Friday 26 October 2007

ಕನ್ನಡ ನಾಡು, ನುಡಿ , ಜನ, ಸಂಸ್ಕೃತಿ- ಪರಭಾಷೀಯರು ಏಕೆ ಗೌರವಿಸಬೇಕು?

ಕನ್ನಡಿಗರೂ ಅಂದಮೇಲೆ ಕನ್ನಡ ನಾಡು, ನುಡಿ, ಜನಗಳ ಬಗ್ಗೆ ಹೆಮ್ಮೆ, ಅಭಿಮಾನ, ಗೌರವ ಇವೆಲ್ಲವೂ ಇರಲೇಬೇಕು, ನಿಜ. ಆದರೆ ಇದನ್ನು ಯಾವ ರೀತಿ ಪ್ರದರ್ಶಿಸ ಬೇಕು ಅನ್ನೋ ಬಗ್ಗೆ ಇನ್ನೂ ಒಮ್ಮತ ಇದ್ದಂತಿಲ್ಲ.

ಬೇರೆಯವರು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಅಷ್ಟಾಗಿ ಗೌರವಿಸುತ್ತಿಲ್ಲ, ನಮ್ಮ ನಾಡಿನಲ್ಲಿ ನಾವೇ ಹೊರಗಿನವರಂತಾಗಿದ್ದೇವೆ ಅನ್ನೋ ದುಃಖ ನಮ್ಮಲ್ಲನೇಕರಿಗಿದೆ. ನಮ್ಮನ್ನು ಅನಾಗರೀಕರು ಅಸಂಸ್ಕೃತರೂ ಅಂತ ಅಂದುಕೊಂಡರೂ ಪರವಾಗಿಲ್ಲ ಪರಭಾಷೀಯರಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಅಂತ ಹಲವರು. ಎಲ್ಲಾ ನಾಮಫಲಕಗಳೂ ಕನ್ನಡದಲ್ಲಿರಬೇಕು ಅಂತ ಹಲವರು. ಕನ್ನಡದ ಕವಿತೆಗಳಿರುವ ಟೀ ಶರ್ಟ್ ಹಾಕಿಕೊಂಡು ನಿಮ್ಮ ಕನ್ನಡ ಪ್ರೇಮ ಮೆರೆಯಿರಿ ಅಂತ ಇತರರು. ನಮ್ಮ ನಾಡಿನಲ್ಲೇ ನಮ್ಮ ನಾಡಿನ ನೆಲ, ಜಲ, ಗಾಳಿ, ಸವಲತ್ತುಗಳನ್ನು ಬಳಸಿಕೊಂಡು ಹೊರಗಿನಿಂದ ಬಂದು ವಲಸೆಯಾದ ಪರಭಾಷೀಯರು ನಮ್ಮ ಭಾಷೆ ಕಲಿಯದೆ ಅಗೌರವ ಸೂಚಿಸುತ್ತಿದ್ದಾರೆ ಅಂತ ಬೇರೆ ಕನ್ನಡ ಪ್ರಾಧೀಕಾರದ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯನವರು ಇತ್ತೀಚೆಗೆ ಹೇಳಿಕೆಯೊಂದನ್ನಿತ್ತಿದ್ದಾರೆ. ನಮಗೆ ಬೇರೆಯವರು ಕನ್ನಡ ಕಲಿಯುವುದು ಮುಖ್ಯವೋ ಅಥವಾ ಅವರು ನಮ್ಮ ನಾಡು , ಜನ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವದಿಂದ ಕಾಣಬೇಕು ಅನ್ನುವುದು ಜಾಸ್ತಿ ಮುಖ್ಯವೋ ನಾವು ಮೊದಲು ನಿರ್ಧರಿಸಬೇಕು.

ಬರೀ ಕನ್ನಡ ಕಲಿತರೆ ಗೌರವ ಸೂಚಿಸಿದ ಹಾಗೆಯೇ? ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಗೌರವ ವ್ಯಕ್ತಪಡಿಸಲು ಬೇರಾವ ಅವಶ್ಯಕತೆಯೂ ಇಲ್ಲವೇ? ಹಾಗೆಯೇ ಗೌರವಭಾವವನ್ನು ಬಲವಂತವಾಗಿ ಹೇರಲಾದೀತೆ? ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ “ಲೀಡ್ ಇಂಡಿಯಾ” ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಂಗಾಲಿ ಯುವತಿಯೊಬ್ಬಳು ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿಯೇ ಇಲ್ಲ ಅಂತ ಉಧ್ಧಟತನದಿಂದ ಹೇಳುವ ಧೈರ್ಯ ಮಾಡಿದ್ದು ಕನ್ನಡಿಗರ ಸಹಿಷ್ಣುತೆ ಮತ್ತು ಉದಾರತೆಯ ದುರುಪಯೋಗ ಪಡೆದಂತಲ್ಲವೇ? ಯಾರೂ ಇದನ್ನು ಪ್ರತಿಭಟಿಸಲಿಲ್ಲವೇಕೆ? ನಮ್ಮನ್ನು ನಾವೇ ಅದೆಷ್ಟು ಗೌರವಿಸುತ್ತೇವೆ, ನಮ್ಮ ಆತ್ಮಾಭಿಮಾನ ಅದೆಷ್ಟಿದೆ ಎಂದು ಹೊರಗಿನವರು ಛೇಡಿಸಿ, ಪ್ರಚೋದಿಸಿದರೂ ನಮ್ಮ ರಕ್ತ ಕುದಿಯದಷ್ಟು ನಿಸ್ತ್ರಾಣಿಗಳಗಿದ್ದೇವೆಯೇ ನಾವು? ಇದಕ್ಕೆಲ್ಲ ಉತ್ತರ ಬರೀ ಕಡ್ಡಾಯ ಕಲಿಕೆ , ಪ್ರತಿಭಟನೆ, ಕಪ್ಪುಬಾವುಟ ಪ್ರದರ್ಶನವೇ ಅಥವಾ ಬೇರಾವುದಾದರೂ ಮಾರ್ಗಗಳಿವೆಯೇ ಎಂದು ಯೋಚಿಸುವುದುಚಿತ.

ಒಂದು ನಗರದಲ್ಲಿ ಬೇರೆ ಬೇರೆ ಭಾಷೆಯ ಜನ ಒಟ್ಟಿಗೆ ಇರುವಾಗ, ಎಲ್ಲರೊಡನೆ ಸುಲಭವಾಗಿ ಕಲೆತು, ಬೆರತು ಸೌಹಾರ್ದತೆಯಿಂದ ಜೀವನ ನಡೆಸಲು ಸ್ಥಳೀಯ ಭಾಷೆ ಕಲೆಯುವುದು ಒಂದು ಹಂತದವರೆಗೂ ಅನುಕೂಲಕರ ನಿಜ. ಆದರೆ ಕಲಿಯಬೇಕೆ ಬೇಡವೇ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಅನುಭವದ ಮೇಲೆ ತಾನೆ ನಿರ್ಭರ? ನಮ್ಮ ಭಾರತೀಯರಲ್ಲಿ ಯಾವುದೇ ಭಾಷಾ ಜನಾಂಗಕ್ಕೆ ಸೀಮಿತವಲ್ಲದ ಒಂದು ರೀತಿಯ ghetto mentality ಇದೆ. ಇದರಿಂದ ಕಲ್ಕತ್ತದಲ್ಲಿ ಬಹುಪಾಲು ಕನ್ನಡಿಗರೂ ತಮಿಳರೂ, ತೆಲುಗರೆಲ್ಲರೂ ದಕ್ಷಿಣ ಕಲ್ಕತ್ತದ ಲೇಕ್ ಗಾರ್ಡೆನ್, ಗರಿಯಾಹಾಟ್ ಸುತ್ತ ಮುತ್ತವೇ ಸೇರಿಕೊಳ್ಳುತ್ತಾರೆ. ಬಂಗಾಳಿಗಳು ಜಾಸ್ತಿ ಇರುವ ಜಾಗಗಳಲ್ಲಿ ಅವರೊಡನೆ ಬೆರೆತು ಇರುವದು ಅಪರೂಪ. ಹಾಗೆಯೇ ಮುಂಬೈನಲ್ಲಿ ಮಾಟುಂಗಾ, ಸಯಾನ್, ಚೆಂಬೂರ್‍ಗಳಲ್ಲಿ ದಕ್ಷಿಣಭಾರತೀಯರ ಗುಂಪು. ದೆಹಲಿಯಲ್ಲಿ ಬಂಗಾಳಿಗಳು ಬಹುಸಂಖ್ಯೆಯಲ್ಲಿ ಚಿತ್ತರಂಜನ್ ಪಾರ್ಕ್‍ನಲ್ಲಿ ಕಾಣಬಹುದು. ಅದೇ ರೀತಿ ಬೆಂಗಳೂರಿನಲ್ಲಿಯೂ ಸಣ್ಣ ಸಣ್ಣ ಭಾಷಾ ಕ್ಷೇತ್ರಗಳಿವೆ. ಶಿವಾಜಿನಗರ ಅಥವಾ ಹಲಸೂರಿನಲ್ಲಿರುವ ತಮಿಳು ಭಾಷೀಯರು ದೈನಂದಿನ ಜೀವನದಲ್ಲಿ ಮುಕ್ಕಾಲು ಮೂರು ಪಾಲು ತಮಿಳಿನಲ್ಲೇ ವ್ಯವಹರಿಸಿ ಸುಲಲಿತ ಜೀವನ ನಡೆಸಬಹುದು. ಅವರೇಕೆ ಶ್ರಮವಹಿಸಿ ಕನ್ನಡ ಕಲಿಯಬೇಕು? ಕೇವಲ ಕನ್ನಡಕ್ಕೆ ಗೌರವ ಸೂಚಿಸಲೇ? ಇಲ್ಲಿಯವರು ಅಲ್ಲಿಗೆ ಹೋಗೋಲ್ಲ. ಹಾಗೆಯೇ ಅಲ್ಲಿಯವರು ಇಲ್ಲಿಗೆ ಬರೋಲ್ಲ. ನಿಮ್ಮ ಹಂಗು ನಮಗಿಲ್ಲ, ನಮ್ಮ ಹಂಗು ನಿಮಗೇಕೆ ಅಂತ ನಿರ್ಲಿಪ್ತ ಮನೋಭಾವ.

ಬೇರೆಯವರು ನಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಅನ್ನುವ ನೋವು ನಮ್ಮ ಕನ್ನಡಿಗರಿಗೆ ಮಾತ್ರವೇ ಅಥವಾ ಬೇರೆರಾಜ್ಯಗಳಲ್ಲೂ ಇಂತಹ ಸಮಸ್ಯೆಗಳಿವೆಯೇ?

ಕನ್ನಡಿಗರೂ ಸೇರಿದಂತೆ ಎಲ್ಲರಿಗೂ ಭಾಷೆಯ ಸಮಸ್ಯೆ ಅತಿ ಹೆಚ್ಚಾಗಿ ಎದುರಾಗುವದು ದ್ರಾವಿಡ ರಾಜ್ಯವಾದ ತಮಿಳುನಾಡಿನಲ್ಲಿ. ಬಹು ಪಾಲು ಜನರ ಮಾತೃಭಾಷೆಯಾದ ತಮಿಳಿನ ಹೆಗ್ಗಳಿಕೆಯ ಬಗ್ಗೆ ಸ್ಥಳೀಯರಿಗೆ ಸ್ವಲ್ಪವೂ ಸಂಶಯವಿಲ್ಲ. ಅಲ್ಲಿ ತಮಿಳಿನ ಸ್ಥಾನದ ಬಗ್ಗೆ ಯಾರೂ ಸೊಲ್ಲೆತ್ತುವಂತಿಲ್ಲ. ನಿಮಗೆ ಅಲ್ಲಿ ಇರಬೇಕಾದರೆ ತಮಿಳು ಕಲಿಯುವುದು ಅತಿ ಅವಶ್ಯಕ. ಅಲ್ಪಾವಧಿಯ ಪ್ರವಾಸಕ್ಕೆ ಹರಕು ಮುರಕು ಇಂಗ್ಲೀಷ್ ಕೂಡ ನಡೆಯುತ್ತದೆ. ಉತ್ತರಭಾರತದಲ್ಲೆಲ್ಲೂ ಹರಕು ಮುರಕು ಹಿಂದಿ ಅಥವಾ ಹಿಂದುಸ್ತಾನಿಯಿಂದ ಕೆಲಸ ಸಾಧಿಸಿಕೊಳ್ಳಬಹುದು.

ಮುಂಬೈನಲ್ಲಿ ಇರಬೇಕಾದರೆ ಮರಾಠಿ ಕಲಿಯಲೇಬೇಕಿಲ್ಲ. ಬೆಂಗಳೂರಿನಲ್ಲಿ ಹೇಗೆ ಕನ್ನಡಿಗರೋ ಹಾಗೆಯೇ ಮುಂಬೈನಲ್ಲಿ ಮರಾಠಿಗರು ಅಲ್ಪಸಂಖ್ಯಾತರು. ಅನೇಕ ದಶಕಗಳಿಂದ ದೇಶದ ವ್ಯಾವಹಾರಿಕ ರಾಜಧಾನಿಯಾಗಿದ್ದರಿಂದ ಶಿವ ಸೇನೆ ಅದೆಷ್ಟು ತಿಪ್ಪರಲಾಗ ಹಾಕಿದರೂ ಮರಾಠಿಗರ ಬೇಳೆ ಅಲ್ಲಿ ಅಷ್ಟು ಬೇಯದು. ಮುಂಬೈಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ನಿಜವಾಗಿಯೂ ಹೇಳಬೇಕೆಂದರೆ ಪುಣೆ ನಗರ ಮರಾಠಿ ಸಂಸ್ಕೃತಿಯ ನಿಜವಾದ ನೆಲೆ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ಮರಾಠಿ ನಾಟಕ, ಸಾಹಿತ್ಯ, ಸಂಗೀತ, ಲಾವಣಿ, ಜಾನಪದದ ರುಚಿ ಬೇಕಾದರೆ ಹೋಗಬೇಕಾದ್ದು ಪುಣೆಗೆ ಮುಂಬೈಗಲ್ಲ.

ಬೆಂಗಳೂರಿನ ಸಮಸ್ಯೆ ಹೆಚ್ಚೂಕಡಿಮೆ ಮುಂಬೈನಂತೆಯೇ. ರಾಜಕಾರಣ ಮತ್ತು ಆಡಳಿತ ಹೊರತಾಗಿ ಬೇರೆಲ್ಲ ಮುಖ್ಯ ವಹಿವಾಟುಗಳೂ ವ್ಯವಹಾರಗಳೂ ಪರಭಾಷೀಯರ ಕೈಯಲ್ಲಿದೆ. ನಾವು ಹೆಸರಿಗೆ ಮಾತ್ರ ಆಳುವ ಜನರು. ಖಜಾನೆಯ ಬೀಗದಕೈ ಎಲ್ಲಾ ಬೇರೆಯವರ ಬಳಿಯಲ್ಲಿ. ಬೆಂಗಳೂರ ಹೊರತಾಗಿ ಮತ್ಯಾವ ದೊಡ್ಡ ನಗರವೂ ಕನ್ನಡ ಸಂಸ್ಕೃತಿಯ ಆಗರ ಎಂದು ಹೇಳಿಕೊಳ್ಳುವಷ್ಟು ಪ್ರಗತಿಸಿಲ್ಲ. ಇನ್ನು ನಮ್ಮ ಕನ್ನಡದ ರಾಜಕಾರಣಿಗಳು ತಮ್ಮ ಜವಾಬ್ದಾರಿಯನ್ನು ಅದೆಷ್ಟು ಸುಂದರವಾಗಿ ಗೌರವಯುತವಾಗಿ ನಿಭಾಯಿಸುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚಿಗೆ ಹೇಳುವುದು ಅನುಚಿತ.

ಪೂರ್ವದ ನಗರಿ ಕಲ್ಕತ್ತದಲ್ಲಿ ಬಂಗಾಲಿಗಳು ಬಹುಸಂಖ್ಯಾತರು ಆದ್ದರಿಂದ ಭಾಷಾ ಗೊಂದಲದ ಗೋಜಿಲ್ಲ. ಒಂದು ಕಾಲದಲ್ಲಿ ದೇಶಭಕ್ತಿ, ಸಾಹಿತ್ಯ, ಕಲೆ, ಬುಧ್ಧಿಮತ್ತೆ ಎಲ್ಲದರಲ್ಲೂ ಬಂಗಾಳದ ಜನ ಬಹಳ ಮುಂದೆ ಎಂಬ ಪ್ರತೀತಿ ಇತ್ತು. ಆದರೆ ಈಗಿನ ಕಥೆಯೇ ಬೇರೆ. ಶಶಿ ತರೂರ್ ತನ್ನ ’great Indian tale” ನಲ್ಲಿ ಭಾರತದ ಬಗ್ಗೆ ಬರೆದ “- a higly developed civilization in an advanced state of decay” ಅನ್ನುವ ಉಕ್ತಿ ಇಂದಿನ ಬಂಗಾಳಕ್ಕೂ ಅನ್ವಯಿಸುತ್ತೆ. ಬಂಗಾಳದ ರಾಜಧಾನಿ ಕಲ್ಕತ್ತ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಹೋಲಿಸಿದರೆ, ಅನೇಕ ಸಾಮ್ಯತೆಗಳು ಕಂಡು ಬರುತ್ತೆ. ಅಲ್ಲಿಯೂ ಅನ್ಯ ಭಾಷೀಯರು ಬೇರೆ ಬೇರೆ ಸ್ವಯಂಕಲ್ಪಿತ ಪ್ರದೇಶಗಳಲ್ಲಿ ನಿಶ್ಚಿಂತರಾಗಿರುತ್ತಾರೆ. ಅಲ್ಲಿಯ ಸರ್ಕಾರದಲ್ಲಿಯೂ ಸ್ಥಳಿಯರೇ ಬಹುಸಂಖ್ಯಾತರು. ಸರ್ಕಾರದ ಕೆಲಸದಲ್ಲಿ ಇಲ್ಲಿಯಂತೆಯೇ ನಿಷ್ಕ್ರಿಯತೆ, ಭ್ರಷ್ಟಾಚಾರದ ಪಿಡುಗಿದೆ. ಸೋಮಾರಿಗಳು, ಪ್ರತಿಭಟನಾಪ್ರಸಕ್ತರು. ನಿರಾಸಕ್ತ ಬುಧ್ಧಿಜೀವಿಗಳು ಸುತ್ತ ಮುತ್ತಲಿನದೆಲ್ಲವನ್ನು ಉಪೇಕ್ಷಿಸುತ್ತ ದೂರದೆಲ್ಲಿಯದೋ ಸಮಸ್ಯೆಗಳ ಬಗ್ಗೆ ಗಾಢ ಚಿಂತನೆಮಾಡುತ್ತ ತಮ್ಮದೇ ಕನಸಿನ ಪ್ರಪಂಚದಲ್ಲಿ ವಿಹರಿಸುತ್ತಲಿರುವುದು, ಸರಿಯಾಗಿ ಓದಿಲ್ಲದ ಕೆಲಸ ಕಾರ್ಯವಿಲ್ಲದ ಯುವಕರು ಪುಂಡು ಪೋಕರಿ ಮಾಡುತ್ತ ಸ್ಥಳೀಯ ರಾಜಕಾರಣಿಗಳ ಪಗಡೆಕಾಯಿಗಳಾಗಿ ಯಾವ ರೀತಿಯ ಸಕಾರಾತ್ಮಕ ಕ್ರಿಯೆಗಳಲ್ಲೂ ಭಾಗವಹಿಸದಿರುವುದು. ನಗರದೆಲ್ಲೆಡೆ ಕೊಳಕು, ಮೂಲಭೂತ ಸೌಲಭ್ಯಗಳ ಕೊರತೆ, ಸ್ವಛ್ಛತೆಯ ಅಭಾವ, ಅನಿಯಂತ್ರಿತ ಸಾರಿಗೆ ವ್ಯವಸ್ಥೆ, ಬೆಳೆಯುತ್ತಿರುವ ಅಪರಾಧ , ದಿನನಿತ್ಯದ ಪ್ರತಿಭಟನೆ, ಹೊಡೆದಾಟ, ಕಪ್ಪು ಬಾವುಟ ಪ್ರದರ್ಶನ ಎಲ್ಲವೂ ಒಂದೇ ಬಗೆ. ಹೀಗೇ ಒಂದೇ ಎರಡೇ ಸಾಮ್ಯತೆಗಳು?

ಆದರೆ ಭಿನ್ನತೆಯಿರುವುದು ಒಂದು ಮುಖ್ಯ ವಿಷಯದಲ್ಲಿ. ಅಲ್ಲಿ ನಿಮಗಿಷ್ಟವಿಲ್ಲದಿದ್ದರೆ ಬಂಗಾಲಿ ಭಾಷೆ ಕಲಿಯಬೇಕಿಲ್ಲ. ನಿಮ್ಮನ್ನು ಯಾರೂ ಭಾಷೆ ಕಲಿಯಲು ಹೆದರಿಸಿ ಬೆದರಿಸಿ ಕಡ್ಡಾಯ ಮಾಡುವುದಿಲ್ಲ. ಪರಭಾಷೀಯರ ಬಗ್ಗೆ ಇಲ್ಲಿ ಕಾಣುವಷ್ಟು ಉದ್ರೇಕ, ಕೋಪ ತಾಪಗಳಿಲ್ಲ. ಬಂಗಾಲಿ ಭಾಷೆಯ ಬಗೆಗಾಗಲಿ, ಬೇರೆಯವರು ತಮ್ಮ ಸಂಸ್ಕೃತಿಗೆ ಬೆಲೆನೀಡುತ್ತಿಲ್ಲ ಎಂಬ ಅಳುಕಾಗಲಿ ಅಲ್ಲಿ ಕಾಣುವುದಿಲ್ಲ. ಆದರೂ ಬಹಳಷ್ಟು ಹೊರಗಿನ ಜನ ಬೇಗ ಬಂಗಾಲಿ ಕಲಿತು ಮಾತನಾಡುವಷ್ಟಂತೂ ಪ್ರಬುಧ್ಧರಾಗುತ್ತಾರೆ.

ಬಂಗಾಳದಲ್ಲಿ ಎಲ್ಲವೂ ಒಳ್ಳೆಯದು ಅಂತ ಹೇಳುತ್ತಿಲ್ಲ. ಆದರೆ ಒಳ್ಳೆಯದಿರುವುದನ್ನು ಮಾತ್ರ ನಾವು ಕಲಿಯಬಹುದಲ್ಲ!
ಅದೇಕೆ ಅಲ್ಲಿ ಹಾಗೆ. ನಮ್ಮಲ್ಲಿ ಏಕೆ ಹೀಗೆ? ಯೋಚಿಸಬೇಕಾದ ವಿಚಾರ.

ಅಲ್ಲಿಯ ಜನರಿಗೆ ತಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿಗಳ ಹಿರಿಮೆಯ ಬಗ್ಗೆ ಎಳ್ಳಷ್ಟೂ ಸಂಶಯವಿಲ್ಲ. ಸರ್ವೋತ್ಕೃಷ್ಟ ಸಂಸ್ಕೃತಿ ತಮ್ಮದು ಅನ್ನೋ ಅಹಂಭಾವ ಇದೆ ಅಂದರೂ ತಪ್ಪಾಗಲಾರದು. ಪ್ರತಿಯೊಂದು ಮನೆಯಲ್ಲೂ ಮಾತನಾಡುವ ಭಾಷೆ ಬಂಗಾಲಿ. ಮಕ್ಕಳೆಲ್ಲರಿಗೂ ಬಂಗಾಲಿ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ. ಕುಟುಂಬದ ಬಹುಪಾಲು ಸದಸ್ಯರು ಗಂಡಾಗಲಿ ಹೆಣ್ಣಾಗಲಿ ರಬೀಂದ್ರ ಸಂಗೀತ ಕಲಿತಿರುತ್ತಾರೆ. ಸಂಗೀತವಿಲ್ಲದಿದ್ದರೆ, ಚಿತ್ರಕಲೆ, ಶಿಲ್ಪ, ಸಾಹಿತ್ಯಾಭಿರುಚಿ ಹೀಗೆ ಏನಾದರೂ ಇದ್ದದ್ದೆ. ಹವ್ಯಾಸಿ ನಾಟಕರಂಗದಲ್ಲಿ ದಿನ ನಿತ್ಯ ನೂತನ ಪ್ರಯೋಗಗಳಾಗುತ್ತಿರುತ್ತವೆ. ಬಂಗಾಲಿ ಸಾಹಿತ್ಯದಲ್ಲಿ ಅನೇಕ ಕೃತಿಗಳು ಬಿಡುಗಡೆಯಾದರೂ ಓದುವರ ಸಂಖ್ಯೆ ಕಮ್ಮಿಯೇನೂ ಆಗುವುದಿಲ್ಲ. ಬಹುತೇಕ ಹಬ್ಬಗಳೆಲ್ಲವನ್ನು ಸಾಮೂಹಿಕವಾಗಿ ಆಚರಿಸುತ್ತ, ಆಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಬೀಂದ್ರ ಸಂಗೀತ, ನೃತ್ಯ, ನಾಟಕಗಳಲ್ಲಿ ಮಕ್ಕಳಾದಿಯಾಗಿ ಪಾಲ್ಗೊಂಡು ತಮ್ಮ ನಾಡಿನ ಮತ್ತು ಭಾಷೆಯ ಹೆಗ್ಗಳಿಕೆ ತೋರಬಯಸುತ್ತಾರೆ. ಅವರ ಸಾಹಿತ್ಯ, ಸಂಗೀತ, ಕಲೆ ನಿಜಕ್ಕೂ ಹಿರಿಮೆಯುಳ್ಳದ್ದಾಗಿದ್ದು, ಯಾರಿಗೂ ತಮ್ಮ ಬಗ್ಗೆ ಕೀಳರಿಮೆ ಅನ್ನಿಸುವ ಸಮಸ್ಯೆಯೇ ಇಲ್ಲ. ಈ ಸಾಮೂಹಿಕ ಆಚರಣೆಯ ಕಾರಣ ಅವರಲ್ಲಿ ಪರಸ್ಪರ ಬಾಂಧವ್ಯ ಒಗ್ಗಟ್ಟು ಹೆಚ್ಚಿರುವುದು ಖಂಡಿತ. ಪರಭಾಷೀಯರು ಇದರಲ್ಲಿ ಪಾಲ್ಗೊಂಡರೇ ಇಲ್ಲವೇ ಎಂಬುದರ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಪಾಲ್ಗೊಂಡರೆ ಮುಕ್ತ ಕಂಠದಿಂದ ಪ್ರಶಂಶಿಸುತ್ತಾರೆ. ಪಾಲ್ಗೊಳ್ಳದಿದ್ದರೆ ತೆಗಳುವುದಂತೂ ಇಲ್ಲ.

ಒಳ್ಳೆಯ ಕಥಾವಸ್ತು, ಉತ್ತಮ ಅಭಿನಯಗಳಿಂದ ಸಮೃಧ್ಧ ವಾದ ಅಲ್ಲಿಯ ಹಳೆಯ ಚಲನಚಿತ್ರಗಳ ಮತ್ತು ನಾಟಕಗಳ ಗುಣಮಟ್ಟ ಅದೆಷ್ಟು ಹೆಚ್ಚಿತ್ತೆಂದರೆ ಅವನ್ನು ನೋಡಿ ಅರ್ಥ ಮಾಡಿಕೊಳ್ಳಲೆಂದೇ ಅನೇಕರು ಬಂಗಾಲಿ ಕಲಿತದ್ದುಂಟು. ಸತ್ಯಜಿತ್ ರೇ, ರಿತ್ವಿಕ್ ಘಟಕ್, ತಪನ್ ಸಿನ್ಹಾ, ಮೃಣಾಳ್ ಸೇನ್, ಋತುಪರ್ಣ ಘೋಷ್ ಮುಂತಾದವರು ಅತ್ಯುತ್ತಮ ಚಲನ ಚಿತ್ರಗಳನ್ನು ನೀಡಿದ್ದಾರೆ.
( ಈತ್ತೀಚಿನ ವಿಷಯವೇನೋ ಸ್ವಲ್ಪ ಬೇರೆಯೇ ಆಗಿದೆ. ಅಲ್ಲಿಯೂ ಪ್ರೇಕ್ಷಕರ ಉತ್ಪ್ರೇಕ್ಷೆಯಿಂದಾಗಿ ಕೀಳು ಸಂಸ್ಕೃತಿಯ ಮೇಲುಗೈ ಆಗುತ್ತಿದೆ.)

ಮೇಲಿನ ಉದಾಹರಣೆಯಿಂದ ವಿದಿತವಾಗುವುದದೇನೆಂದರೆ, ಪರಭಾಷೀಯರು ಬಂಗಾಲಿಯನ್ನು ಕಲಿಯುವುದು ಯಾವ ಒತ್ತಾಯ ಹಾಗೂ ಕಡ್ಡಾಯದಿಂದಲೂ ಅಲ್ಲ. ಕೇವಲ ಆ ಭಾಷೆಯ ಮತ್ತು ಸಂಸ್ಕೃತಿಯ ಮೇಲಣ ಗೌರವದಿಂದ ಎನ್ನುವುದು.

ಹಾಗಿದ್ದರೆ ನಮ್ಮಲ್ಲೇನು ಕೊರತೆ? ನಮ್ಮ ಸಾಹಿತ್ಯ, ಸಂಸ್ಕೃತಿ, ಕಲೆ ಅವರದಷ್ಟು ಸಮೃಧ್ಧ ಹಾಗೂ ಶ್ರೀಮಂತವಲ್ಲವೇ?
ನಮ್ಮ ಸಾಹಿತ್ಯ, ಸಂಸ್ಕೃತಿಗಳಿಗೆ ಯಾವ ಕಮ್ಮಿಯೂ ಇಲ್ಲ. ಭಾರತದಲ್ಲೇ ಅತಿಹೆಚ್ಚು ಜ್ನಾನಪೀಠ ಪ್ರಶಸ್ತಿ ಗಳಿಸಿರುವ ಏಕೈಕ ಭಾಷಾ ಸಾಹಿತ್ಯ ಕನ್ನಡದ್ದು. ಕರ್ನಾಟಕ ಸಂಗೀತದ ಬುನಾದಿ ಹಾಕಿದ್ದು ಕನ್ನಡದ ಪುರಂದರದಾಸರು.

ಅಭಾವವಿರುವುದು ನಮ್ಮ ಕನ್ನಡಿಗರಲ್ಲಿ ಹಿರಿಮೆಯನ್ನು ಎತ್ತಿ ತೋರಿಸುವ ಪ್ರಜ್ನೆ, ಕೌಶಲ್ಯ ಮತ್ತು ಕ್ಷಮತೆಯದು. ನಮ್ಮ ದೈನಂದಿನ ಜೀವನದಲ್ಲಿ ನಮ್ಮದೇ ಸಂಸ್ಕೃತಿಯ ವಿಶಿಷ್ಟವಾದದ್ದೇನಾದರೂ ಬೇರೆಯವರು ಬೆರಗಾಗುವಂತೆ ಎತ್ತಿ ತೋರಿಸುತ್ತಿದ್ದೇವೆಯೇ ಎಂದು ಯೋಚಿಸಬೇಕು.

ನಮ್ಮಲ್ಲಿ ಹಬ್ಬಗಳನ್ನು ಆದಷ್ಟು ಮನೆಪೂರ್ತಿ ಮಾಡಿಕೊಂಡು ಕುಟುಂಬದವರಿಗೋ ಆಪ್ತ ಮಿತ್ರರಿಗೋ ಸೀಮಿತವಾಗಿಟ್ಟುಕೊಳ್ಳುವದು ಹೆಚ್ಚು. ಸಾರ್ವಜನಿಕ ಹಾಗೂ ಸಾಮೂಹಿಕ ಸಮಾರಂಭಗಳನ್ನು , ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯ ಪುಢಾರಿಗಳು ಉಪಯೋಗಿಸಿಕೊಂಡು ಅಲ್ಲಿ ಸಂಸ್ಕೃತಿಯ ಪ್ರದರ್ಶನಕ್ಕಿಂತ ರಾಜಕೀಯವೇ ಹೆಚ್ಚು. ಅಮಾಯಕ ನಿರುದ್ಯೋಗಿ ಯುವಕರನ್ನು ಉಪಯೋಗಿಸಿಕೊಳ್ಳುವ ಇಂಥ ಸಮಾರಂಭಗಳಲ್ಲಿ ಭಾಗವಹಿಸಲು ಸುಸಂಸ್ಕೃತ ಮರ್ಯಾದಸ್ಥ ಜನ ಮುಂದೆ ಬರುವುದೇ ಕಡಿಮೆ. ಇದರಿಂದಾಗಿ ಇಲ್ಲಿ ಜಾಸ್ತಿ ಪ್ರದರ್ಶನವಾಗುವದು ಕೀಳು ಮಟ್ಟದ ಸಿನಿಮಾ ಸಂಸ್ಕೃತಿ ಮಾತ್ರ.
ನಮ್ಮ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವಲ್ಲಿ ಸೃಜನ ಶೀಲತೆ ಹಾಗೂ ನಿರ್ವಹಣೆಯ ಗುಣಮೌಲ್ಯಗಳ ಕೊರತೆಯಿಂದ ಆ ಕಲೆ ಹಾಗೂ ಕಲಾವಿದರ ಅಭಿವೃಧ್ಧಿ ಸಮರ್ಪಕವಾಗಿಲ್ಲ. ಕಾರ್ಯಕ್ರಮಗಳನ್ನು ಸಾದರಪಡಿಸುವ ಕಲೆ ಇನ್ನೂ ಕರಗತವಾದಂತಿಲ್ಲ.
ಬೆಂಗಳೂರಿನ ಚಿತ್ರ ಕಲಾ ಪ್ರಪಂಚದಲ್ಲೂ ಪರಭಾಷೀಯರದೇ ಮೇಲುಗೈ. ಯಾವ ಗ್ಯಾಲರಿಗೆ ಭೇಟಿಯಿತ್ತರೂ, ಹೊರನಾಡಿನ ಕಲಾವಿದರೇ ಜಾಸ್ತಿ. ನಮ್ಮ ಕನ್ನಡದ ಕಲಾವಿದರೇಕೆ ಹೆಚ್ಚು ಸಂಖ್ಯೆಯಲ್ಲಿಲ್ಲ?
ಕರ್ನಾಟಕ ಶಾಸ್ತ್ರೀಯ ಸಂಗೀತದ ತವರು ಕರ್ನಾಟಕ. ಆದರೆ ಕನ್ನಡಿಗರಾದ ವಿದುಷಿ ವಿದ್ವಾಂಸರು ಈಗ ಬೆರಳೆಣಿಕೆಯಷ್ಟು.. ತಮಿಳುನಾಡಿನ ಕಲಾವಿದರು ನಮ್ಮ ಪುರಂದರ ದಾಸರ ಕೃತಿಗಳನ್ನು ತಪ್ಪು ತಪ್ಪಾಗಿ ಹಾಡುತ್ತ ಅವರ ಕೊಲೆ ಮಾಡುತ್ತಿದ್ದರೆ ಹೊಟ್ಟೆ ಉರಿಯೋಲ್ಲವೇ? ಅವರುಗಳ ಕಚೇರಿಗಳಿಗೆ ಹಣ ಕೊಟ್ಟು ಕಿಕ್ಕಿರಿದ ಜನಸಂದಣಿ. ನಮ್ಮವರೇ ಹಾಡಿದರೆ ಬಿಟ್ಟಿಯಾದರೂ ಕೇಳುವರಿರೋಲ್ಲ. ಇದಕ್ಕೇನು ಕಾರಣ ಅಂತ ತಿಳಿದವರು ಹೇಳಬೇಕಷ್ಟೆ.
ಅತಿರೇಕದ ಕ್ರೌರ್ಯ, ಅಶ್ಲೀಲತೆ, ಕೀಳುಮಟ್ಟದ ಹಾಸ್ಯ, ಹುರುಳಿಲ್ಲದ ಕಥಾವಸ್ತು, ಅಸಹ್ಯದ ಹಾಡುಗಳು ಎಂಬೆಲ್ಲ ಕಾರಣಗಳಿಂದಾಗಿ ನಮ್ಮಲ್ಲಿ ಎಷ್ಟೋ ಜನ ಕನ್ನಡದ ಚಲನಚಿತ್ರಗಳನ್ನು ನೋಡಹೋಗುವುದಿಲ್ಲ. ಇದೊಂದು ಬೀಜ ವೃಕ್ಷ ಸಮಸ್ಯೆ. ಎಲ್ಲಿಯವರೆಗೂ ಸುಸಂಸ್ಕೃತ ಪ್ರೇಕ್ಷಕವರ್ಗ ಉತ್ತಮ ದರ್ಜೆಯ ಚಿತ್ರಗಳಿಗಾಗಿ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಒಳ್ಳೆಯ ಚಲನಚಿತ್ರಗಳೂ ತಯಾರಾಗುವುದಿಲ್ಲ. ಈ ಉದ್ಯಮದ ಆರೋಗ್ಯಕರ ಬೆಳವಣಿಗೆಗೆ ಬಹಳಷ್ಟು ಶ್ರಮಿಸಬೇಕಾಗಿದೆ.
ಅನೇಕ ಕನ್ನಡಿಗರ ಮನೆಗಳಲ್ಲಿ ಮಕ್ಕಳು ಕನ್ನಡ ಕಲಿಯದಿದ್ದರೂ ಸರಿಯೇ ಇಂಗ್ಲೀಷ್ ಮಾತ್ರ ಕಡ್ಡಾಯವಾಗಿ ಕಲಿಸುವುದುಂಟು. ಮಕ್ಕಳು ಬಿಡಿ ದೊಡ್ದವರೇ ಕನ್ನಡದ ಪುಸ್ತಕಗಳನ್ನು ಓದುವುದಿಲ್ಲ. ನೀವು ಅದೇನು ಓದುತ್ತೀರಿ ಎಂದರೆ ಇಂಗ್ಲೀಷ್ ಪುಸ್ತಕಗಳ ದೊಡ್ಡ ಪಟ್ಟಿಯೇ ಸಿಗುತ್ತೆ. ಇವೆಲ್ಲದರ ಜೊತೆಯಲ್ಲಿಯೇ ನಮ್ಮ ಮನೆಗಳಲ್ಲಿ ನಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿಸಿ, ಒಳ್ಳೆಯ ಸಾಹಿತ್ಯ ಓದಲು ಪ್ರೇರೇಪಿಸಿ ಕನ್ನಡದ ಬಗ್ಗೆ ಅಭಿಮಾನ ಬೆಳಸುವುದು ಬಹುಮುಖ್ಯ. ಈಚೆಗೆ ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳ ಗುಣಮಟ್ಟ ಮೊದಲಿಗಿಂತ ಅನೇಕ ಪಟ್ಟು ಹೆಚ್ಚಿವೆ. ಓದುಗರ ಅಭಾವವೊಂದೇ ಸಮಸ್ಯೆ.
ಕನ್ನಡಿಗರು ಹಣಕೊಟ್ಟು ಪ್ರೋತ್ಸಾಹಿಸಿ ಸದಭಿರುಚಿಯ ರಂಗಭೂಮಿಯ ಬೆಳವಣಿಗೆಗೆ ಮತ್ತು ಹೊಸ ನಾಟಕಗಳ ಪ್ರಯೋಗಗಳಿಗೆ ಕಾರಣವಾಗಬೇಕು. ಹವ್ಯಾಸಿ ರಂಗಭೂಮಿಗೆ ಯುವಕರನ್ನು ಆಕರ್ಷಿಸುವಲ್ಲಿ ಮತ್ತಿಷ್ಟು ಪ್ರಯತ್ನವಾಗಬೇಕಿದೆ.
ನಮ್ಮ ಟಿ. ವಿ ಮತ್ತು ರೇಡಿಯೊ ಮಾಧ್ಯಮಗಳಲ್ಲಿ ಉತ್ತಮ ಅಭಿರುಚಿಯ ಕಾರ್ಯಕ್ರಮಗಳನ್ನು ರೂಪಿಸಿ ಉತ್ತಮ ರೀತಿಯಲ್ಲಿ ಪ್ರಸ್ತುತ ಪಡಿಸಬೇಕು. ಸಾಹಿತ್ಯ ಶುಧ್ಧತೆ ಹಾಗೂ ಭಾಷಾ ಶುಧ್ಧಿಯ ಕಡೆಗೆ ಹೆಚ್ಚು ಗಮನ ಕೊಡಬೇಕು. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಅನ್ನುವುದನ್ನು ಮರೆಯಬಾರದು. ಈ ದಿಕ್ಕಿನಲ್ಲಿ ನಮ್ಮ ಕಲಾವಿದರ ಹಲವು ಪ್ರಯತ್ನಗಳು ಶ್ಲಾಘನೀಯ. ಆದರೆ ಬಹುಪಾಲು ಕಾರ್ಯಕ್ರಮಗಳು ಕಳಪೆ ಮಟ್ಟದ್ದಾಗಿವೆ.

ಹೀಗೆ ನಮ್ಮ ಸಂಸ್ಕೃತಿಯನ್ನು ನಾವೇ ಸರಿಯಾಗಿ ಪ್ರತಿಬಿಂಬಿಸದಿರುವಾಗ ಪರಭಾಷೀಯರು ಅದನ್ನು ಆದರಿಸಿ ಗೌರವಿಸಿಲ್ಲ ಎಂದು ಅತ್ತರೇನು ಫಲ?

ಎಲ್ಲಕ್ಕಿಂತ ಹೆಚ್ಚಾಗಿ, ಕನ್ನಡಿಗರು ತಮ್ಮ ಹಬ್ಬ, ಹರಿದಿನ ಸಮಾರಂಭಗಳಲ್ಲಿ ಪರಭಾಷೀಯರನ್ನು ಆಮಂತ್ರಿಸಿ, ನಮ್ಮ ಭಾಷೆ, ಸಾಹಿತ್ಯ, ನಮ್ಮ ಜಾನಪದ, ನಮ್ಮ ಅಡಿಗೆಯ ಬಗ್ಗೆ ಪರಿಚಯಮಾಡಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಪರಸ್ಪರ ಸೌಹಾರ್ದತೆ ಹೆಚ್ಚಿ ನಮ್ಮ ಭಾಷೆಯನ್ನು ಅವರು ತಾವಾಗಿಯೇ ಕಲಿಯಬೇಕೆಂದು ಅನ್ನಿಸಬಹುದು. ಈಗ ಬೆಂಗಳೂರಿನಲ್ಲಿರುವ ಅನೇಕ ಭಾಷೀಯ ಹಾಗೂ ಸಾಂಸ್ಕೃತಿಕ ಪ್ರಪಂಚಗಳು overlap ಆಗಿ “cross cultural influences” ಹೆಚ್ಚುವುದಲ್ಲವೇ? ಹಾಗೆಯೇ ಅವರೇನಾದರೂ ಸ್ಪಂದಿಸಿ ತಮ್ಮ ಸಂಸ್ಕೃತಿಯನ್ನು ನಮಗೆ ಪರಿಚಯ ಮಾಡಿಸಿ ಕೊಟ್ಟರೆ ಜೀವನ ಇನ್ನೂ ವೈವಿಧ್ಯಮಯವಾಗುವ ಸಾಧ್ಯತೆ ಇದೆ!

ಪ್ರತಿಭಟನೆ, ಕಡ್ದಾಯ ಇತ್ಯಾದಿ ಯೋಜನೆಗಳಿಗಿಂತ, ನಮ್ಮ ಸಮಾಜ ಮತ್ತು ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸುವ ಸಕಾರಾತ್ಮಕವಾದ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಕನ್ನಡದ ಉಧ್ಧಾರ ಖಂಡಿತ ಅಂತ ನನ್ನ ಅನಿಸಿಕೆ. ನೀವೇನಂತೀರಾ!

******************************************************
An abridged version of this article had been published on 24-10-2007 by thatskannada.com
http://thatskannada.oneindia.in/literature/my_karnataka/2007/2410-kannada-multi-lingual-setup.html

1 comment:

nihal chaturvedi r said...

elladaru iru,enthadaru iru,endendigu ni kannadavagiru....
kannadave sathya,kannadave nithya..
kannadakkagi daniettu, kannadakkagi ne horadu...
kannadave hasiru,kannadave namma usiru...
...jay karnataka mathe... jay kannada bhuvaneshwari.....