Showing posts with label regenerative medicine.. Show all posts
Showing posts with label regenerative medicine.. Show all posts

Monday, 8 September 2008

ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!

ವಿಷ್ಣುವಿನ ದಶಾವತಾರಗಳಲ್ಲಿ ಅನೇಕ ಪ್ರಾಣಿಗಳ ರೂಪಗಳಿದ್ದರೂ ಕೂಡ ಅರ್ಧ ಪ್ರಾಣಿ ಅರ್ಧ ಮಾನವ ನರಸಿಂಹನ ಹೊರತಾಗಿ ಬೇರೆ ಯಾರೂ ಪೂಜಾರ್ಹರೆನಿಸಿಕೊಳ್ಳಲಿಲ್ಲ. ಅದರಲ್ಲೂ ಸಾಕ್ಷಾತ್ ವರಾಹ ಎದುರಿಗೆ ಬಂದರಂತೂ ಪೂಜಿಸೋದಿರಲಿ, ಹೇಸಿಗೆಯಿಂದ ಓಡಿಹೋಗುವುದೇ ಹೆಚ್ಚು. ಆದರೆ ವರಾಹನನ್ನು ಆದರದಿಂದ ಕಾಣುವ ದಿನಗಳು ದೂರವೇನಿಲ್ಲ.

ಅಮೇರಿಕದ ಲೀ ಸ್ಪೀವಾಕ್ ಎಂಬ 69 ವರ್ಷದ ವ್ಯಕ್ತಿ ಒಂದು ಮಾಡೆಲ್ ಏರೋಪ್ಲೇನಿನ ಪ್ರೊಪೆಲ್ಲರ್‍ಗೆ ಕೈ ಕೊಟ್ಟು ತನ್ನ ಒಂದು ಬೆರಳಿನ ಅಂಗುಲದಷ್ಟು ಭಾಗವನ್ನು ಮೂಳೆ ಸಹಿತ ತುಂಡರಿಸಿಕೊಂಡರಂತೆ. ವೈದ್ಯರು ಆ ತುಂಡನ್ನು ಮತ್ತೆ ಜೋಡಿಸಲಾಗದು ಎಂದು ಕೈಚೆಲ್ಲಿ ಕೂತರಂತೆ. ಆದರೆ ಲೀರವರ ತಮ್ಮ ಅಲೆನ್ “regenerative medicine” ಕ್ಷೇತ್ರದಲ್ಲಿ ಸಂಶೋಧಿಸುತ್ತಿದ್ದು , ಅವರಿಗೆ ಪಿಟ್ಸ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರ್ ಸ್ಟೀಫನ್ ಬ್ಯಾಡಿಲಾಕ್ ಅವರ ಪ್ರಯೋಗಶಾಲೆಯಲ್ಲಿ ತಯಾರಿಸಿದ “ ಪಿಕ್ಸೀ ಡಸ್ಟ್” ಎಂಬ ಪುಡಿ ತಂದುಕೊಟ್ಟು, ಇದನ್ನು ಪ್ರತಿ ದಿನ ಆ ತುಂಡಾದ ಬೆರಳಿನ ಗಾಯದ ಮೇಲೆ ಸಿಂಪಡಿಸು ಎಂದು ಹೇಳಿದರಂತೆ. ಲೀ ಅದರಂತೆ ಮಾಡಹೋಗಿ ದಿನೇ ದಿನೇ ಆ ಬೆರಳು ಮತ್ತೆ ಬೆಳೆದು ಕೇವಲ ನಾಲ್ಕು ವಾರಗಳಲ್ಲಿ ಸಂಪೂರ್ಣ ಮೊದಲಿನಂತೆ ಆಗಿದೆಯಂತೆ. ಬರೆ ಬೆರಳಿನ ಮಾಂಸವಷ್ಟೇ ಅಲ್ಲದೆ ಮೂಳೆ , ಉಗುರು, ಚರ್ಮ ಮತ್ತು ಬೆರಳಚ್ಚು ಕೂಡ ಮೊದಲಿನಂತೆಯೇ ಆಗಿದೆಯಂತೆ.

ಈ ವೈದ್ಯಕೀಯ ಕೌತುಕದ ಮೂಲ ಕಾರಣ ಬೇರಾರೂ ಅಲ್ಲ. ಶ್ರೀ ವರಾಹ ಮೂರ್ತಿಗಳು.

ಡಾ. ಬ್ಯಾಡಿಲಾಕ್ ತಮ್ಮ ಪ್ರಯೋಗಶಾಲೆಯಲ್ಲಿ ಹಂದಿಯ ಮೂತ್ರಕೋಶದಿಂದ ಜೀವಾಣುಕೋಶಗಳನ್ನು ಹೆರೆದು ತೆಗೆದನಂತರ ಆಮ್ಲದಲ್ಲಿ ಪರಿಷ್ಕರಿಸಿ, extra cellular matrix ಎಂಬ ಪದಾರ್ಥವನ್ನು ಪುಡಿ ಅಥವಾ ಹಾಳೆಗಳ ರೂಪದಲ್ಲಿ ತಯಾರಿಸುತ್ತಾರೆ. ಹೀಗೆ ತಯಾರಾದ ಪುಡಿ ಅಥವಾ ಹಾಳೆಯನ್ನು ಗಾಯದ ಮೇಲೆ ಉದುರಿಸಿ ಅಥವಾ ಸುತ್ತಿದಾಗ, ಆ ಗಾಯ ಹಾಗೆಯೇ ಮಾಗದೆ, ಅಲ್ಲಿನ ಜೀವಾಣುಕೋಶ ಹಾಗೂ ಟಿಶ್ಯೂಗಳು ಪುನರುಜ್ಜೀವನಗೊಂಡು ಆ ತುಂಡರಿಸಿದ ಭಾಗ ಮತ್ತೆ ಪೂರ್ಣವಾಗಿ ಬೆಳೆಯಲು ಪ್ರೇರೇಪಿಸುತ್ತದೆ.

ಈ ಅತ್ಯಂತ ವಿಸ್ಮಯಜನಕ ಹಾಗೂ ಕ್ರಾಂತಿಕಾರಿ ಸಂಶೋಧನೆಯಲ್ಲಿ ಅಮೇರಿಕದ ಮಿಲಿಟರಿ ಬಹಳ ಉತ್ಸುಕತೆ ತೋರಿದೆ. ಯುಧ್ಧದಲ್ಲಿ ಕೈ ಕಾಲು ಕಳೆದುಕೊಂಡ ಯೋಧರಿಗೆ ಈ ಅಧ್ಯಯನ ಆಶಾಕಿರಣವಾಗಿ ಕಂಡುಬಂದಿದೆ.

ನಂಬಲಸಾಧ್ಯವೇ? ಹಾಗಾದರೆ ಹೆಚ್ಚಿನ ವಿವರ ಹಾಗೂ ವಿಡಿಯೋಗಳಿಗಾಗಿ ಕೆಳಗಿನ ಕೊಂಡಿಯ ಮೇಲೆ ಚಿಟುಕಿಸಿ.

http://news.bbc.co.uk/2/hi/health/7354458.stm

ಇನ್ನು ಮೇಲಾದರೂ ವರಾಹಮೂರ್ತಿಗಳು ರಸ್ತೆಯಲ್ಲಿ ಕಂಡಾಗ, ಅಸಹ್ಯ ಪಟ್ಟುಕೊಂಡು ಮುಖತಿರುಗಿಸಬೇಡಿ.
ಸ್ವಲ್ಪವಾದರೂ ಗೌರವ ಭಾವದಿಂದ ನೋಡಿ.

8-09-2008