Thursday, 3 April 2008

ಹೊಸದೊಂದು ಗೀತೋಪದೇಶ?

- ನವರತ್ನ ಸುಧೀರ್

ಸಿನೇಮಾಗಳಲ್ಲಿ ಹೇಳುವಹಾಗೆ “ಈ ಕೆಳಗಿನ ಕಥೆ ನಿಜವಾದ ಸನ್ನಿವೇಶದ ಮೇಲೆ ಅಧಾರಿತ”.

ಒಂದೇ ನೆರೆಹೊರೆಯ ಎರಡು ಮಕ್ಕಳು ಚೆಸ್ ಆಡುತ್ತಿದ್ದಾರೆ. ಇಬ್ಬರೂ ಬುದ್ಧಿವಂತರೇ. ಆದರೆ ಅದರಲ್ಲೊಬ್ಬ ಅಜಯ್ ಅಂತ ಕರೆಯೋಣ. ಅವನಿಗೆ “ದೈವದತ್ತ ಪ್ರತಿಭೆ” ಇದೆ. ಇದು ಅವನಿಗೂ ಗೊತ್ತು ಏಕೆಂದರೆ ಅವನ ತಂದೆ ತಾಯಿಗಳು ಮೊದಲಿನಿಂದಲೂ ಅವನಿಗೆ ಹಾಗೆಯೇ ಹೇಳುತ್ತ ಬಂದಿದ್ದಾರೆ. ತಮ್ಮ ಮಗ ಬಹಳ 'ಜಾಣ’ ನಾಗಿರುವುದು ಒಂದು ಹೆಮ್ಮೆಯ ವಿಚಾರವಲ್ಲವೇ? ಎರಡನೇ ಹುಡುಗ ಪ್ರಯಾಸ್ ಕೂಡ ತಾನು ಯಾವ ರೀತಿಯಲ್ಲೂ ಕಮ್ಮಿ ಎಂದು ತಿಳಿದಿಲ್ಲವಾದ್ದರಿಂದ ಆಟವನ್ನು ಕೆಚ್ಚಿನಿಂದ ಎದುರಿಸುತ್ತಾನೆ.

ಅಜಯ್ ಮೊದಲ ಗೇಮ್ ಗೆಲ್ಲುತ್ತಾನೆ. ಅದರ ಹಿಂದೆಯೇ ಎರಡನೆಯ ಮತ್ತು ಮೂರನೆಯದು ಕೂಡ ಗೆಲ್ಲುತ್ತಾನೆ. ಆದರೆ ಪ್ರತಿ ಬಾರಿಯು ಸೋಲು ಗೆಲುವಿನ ಅಂತರ ಕಡಿಮೆಯಾಗಿರುತ್ತೆ. ಪ್ರಯಾಸ್ ಪ್ರತಿ ಬಾರಿ ಸೋತಾಗಲೂ ಮತ್ತಷ್ಟು ಹುರುಪಿನಿಂದ ಮತ್ತೊಂದು ಗೇಮ್ ಆಡಲು ಅಣಿಯಾಗುತ್ತಾನೆ. ಕೊನೆಗೂ ಒಂದು ಗೇಮ್ ಗೆಲ್ಲುತ್ತಾನೆ. ಸೋತ ಅಜಯ್ ಅಷ್ಟೇನೂ ಉತ್ಸಾಹ ತೋರದೆ ಗೊಣಗುತ್ತ ಮತ್ತೊಮ್ಮೆ ಬೋರ್ಡ್ ತಯಾರಿ ಮಾಡುತ್ತಾನೆ. ಪ್ರಯಾಸ್ ಈ ಬಾರಿಯೂ ಗೆಲ್ಲುತ್ತಾನೆ. ಈಗಂತೂ ಅಜಯ್‍ಗೆ ಎಲ್ಲಿಲ್ಲದ ಕೋಪ ಬಂದು ನಿನ್ನ ಗೆಲುವು “ಅದೃಷ್ಟ” ಚೆನ್ನಾಗಿದ್ದರಿಂದ ಅಷ್ಟೇ ಹೊರತು ಮತ್ತೇನೂ ಇಲ್ಲ ಎಂದು ಪ್ರಯಾಸ್‍ನನ್ನು ಮೂದಲಿಸಿ ಮುಂದೆ ಆಡಲು ನಿರಾಕರಿಸುತ್ತಾನೆ.

ನೀವು ಕೂಡ ಇಂತಹ ಸನ್ನಿವೇಶಗಳನ್ನು ಅನೇಕ ಬಾರಿ ಕಂಡಿರಬಹುದಲ್ಲವೇ? ಪ್ರಖ್ಯಾತ ಮನೋವಿಜ್ನಾನಿ ಕೆರೋಲ್ ಡ್ವೆಕ್ ಪ್ರಕಾರ ಈ ಕಥೆಯಲ್ಲ್ಲಿ ಪ್ರಯಾಸ್ “ಬೆಳವಣಿಗೆ”ಯ ಮನೋಭಾವ ತೋರುತ್ತಿದ್ದರೆ, ಅಜಯ್ ಅದೆಷ್ಟೇ ಪ್ರತಿಭಾವಂತನಾದರೂ ನಿರುತ್ಸಾಹಿಯಾಗಿ “ಸ್ಥಗಿತ” ಮನೋಭಾವಕ್ಕೆ ಬಲಿಯಾಗಿದ್ದಾನೆ.

ಕೆರೋಲ್ ಡ್ವೆಕ್



ಅರವತ್ತು ವರ್ಷ ವಯಸ್ಸಿನ ಕೆರೋಲ್ ಡ್ವೆಕ್ ಅಮೇರಿಕದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ನಾನ ಕ್ಷೇತ್ರದ ಪ್ರಾಧ್ಯಾಪಿಕೆ. ಕಳೆದ ಮೂವತ್ತು ವರ್ಷಕ್ಕೂ ಹೆಚ್ಚಿನ ಸಂಶೋಧನೆಯಲ್ಲಿ ಈಕೆ ಅದೇಕೆ ಅನೇಕ ಪ್ರತಿಭಾವಂತರು ಮುಂದುವರೆದು ತಮ್ಮ ಪೂರ್ಣ ಪ್ರತಿಭೆ ಹಾಗೂ ಕ್ಷಮತೆಯ ಲಾಭ ಪಡೆಯದೆ ಅತಿ ಸಾಧಾರಣ ರೀತಿಯಲ್ಲಿ ಜೀವನ ವ್ಯಯ ಮಾಡುತ್ತ ನಶಿಸಿ ಹೋಗುತ್ತಾರೆ, ಅಂತೆಯೇ ಇತರ ಅನೇಕರು ಅತಿ ಶ್ರಮವಹಿಸಿ ಹೆಚ್ಚಿನ ಸಾಧನೆಗೈದು ಸಾರ್ಥಕ ಜೀವನ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಪ್ರಕಾರ ಸಾಧನೆಗೆ ಮೂಲ ಮಂತ್ರ “ಅವಿರತ ಪ್ರಯತ್ನ”, ಪ್ರತಿಭೆಯಂತೂ ಖಂಡಿತ ಅಲ್ಲ. ಈ ಪ್ರತಿಭೆ ದೈವದತ್ತವೋ ಅಥವಾ ಶ್ರಮಾರ್ಜಿತವೋ ಯಾವುದಾದರೇನು.

ನ್ಯೂಯಾರ್ಕ್ ನಗರದ 400 ಶಾಲಾಬಾಲಕರ ಮೇಲೆ ನಡೆಸಿದ ಸಂಶೋಧನೆಯ ಫಲಿತಾಂಶದ ಪ್ರಕಾರ “ಸಾಧನೆ”ಯ ಪ್ರಶಂಸೆಯೇ ಜಾಣ ಮಕ್ಕಳಿಗೆ ಮುಳುವಾಗುವ ವಿಸ್ಮಯಕಾರಿ ತಥ್ಯವೊಂದನ್ನು ಹೊರಗೆಡಹಿದೆ. ಬಹುಪಾಲು ತಂದೆ ತಾಯಿಯರ ಪ್ರಕಾರ ಮಕ್ಕಳ ಸಾಧನೆಯನ್ನು ಪ್ರಶಂಸಿಸುವುದರಿಂದ ಅವರನ್ನು ಹುರಿದುಂಬಿಸಿ ಮತ್ತಷ್ಟು ಹೆಚ್ಚಿನ ಸಾಧನೆಗೆ ಅಣಿಗೊಳಿಸಬಹುದೆಂಬ ಅಭಿಪ್ರಾಯ ಇರುವುದು ನಿಜವಷ್ಟೆ! ಆದರೆ ಕೆರೋಲ್‍ರ ಸಂಶೋಧನೆ ಈ ನಂಬಿಕೆಯನ್ನು ತಲೆಕೆಳಗಾಗಿಸಿದೆ.

ಅವರ ಪ್ರಕಾರ ಪ್ರಶಂಸೆ ಎರಡು ಅಲಗಿನ ಕತ್ತಿ. ಸರಿಯಾಗಿ ಉಪಯೋಗಿಸದಿದ್ದರೆ ಜೀವಕ್ಕೆ ಕುತ್ತು ಖಂಡಿತ. ಪ್ರಶಂಸೆ ಪ್ರೋತ್ಸಾಹಜನಕವಾಗಬೇಕಾದರೆ ಅದು ಪ್ರಾಮಾಣಿಕ ಹಾಗೂ ಸಮಯೋಚಿತವಾಗಿರಬೇಕು. ಅನಾವಶ್ಯಕ ಮತ್ತು ಅತಿರೇಕದ ಪ್ರಶಂಸೆ ಪರಿಣಾಮಕಾರಿಯಾಗುವುದಿಲ್ಲ. ಹಾಗೆಯೇ ಅತಿ ಕಡಿಮೆಯೂ ಒಳ್ಳೆಯದಲ್ಲ. ಎಲ್ಲವೂ ಹಿತಮಿತವಾಗಿ ಸಮತೋಲಿತವಾಗಿರಬೇಕು.

ಯಾವುದು ಪ್ರಶಂಸಾರ್ಹ? ಪ್ರಯತ್ನವೋ? ಸಾಧನೆಯೋ?

“ಸಾಧನೆ”ಯ ಪ್ರಶಂಸೆಗೊಳಗಾದ ಮಕ್ಕಳು ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿ ಸಾಧನೆಯೇ ಗುರಿ ಎಂದು ನಂಬಿ, ಕಷ್ಟಸಾಧ್ಯ ಮಾರ್ಗಗಳಲ್ಲಿ ಚಲಿಸಲು ಇಛ್ಛಿಸುವುದಿಲ್ಲ. ಪ್ರಶ್ನೆ ಪತ್ರಿಕೆಗಳಲ್ಲಿ ಕ್ಲಿಷ್ಟವಾದ ಪ್ರಶ್ನೆಗಳಿಗಾಗಲಿ, ಗಣಿತದ ಸಮಸ್ಯೆಗಳಿಗಾಗಲಿ ಉತ್ತರಿಸುವ ಗೋಜಿಗೆ ಹೋಗದೆ ಸದಾ ಸುಲಭವಾದ ಮಾರ್ಗ ಹುಡುಕುತ್ತಾರಂತೆ ಈ ಮಕ್ಕಳು. ಏಕೆಂದರೆ ಈ ಮಕ್ಕಳಿಗೆ ವಿಫಲತೆಯ ಭಯ ಸದಾ ಕಾಡುತ್ತಿರುತ್ತವೆ. ಅಕಸ್ಮಾತ್ ತಮ್ಮ ಪ್ರಯತ್ನದಲ್ಲೇನಾದರೂ ವಿಫಲರಾದರೋ, ಪ್ರಪಂಚವೇ ಮುಳುಗಿಹೋದ ಭಾಸವಾಗಿ ಉತ್ಸಾಹ ಕಳೆದುಕೊಂಡುಬಿಡುತ್ತಾರೆ. ಬಲು ಬೇಗ ಕೈಚೆಲ್ಲುತ್ತಾರೆ ಇಂತಹ ಮಕ್ಕಳು. ಮರಳಿ ಪ್ರಯತ್ನಿಸಿ ಸಫಲತೆಯ ಮಾರ್ಗ ಕಾಣುವುದು ಇವರಿಗೆ ಬಲು ಕಷ್ಟ.

ಅವರ ಅಧ್ಯಯನದಲ್ಲಿ ಹಲವು ಮಕ್ಕಳ ಸಾಧನೆಯ ಬದಲಾಗಿ ಅವರ “ಪ್ರಯತ್ನ”ದ ಶ್ಲಾಘನೆ ಮಾಡಲಾಯಿತು. ಇಂತಹ ಮಕ್ಕಳು ಸಣ್ಣ ಪುಟ್ಟ ವೈಫಲ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಮತ್ತಷ್ಟು ಹುರುಪಿನಿಂದ ಇನ್ನೂ ಹೆಚ್ಚಿನ ಪ್ರಯತ್ನಕ್ಕೆ ಮುಂದಾದದ್ದು ಕಂಡು ಬಂದಿತು. ಇಂತಹ ಮಕ್ಕಳು ಅತಿ ಪ್ರತಿಭಾವಂತರಾಗದಿದ್ದಾಗ್ಯೂ ತಮ್ಮ ಶ್ರಮ ಮತ್ತು ಉತ್ಸಾಹದಿಂದ ಸಫಲತೆಯ ಹಾದಿಯಲ್ಲಿ ಮುನ್ನಡೆಯುತ್ತಾರೆ. ಈ ಮಕ್ಕಳಿಗೆ ಸಾಧನೆ ಅಥವಾ ಗುರಿ ತಲೆ ಹೋಗುವಷ್ಟು ಮುಖ್ಯವಲ್ಲ. ಅತಿಕ್ಲಿಷ್ಟವಾದ ಗಣಿತ ಸಮಸ್ಯೆ ಬಿಡಿಸುವ ಅಥವಾ ಪ್ರಶ್ನೆ ಉತ್ತರಿಸುವ ಪ್ರಕ್ರಿಯೆಯಲ್ಲಿಯೇ ಅವರು ಆನಂದ ಕಂಡುಕೊಂಡು ಮುಂದುವರಿಯುತ್ತಾರೆ. ಎಡವಿ ಮುಗ್ಗರಿಸುವುದು, ಸಣ್ಣ ಪುಟ್ಟ ವೈಫಲ್ಯಗಳು ಇವೆಲ್ಲ ಸಫಲತೆಯ ಹಾದಿಯಲ್ಲಿನ ಕಲ್ಲು ಮುಳ್ಳುಗಳು ಎಂದು ನಂಬಿ ಎದೆಗೆಡದೆ ಮುನ್ನುಗ್ಗುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಇದನ್ನೇ ಅವರು “ಬೆಳವಣಿಗೆ”ಯ ಮನೋಭಾವ ಎಂದು ಬಣ್ಣಿಸುವುದು.

ಈ ಸಂಶೋಧನೆಯ ಹೆಚ್ಚಿನ ವಿವರಗಳು ನ್ಯೂಯಾರ್ಕ್ ಪತ್ರಿಕೆಯಲ್ಲಿ ಕಳೆದ ವರ್ಷ ಪೋ ಬ್ರ್ಯಾನ್‍ಸನ್‍ರವರು ಬರೆದ How not to talk to your kids – The inverse Power of praise ಎನ್ನುವ ಲೇಖನದಲ್ಲಿ ಕೊಡಲಾಗಿದೆ.

ಕೆರೋಲ್ ಡ್ವೆಕ್‍ರವರ ಜೀವನ, ಕಲಿಕೆ ಮತ್ತು ಸಾಧನೆಗಳ ಕುರಿತಾದ ಮರೀನಾ ಕ್ರಾಕೊವ್ಸ್ಕಿ ಬರೆದ The Effort Effect ಲೇಖನ ಸ್ಟ್ಯಾನ್‍ಫೋರ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಒಟ್ಟಾರೆ ಕೆರೋಲ್ ಸಂಶೋಧನೆಯ ಸಾರಾಂಶ “ಪ್ರಯತ್ನದಿಂದ ಏನನ್ನಾದರೂ ಸಾಧಿಸಬಹುದು. ಕೇವಲ ಸಾಧನೆಯೇ ಗುರಿಯಾದರೆ, ಅಕಸ್ಮಾತ್ ಎಡವಿ ಮುಗ್ಗರಿಸಿದರೆ ಮೇಲೆದ್ದು ಕೊಡವಿಕೊಂಡು ಮರಳಿ ಯತ್ನಿಸುವ ಚೈತನ್ಯ ಇಲ್ಲದಿರಬಹುದು. ಪ್ರಶಂಸೆ ಮಾಡುವುದಾದರೆ ಪ್ರಯತ್ನವನ್ನು ಶ್ಲಾಘಿಸಿ, ಸಾಧನೆಯನ್ನಲ್ಲ.” ಪ್ರತಿಫಲಾಪೇಕ್ಷೆಯಿಲ್ಲದೆ ಕರ್ಮ ಮಾಡು ಎಂದುಬೋಧಿಸುವ ಪಾಠ. ಇದೊಂದುರೀತಿಯ ಗೀತೋಪದೇಶವೇ ಅಲ್ಲವೇ

ನಮ್ಮಲ್ಲಿ ಇಂದು ಅದೆಷ್ಟು ಮಕ್ಕಳು ಪ್ರೈಮರಿ ಶಾಲೆಯಿಂದಲೇ ಆರಂಭವಾಗಿ ಅವಿರತ ತಮ್ಮ ತಂದೆ ತಾಯಿಗಳ ಸಾಧನೆಯ ಅಪೇಕ್ಷೆ ಮತ್ತು ಅದರಿಂದ ಸಿಗಲಿರುವ ಪ್ರಶಂಸೆಯ ಉರುಳಲ್ಲಿ ಸಿಲುಕಿ, 99.9% ಅಂಕಗಳಿಸುವ ಸ್ಪರ್ಧೆಯಲ್ಲಿ ತೀವ್ರ ಮಾನಸಿಕ ಒತ್ತಡ ಮತ್ತು ಹಿಂಸೆ ಅನುಭವಿಸುತ್ತಿದ್ದಾರೋ ಊಹಿಸಲಸಾಧ್ಯ. ವಿಫಲತೆಯ ಹೆದರಿಕೆಯಿಂದ ನಡೆಯುತ್ತಿರುವ ಆತ್ಮಹತ್ಯೆಗಳೇ ಇದಕ್ಕೆ ಸಾಕ್ಷಿ.

ನಮ್ಮ ವಿದ್ಯಾಭ್ಯಾಸ ಪಧ್ಧತಿಯ ಸುಧಾರಣೆಯಾಗಬೇಕಾದರೆ ಇಂತಹ ಗೀತೋಪದೇಶ ಸಮಯೋಚಿತ ಅಲ್ಲವೇ?


***************************************************

4 comments:

MD said...

“ಪ್ರಯತ್ನದಿಂದ ಏನನ್ನಾದರೂ ಸಾಧಿಸಬಹುದು. ಕೇವಲ ಸಾಧನೆಯೇ ಗುರಿಯಾದರೆ, ಅಕಸ್ಮಾತ್ ಎಡವಿ ಮುಗ್ಗರಿಸಿದರೆ ಮೇಲೆದ್ದು ಕೊಡವಿಕೊಂಡು ಮರಳಿ ಯತ್ನಿಸುವ ಚೈತನ್ಯ ಇಲ್ಲದಿರಬಹುದು. ಪ್ರಶಂಸೆ ಮಾಡುವುದಾದರೆ ಪ್ರಯತ್ನವನ್ನು ಶ್ಲಾಘಿಸಿ, ಸಾಧನೆಯನ್ನಲ್ಲ.”

ಇಂತಹ ಬರವಣಿಗೆಗಳು ಇನ್ನೂ ಮೂಡಿಬರಲಿ. ನಿಮ್ಮ ಪ್ರಯತ್ನ ಅಮೋಘವಾಗಿದೆ.

ಸಂತೋಷಕುಮಾರ said...

ನಾನೂ ಅನೇಕ ಬಾಲ ಪ್ರತಿಭೆಗಳನ್ನು ನೋಡಿದ್ದೇನೆ, ಒಂದು ಹಂತಕ್ಕೆ ಬಂದಾಗ Update ಆಗದ ಅವರ ಪ್ರತಿಭೆಯನ್ನೂ ಗಮನಿಸಿದ್ದೇನೆ.ಈ ವಾದವನ್ನೂ ನಾನೂ ಒಪ್ತೀನಿ. ಆದರೆ ಯಾವುದೇ ಪ್ರಯತ್ನದ ಬಲವಿಲ್ಲದೇ ಇನ್ನೂ ಮುಗ್ಗುತ್ತಿರುವ Born championsಗಳನ್ನೂ ನೋಡಿದ್ದೇನೆ.ಬರೀ ಪ್ರಯತ್ನವಾ? ಅಥವಾ ಅದೃಷ್ಟವೂ ಬೇಕಾ? ಎಂಬ ದ್ವಂದ ನನ್ನಿನ್ನೂ ಕಾಡುತ್ತಿದೆ.

Pramod P T said...

ನಮಸ್ಕಾರ ಸುಧೀರ್,
ಈ ಅನುಭವ ನನಗೂ ಆಗಿದೆ ಚಿಕ್ಕವನಿದ್ದಾಗ. ಅದರ ಅರಿವು ಈಗೀಗ ಆಗ್ತಾ ಇದೆ. ಆದರೆ ಅದು ತಂದೆ ತಾಯಿಯರ ಸಾಧನೆಯ ಅತಿಯಾದ ಅಪೇಕ್ಷೆಯಿಂದಲ್ಲ. ಇನ್ನಾವುದೋ ಒತ್ತಡದಿಂದ!
ನಿಮ್ಮ ಬರಹ ಸೊಗಸಾಗಿದೆ.

Anonymous said...

Dear Navaratna,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.