Thursday 15 July 2010

ಕೆಂಡಸಂಪಿಗೆಯಲ್ಲಿ ನನ್ನ ಬರಹ " ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ"


ಸುಮಾರು ೨೦ ತಿಂಗಳು ಯಾಕೋ ಏನೋ, ಏನನ್ನೂ ಬರೆದಿರಲಿಲ್ಲ. ಇದ್ದಕ್ಕಿದ್ದ ಹಾಗೆ ಮತ್ತೆ ಬರೆಯುವ ತೆವಲು! ಇದರ ಪರಿಣಾಮ ನಿನ್ನೆ ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಕೆಳಕಂಡ ಬರೆಹ ........

ದಕ್ಷಿಣ ಆಫ್ರಿಕಾದಲ್ಲಿ ಮೂವತ್ತು ದಿನಗಳಿಂದ ನಡೆಯುತ್ತಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಕಳೆದ ಭಾನುವಾರ ಮುಕ್ತಾಯವಾಯಿತು. ಮರಿ ಮೊಮ್ಮಗಳ ಅಕಾಲ ಮರಣದಿಂದ ಪಂದ್ಯಾವಳಿಯ ಆರಂಭಿಕ ಸಮಾರೋಹಕ್ಕೆ ಬರಲಾಗದಿದ್ದ ನೆಲ್ಸನ್ ಮಂಡೇಲಾ ತಮ್ಮ ಪತ್ನಿಯೊಡನೆ ಫೈನಲ್ ವೀಕ್ಷಿಸಲು ಬಂದದ್ದು ಎಲ್ಲರಿಗೂ, ಅದಕ್ಕೂ ಹೆಚ್ಚಾಗಿ ಸ್ಥಳೀಯರಿಗೆ ತುಂಬಾ ಸಂತೋಷದ ಸಂಗತಿಯಾಗಿತ್ತು.

ಕಾಕತಾಳೀಯವೇನೊ ಎಂಬಂತೆ ಸುಮಾರು ಹದಿನೈದು ದಿನಗಳ ಹಿಂದೆಯಷ್ಟೆ ಓರ್ವ ಸ್ನೇಹಿತನ ಶಿಫಾರಸಿನ ಮೇರೆಗೆ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶಿತ ಇಂಗ್ಲೀಷ್ ಚಲನ ಚಿತ್ರ `ಇನ್ವಿಕ್ಟಸ್' (INVICTUS) ನೋಡಿದ್ದೆ. ಈ ಚಲನಚಿತ್ರದ ಚಿತ್ರಕಥೆ ನೆಲ್ಸನ್ ಮಂಡೇಲಾರವರು ಆಜೀವ ಕಾರಾವಾಸದಿಂದ ಬಿಡುಗಡೆಯಾಗಿ, ಅವರ್ಣೀಯ ದಕ್ಷಿಣ ಆಫ್ರಿಕಾ ಸರ್ಕಾರದ ಪ್ರಪ್ರಥಮ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ಹಲವೇ ತಿಂಗಳ ನಂತರ 1995 ರಲ್ಲಿ ಜೋಹಾನಸ್ ಬರ್ಗ್ ನಲ್ಲಿ ನಡೆದ ರಗ್ಬಿ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ನಡೆದ ಹಲವು ಘಟನೆಗಳ ಮೇಲೆ ಆಧಾರಿತವಾಗಿದೆ.

ಸುಮಾರು ಮೂವತ್ತು ವರ್ಷಗಳ ಕಾಲ ಬಿಳಿಯರ ದಬ್ಬಾಳಿಕೆಯಲ್ಲಿ ಕಾರಾವಾಸ ಅನುಭವಿಸಿದ ನಂತರವೂ, ಧೀಮಂತ ವ್ಯಕ್ತಿತ್ವದ ಮಂಡೇಲಾ ಸ್ವತ: ಅನುಭವಿಸಿದ ಕಹಿಯನ್ನೆಲ್ಲ ಬದಿಗೊತ್ತಿ, ತಮ್ಮ ದೇಶ ಜಗತ್ತಿನ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗಬೇಕಾದರೆ ಬಿಳಿಯರೂ ಮತ್ತು ವರ್ಣೀಯರು ತಮ್ಮ ಹಗೆಯನ್ನು ಮರೆತು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರೆ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡರು. ಶತಮಾನಗಳ ಕಾಲ ಬಿಳಿಯರ...

Thursday 2 October 2008

ಅಪರಾಧಿ ಶ್ವಾನಪಾಲಕರ ಪತ್ತೆಗೆ DNA ತಂತ್ರಜ್ನಾನ !

(ಮೂಲ ಆಧಾರ: ನ್ಯೂಯಾರ್ಕ್ ಟೈಮ್ಸ್ - ಫ್ರೀಕನಾಮಿಕ್ಸ್ ಬ್ಲಾಗ್)












ಅಪರಾಧಿಗಳನ್ನು ಹಿಡಿಯಲು ಪತ್ತೇದಾರಿ ಶ್ವಾನಗಳನ್ನು ಉಪಯೋಗಿಸೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಪರಾಧಿ ಶ್ವಾನಪಾಲಕರನ್ನು ಹಿಡಿಯಲು ಬೇರೊಂದು ತಂತ್ರದ ಉಪಯೋಗ ಮಾಡುವುದು ಈ ಲೇಖನದ ವಿಷಯ. ಓದು ಮುಂದುವರೆಸಿ.





ಸುಮಾರು ನೂರೈವತ್ತು ವರ್ಷಗಳ ಹಿಂದಿನ ನ್ಯೂಯಾರ್ಕ್ ನಗರದಲ್ಲಿ ಪ್ರತಿ ದಿನ ಜನ ಮತ್ತು ಸರಕು ಸಾಗಾಣಿಕೆಗಾಗಿ 200,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕುದುರೆಗಳು ಉಪಯೋಗದಲ್ಲಿದ್ದವಂತೆ. ಕುದುರೆ ಅಂದ ಮೇಲೆ ಲದ್ದಿ ಹಾಕೋಲ್ವೇ? ಒಂದು ದಿನದ ಕುದುರೆ ಲದ್ದಿಯ ತೂಕ 2500ಟನ್‍ಗಳಿದ್ದು ಅದನ್ನು ಎತ್ತುವವರು ಯಾರೂ ಇರಲಿಲ್ಲವಂತೆ. ಇವೆಲ್ಲದರ ಜೊತೆಗೆ ಲಕ್ಷಗಟ್ಟಲೆ ಲೀಟರ್ ಕುದುರೆ ಮೂತ್ರ; ಅಲ್ಲಲ್ಲಿ ಖಾಯಿಲೆಯಿಂದ ನರಳಿ ಸುಸ್ತಾಗಿ ಬಿದ್ದು ಯಜಮಾನನ ಕೈಲಿ ಗುಂಡು ಹೊಡಿಸಿಕೊಂಡು ಸತ್ತ ಕುದುರೆಗಳ ಕೊಳೆಯುತ್ತಿರುವ ಕಳೇಬರಗಳು; ಓಡುತ್ತಿರುವ ಕುದುರೆಗಳ ಗೊರಸಿನ ಅಸಾಧ್ಯ ಶಬ್ದ ಬೇರೆ. ರಸ್ತೆಯಲ್ಲಿ ಓಡಾಡುವರ ಗತಿ ಏನಾಗಿರಬೇಕು ನೀವೇ ಊಹಿಸಿಕೊಳ್ಳಿ. ಆ ಗಬ್ಬು ನಾತದಿಂದ ಸಾಕಷ್ಟು ದೂರವಿರಲು ರಸ್ತೆಯ ಇಕ್ಕೆಲಗಳಲ್ಲಿನ ಬ್ರೌನ್‍ಸ್ಟೋನ್ ಮನೆಗಳ ಮುಂಬಾಗಿಲುಗಳು ಎರಡನೇ ಅಂತಸ್ತಿನಷ್ಟು ಎತ್ತರದಲ್ಲಿ ಕಟ್ಟಲಾಗುತ್ತಿತ್ತಂತೆ.

ವಿದ್ಯುಚ್ಛಕ್ತಿಯಿಂದ ನಡೆಯುವ ಸ್ಟ್ರೀಟ್‍ಕಾರ್‍ಗಳ ಆವಿಷ್ಕಾರವಾದನಂತರ ಮಾತ್ರವೇ, ಪರಿಹಾರವೇ ಇಲ್ಲ ಎಂದುಕೊಂಡಿದ್ದ ಈ ಕುದುರೆ ಲದ್ದಿ ಸಮಸ್ಯೆ ತಾನಾಗಿಯೇ ಮಾಯವಾಯಿತು. ಆದರೆ ಇಂದಿನ ಆಧುನಿಕ ನ್ಯೂಯಾರ್ಕ್ ನಗರದಲ್ಲಿ ಈಗಿರುವ ಲದ್ದಿಗಳ ಸಮಸ್ಯೆ ಅಲ್ಲಿನ ಶ್ವಾನ ಸಂಕುಲದಿಂದ ಸೃಷ್ಟಿಯಾದದ್ದು. ನ್ಯೂಯಾರ್ಕ್ ನಗರದಲ್ಲಿರುವ ನಾಯಿಗಳ ಸಂಖ್ಯೆಯ ಬಗ್ಗೆ ಅನೇಕ ಅನುಮಾನಗಳಿದ್ದರೂ ಒಂದು ನಂಬಲರ್ಹ ಅಂದಾಜಿನ ಪ್ರಕಾರ ಸುಮಾರು ಹತ್ತು ಲಕ್ಷ ನಾಯಿಗಳಿವೆಯಂತೆ. ಆದರೆ ಸಧ್ಯದಲ್ಲಿ ಈ ಎಲ್ಲ ನಾಯಿಗಳ ಲದ್ದಿಯೂ ನಗರದ ರಸ್ತೆಗಳಲ್ಲಿ ಕಂಡುಬರದೇ ಇರಲು ಕಾರಣ ಅಲ್ಲಿಯ ನಗರ ಪಾಲಿಕೆ 1978ರಲ್ಲಿ ಒಂದು ಜಗಜ್ಜನಿತ “pooper scooper” ಕಾನೂನನ್ನು ಜಾರಿಗೆ ತಂದದ್ದು. ಅಲ್ಲಿ ನಮ್ಮ ಹಾಗೆ ಬೀದಿ ನಾಯಿಗಳ ಹಾವಳಿಯಂತೂ ಇಲ್ಲ. ಆದರೆ ಅಲ್ಲಿನ ಶ್ವಾನಪಾಲಕರು ತಮ್ಮ ಪ್ರೀತಿಪಾತ್ರರನ್ನು ನಗರದ ರಸ್ತೆಗಳಲ್ಲಿ “walking” ಮಾಡಿಸುವ ನೆಪದಲ್ಲಿ ನಿತ್ಯವಿಧಿಗಳನ್ನು ಪೂರೈಸಿ ನೈವೇದ್ಯಪ್ರದಾನ ಮಾಡಿಸುತ್ತಾರೆ. ಕಾನೂನಿನ ಪ್ರಕಾರ ಪ್ರತಿ ಶ್ವಾನ ಪಾಲಕನೂ ತನ್ನ ಬಳಿಯಿರುವ Scooperನಿಂದ ನಾಯಿಯ ಅಮೇಧ್ಯವನ್ನು ಹೆಕ್ಕಿ ತೆಗೆದು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಹಲವೇ ನಿಗದಿತ ಜಾಗಗಳಲ್ಲಿ ಎಸೆಯಬೇಕು. ಆದರೆ ಅನೇಕರು ಈ ಕಾನೂನನ್ನು ಪಾಲಿಸುವುದಿಲ್ಲ ಎನ್ನುವುದಕ್ಕೆ ನಗರದ ರಸ್ತೆಗಳು ಮತ್ತು ಪಾರ್ಕುಗಳೇ ಸಾಕ್ಷಿ ಎಂದು ಆರೋಪಿಸುತ್ತಾರೆ ತಮ್ಮ 20% ಕ್ಕೂ ಹೆಚ್ಚು ಸ್ವಚ್ಚತಾ ವೈಫಲ್ಯದ ಹೊಣೆಯನ್ನು ಶ್ವಾನ ಅಮೇಧ್ಯದ ಮೇಲೆ ಹೊರೆಸುವ ನ್ಯೂಯಾರ್ಕ್ ನಗರದ Parks Departmentನ ಅಧಿಕಾರಿಗಳು.

Pooper scooper ಕಾನೂನಿದ್ದರೂ ಅದನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಉದಾಹರಣೆಗೆ, 99% ಶ್ವಾನಪಾಲಕರು ನಿಯಮವನ್ನು ಪಾಲಿಸುತ್ತಿದ್ದಾರೆ ಎಂದಿಟ್ಟುಕೊಂಡರೂ ಸುಮಾರು 10000 ಶ್ವಾನಪಾಲಕರು ಉಲ್ಲಂಘಿಸುತ್ತಾರೆ ಎಂಬರ್ಥವಲ್ಲ್ಲವೇ. ಆದರೆ 2004ರಲ್ಲಿ ಕೇವಲ 471 ಶ್ವಾನಪಾಲಕರನ್ನು ಚಲಾನ್ ಮಾಡಲಾಯಿತು. ಅಂದರೆ ಅಪರಾಧಿ ಸಿಕ್ಕಿ ಹಾಕಿಕೊಳ್ಳುವ ಸಂಭಾವನೆ ಕೇವಲ ಎಂಟುಸಾವಿರದಲ್ಲಿ ಒಂದು ಮಾತ್ರ. ಪರಿಸ್ಥಿತಿ ಹೀಗಿದ್ದಾಗ ಎಷ್ಟು ಶ್ವಾನಪಾಲಕರು ತಾನೆ ನಿಯಮ ಪಾಲಿಸಲು ಮುತುವರ್ಜಿ ವಹಿಸಿಯಾರು?

ಬರಿ ತಮಾಷೆಯಲ್ಲ! ಈ ಸಮಸ್ಯೆ ತುಂಬಾ ಗಂಭೀರ ಸ್ವರೂಪದ್ದು. ರಸ್ತೆಯಲ್ಲಿ ನಡೆಯುತ್ತಿರುವ ನಿಮಗಾಗಲಿ, ಪಾರ್ಕುಗಳಲ್ಲಿ ಆಟವಾಡುವ ನಿಮ್ಮ ಮಕ್ಕಳಿಗಾಗಲಿ ಹಠಾತ್ತಾಗಿ ಕಾಲಿಗೆ ಏನೋ ಮೆತ್ತನೆಯ ವಸ್ತು ಅಂಟಿಕೊಂಡರೆ ಅದೆಷ್ಟು ಅಸಹ್ಯವಲ್ಲವೇ?
ಒಂದು ಸಂಶೋಧನೆಯ ಪ್ರಕಾರ ಪ್ರತಿಯೊಂದು ಗ್ರಾಮ್ ನಾಯಿಯ ಅಮೇಧ್ಯದಲ್ಲಿ 20 ದಶಲಕ್ಷ E Coli ಬ್ಯಾಕ್ಟೀರಿಯಾದ ಕಾಲೊನಿಗಳಿರುತ್ತವಂತೆ. ಇನ್ನು ಈ ಅಮೇಧ್ಯದ ಪ್ರದೂಷಣಕಾರಿ ಶಕ್ತಿ ಅದೆಷ್ಟಿದೆಯೋ ನೀವೇ ಊಹಿಸಿಕೊಳ್ಳಿ.

ಈ ನಿಯಮವನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ 2005ರ ಸುಮಾರಿಗೆ Freakanomics ಖ್ಯಾತಿಯ ಸ್ಟೀವನ್ ಲೆವಿಟ್ ಮತ್ತು ಸ್ತೀಫನ್ ಡ್ಯೂಬ್ನರ್ ಎಂಬ ಅರ್ಥ ಶಾಸ್ತ್ರಿಗಳು ಒಂದು ಹೊಸ ತಂತ್ರದ ಪ್ರತಿಪಾದನೆ ಮಾಡಿದರು. ಅದೇನೆಂದರೆ ನಗರಪಾಲಿಕೆ ಪ್ರತಿ ನಾಯಿಗೂ ಲೈಸನ್ಸ್ ನೀಡುವ ಮುನ್ನ ಅದರ ಜೊಲ್ಲು ಅಥವಾ ರಕ್ತದ ಸ್ಯಾಂಪಲ್ ಒಂದನ್ನು ಶೇಖರಿಸಿ ಅದರ DNA profile ತಯಾರಿಸಿ ಒಂದು ಅಗಾಧವಾದ databank ಸೃಷ್ಟಿಸಬೇಕು. ನಾಯಿಯ ಜಠರ ಮತ್ತು ಕರುಳು ಬಹಳಷ್ಟು ಜೀವಕೋಶಗಳನ್ನು ಸ್ರವಿಸುದರಿಂದ ಅವುಗಲ ಅಮೇಧ್ಯ DNA ಪರೀಕ್ಷಣೆಗೆ ಬಹಳ ಸೂಕ್ತ ವಸ್ತು. ಇನ್ನು ತಿಳಿಯಿತಲ್ಲ! ಕೆಲಸ ಸುಲಭ. ಎತ್ತದ ಅಮೇಧ್ಯದ DNA ಪರೀಕ್ಷಣೆ, Databankನಿಂದ ನಾಯಿಯ ಮತ್ತು ಶ್ವಾನಪಾಲಕನ ಸುಳಿವನ್ನರಿತು ಅವರ ವಿಳಾಸಕ್ಕೆ ಚಲಾನ್ ಕಳಿಸುವುದು. ಎಷ್ಟು ಸುಲಭ?

ಕೆಲಸ ಅಂದುಕೊಂಡಷ್ಟು ಸುಲಭವಲ್ಲ . ನ್ಯೂಯಾರ್ಕ್ ನಗರದಲ್ಲಿ ಹತ್ತು ಲಕ್ಷಕ್ಕೂ ಮೀರಿ ನಾಯಿಗಳಿದ್ದರೂ, 2003ರ ದಾಖಲೆಗಳ ಪ್ರಕಾರ ಕೇವಲ 102,004 ನಾಯಿಗಳ ಲೈಸನ್ಸ್ ಅರ್ಜಿಗಳು ಸ್ವೀಕರಿಸಲಾಗಿತ್ತು. ಅದೂ ಇಂತಹ ಪರಿಸ್ಥಿತಿ, ಲೈಸನ್ಸ್ ಸ್ವೀಕರಿಸಲು ಕಷ್ಟ ಪಡದೆ ಮನೆಯಲ್ಲಿಯೇ ಕುಳಿತು ಕೇವಲ 8.5 ಡಾಲರ್ ಕೊಟ್ಟು ಅಂಚೆ ಮೂಲಕ ಅರ್ಜಿ ಸಲ್ಲಿಸಿ, ಅಂಚೆಯ ಮೂಲಕವೇ ಪಡೆಯಬಹುದಾದ ಸೌಲಭ್ಯವಿದ್ದಾಗ್ಯೂ ಕೂಡ. ಇನ್ನು ಅದೇ ವರ್ಷ ಲೈಸನ್ಸ್ ನಿಯಮದ ಉಲ್ಲಂಘನೆಗಾಗಿ ಕಳಿಸಿದ ಸಮನ್ಸ್ ಸಂಖ್ಯೆ ಕೇವಲ 68.

ಸ್ಥಿತಿ ಹೀಗಿರುವಾಗ, ನ್ಯೂಯಾರ್ಕ್ ನಗರದ ಎಲ್ಲ ನಾಯಿಗಳಿಗೂ ಕಡ್ಡಾಯವಾಗಿ ಲೈಸನ್ಸ್ ನೀಡಿ, ಅವುಗಳ DNA ಶೇಖರಿಸುವುದು ಹೇಗೆ? ಲೆವಿಟ್ ಮತ್ತು ಡ್ಯೂಬ್ನರ್ ಪ್ರಕಾರ ಇದಕ್ಕೊಂದು ಉಪಾಯ - ಅರ್ಜಿದಾರರಿಂದ ಲೈಸನ್ಸ್ ಹಣ ಪೀಕುವುದರ ಬದಲಾಗಿ ಅವರಿಗೆ ಹಣದ ಆಮಿಷ ನೀಡುವುದು.

2005ರಲ್ಲಿ ಲೆವಿಟ್ ಮತ್ತು ಡ್ಯೂಬ್ನರ್, ಈ ಮೇಲಿನ DNA ಥಿಯರಿಯನ್ನು ಪ್ರತಿಪಾದಿಸಿದಾಗ, ಅವರನ್ನು ಹೀಯಾಳಿಸಿ, ಮೂದಲಿಸಿ, ಏನೇನೋ ಹಿಡಕೊಂಡು ಬಿದ್ದು ಬಿದ್ದು ನಕ್ಕವರದೆಷ್ಟೋ ಜನ. ಅದರೆ ವಿಯೆನ್ನಾ , ಬರ್ಲಿನ್ ಮತ್ತು ಡ್ರೆಸ್ಡೆನ್ ನಗರಗಳಲ್ಲಿ ಇದೇ ರೀತಿಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುತ್ತಿತ್ತು.

ಇದೀಗ September 2008ರಲ್ಲಿ ಬಂದ ವರದಿಯಂತೆ, ಇಸ್ರೇಲ್‍ ರಾಜಧಾನಿ ಟೆಲ್ ಅವೀವ್‍ ಬಳಿಯ ಪೆಟಾಹ್ ಟಿಕ್ವಾ ಎಂಬ ಉಪನಗರಿಯಲ್ಲಿ DNA ಅಧಾರಿತ ಲೈಸನ್ಸ್ ಪಧ್ಧತಿ ಜಾರಿಗೆ ಬಂದಿದೆಯಂತೆ. ತಮ್ಮ ನಾಯಿಯ ಅಮೇಧ್ಯ ಹೆಕ್ಕಿ ತೆಗೆದು, ಬಳಿಯಲ್ಲಿರುವ ವಿಶೇಷ ಡಬ್ಬಗಳಲ್ಲಿ ಹಾಕುವ ಶ್ವಾನಪಾಲಕರಿಗೆ, Dog food coupons ಮತ್ತ್ತು ನಾಯಿಗಳ ಆಟಿಗೆಗಳನ್ನು ಬಳುವಳಿಯಾಗಿ ಕೊಡಲಾಗುವುದು. ತಪ್ಪಿತಸ್ಥರಿಗೆ ಜುಲ್ಮಾನೆ ವಿಧಿಸಲಾಗುವುದಂತೆ. ಈ ಪಧ್ಧತಿಗೆ ಸ್ಥಳೀಯ ನಾಗರಿಕರ ಹೃತ್ಪೂರ್ವಕ ಸಹಕಾರ ದೊರಕಿದೆ ಎಂದು ವರದಿಯಾಗಿದೆ.

ಇಂತಹ ಕಾನೂನು ಭಾರತದಲ್ಲಿ ಕೂಡಾ ಅನ್ವಯವಾಗುವ ಸಾಧ್ಯತೆ ಅಥವಾ ಅಸಾಧ್ಯತೆಗಳ ಬಗ್ಗೆ ಚರ್ಚಿಸುವಾಗ, ನಾಯಿಗಳ ಬದಲಾಗಿ ಮೊದಲು ಇಂತಹ ಕಾನೂನು ನಮ್ಮ ನಗರಗಳಲ್ಲಿ ಅನೇಕ ಸಂಖ್ಯೆಯಲ್ಲಿದ್ದು ಕಂಡಲ್ಲಿ ಕುಕ್ಕರಿಸುವ (ಅ)ನಾಗರಿಕರಿಗೆ ಅನ್ವಯವಾಗುವುದು ಸೂಕ್ತವೇನೋ ಅಂತ ಯಾರೋ ಹೇಳಿದಂತಿತ್ತು.

*****************************************************
ಈ ಲೇಖನ ಮೊದಲ ಬಾರಿ thatskannada.comನಲ್ಲಿ 26ನೇ ಸೆಪ್ಟೆಂಬರ್ 2008 ರಂದು ಪ್ರಕಟವಾಯಿತು.
http://thatskannada.oneindia.in/nri/article/2008/0926-pooper-scooper-freakonomics-ny.html

Monday 8 September 2008

ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!

ವಿಷ್ಣುವಿನ ದಶಾವತಾರಗಳಲ್ಲಿ ಅನೇಕ ಪ್ರಾಣಿಗಳ ರೂಪಗಳಿದ್ದರೂ ಕೂಡ ಅರ್ಧ ಪ್ರಾಣಿ ಅರ್ಧ ಮಾನವ ನರಸಿಂಹನ ಹೊರತಾಗಿ ಬೇರೆ ಯಾರೂ ಪೂಜಾರ್ಹರೆನಿಸಿಕೊಳ್ಳಲಿಲ್ಲ. ಅದರಲ್ಲೂ ಸಾಕ್ಷಾತ್ ವರಾಹ ಎದುರಿಗೆ ಬಂದರಂತೂ ಪೂಜಿಸೋದಿರಲಿ, ಹೇಸಿಗೆಯಿಂದ ಓಡಿಹೋಗುವುದೇ ಹೆಚ್ಚು. ಆದರೆ ವರಾಹನನ್ನು ಆದರದಿಂದ ಕಾಣುವ ದಿನಗಳು ದೂರವೇನಿಲ್ಲ.

ಅಮೇರಿಕದ ಲೀ ಸ್ಪೀವಾಕ್ ಎಂಬ 69 ವರ್ಷದ ವ್ಯಕ್ತಿ ಒಂದು ಮಾಡೆಲ್ ಏರೋಪ್ಲೇನಿನ ಪ್ರೊಪೆಲ್ಲರ್‍ಗೆ ಕೈ ಕೊಟ್ಟು ತನ್ನ ಒಂದು ಬೆರಳಿನ ಅಂಗುಲದಷ್ಟು ಭಾಗವನ್ನು ಮೂಳೆ ಸಹಿತ ತುಂಡರಿಸಿಕೊಂಡರಂತೆ. ವೈದ್ಯರು ಆ ತುಂಡನ್ನು ಮತ್ತೆ ಜೋಡಿಸಲಾಗದು ಎಂದು ಕೈಚೆಲ್ಲಿ ಕೂತರಂತೆ. ಆದರೆ ಲೀರವರ ತಮ್ಮ ಅಲೆನ್ “regenerative medicine” ಕ್ಷೇತ್ರದಲ್ಲಿ ಸಂಶೋಧಿಸುತ್ತಿದ್ದು , ಅವರಿಗೆ ಪಿಟ್ಸ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರ್ ಸ್ಟೀಫನ್ ಬ್ಯಾಡಿಲಾಕ್ ಅವರ ಪ್ರಯೋಗಶಾಲೆಯಲ್ಲಿ ತಯಾರಿಸಿದ “ ಪಿಕ್ಸೀ ಡಸ್ಟ್” ಎಂಬ ಪುಡಿ ತಂದುಕೊಟ್ಟು, ಇದನ್ನು ಪ್ರತಿ ದಿನ ಆ ತುಂಡಾದ ಬೆರಳಿನ ಗಾಯದ ಮೇಲೆ ಸಿಂಪಡಿಸು ಎಂದು ಹೇಳಿದರಂತೆ. ಲೀ ಅದರಂತೆ ಮಾಡಹೋಗಿ ದಿನೇ ದಿನೇ ಆ ಬೆರಳು ಮತ್ತೆ ಬೆಳೆದು ಕೇವಲ ನಾಲ್ಕು ವಾರಗಳಲ್ಲಿ ಸಂಪೂರ್ಣ ಮೊದಲಿನಂತೆ ಆಗಿದೆಯಂತೆ. ಬರೆ ಬೆರಳಿನ ಮಾಂಸವಷ್ಟೇ ಅಲ್ಲದೆ ಮೂಳೆ , ಉಗುರು, ಚರ್ಮ ಮತ್ತು ಬೆರಳಚ್ಚು ಕೂಡ ಮೊದಲಿನಂತೆಯೇ ಆಗಿದೆಯಂತೆ.

ಈ ವೈದ್ಯಕೀಯ ಕೌತುಕದ ಮೂಲ ಕಾರಣ ಬೇರಾರೂ ಅಲ್ಲ. ಶ್ರೀ ವರಾಹ ಮೂರ್ತಿಗಳು.

ಡಾ. ಬ್ಯಾಡಿಲಾಕ್ ತಮ್ಮ ಪ್ರಯೋಗಶಾಲೆಯಲ್ಲಿ ಹಂದಿಯ ಮೂತ್ರಕೋಶದಿಂದ ಜೀವಾಣುಕೋಶಗಳನ್ನು ಹೆರೆದು ತೆಗೆದನಂತರ ಆಮ್ಲದಲ್ಲಿ ಪರಿಷ್ಕರಿಸಿ, extra cellular matrix ಎಂಬ ಪದಾರ್ಥವನ್ನು ಪುಡಿ ಅಥವಾ ಹಾಳೆಗಳ ರೂಪದಲ್ಲಿ ತಯಾರಿಸುತ್ತಾರೆ. ಹೀಗೆ ತಯಾರಾದ ಪುಡಿ ಅಥವಾ ಹಾಳೆಯನ್ನು ಗಾಯದ ಮೇಲೆ ಉದುರಿಸಿ ಅಥವಾ ಸುತ್ತಿದಾಗ, ಆ ಗಾಯ ಹಾಗೆಯೇ ಮಾಗದೆ, ಅಲ್ಲಿನ ಜೀವಾಣುಕೋಶ ಹಾಗೂ ಟಿಶ್ಯೂಗಳು ಪುನರುಜ್ಜೀವನಗೊಂಡು ಆ ತುಂಡರಿಸಿದ ಭಾಗ ಮತ್ತೆ ಪೂರ್ಣವಾಗಿ ಬೆಳೆಯಲು ಪ್ರೇರೇಪಿಸುತ್ತದೆ.

ಈ ಅತ್ಯಂತ ವಿಸ್ಮಯಜನಕ ಹಾಗೂ ಕ್ರಾಂತಿಕಾರಿ ಸಂಶೋಧನೆಯಲ್ಲಿ ಅಮೇರಿಕದ ಮಿಲಿಟರಿ ಬಹಳ ಉತ್ಸುಕತೆ ತೋರಿದೆ. ಯುಧ್ಧದಲ್ಲಿ ಕೈ ಕಾಲು ಕಳೆದುಕೊಂಡ ಯೋಧರಿಗೆ ಈ ಅಧ್ಯಯನ ಆಶಾಕಿರಣವಾಗಿ ಕಂಡುಬಂದಿದೆ.

ನಂಬಲಸಾಧ್ಯವೇ? ಹಾಗಾದರೆ ಹೆಚ್ಚಿನ ವಿವರ ಹಾಗೂ ವಿಡಿಯೋಗಳಿಗಾಗಿ ಕೆಳಗಿನ ಕೊಂಡಿಯ ಮೇಲೆ ಚಿಟುಕಿಸಿ.

http://news.bbc.co.uk/2/hi/health/7354458.stm

ಇನ್ನು ಮೇಲಾದರೂ ವರಾಹಮೂರ್ತಿಗಳು ರಸ್ತೆಯಲ್ಲಿ ಕಂಡಾಗ, ಅಸಹ್ಯ ಪಟ್ಟುಕೊಂಡು ಮುಖತಿರುಗಿಸಬೇಡಿ.
ಸ್ವಲ್ಪವಾದರೂ ಗೌರವ ಭಾವದಿಂದ ನೋಡಿ.

8-09-2008

ಆಟದಲ್ಲಷ್ಟೇ ಅಲ್ಲ. ಪಾಠದಲ್ಲೂ ಚೀನಾ ಭಾರತಕ್ಕಿಂತ ಮುಂದೆ!

ಒಂದು ದೇಶದ ವೈಜ್ನಾನಿಕ ಸಂಶೋಧನೆಯ ಗುಣ ಮಟ್ಟ ಎಷ್ಟು ಎನ್ನುವುದು ಆ ದೇಶದ ಮೂಲಭೂತ ಸಂಶೋಧನಾ ಲೇಖನಗಳು ಅದೆಷ್ಟು ಸಂಖ್ಯೆಯಲ್ಲಿ ಪ್ರಪಂಚದ ಪ್ರಮುಖ ಪ್ರತಿಷ್ಠಿತ ವಿಜ್ನಾನ ನಿಯತಕಾಲಿಕಗಳಲ್ಲಿಪ್ರಕಟವಾಗಿದೆ (number of publications) ಮತ್ತು ಅದರಲ್ಲೆಷ್ಟು ಲೇಖನಗಳು ಬೇರೆಯವರ ಸಂಶೋಧನೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ( Citation Index) ಎಂಬುದರ ಮೇಲೆ ನಿರ್ಭರವಾಗುತ್ತದೆ. ಅನೇಕ ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ವೈಜ್ನಾನಿಕ ಸಂಶೋಧನಾ ಕೊಡುಗೆ ಕ್ರಮೇಣ ಕಡಿಮೆಯಾಗುತ್ತಿದ್ದು, ಮುಂದುವರೆದ ದೇಶಗಳ ತುಲನೆಯಲ್ಲಿ ಹಾಗಿರಲಿ, ಹಲವೇ ವರ್ಷಗಳ ಹಿಂದೆ ಒಂದೇ ಮಟ್ಟದಲ್ಲಿದ್ದ ಚೀನಾ, ದಕ್ಷಿಣ ಕೊರಿಯಾ, ಮತ್ತು ಬ್ರೆಝಿಲ್‍ ದೇಶಗಳಿಗಿಂತಲೂ ತುಂಬಾ ಹಿಂದುಳಿದಿದೆ.

ಭಾರತದ National Institute of Science Technology and Developmental Studies( NISTADS) ಹಮ್ಮಿಕೊಂಡ ಇಪ್ಪತ್ತು ದೇಶಗಳ ಅಧ್ಯಯನವೊಂದರ ಪ್ರಕಾರ 1996 ರಲ್ಲಿ ಭಾರತ 13ನೇ ಸ್ಥಾನದಲ್ಲಿತ್ತು. ಅದೇ ವರ್ಷ ಚೀನಾ 9ನೇ ಸ್ಥಾನದಲ್ಲಿತ್ತು.

2006ನೇ ವರ್ಷದಲ್ಲಿ ಭಾರತ 10ನೇ ಸ್ಥಾನ ಗಳಿಸಿದರೆ, ಚೀನಾ ಬಹಳ ಮುಂದುವರೆದು 2 ನೇ ಸ್ಥಾನ ಗಳಿಸಿಕೊಂಡಿದೆ. ಈ ಅಧ್ಯಯನದ ಪ್ರಕಾರ ಈ ಹತ್ತು ವರ್ಷಗಳಲ್ಲಿ ಚೀನಾ ವರ್ಷಂಪ್ರತಿ 20.74 % ಪ್ರಗತಿ ತೋರಿದರೆ ಭಾರತ ಕೇವಲ 7.02% ಪ್ರಗತಿ ಸಾಧಿಸಿತು. ಭಾರತದ ತುಲನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ರಾಷ್ಟ್ರಗಳು - ದಕ್ಷಿಣ ಕೊರಿಯಾ 14.16% ಹಾಗೂ ಬ್ರೆಝಿಲ್ 12.04% .

NISTADSನ ಪ್ರೊ. ಬಿ. ಎಮ್. ಗುಪ್ತಾರವರ ಪ್ರಕಾರ ಚೀನಾಕ್ಕೆ ಸರಿಸಮ ಬರಬೇಕಾದರೆ ಭಾರತ 2010ರ ವೇಳೆಗೆ ತನ್ನ ಸಂಶೋಧನಾ ಪ್ರಕಟಣೆಯ ಭರವನ್ನು ವರ್ಷಂಪ್ರತಿ 30% ಮಟ್ಟಕ್ಕೆ ಏರಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮಿಬ್ಬರ ನಡುವಣ ಕಂದರ ವರ್ಷೇ ವರ್ಷೇ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ.

SCOPUS ಎಂಬ ಮತ್ತೊಂದು ಅಧ್ಯಯನದ ಪ್ರಕಾರ ಜಾಗತಿಕ ಸಂಶೋಧನೆಗೆ ಭಾರತದ ಕೊಡುಗೆ ಕೇವಲ 2.4%. ಅದೇ ಚೀನಾದ ಕೊಡುಗೆ 10.49%, ಅಂದರೆ ನಮಗಿಂತ ನಾಲ್ಕುಪಟ್ಟು ಹೆಚ್ಚು.

ಅಮೇರಿಕದ Office of Naval Research ವಿಜ್ನಾನಿ ರೊನಾಲ್ ಕೋಸ್ಟಾಫ್ ಎಂಬುವರ ಅಧ್ಯಯನದ ಪ್ರಕಾರ 1980ರಲ್ಲಿ ಭಾರತ ಚೀನಾಗಿಂತ 14 ಪಟ್ಟು ಜಾಸ್ತಿ ಲೇಖನಗಳನ್ನು ಪ್ರಕಟಿಸುತ್ತಿತ್ತು. 1995ರ ವೇಳೆಗೆ ಎರಡೂ ದೇಶಗಳು ಒಂದೇ ಮಟ್ಟ ತಲುಪಿದ್ದವು. ಆದರೆ 2005ರ ವೇಳೆಗೆ ಚೀನಾ ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಕಟಣೆಗಳಿಂದ ಬಹಳ ಮುಂದುವರೆದಿತ್ತು. ಎಂದರೆ ಚೀನಾ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ತನ್ನ ವಿಜ್ನಾನದ ಜಾಗತಿಕ ಕೊಡುಗೆಯನ್ನು ಸುಮಾರು 40 ಪಟ್ಟು ಹೆಚ್ಚಿಸಿದಂತಾಯಿತು. ಭಾರತೀಯರಿಗಿದ್ದಷ್ಟು ಇಂಗ್ಲೀಷ್ ಭಾಷೆಯ ಜ್ನಾನದ ಅನುಕೂಲ ತಮಗಿಲ್ಲದಿದ್ದಾಗ್ಯೂ ಚೀನಾ ದೇಶದ ವಿಜ್ನಾನಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ವಿಜ್ನಾನದ ಕೊಡುಗೆಯ ಸಂಖ್ಯೆ ಮತ್ತು ಗುಣಮಟ್ಟ ಇಷ್ಟರಮಟ್ಟಿಗೆ ಹೆಚ್ಚಿಸಿದ್ದು ನಿಜಕ್ಕೂ ಶ್ಲಾಘನೀಯ.

ಪ್ರೊ. ಸಿ. ಎನ್. ಆರ್. ರಾವ್‍ರಂತಹ ಮೇಧಾವಿ ವಿಜ್ನಾನಿಗಳನ್ನು ತನ್ನ ಪ್ರಧಾನ ಸಲಹೆಗಾರರಾಗಿ ನೇಮಿಸಿಕೊಂಡಿರುವ ಭಾರತ ಸರ್ಕಾರ, ಕಾಲ ಕಾಲಕ್ಕೆ ಅವರಿತ್ತ ಎಚ್ಚರಿಕೆ, ಸಲಹೆ ಮತ್ತು ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಒಂದು ಮಹಾದುರಂತವೇ ಸರಿ.

ನಮ್ಮ ವಿಜ್ನಾನ ಮತ್ತು ತಂತ್ರಜ್ನಾನ ವಿಭಾಗದ ಮಂತ್ರಿಮಹೋದಯ ಕಪಿಲ್ ಸಿಬಾಲ್ ಮಾತ್ರ “ಇದರಲ್ಲಿ ಆಶ್ಚರ್ಯವೇನಿದೆ? ನಮ್ಮಲ್ಲಿ ವೈಜ್ನಾನಿಕ ಸಂಶೋಧನೆಗೆ ಜಿ.ಡಿ.ಪಿಯ ಕೇವಲ 0.8% ಖರ್ಚು ಮಾಡುತ್ತೇವೆ. ಇದರ ತುಲನೆಯಲ್ಲಿ ಚೀನಾ 1.23% ಹಣ ವ್ಯಯ ಮಾಡುತ್ತದೆ. ಎಲ್ಲಿಯವರೆಗೂ ಪ್ರೈವೇಟ್ ರಿಸರ್ಚ್ ಮತ್ತು ವಿಶ್ವವಿದ್ಯಾನಿಲಯಗಳು ಹುಟ್ಟಿಕೊಳ್ಳುವುದಿಲ್ಲವೋ ಈ ಸ್ಥಿತಿ ಇದೇ ರೀತಿ ಮುಂದುವರೆಯುವುದು ಖಂಡಿತ” ಎಂದು ಕೈ ಕೊಡವಿಕೊಂಡಿದ್ದಾರೆ.

ಇಂತಹ ಧುರೀಣರ ಮುಖಂಡತ್ವದಲ್ಲಿ ನಮ್ಮ ದೇಶದ ಭವಿಷ್ಯವದೇನಿದೆಯೋ ಆ ದೇವರೇ ಬಲ್ಲ.

Friday 15 August 2008

ಅಭಿನವ್ ಬಿಂದ್ರಾ - ಸ್ವರ್ಣ ಪದಕ ಗೆದ್ದಮೇಲೆ ಏನನಿಸಿತು? - ಅವರ ಮನದಾಳದ ಆಲೋಚನೆಗಳು.

ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ಶೂಟಿಂಗ್ ಸ್ವರ್ಣ ಪದಕ ಗೆದ್ದ ಅಭಿನವ್ ಬಿಂದ್ರಾರವರ ಬ್ಲಾಗ್ ಕೊಂಡಿ ಈ ಕೆಳಗಿದೆ.

ಆಭಿನವ್ ಬಿಂದ್ರಾ ಬ್ಲಾಗ್

ಇದರಲ್ಲಿ ವ್ಯಕ್ತವಾದ ಅವರ ಅನಿಸಿಕೆಗಳಿಂದ, ಅವರ ಸರಳ, ಸಂಯಮಯುತ ವ್ಯಕ್ತಿತ್ವದ ಅರಿವು ನಮಗಾಗುತ್ತದೆ.
ಹೆಮ್ಮೆಯಿಂದ ಬೀಗುತ್ತಿರುವ ಭಾರತೀಯರಿಗೆ ಅವರ ಈ ಕೆಳಗಿನ ಕಳಕಳಿಯ ಮನವಿ ನನಗೆ ಬಹಳ ಹಿಡಿಸಿತು

"I would like to reiterate that everyone who represents India at the Olympic Games has put in years of toil and sweat. I ask the Indian people to support our athletes more. It is fine to celebrate our achievements but it is just as important to keep up the backing when we are not on top of our game."


ಗೆದ್ದೆತ್ತಿನ ಬಾಲ ಎಲ್ಲರೂ ಹಿಡಿಯುತ್ತೇವೆ.ಅಸಾಧಾರಣ ಪ್ರಯತ್ನ ಪಟ್ಟು ಕೂಡಾ ಸ್ವಲ್ಪದರಲ್ಲಿ ವಿಫಲರಾದವರನ್ನು ಮರೆತೇಬಿಡುತ್ತೆವೆಲ್ಲವೆ?

ವಿಜಯದ ಆನಂದದ ನಡುವೆ ಕೂಡಾ ಬಿಂದ್ರಾ ಅಂಥವರನ್ನು ನೆನೆದು ನಮಗೆಲ್ಲ ಸಕಾಲಿಕ ಎಚ್ಚರಿಕೆ ಕೊಟ್ಟಿದ್ದಾರೆ.

ಸಂಗೀತದಿಂದ ಪರಮಾಣು ಸ್ಫೋಟ, ವಿಶ್ವ ವಿನಾಶ ! ಇದು ಸಾಧ್ಯವೇ?

“New Scientist” ನಲ್ಲಿ ಜೂನ್ ತಿಂಗಳಲ್ಲಿ ಪ್ರಕಟವಾದ ವರದಿ ಪ್ರಕಾರ, ಅನೇಕರು ಇಂಟರ್ನೆಟ್‍ನಿಂದ ತರಹೇವಾರು ಸಾಫ್ಟ್ ವೇರ್ ಆಮದು ಮಾಡಿಕೊಳ್ಳುವ ಮುನ್ನ ಒಪ್ಪಿಕೊಳ್ಳಬೇಕಾದ ’End User License Agreement”( EULA) ಅನ್ನುವ "ಫೈನ್ ಪ್ರಿಂಟ್" ಒಕ್ಕಣೆ ಓದುವದಿಲ್ಲ ಅನ್ನುವುದು ಸಾಬೀತಾಗಿದೆ.

ನಿಮ್ಮಲ್ಲನೇಕರು ಐ ಪಾಡ್ ( iPod) ಉಪಯೋಗಿಸಲು iTunes ಅನ್ನೋ ಸಾಫ್ಟ್‍ವೇರ್ ಡೌನ್‍ಲೋಡ್ ಮಾಡಿಕೊಂಡಿರಬಹುದು. ಅದರ ಲೇಟೆಸ್ಟ್ ವರ್ಷನ್‍ನ EULA ನಲ್ಲಿ ಕೆಳಕಂಡ ಒಕ್ಕಣೆ ಇದೆ ಅಂತ ಎಷ್ಟು ಜನ ಗಮನಿಸಿರುತ್ತಾರೆ? {Clause 8 page 4 }
“Licensee also agrees that Licensee will not use the Apple Software for any purposes prohibited by United States law, including, without limitation, the development, design, manufacture, or production of nuclear missiles or chemical or biological weapons.”

iTune ನ ಹಳೆಯ ವರ್ಷನ್ EULA ಒಂದರಲ್ಲಿ ( Clause 10 Page2)
“The Apple software is not intended for use in the operation of nuclear facilities, aircraft navigation or communication systems, life support machines, or other equipment in which the failure of the Apple software could lead to death, personal injury, or severe physical or environmental damage.”

iTunes ಸಾಫ್ಟ್‍ವೇರ್‍ನಿಂದ ಪರಮಾಣು ಬಾಂಬ್ ತಯಾರಿಸಬೇಕಾದ ಸೃಜನಶೀಲ ಉಗ್ರವಾದಿಗಳೆಲ್ಲಿದ್ದಾರೋ ನಿಮಗೇನಾದರೂ ಗೊತ್ತೆ? ಇಂತಹ ವಿಚಿತ್ರವಾದ ಸಂಬಂಧವಿಲ್ಲದ ಷರತ್ತುಗಳನ್ನು ಬರೆದ ಅಮೇರಿಕನ್ ಲಾಯರ್‍ಗಳ ಬುಧ್ಧಿಯನ್ನು ಹೊಗಳಬೇಕೋ ಅಥವಾ ತೆಗಳಬೇಕೋ?

ಇಂತಹದೇ ಷರತ್ತುಗಳು McAfee Antivirus ಮತ್ತು Desktop Weather Reader ಗಳ
ನಲ್ಲೂ ಕಾಣಬಹುದು.

ಅನೇಕರು EULA ಸರಿಯಾಗಿ ಓದುವುದಿಲ್ಲ ಎಂದು ಪ್ರಮಾಣಿಸಲು PC Pitstop ಸಾಫ್ಟ್‍ವೇರ್ ಕಂಪನಿಯೊಂದು ತನ್ನ EULAದಲ್ಲಿ ಕೊನೆಯ ಷರತ್ತಾಗಿ EULA ಪೂರ್ತಿ ಓದಿ ಕಂಪನಿಗೆ ಈ ಮೈಲ್ ಕಳಿಸಿದವರಿಗೆ ಒಂದು ಸಾವಿರ ಡಾಲರ್ ಬಹುಮಾನ ಘೋಷಣೆ ಮಾಡಿತ್ತಂತೆ. ನಾಲ್ಕು ತಿಂಗಳ ನಂತರ ೩೦೦೦ ಡೌನ್‍ಲೋಡ್ ಗಳಾದ ಮೇಲೆ ಒಬ್ಬ ಡೌಗ್ ಹೆಕ್‍ಮನ್ ಅನ್ನುವವನು ಆ ಬಹುಮಾನ ಗೆದ್ದನಂತೆ.

ಇನ್ನುಮೇಲಾದರೂ EULA ಕ್ಲಿಕ್ಕಿಸುವ ಮುನ್ನ ಪೂರ್ಣವಾಗಿ ಓದಿನೋಡಿ. ಯಾರಿಗೆ ಗೊತ್ತು? ಏನು ಅದೃಷ್ಟ ಕಾದಿದೆಯೋ.

ಮುಗಿಯಿತು ರಜೆ! ಮತ್ತೆ ಬ್ಲಾಗಿಂಗ್ ಶುರು.

ಸುಮಾರು ನಾಲ್ಕೂವರೆ ತಿಂಗಳ ಕಾಲ ಆರೋಗ್ಯ ಸರಿಯಿರದೆ ಎರಡು ಆರ್ಥೋ ಪೆಡಿಕ್ ಆಪರೇಷನ್ ಮಾಡಿಸಿಕೊಂಡು ಸುಧಾರಿಸಿಕೊಳ್ಳುತ್ತಿದ್ದಾಗ ಅಂತರ್ಜಾಲದ ಸಂಪರ್ಕ ಇದ್ದಾಗ್ಯೂ, ಏನನ್ನೂ ಬರೆಯುವ ಸ್ಫೂರ್ತಿ ಅಥವಾ ಇಛ್ಛೆ ಇರಲಿಲ್ಲ.
ಈಗ ಸುಮಾರಾಗಿ ಮೊದಲಿನ ಹಾಗೆ ಆರೋಗ್ಯ ಸರಿ ಹೋಗಿರುವುದರಿಂದ, ನನ್ನ ಬ್ಲಾಗಿಂಗ್ ಗತಿವಿಧಿಗಳನ್ನು ಶುರು ಮಾಡಿ ಸ್ನೇಹಿತರ ಮತ್ತು ಓದುಗ ಹಿತೈಷಿಗಳ ತಲೆ ತಿನ್ನಲು ಸಿಧ್ಧನಾಗಿದ್ದೇನೆ.

ಸ್ವಾತಂತ್ರ್ಯೋತ್ಸವದ ಸಂದರ್ಭ ಪ್ರಾರಂಭಕ್ಕೆ ಸರಿ ಅಂದುಕೊಂಡು ಹಾಳು ಮೂಳು ಅಂತೆ ಕಂತೆಗಳ ಅನ್ವೇಷಣೆ ಆರಂಭವಾಗಿದೆ.

ನನ್ನ ಬ್ಲಾಗ್ ಸೈಟ್‍ಗೆ ಆಗಾಗ ಬರುತ್ತಾ ಇರಿ. ಪ್ರತಿಕ್ರಯಿಸಿ. ಸಂತೋಷವಾಗುತ್ತೆ. ನಮಸ್ಕಾರ.