Wednesday, 26 March 2008

ವಲಸಿಗರ ಬಗ್ಗೆ ಅಸಹಜ ದ್ವೇಷವೇಕೆ?


ಇಂಗ್ಲೀಷ್ ಮೂಲ : ಶ್ರೀ ಗುರುಚರಣ್ ದಾಸ್, ಮಾಜಿ ಮುಖ್ಯಸ್ಥ, ಪ್ರಾಕ್ಟರ್ ಎಂಡ್ ಗ್ಯಾಂಬಲ್ ಕಂ.
ಅನುವಾದ: ನವರತ್ನ ಸುಧೀರ್

ನಮಗೆ ಇಷ್ಟವಿರಲಿ, ಇಲ್ಲದಿರಲಿ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ ಸೃಷ್ಟಿಯಾಗುವುದು ಅನಿವಾರ್ಯ. ಈ ಪ್ರಕ್ರಿಯೆಯಿಂದ ಅನೇಕ ಸಾಮಾಜಿಕ ಬದಲಾವಣೆಗಳಾಗುವುದೂ ಅಷ್ಟೇ ಅನಿವಾರ್ಯ. ಜೀವನೋಪಾಯ ಹುಡುಕುತ್ತ ಹುಟ್ಟಿ ಬೆಳೆದ ನಾಡನ್ನು ಬಿಡಬೇಕಾಗಿ ಬಂದು, ಎಂದೂ ಕಂಡೂ ಕೇಳದ ದೂರದ ನಾಡಿಗೆ ವಲಸೆಹೋಗಿ. ಬೇರೆ ಭಾಷೆ ಮತ್ತು ಸಂಸ್ಕೃತಿಯ ಜನರ ನಡುವೆ ಜೀವಿಸಬೇಕಾಗುವ ಅವಶ್ಯಕತೆ ಇಂದು ಅನೇಕರಿಗೆ ಇದೆ. ಸ್ವಾಭಾವಿಕವಾಗಿಯೆ ವಲಸಿಗರು ತಮ್ಮ ಶ್ರಮ ಮತ್ತು ಕಾರ್ಯ ತತ್ಪರತೆಗಳಿಂದ ಹೊಸ ಸಮಾಜಕ್ಕೆ ಪ್ರಯೋಜನಕಾರಿ ದೇಣಿಗೆ ನೀಡಲು ಉತ್ಸುಕರಾಗಿರುತ್ತಾರೆ. ಹಾಗಾಗಿ ಮಣ್ಣಿನ ಮಕ್ಕಳೆಂದೆನಿಸಿಕೊಂಡು ತಮ್ಮ ಕಲ್ಪಿತ ಪ್ರಪಂಚ ಶಾಶ್ವತ ಎಂದು ನಂಬಿಕೊಂಡಿರುವ ಸ್ಥಳೀಯರ ಮತ್ತು ವಲಸಿಗರ ಹಿತಾಸಕ್ತಿಗಳ ನಡುವಣ ಘರ್ಷಣೆ ಪ್ರಾರಂಭವಾಗಲು ಹೊತ್ತೇನೂ ಹಿಡಿಯುವುದಿಲ್ಲ. ಸಮಾಜ ಶಾಸ್ತ್ರದಲ್ಲಿ Xenophobia ಎಂಬ ಒಂದು ಪದವಿದೆ. ಕನ್ನಡ ಕಸ್ತೂರಿ. ಕಾಂ ನಿಘಂಟಿನ ಪ್ರಕಾರ ಈ ಪದದ ಅರ್ಥ - ಪರ ದೇಶದವರ ಬಗ್ಗೆ ಇರುವ ದ್ವೇಷಪೂರ್ಣ ಭೀತಿ. ಸ್ಥಳೀಯರ ಮನದಲ್ಲಿನ ಈ ಅವ್ಯಕ್ತ ಭೀತಿ ಸಮಯ ಸಮಯಕ್ಕೆ ಅನೇಕ ನಕಾರಾತ್ಮಕ ಹಾಗೂ ಹಿಂಸಾತ್ಮಕ ರೂಪಗಳಲ್ಲಿ ಪ್ರಕಟವಾಗುವುದುಂಟು.

23ನೇ ಮಾರ್ಚ್ 2008 ರಂದು “ಟೈಮ್ಸ್ ಆಫ್ ಇಂಡಿಯಾ” ಇಂಗ್ಲೀಷ್ ಪತ್ರಿಕೆಯಲ್ಲಿ ಖ್ಯಾತ ಚಿಂತಕ ಹಾಗೂ ಲೇಖಕ ಗುರುಚರಣ್ ದಾಸ್‍ರವರು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಗಳ ಬಗ್ಗೆ ಬರೆದ Thackeray scores a self-goal ಎನ್ನುವ ಲೇಖನದಲ್ಲಿ ಈ Xenophobia ಎಂಬ ಸಾಮಾಜಿಕ ಪಿಡುಗಿನ ಉಲ್ಲೇಖವಿದೆ. ಮಹಾರಾಷ್ಟ್ರದಲ್ಲಿ ನಡೆದದ್ದು ನಮ್ಮ ಕರ್ನಾಟಕದಲ್ಲೂ ಮುಂದೆ ನಡೆಯಬಹುದಾದ್ದರಿಂದ ಈ ಲೇಖನದ ಅನ್ವಯತೆ ನಮಗೂ ಇದೆ ಎಂದೆನಿಸಿ, ಕೆಳಕಂಡಂತೆ ಕನ್ನಡಕ್ಕೆ ಅನುವಾದ ಮಾಡಲಾಗಿದೆ.

“ಆಗಬಾರದ ಅನಾಹುತ ಆಗಿ ಹೋಗಿದೆ. ರಾಜ್ ಠಾಕ್ರೆಯವರ ಮಹಾರಾಷ್ಟ್ರೀಯವಾದಿ ಆಕ್ರೋಶದಿಂದ ಹೆದರಿ ಊರು ಬಿಟ್ಟು ಹೋಗುತ್ತಿರುವ ಉತ್ತರ ಭಾರತೀಯ ಕಾರ್ಮಿಕರ ಕೊರತೆಯಿಂದಾಗಿ ಪುಣೆ, ನಾಸಿಕ್ ಮತ್ತು ಠಾಣೆಯಲ್ಲಿನ ಉದ್ಯಮಿಗಳು ತಮ್ಮ ಉದ್ಯಮಗಳನ್ನು ವಿಸ್ತರಿಸುವ ಯೋಜನೆಗಳನ್ನು ನಿಲ್ಲಿಸಿ ಇತರೆ ರಾಜ್ಯಗಳತ್ತ ಕಣ್ಣು ಹಾಯಿಸಿದ್ದಾರೆ. ಹಿಂದೊಮ್ಮೆ ದತ್ತ ಸಾಮಂತರ ಕಾರ್ಮಿಕರ ತೀವ್ರವಾದ ಮತ್ತು ಬಾಲಾಸಾಹೇಬ್ ಠಾಕ್ರೆಯವರ ಪರದೇಶಿಗರ ಬಗೆಗಿನ ದ್ವೇಷಪೂರ್ಣ ಭೀತಿಯುಕ್ತ ಚಳುವಳಿಗಳಿಂದಾಗಿ ಉನ್ನತ ಸ್ಥರದ ಹುದ್ದೆಗಳೆಲ್ಲ ಬೆಂಗಳೂರಿಗೆ ಮತ್ತು ಕಾರ್ಮಿಕ ಸ್ಥರದ ಕೆಲಸಗಳೆಲ್ಲ ಗುಜರಾತಿಗೆ ಸ್ಥಳಾಂತರಗೊಂಡ ದುಃಸ್ವಪ್ನ ಮತ್ತೊಮ್ಮೆ ಕಾಡಲಾರಂಭಿಸಿದೆ.

ಒಂದು ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳದ ಹೊಳೆ ಆಕರ್ಷಕ ಪ್ರದೇಶಗಳಿಗೆ ಮಾತ್ರ ಹರಿಯುತ್ತದೆ. ಒಂದು ನಗರ ಅಥವಾ ರಾಜ್ಯ ಈ ಪರಿ ಆಕರ್ಷಕವೆನಿಸುವುದರಲ್ಲಿ ಒಂದು ಮುಖ್ಯ ಕಾರಣ ಉತ್ತಮ ಉತ್ಪಾದನಾ ಸಾಮರ್ಥ್ಯವುಳ್ಳ ಕೆಲಸಗಾರರ ಸುಲಭವಾಗಿ ದೊರಕುವಿಕೆ. ಹೊರಗಿನಿಂದ ವಲಸೆಬಂದ ಕಾರ್ಮಿಕರು ಸ್ಥಳೀಯ ಕಾರ್ಮಿಕರಿಗಿಂತ ಹೆಚ್ಚು ಆಸಕ್ತಿ ಮತ್ತು ಶ್ರಮವಹಿಸಿ ದುಡಿಯುತ್ತಾರೆಂಬುದು ನಮಗೆ ಎಷ್ಟೇ ಅಪ್ರಿಯವೆನಿಸಿದರೂ ಅಲ್ಲಗೆಳೆಯಲಾಗದ ಸತ್ಯ. ರಿಚರ್ಡ್ ಫ್ರೀಮನ್‍ನಂತಹ ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಿಗಳು ಹಾಗೂ ಮತ್ತಿತರರ ಸಂಶೋಧನೆಯ ಪ್ರಕಾರ ಯಾವ ಸಮಾಜ ಮತ್ತು ಸಂಸ್ಕೃತಿಗಳು ವಲಸಿಗರನ್ನು ಪ್ರೋತ್ಸಾಹಿಸಿ ತಮ್ಮದಾಗಿಸಿಕೊಳ್ಳುತ್ತವೆಯೋ ಅಂಥವು ಬೇರೆಲ್ಲ ಸಮಾಜಗಳಿಗಿಂತ ಬಹಳ ಮುಂದುವರೆದು ಏಳಿಗೆ ಸಾಧಿಸುತ್ತವೆ ಎಂದು ಪ್ರತಿಪಾದಿಸಲಾಗಿದೆ. ಅದಕ್ಕೇ ತಜ್ನರ ಪ್ರಕಾರ 21ನೇ ಶತಮಾನದಲ್ಲಿ, ಅಮೇರಿಕೆ ಎಲ್ಲ ದೇಶಗಳಿಗಿಂತ ಸ್ಪರ್ಧೆಯಲ್ಲಿ ಮುಂದಾಗಿ ಉಳಿದು ಯೂರೋಪ್ ಮತ್ತು ಜಪಾನ್ ಕ್ರಮೇಣ ಹಿಂದುಳಿಯುತ್ತವೆ. ಏಕೆಂದರೆ ಅಮೇರಿಕ ವಲಸಿಗರನ್ನು ತನ್ನ ಸಮಾಜದಲ್ಲಿ ಗೌರವಯುತ ಸ್ಥಾನ ಮತ್ತು ಅವಕಾಶ ನೀಡಿ ಐಕ್ಯಗೊಳಿಸುವುದರಲ್ಲಿ ಸಫಲವಾದರೆ, ಐತಿಹಾಸಿಕವಾಗಿ ಯೂರೋಪ್ ಮತ್ತು ಜಪಾನ್ ಈ ಕಾರ್ಯದಲ್ಲಿ ಬಹಳ ವಿಫಲವಾಗಿವೆ. ವೃಧ್ಧರ ಸಂಖ್ಯೆ ಹೆಚ್ಚುತ್ತ, ಪ್ರಾಪ್ತವಯಸ್ಕ ಕಾರ್ಮಿಕರ ಸಂಖ್ಯೆ ನಶಿಸುತ್ತಿರುವಂತಹ ಯೂರೋಪ್ ಮತ್ತು ಜಪಾನ್ ದೇಶಗಳು ಮುಂಬರುವ ದಿನಗಳಲ್ಲಿ ಚೀನಾ ಮತ್ತು ಭಾರತಗಳಿಗೂ ಸೋತು ಬಹಳ ಹಿಂದೆ ಬೀಳುವ ಸಂಭಾವನೆ ಹೆಚ್ಚಾಗಿ ತೋರುತ್ತಿದೆ.

ಭಾರತೀಯ ರೈಲು ಪ್ರತಿ ವರ್ಷ 640 ಕೋಟಿ ರೈಲು ಟಿಕೆಟ್ಟುಗಳನ್ನು ಮಾರುತ್ತವೆ. ಇದರಲ್ಲಿ ಮೂರನೇ ಒಂದು ಭಾಗ ದಿನಕೆಲಸಕ್ಕಾಗಿ ಓಡಾಡುವ ಕೆಲಸಗಾರರಿಗಾಗಿ ಎಂದಿಟ್ಟುಕೊಂಡರೆ, ಮಿಕ್ಕ ಸಂಖ್ಯೆ ನೂರಹತ್ತು ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ, ಪ್ರತಿಯೊಬ್ಬರಿಗೂ ವರ್ಷಪ್ರತಿ ನಾಲ್ಕು ಪ್ರವಾಸಗಳಿಗಾಗಿ ಟಿಕೆಟ್ ಕೊಂಡಂತೆ ಲೆಕ್ಕಾಚಾರವಾಗುತ್ತದೆ. ನಮ್ಮದು ನಿರಂತರ ಚಾಲನೆಯಲ್ಲಿರುವ ದೇಶ. ಅದರಲ್ಲೂ ಬಡವರು ಕೆಲಸಕ್ಕಾಗಿ, ಒಳ್ಳೆಯ ಜೀವನೋಪಾಯಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲೇಬೇಕಾಗುವ ದೇಶ. ನಮ್ಮ ನಗರಗಳು ಬಹು ದೇಶೀಯ ಜನ ಮತ್ತು ಸಂಸ್ಕೃತಿಗಳ ಆಗರಗಳಾಗಿ ಪರಿವರ್ತಿತಗೊಂಡು, ಕ್ರಮೇಣ ಪ್ರಾದೇಶಿಕ ಅಸ್ತಿತ್ವ ಮರೆಯಾಗಿ ಹೊಸ ಭಾರತೀಯತೆಯ ಕುರುಹನ್ನು ಪ್ರತಿಪಾದಿಸುತ್ತಿವೆ. ಈ ಪರಿಯ ವಿದ್ಯಮಾನಗಳು ರಾಜ್ ಠಾಕ್ರೆಯಂತಹ ದುರಾಗ್ರಹ ಪೀಡಿತರಿಗೆ ಬಹಳ ನೋವುಂಟುಮಾಡುತ್ತ ತಮ್ಮ ಉಳಿವಿಗಾಗಿ ಅವರು ಏನನ್ನಾದರೂ ಮಾಡಿಯೇ ತೀರಬೇಕೆಂಬ ಛಲ ಹುಟ್ಟಿಸುತ್ತವೆ.

ನಿಜವಾಗಿಯೂ ಮಹಾರಾಷ್ಟ್ರದ ಕಾರ್ಮಿಕರಿಗೊಂದು ದೊಡ್ಡ ಸಮಸ್ಯೆಯಿದೆ. ಅದೇನೆಂದರೆ ತಮಗಿಂತ ಚತುರ ಮತ್ತು ಹೆಚ್ಚು ಉತ್ಪಾದನಾ ಸಾಮರ್ಥ್ಯವುಳ್ಳ ವಲಸಿಗರೊಡ್ಡಿದ ಸವಾಲನ್ನೆದುರಿಸುವುದು. ಇದಕ್ಕಿರುವುದೊಂದೇ ಉತ್ತರ. ಅದು, ಮಹಾರಾಷ್ಟ್ರವನ್ನು ಹಣ ಹೂಡಿಕೆಗಾಗಿ ಮತ್ತಿಷ್ಟು ಆಕರ್ಷಕವನ್ನಾಗಿಸುವುದು. ರಾಜ್ ಠಾಕ್ರೆ ತಮ್ಮ ರಾಜ್ಯದಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉತ್ತಮ ದರ್ಜೆಯ ಶಾಲಾಕಾಲೇಜುಗಳು ಮತ್ತು ವೃತ್ತಿ ಪರ ಶಾಲೆಗಳ ಸ್ಥಾಪನೆಗಾಗಿ ಪ್ರಯತ್ನಿಸಬೇಕು. ಇದರಿಂದ ಮಹಾರಾಷ್ಟ್ರೀಯರು ಇತರರಿಗಿಂತ ಹೆಚ್ಚು ಕುಶಲರೂ ಮತ್ತು ಸ್ಪರ್ಧಿಸಲು ಶಕ್ತರೂ ಆಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಮುಂದುವರೆದು ಅವರು ಮಧ್ಯಮವರ್ಗಕ್ಕೆ ಭಡ್ತಿ ಪಡೆದು ಕೆಳ ಸ್ಥರದ ಕೆಲಸಗಳು ಮಾತ್ರ ವಲಸಿಗರ ಪಾಲಿಗೆ ಉಳಿಯುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಕಾಡುತ್ತಿರುವ ಪ್ರಶ್ನೆಯೊಂದಿದೆ. ಅದೇನೆಂದರೆ ಸಾಧಾರಣ ಹಾಗೂ ಸಭ್ಯ ಮನೆತನಗಳಲ್ಲಿ ಬೆಳೆದ ಮಹಾರಾಷ್ಟ್ರದ ಹುಡುಗರು ಹಿಂಸೆ ಮತ್ತು ಕ್ರೌರ್ಯಪೂರಿತ ಪುಂಡರ ಗುಂಪಾಗಿ ಮಾರ್ಪಾಡಾಗುವುದು ಹೇಗೆ? “ಅದು ಹೇಗೆ 1930ರಲ್ಲಿ ನಾವು ಅಂತಹ ಕ್ರೂರ ನಾಜಿಗಳಾಗಿಹೋದೆವು?” ಎನ್ನುವ ಪ್ರಶ್ನೆಗೆ ಉತ್ತರವನ್ನು ಜರ್ಮನಿಯ ಪ್ರಜೆಗಳು ಕೂಡ ಕಳೆದ ಎಪ್ಪತ್ತೈದು ವರ್ಷಗಳಿಂದ ಹುಡುಕುತ್ತಲಿದ್ದಾರಂತೆ. ತನ್ನ The Most Dangerous Animal ಪುಸ್ತಕದಲ್ಲಿ ಡೇವಿಡ್ ಲಿವಿಂಗ್‍ಸ್ಟೋನ್ ಈ ಪ್ರಶ್ನೆಗೆ ಉತ್ತರ ಕೊಡಲೆತ್ನಿಸುತ್ತಾನೆ. ಅವನ ಪ್ರಕಾರ ಪ್ರತಿ ಮಾನವನಲ್ಲೂ ಅಸುರೀ ಶಕ್ತಿಯ ಅಂಶ ಸುಪ್ತಚೇತನವಾಗಿರುತ್ತದೆ. ಇದಕ್ಕೆ ಕಿಡಿ ಹಚ್ಚಿ ಭುಗಿಲೇಳಿಸಲು ಹಿಟ್ಲರ್ ಅಥವಾ ರಾಜ್ ಠಾಕ್ರೆಯವರಂತಹ triggerನ ಅವಶ್ಯಕತೆಯಿದೆ ಮಾತ್ರ! ಆ ಒಂದು ಕರಾಳ ಮಧ್ಯಾಹ್ನ 38000 ಮಂದಿ ಯಹೂದಿಗಳನ್ನು ಗುಂಡಿಕ್ಕಿ ಕೊಂದ ಜರ್ಮನ್ ರಿಸರ್ವ್ ಪೋಲೀಸ್ ಬೆಟಾಲಿಯನ್ 101 ಪಡೆಯ ಸಿಪಾಯಿಗಳೆಲ್ಲರೂ “ ಯಾವ ಸೈಧ್ಧಾಂತಿಕ ನೆಲೆಗಟ್ಟೂ ಇಲ್ಲದ ಹಾಗೂ ಮಿಲಿಟರಿ ತರಬೇತಿಯಿಲ್ಲದ ಮಧ್ಯವಯಸ್ಕ ಕುಟುಂಬಸ್ಥರು”. ಇತಿಹಾಸದ ಎಲ್ಲ ನರಮೇಧಗಳ ಕಥೆಯೂ ಹೀಗೆಯೆ.
ಕೊಲೆಗಡುಕ ನೀವೂ ಆಗಬಹುದು ಅಥವಾ ನಾನೂ ಆಗಬಹುದು. ವಿಜ್ನಾನಿಗಳ ಪ್ರಕಾರ ಹಿಂಸಾತ್ಮಕ ಪ್ರವೃತ್ತಿ ನಮ್ಮೆಲ್ಲರ ಜೀವಾಣುಗಳಲ್ಲಿ ಅಡಗಿವೆ. ಬೇರೆಲ್ಲ ಸಾಮಾಜಿಕ ಪ್ರಾಣಿಗಳಂತೆಯೇ, ಇರುವೆಗಳಿಂದ ಹಿಡಿದು ಚಿಂಪಾಂಜಿಗಳನ್ನೂ ಒಳಗೊಂಡು ನಾವೆಲ್ಲರೂ ಪರರ ಬಗ್ಗೆ ವಿನಾಕಾರಣ ಅಪಾರ ಭೀತಿ ಮತ್ತು ದ್ವೇಷವುಳ್ಳವರು, ಅರ್ಥಾತ್ ಕಲಹಪ್ರಿಯರು. ನಾವೆಲ್ಲ ಒಟ್ಟಾಗಿ ಒಂದಾದಷ್ಟೂ ಹೊರಗಿನವರನ್ನು ಅಷ್ಟೇ ಆಕ್ರಮಣಶೀಲರಾಗಿ ಎದುರಿಸುತ್ತೇವೆ. ಬಹುಶಃ ನಮ್ಮ ಸಂವಿಧಾನದ ಕರ್ತರಿಗೆ ಈ ವಿಚಾರದ ಮನವರಿಕೆಯಿದ್ದಂತಿದೆ. ಅದಕ್ಕೇ ನಮ್ಮ ಸಂವಿಧಾನದಲ್ಲಿ, ಮನುಷ್ಯ ಪಶುವಿಗೆ ಅಧಿಕಾರ ನೀಡುವ ಮುನ್ನ ಅದನ್ನು ನಿರ್ವಹಿಸುವ ಹಾದಿಯಲ್ಲಿ ಅನೇಕ ಅಡೆ ತಡೆ, ನಿರ್ಬಂಧಗಳನ್ನು ರೂಪಿಸಲಾಗಿದೆ.

ಹೀಗೆ self goal ಮಾಡಿಕೊಳ್ಳುವ ಬೃಹಸ್ಪತಿ ರಾಜ್ ಠಾಕ್ರೆ ಒಬ್ಬರೇ ಅಲ್ಲ. ಮಲೇಶಿಯಾದಲ್ಲಿ ಕೂಡ ಪ್ರಸಕ್ತ ನಡೆಯುತ್ತಿರುವ “ಭೂಮಿಪುತ್ರ” ಚಳುವಳಿಯಿಂದಾಗಿ ಆ ದೇಶದಲ್ಲಿ ಆಗಬಹುದಿತ್ತಾದ ಹಣ ಹೂಡಿಕೆ ಬೇರೆ ಪೂರ್ವಾತ್ಯ ದೇಶಗಳೆಡೆ ಹರಿದುಹೋಗುತ್ತಿದೆ. ಹಾಗೆಯೇ ಹಲವು ವರ್ಷಗಳ ಹಿಂದೆ ಒಂದು ಆಕರ್ಷಕ ’ಗ್ರೀನ್ ಕಾರ್ಡ್” ಯೋಜನೆಯನ್ನು ರೂಪಿಸಿ ಕೂಡ ಜರ್ಮನಿ, ಭಾರತೀಯ ಸಾಫ್ಟ್‍ವೇರ್ ಎಂಜಿನಿಯರ್‍ಗಳನ್ನು ತನ್ನೆಡೆಗೆ ಆಕರ್ಷಿಸಲು ವಿಫಲವಾಯಿತು. ಕಾರಣ ಜರ್ಮನಿಯ ನಾಗರಿಕರು ವಲಸಿಗರನ್ನು ಗೌರವಿಸಿ ಆತಿಥ್ಯ ನೀಡುವುದಿಲ್ಲ ಎಂಬ ತಥ್ಯ ಎಲ್ಲೆಡೆ ಹರಡಿದ್ದು. ಒಂದು ಸ್ಪರ್ಧಾತ್ಮಕ ವಿಶ್ವದಲ್ಲಿ, ಸಮಾಜದ ಏಳಿಗೆಯಾಗಬೇಕಾದರೆ ವಲಸಿಗರಿಂದ ಆಗಬಹುದಾದ ಕಾಣಿಕೆಯ ಬಗೆಗಿನ ಪರಿಪಕ್ವ ಅರಿವು ಒಂದು ಸಮಾಜಕ್ಕಿರುವುದು ಅದೃಷ್ಟದ ಮಾತೇ ಸರಿ."

************************************************************************************
ಮೇಲಣ ಲೇಖನ ಮೊದಲ ಬಾರಿ 25-03-2008ರಂದು thatskannada.comನಲ್ಲಿ ಪ್ರಕಟವಾಯಿತು.

1 comment:

mala rao said...

ನಿಮ್ಮ ಬ್ಲಾಗ್ ತುಂಬಾ ಅಚ್ಚುಕಟ್ಟಾಗಿದೆ ಗಂಭೀರ ಬರಹಗಳು ಚಿಂತನೆಗೆ ಹಚ್ಚುತ್ತವೆ ಮನರಂಜನೆಗೆಂದು ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಬ್ಲಾಗಿಗರು ಒಮ್ಮೆ ನಿಮ್ಮ ಬ್ಲಾಗ್ ನೋಡಬೇಕು ನೋಡಲಿ
ಹೀಗೇ ಬರೀತಾ ಇರಿ