Thursday 2 October 2008

ಅಪರಾಧಿ ಶ್ವಾನಪಾಲಕರ ಪತ್ತೆಗೆ DNA ತಂತ್ರಜ್ನಾನ !

(ಮೂಲ ಆಧಾರ: ನ್ಯೂಯಾರ್ಕ್ ಟೈಮ್ಸ್ - ಫ್ರೀಕನಾಮಿಕ್ಸ್ ಬ್ಲಾಗ್)












ಅಪರಾಧಿಗಳನ್ನು ಹಿಡಿಯಲು ಪತ್ತೇದಾರಿ ಶ್ವಾನಗಳನ್ನು ಉಪಯೋಗಿಸೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಪರಾಧಿ ಶ್ವಾನಪಾಲಕರನ್ನು ಹಿಡಿಯಲು ಬೇರೊಂದು ತಂತ್ರದ ಉಪಯೋಗ ಮಾಡುವುದು ಈ ಲೇಖನದ ವಿಷಯ. ಓದು ಮುಂದುವರೆಸಿ.





ಸುಮಾರು ನೂರೈವತ್ತು ವರ್ಷಗಳ ಹಿಂದಿನ ನ್ಯೂಯಾರ್ಕ್ ನಗರದಲ್ಲಿ ಪ್ರತಿ ದಿನ ಜನ ಮತ್ತು ಸರಕು ಸಾಗಾಣಿಕೆಗಾಗಿ 200,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕುದುರೆಗಳು ಉಪಯೋಗದಲ್ಲಿದ್ದವಂತೆ. ಕುದುರೆ ಅಂದ ಮೇಲೆ ಲದ್ದಿ ಹಾಕೋಲ್ವೇ? ಒಂದು ದಿನದ ಕುದುರೆ ಲದ್ದಿಯ ತೂಕ 2500ಟನ್‍ಗಳಿದ್ದು ಅದನ್ನು ಎತ್ತುವವರು ಯಾರೂ ಇರಲಿಲ್ಲವಂತೆ. ಇವೆಲ್ಲದರ ಜೊತೆಗೆ ಲಕ್ಷಗಟ್ಟಲೆ ಲೀಟರ್ ಕುದುರೆ ಮೂತ್ರ; ಅಲ್ಲಲ್ಲಿ ಖಾಯಿಲೆಯಿಂದ ನರಳಿ ಸುಸ್ತಾಗಿ ಬಿದ್ದು ಯಜಮಾನನ ಕೈಲಿ ಗುಂಡು ಹೊಡಿಸಿಕೊಂಡು ಸತ್ತ ಕುದುರೆಗಳ ಕೊಳೆಯುತ್ತಿರುವ ಕಳೇಬರಗಳು; ಓಡುತ್ತಿರುವ ಕುದುರೆಗಳ ಗೊರಸಿನ ಅಸಾಧ್ಯ ಶಬ್ದ ಬೇರೆ. ರಸ್ತೆಯಲ್ಲಿ ಓಡಾಡುವರ ಗತಿ ಏನಾಗಿರಬೇಕು ನೀವೇ ಊಹಿಸಿಕೊಳ್ಳಿ. ಆ ಗಬ್ಬು ನಾತದಿಂದ ಸಾಕಷ್ಟು ದೂರವಿರಲು ರಸ್ತೆಯ ಇಕ್ಕೆಲಗಳಲ್ಲಿನ ಬ್ರೌನ್‍ಸ್ಟೋನ್ ಮನೆಗಳ ಮುಂಬಾಗಿಲುಗಳು ಎರಡನೇ ಅಂತಸ್ತಿನಷ್ಟು ಎತ್ತರದಲ್ಲಿ ಕಟ್ಟಲಾಗುತ್ತಿತ್ತಂತೆ.

ವಿದ್ಯುಚ್ಛಕ್ತಿಯಿಂದ ನಡೆಯುವ ಸ್ಟ್ರೀಟ್‍ಕಾರ್‍ಗಳ ಆವಿಷ್ಕಾರವಾದನಂತರ ಮಾತ್ರವೇ, ಪರಿಹಾರವೇ ಇಲ್ಲ ಎಂದುಕೊಂಡಿದ್ದ ಈ ಕುದುರೆ ಲದ್ದಿ ಸಮಸ್ಯೆ ತಾನಾಗಿಯೇ ಮಾಯವಾಯಿತು. ಆದರೆ ಇಂದಿನ ಆಧುನಿಕ ನ್ಯೂಯಾರ್ಕ್ ನಗರದಲ್ಲಿ ಈಗಿರುವ ಲದ್ದಿಗಳ ಸಮಸ್ಯೆ ಅಲ್ಲಿನ ಶ್ವಾನ ಸಂಕುಲದಿಂದ ಸೃಷ್ಟಿಯಾದದ್ದು. ನ್ಯೂಯಾರ್ಕ್ ನಗರದಲ್ಲಿರುವ ನಾಯಿಗಳ ಸಂಖ್ಯೆಯ ಬಗ್ಗೆ ಅನೇಕ ಅನುಮಾನಗಳಿದ್ದರೂ ಒಂದು ನಂಬಲರ್ಹ ಅಂದಾಜಿನ ಪ್ರಕಾರ ಸುಮಾರು ಹತ್ತು ಲಕ್ಷ ನಾಯಿಗಳಿವೆಯಂತೆ. ಆದರೆ ಸಧ್ಯದಲ್ಲಿ ಈ ಎಲ್ಲ ನಾಯಿಗಳ ಲದ್ದಿಯೂ ನಗರದ ರಸ್ತೆಗಳಲ್ಲಿ ಕಂಡುಬರದೇ ಇರಲು ಕಾರಣ ಅಲ್ಲಿಯ ನಗರ ಪಾಲಿಕೆ 1978ರಲ್ಲಿ ಒಂದು ಜಗಜ್ಜನಿತ “pooper scooper” ಕಾನೂನನ್ನು ಜಾರಿಗೆ ತಂದದ್ದು. ಅಲ್ಲಿ ನಮ್ಮ ಹಾಗೆ ಬೀದಿ ನಾಯಿಗಳ ಹಾವಳಿಯಂತೂ ಇಲ್ಲ. ಆದರೆ ಅಲ್ಲಿನ ಶ್ವಾನಪಾಲಕರು ತಮ್ಮ ಪ್ರೀತಿಪಾತ್ರರನ್ನು ನಗರದ ರಸ್ತೆಗಳಲ್ಲಿ “walking” ಮಾಡಿಸುವ ನೆಪದಲ್ಲಿ ನಿತ್ಯವಿಧಿಗಳನ್ನು ಪೂರೈಸಿ ನೈವೇದ್ಯಪ್ರದಾನ ಮಾಡಿಸುತ್ತಾರೆ. ಕಾನೂನಿನ ಪ್ರಕಾರ ಪ್ರತಿ ಶ್ವಾನ ಪಾಲಕನೂ ತನ್ನ ಬಳಿಯಿರುವ Scooperನಿಂದ ನಾಯಿಯ ಅಮೇಧ್ಯವನ್ನು ಹೆಕ್ಕಿ ತೆಗೆದು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಹಲವೇ ನಿಗದಿತ ಜಾಗಗಳಲ್ಲಿ ಎಸೆಯಬೇಕು. ಆದರೆ ಅನೇಕರು ಈ ಕಾನೂನನ್ನು ಪಾಲಿಸುವುದಿಲ್ಲ ಎನ್ನುವುದಕ್ಕೆ ನಗರದ ರಸ್ತೆಗಳು ಮತ್ತು ಪಾರ್ಕುಗಳೇ ಸಾಕ್ಷಿ ಎಂದು ಆರೋಪಿಸುತ್ತಾರೆ ತಮ್ಮ 20% ಕ್ಕೂ ಹೆಚ್ಚು ಸ್ವಚ್ಚತಾ ವೈಫಲ್ಯದ ಹೊಣೆಯನ್ನು ಶ್ವಾನ ಅಮೇಧ್ಯದ ಮೇಲೆ ಹೊರೆಸುವ ನ್ಯೂಯಾರ್ಕ್ ನಗರದ Parks Departmentನ ಅಧಿಕಾರಿಗಳು.

Pooper scooper ಕಾನೂನಿದ್ದರೂ ಅದನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಉದಾಹರಣೆಗೆ, 99% ಶ್ವಾನಪಾಲಕರು ನಿಯಮವನ್ನು ಪಾಲಿಸುತ್ತಿದ್ದಾರೆ ಎಂದಿಟ್ಟುಕೊಂಡರೂ ಸುಮಾರು 10000 ಶ್ವಾನಪಾಲಕರು ಉಲ್ಲಂಘಿಸುತ್ತಾರೆ ಎಂಬರ್ಥವಲ್ಲ್ಲವೇ. ಆದರೆ 2004ರಲ್ಲಿ ಕೇವಲ 471 ಶ್ವಾನಪಾಲಕರನ್ನು ಚಲಾನ್ ಮಾಡಲಾಯಿತು. ಅಂದರೆ ಅಪರಾಧಿ ಸಿಕ್ಕಿ ಹಾಕಿಕೊಳ್ಳುವ ಸಂಭಾವನೆ ಕೇವಲ ಎಂಟುಸಾವಿರದಲ್ಲಿ ಒಂದು ಮಾತ್ರ. ಪರಿಸ್ಥಿತಿ ಹೀಗಿದ್ದಾಗ ಎಷ್ಟು ಶ್ವಾನಪಾಲಕರು ತಾನೆ ನಿಯಮ ಪಾಲಿಸಲು ಮುತುವರ್ಜಿ ವಹಿಸಿಯಾರು?

ಬರಿ ತಮಾಷೆಯಲ್ಲ! ಈ ಸಮಸ್ಯೆ ತುಂಬಾ ಗಂಭೀರ ಸ್ವರೂಪದ್ದು. ರಸ್ತೆಯಲ್ಲಿ ನಡೆಯುತ್ತಿರುವ ನಿಮಗಾಗಲಿ, ಪಾರ್ಕುಗಳಲ್ಲಿ ಆಟವಾಡುವ ನಿಮ್ಮ ಮಕ್ಕಳಿಗಾಗಲಿ ಹಠಾತ್ತಾಗಿ ಕಾಲಿಗೆ ಏನೋ ಮೆತ್ತನೆಯ ವಸ್ತು ಅಂಟಿಕೊಂಡರೆ ಅದೆಷ್ಟು ಅಸಹ್ಯವಲ್ಲವೇ?
ಒಂದು ಸಂಶೋಧನೆಯ ಪ್ರಕಾರ ಪ್ರತಿಯೊಂದು ಗ್ರಾಮ್ ನಾಯಿಯ ಅಮೇಧ್ಯದಲ್ಲಿ 20 ದಶಲಕ್ಷ E Coli ಬ್ಯಾಕ್ಟೀರಿಯಾದ ಕಾಲೊನಿಗಳಿರುತ್ತವಂತೆ. ಇನ್ನು ಈ ಅಮೇಧ್ಯದ ಪ್ರದೂಷಣಕಾರಿ ಶಕ್ತಿ ಅದೆಷ್ಟಿದೆಯೋ ನೀವೇ ಊಹಿಸಿಕೊಳ್ಳಿ.

ಈ ನಿಯಮವನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ 2005ರ ಸುಮಾರಿಗೆ Freakanomics ಖ್ಯಾತಿಯ ಸ್ಟೀವನ್ ಲೆವಿಟ್ ಮತ್ತು ಸ್ತೀಫನ್ ಡ್ಯೂಬ್ನರ್ ಎಂಬ ಅರ್ಥ ಶಾಸ್ತ್ರಿಗಳು ಒಂದು ಹೊಸ ತಂತ್ರದ ಪ್ರತಿಪಾದನೆ ಮಾಡಿದರು. ಅದೇನೆಂದರೆ ನಗರಪಾಲಿಕೆ ಪ್ರತಿ ನಾಯಿಗೂ ಲೈಸನ್ಸ್ ನೀಡುವ ಮುನ್ನ ಅದರ ಜೊಲ್ಲು ಅಥವಾ ರಕ್ತದ ಸ್ಯಾಂಪಲ್ ಒಂದನ್ನು ಶೇಖರಿಸಿ ಅದರ DNA profile ತಯಾರಿಸಿ ಒಂದು ಅಗಾಧವಾದ databank ಸೃಷ್ಟಿಸಬೇಕು. ನಾಯಿಯ ಜಠರ ಮತ್ತು ಕರುಳು ಬಹಳಷ್ಟು ಜೀವಕೋಶಗಳನ್ನು ಸ್ರವಿಸುದರಿಂದ ಅವುಗಲ ಅಮೇಧ್ಯ DNA ಪರೀಕ್ಷಣೆಗೆ ಬಹಳ ಸೂಕ್ತ ವಸ್ತು. ಇನ್ನು ತಿಳಿಯಿತಲ್ಲ! ಕೆಲಸ ಸುಲಭ. ಎತ್ತದ ಅಮೇಧ್ಯದ DNA ಪರೀಕ್ಷಣೆ, Databankನಿಂದ ನಾಯಿಯ ಮತ್ತು ಶ್ವಾನಪಾಲಕನ ಸುಳಿವನ್ನರಿತು ಅವರ ವಿಳಾಸಕ್ಕೆ ಚಲಾನ್ ಕಳಿಸುವುದು. ಎಷ್ಟು ಸುಲಭ?

ಕೆಲಸ ಅಂದುಕೊಂಡಷ್ಟು ಸುಲಭವಲ್ಲ . ನ್ಯೂಯಾರ್ಕ್ ನಗರದಲ್ಲಿ ಹತ್ತು ಲಕ್ಷಕ್ಕೂ ಮೀರಿ ನಾಯಿಗಳಿದ್ದರೂ, 2003ರ ದಾಖಲೆಗಳ ಪ್ರಕಾರ ಕೇವಲ 102,004 ನಾಯಿಗಳ ಲೈಸನ್ಸ್ ಅರ್ಜಿಗಳು ಸ್ವೀಕರಿಸಲಾಗಿತ್ತು. ಅದೂ ಇಂತಹ ಪರಿಸ್ಥಿತಿ, ಲೈಸನ್ಸ್ ಸ್ವೀಕರಿಸಲು ಕಷ್ಟ ಪಡದೆ ಮನೆಯಲ್ಲಿಯೇ ಕುಳಿತು ಕೇವಲ 8.5 ಡಾಲರ್ ಕೊಟ್ಟು ಅಂಚೆ ಮೂಲಕ ಅರ್ಜಿ ಸಲ್ಲಿಸಿ, ಅಂಚೆಯ ಮೂಲಕವೇ ಪಡೆಯಬಹುದಾದ ಸೌಲಭ್ಯವಿದ್ದಾಗ್ಯೂ ಕೂಡ. ಇನ್ನು ಅದೇ ವರ್ಷ ಲೈಸನ್ಸ್ ನಿಯಮದ ಉಲ್ಲಂಘನೆಗಾಗಿ ಕಳಿಸಿದ ಸಮನ್ಸ್ ಸಂಖ್ಯೆ ಕೇವಲ 68.

ಸ್ಥಿತಿ ಹೀಗಿರುವಾಗ, ನ್ಯೂಯಾರ್ಕ್ ನಗರದ ಎಲ್ಲ ನಾಯಿಗಳಿಗೂ ಕಡ್ಡಾಯವಾಗಿ ಲೈಸನ್ಸ್ ನೀಡಿ, ಅವುಗಳ DNA ಶೇಖರಿಸುವುದು ಹೇಗೆ? ಲೆವಿಟ್ ಮತ್ತು ಡ್ಯೂಬ್ನರ್ ಪ್ರಕಾರ ಇದಕ್ಕೊಂದು ಉಪಾಯ - ಅರ್ಜಿದಾರರಿಂದ ಲೈಸನ್ಸ್ ಹಣ ಪೀಕುವುದರ ಬದಲಾಗಿ ಅವರಿಗೆ ಹಣದ ಆಮಿಷ ನೀಡುವುದು.

2005ರಲ್ಲಿ ಲೆವಿಟ್ ಮತ್ತು ಡ್ಯೂಬ್ನರ್, ಈ ಮೇಲಿನ DNA ಥಿಯರಿಯನ್ನು ಪ್ರತಿಪಾದಿಸಿದಾಗ, ಅವರನ್ನು ಹೀಯಾಳಿಸಿ, ಮೂದಲಿಸಿ, ಏನೇನೋ ಹಿಡಕೊಂಡು ಬಿದ್ದು ಬಿದ್ದು ನಕ್ಕವರದೆಷ್ಟೋ ಜನ. ಅದರೆ ವಿಯೆನ್ನಾ , ಬರ್ಲಿನ್ ಮತ್ತು ಡ್ರೆಸ್ಡೆನ್ ನಗರಗಳಲ್ಲಿ ಇದೇ ರೀತಿಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುತ್ತಿತ್ತು.

ಇದೀಗ September 2008ರಲ್ಲಿ ಬಂದ ವರದಿಯಂತೆ, ಇಸ್ರೇಲ್‍ ರಾಜಧಾನಿ ಟೆಲ್ ಅವೀವ್‍ ಬಳಿಯ ಪೆಟಾಹ್ ಟಿಕ್ವಾ ಎಂಬ ಉಪನಗರಿಯಲ್ಲಿ DNA ಅಧಾರಿತ ಲೈಸನ್ಸ್ ಪಧ್ಧತಿ ಜಾರಿಗೆ ಬಂದಿದೆಯಂತೆ. ತಮ್ಮ ನಾಯಿಯ ಅಮೇಧ್ಯ ಹೆಕ್ಕಿ ತೆಗೆದು, ಬಳಿಯಲ್ಲಿರುವ ವಿಶೇಷ ಡಬ್ಬಗಳಲ್ಲಿ ಹಾಕುವ ಶ್ವಾನಪಾಲಕರಿಗೆ, Dog food coupons ಮತ್ತ್ತು ನಾಯಿಗಳ ಆಟಿಗೆಗಳನ್ನು ಬಳುವಳಿಯಾಗಿ ಕೊಡಲಾಗುವುದು. ತಪ್ಪಿತಸ್ಥರಿಗೆ ಜುಲ್ಮಾನೆ ವಿಧಿಸಲಾಗುವುದಂತೆ. ಈ ಪಧ್ಧತಿಗೆ ಸ್ಥಳೀಯ ನಾಗರಿಕರ ಹೃತ್ಪೂರ್ವಕ ಸಹಕಾರ ದೊರಕಿದೆ ಎಂದು ವರದಿಯಾಗಿದೆ.

ಇಂತಹ ಕಾನೂನು ಭಾರತದಲ್ಲಿ ಕೂಡಾ ಅನ್ವಯವಾಗುವ ಸಾಧ್ಯತೆ ಅಥವಾ ಅಸಾಧ್ಯತೆಗಳ ಬಗ್ಗೆ ಚರ್ಚಿಸುವಾಗ, ನಾಯಿಗಳ ಬದಲಾಗಿ ಮೊದಲು ಇಂತಹ ಕಾನೂನು ನಮ್ಮ ನಗರಗಳಲ್ಲಿ ಅನೇಕ ಸಂಖ್ಯೆಯಲ್ಲಿದ್ದು ಕಂಡಲ್ಲಿ ಕುಕ್ಕರಿಸುವ (ಅ)ನಾಗರಿಕರಿಗೆ ಅನ್ವಯವಾಗುವುದು ಸೂಕ್ತವೇನೋ ಅಂತ ಯಾರೋ ಹೇಳಿದಂತಿತ್ತು.

*****************************************************
ಈ ಲೇಖನ ಮೊದಲ ಬಾರಿ thatskannada.comನಲ್ಲಿ 26ನೇ ಸೆಪ್ಟೆಂಬರ್ 2008 ರಂದು ಪ್ರಕಟವಾಯಿತು.
http://thatskannada.oneindia.in/nri/article/2008/0926-pooper-scooper-freakonomics-ny.html

1 comment:

ಗೌತಮ್ ಹೆಗಡೆ said...

enenu maadtarapa e jagattinalli:)