಾಡಲು ಸಾಧ್ಯವೋ ಎಂದು ಕೂಡ ನಮ್ಮ ವಿಜ್ನಾನಿಗಳಿಗೆ ಸಲಹೆ ಮಾಡುತ್ತಾನೆ ನನ್ನೊಬ್ಬ ಕಿಡಿಗೇಡಿ ಸ್ನೇಹಿತ.
ಅಂತೂ ನಮ್ಮ ವಿಜ್ನಾನಿಗಳಿಗಿದೆ ಆಪತ್ತು - “ ಎ ಡಿಲೆಮ್ಮ ಆಫ್ ಮಾನ್ಯುಮೆಂಟಲ್ ಪ್ರಪೋರ್ಷನ್ಸ್.”
ಇಂತಹ ನರಸಿಂಹಾವತಾರದ ಡಿಲೆಮ್ಮದಿಂದ ಬಚಾವಾಗಲು ಅವರಿಗೆ ನಮ್ಮ ನರಸಿಂಹನೇ (ನೋ ಹೌ) ಜ್ನಾನ ದಯಪಾಲಿಸಬೇಕು. ಅಥವಾ ಸಾಕ್ಷಾತ್ ಶ್ರೀ ವಿಷ್ಣುವೇ ವಿದ್ಯುತ್ ಘಟಕದ ಚೀಫ್ ಡಿಸೈನರ್ ರೂಪದಲ್ಲಿ ಅವತರಿಸಿದರೆ ಮತ್ತಿಷ್ಟು ಚಂದ.
*************************************************************************
No comments:
Post a Comment