Wednesday, 26 March 2008

ವಲಸಿಗರ ಬಗ್ಗೆ ಅಸಹಜ ದ್ವೇಷವೇಕೆ?


ಇಂಗ್ಲೀಷ್ ಮೂಲ : ಶ್ರೀ ಗುರುಚರಣ್ ದಾಸ್, ಮಾಜಿ ಮುಖ್ಯಸ್ಥ, ಪ್ರಾಕ್ಟರ್ ಎಂಡ್ ಗ್ಯಾಂಬಲ್ ಕಂ.
ಅನುವಾದ: ನವರತ್ನ ಸುಧೀರ್

ನಮಗೆ ಇಷ್ಟವಿರಲಿ, ಇಲ್ಲದಿರಲಿ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ ಸೃಷ್ಟಿಯಾಗುವುದು ಅನಿವಾರ್ಯ. ಈ ಪ್ರಕ್ರಿಯೆಯಿಂದ ಅನೇಕ ಸಾಮಾಜಿಕ ಬದಲಾವಣೆಗಳಾಗುವುದೂ ಅಷ್ಟೇ ಅನಿವಾರ್ಯ. ಜೀವನೋಪಾಯ ಹುಡುಕುತ್ತ ಹುಟ್ಟಿ ಬೆಳೆದ ನಾಡನ್ನು ಬಿಡಬೇಕಾಗಿ ಬಂದು, ಎಂದೂ ಕಂಡೂ ಕೇಳದ ದೂರದ ನಾಡಿಗೆ ವಲಸೆಹೋಗಿ. ಬೇರೆ ಭಾಷೆ ಮತ್ತು ಸಂಸ್ಕೃತಿಯ ಜನರ ನಡುವೆ ಜೀವಿಸಬೇಕಾಗುವ ಅವಶ್ಯಕತೆ ಇಂದು ಅನೇಕರಿಗೆ ಇದೆ. ಸ್ವಾಭಾವಿಕವಾಗಿಯೆ ವಲಸಿಗರು ತಮ್ಮ ಶ್ರಮ ಮತ್ತು ಕಾರ್ಯ ತತ್ಪರತೆಗಳಿಂದ ಹೊಸ ಸಮಾಜಕ್ಕೆ ಪ್ರಯೋಜನಕಾರಿ ದೇಣಿಗೆ ನೀಡಲು ಉತ್ಸುಕರಾಗಿರುತ್ತಾರೆ. ಹಾಗಾಗಿ ಮಣ್ಣಿನ ಮಕ್ಕಳೆಂದೆನಿಸಿಕೊಂಡು ತಮ್ಮ ಕಲ್ಪಿತ ಪ್ರಪಂಚ ಶಾಶ್ವತ ಎಂದು ನಂಬಿಕೊಂಡಿರುವ ಸ್ಥಳೀಯರ ಮತ್ತು ವಲಸಿಗರ ಹಿತಾಸಕ್ತಿಗಳ ನಡುವಣ ಘರ್ಷಣೆ ಪ್ರಾರಂಭವಾಗಲು ಹೊತ್ತೇನೂ ಹಿಡಿಯುವುದಿಲ್ಲ. ಸಮಾಜ ಶಾಸ್ತ್ರದಲ್ಲಿ Xenophobia ಎಂಬ ಒಂದು ಪದವಿದೆ. ಕನ್ನಡ ಕಸ್ತೂರಿ. ಕಾಂ ನಿಘಂಟಿನ ಪ್ರಕಾರ ಈ ಪದದ ಅರ್ಥ - ಪರ ದೇಶದವರ ಬಗ್ಗೆ ಇರುವ ದ್ವೇಷಪೂರ್ಣ ಭೀತಿ. ಸ್ಥಳೀಯರ ಮನದಲ್ಲಿನ ಈ ಅವ್ಯಕ್ತ ಭೀತಿ ಸಮಯ ಸಮಯಕ್ಕೆ ಅನೇಕ ನಕಾರಾತ್ಮಕ ಹಾಗೂ ಹಿಂಸಾತ್ಮಕ ರೂಪಗಳಲ್ಲಿ ಪ್ರಕಟವಾಗುವುದುಂಟು.

23ನೇ ಮಾರ್ಚ್ 2008 ರಂದು “ಟೈಮ್ಸ್ ಆಫ್ ಇಂಡಿಯಾ” ಇಂಗ್ಲೀಷ್ ಪತ್ರಿಕೆಯಲ್ಲಿ ಖ್ಯಾತ ಚಿಂತಕ ಹಾಗೂ ಲೇಖಕ ಗುರುಚರಣ್ ದಾಸ್‍ರವರು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಗಳ ಬಗ್ಗೆ ಬರೆದ Thackeray scores a self-goal ಎನ್ನುವ ಲೇಖನದಲ್ಲಿ ಈ Xenophobia ಎಂಬ ಸಾಮಾಜಿಕ ಪಿಡುಗಿನ ಉಲ್ಲೇಖವಿದೆ. ಮಹಾರಾಷ್ಟ್ರದಲ್ಲಿ ನಡೆದದ್ದು ನಮ್ಮ ಕರ್ನಾಟಕದಲ್ಲೂ ಮುಂದೆ ನಡೆಯಬಹುದಾದ್ದರಿಂದ ಈ ಲೇಖನದ ಅನ್ವಯತೆ ನಮಗೂ ಇದೆ ಎಂದೆನಿಸಿ, ಕೆಳಕಂಡಂತೆ ಕನ್ನಡಕ್ಕೆ ಅನುವಾದ ಮಾಡಲಾಗಿದೆ.

“ಆಗಬಾರದ ಅನಾಹುತ ಆಗಿ ಹೋಗಿದೆ. ರಾಜ್ ಠಾಕ್ರೆಯವರ ಮಹಾರಾಷ್ಟ್ರೀಯವಾದಿ ಆಕ್ರೋಶದಿಂದ ಹೆದರಿ ಊರು ಬಿಟ್ಟು ಹೋಗುತ್ತಿರುವ ಉತ್ತರ ಭಾರತೀಯ ಕಾರ್ಮಿಕರ ಕೊರತೆಯಿಂದಾಗಿ ಪುಣೆ, ನಾಸಿಕ್ ಮತ್ತು ಠಾಣೆಯಲ್ಲಿನ ಉದ್ಯಮಿಗಳು ತಮ್ಮ ಉದ್ಯಮಗಳನ್ನು ವಿಸ್ತರಿಸುವ ಯೋಜನೆಗಳನ್ನು ನಿಲ್ಲಿಸಿ ಇತರೆ ರಾಜ್ಯಗಳತ್ತ ಕಣ್ಣು ಹಾಯಿಸಿದ್ದಾರೆ. ಹಿಂದೊಮ್ಮೆ ದತ್ತ ಸಾಮಂತರ ಕಾರ್ಮಿಕರ ತೀವ್ರವಾದ ಮತ್ತು ಬಾಲಾಸಾಹೇಬ್ ಠಾಕ್ರೆಯವರ ಪರದೇಶಿಗರ ಬಗೆಗಿನ ದ್ವೇಷಪೂರ್ಣ ಭೀತಿಯುಕ್ತ ಚಳುವಳಿಗಳಿಂದಾಗಿ ಉನ್ನತ ಸ್ಥರದ ಹುದ್ದೆಗಳೆಲ್ಲ ಬೆಂಗಳೂರಿಗೆ ಮತ್ತು ಕಾರ್ಮಿಕ ಸ್ಥರದ ಕೆಲಸಗಳೆಲ್ಲ ಗುಜರಾತಿಗೆ ಸ್ಥಳಾಂತರಗೊಂಡ ದುಃಸ್ವಪ್ನ ಮತ್ತೊಮ್ಮೆ ಕಾಡಲಾರಂಭಿಸಿದೆ.

ಒಂದು ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳದ ಹೊಳೆ ಆಕರ್ಷಕ ಪ್ರದೇಶಗಳಿಗೆ ಮಾತ್ರ ಹರಿಯುತ್ತದೆ. ಒಂದು ನಗರ ಅಥವಾ ರಾಜ್ಯ ಈ ಪರಿ ಆಕರ್ಷಕವೆನಿಸುವುದರಲ್ಲಿ ಒಂದು ಮುಖ್ಯ ಕಾರಣ ಉತ್ತಮ ಉತ್ಪಾದನಾ ಸಾಮರ್ಥ್ಯವುಳ್ಳ ಕೆಲಸಗಾರರ ಸುಲಭವಾಗಿ ದೊರಕುವಿಕೆ. ಹೊರಗಿನಿಂದ ವಲಸೆಬಂದ ಕಾರ್ಮಿಕರು ಸ್ಥಳೀಯ ಕಾರ್ಮಿಕರಿಗಿಂತ ಹೆಚ್ಚು ಆಸಕ್ತಿ ಮತ್ತು ಶ್ರಮವಹಿಸಿ ದುಡಿಯುತ್ತಾರೆಂಬುದು ನಮಗೆ ಎಷ್ಟೇ ಅಪ್ರಿಯವೆನಿಸಿದರೂ ಅಲ್ಲಗೆಳೆಯಲಾಗದ ಸತ್ಯ. ರಿಚರ್ಡ್ ಫ್ರೀಮನ್‍ನಂತಹ ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಿಗಳು ಹಾಗೂ ಮತ್ತಿತರರ ಸಂಶೋಧನೆಯ ಪ್ರಕಾರ ಯಾವ ಸಮಾಜ ಮತ್ತು ಸಂಸ್ಕೃತಿಗಳು ವಲಸಿಗರನ್ನು ಪ್ರೋತ್ಸಾಹಿಸಿ ತಮ್ಮದಾಗಿಸಿಕೊಳ್ಳುತ್ತವೆಯೋ ಅಂಥವು ಬೇರೆಲ್ಲ ಸಮಾಜಗಳಿಗಿಂತ ಬಹಳ ಮುಂದುವರೆದು ಏಳಿಗೆ ಸಾಧಿಸುತ್ತವೆ ಎಂದು ಪ್ರತಿಪಾದಿಸಲಾಗಿದೆ. ಅದಕ್ಕೇ ತಜ್ನರ ಪ್ರಕಾರ 21ನೇ ಶತಮಾನದಲ್ಲಿ, ಅಮೇರಿಕೆ ಎಲ್ಲ ದೇಶಗಳಿಗಿಂತ ಸ್ಪರ್ಧೆಯಲ್ಲಿ ಮುಂದಾಗಿ ಉಳಿದು ಯೂರೋಪ್ ಮತ್ತು ಜಪಾನ್ ಕ್ರಮೇಣ ಹಿಂದುಳಿಯುತ್ತವೆ. ಏಕೆಂದರೆ ಅಮೇರಿಕ ವಲಸಿಗರನ್ನು ತನ್ನ ಸಮಾಜದಲ್ಲಿ ಗೌರವಯುತ ಸ್ಥಾನ ಮತ್ತು ಅವಕಾಶ ನೀಡಿ ಐಕ್ಯಗೊಳಿಸುವುದರಲ್ಲಿ ಸಫಲವಾದರೆ, ಐತಿಹಾಸಿಕವಾಗಿ ಯೂರೋಪ್ ಮತ್ತು ಜಪಾನ್ ಈ ಕಾರ್ಯದಲ್ಲಿ ಬಹಳ ವಿಫಲವಾಗಿವೆ. ವೃಧ್ಧರ ಸಂಖ್ಯೆ ಹೆಚ್ಚುತ್ತ, ಪ್ರಾಪ್ತವಯಸ್ಕ ಕಾರ್ಮಿಕರ ಸಂಖ್ಯೆ ನಶಿಸುತ್ತಿರುವಂತಹ ಯೂರೋಪ್ ಮತ್ತು ಜಪಾನ್ ದೇಶಗಳು ಮುಂಬರುವ ದಿನಗಳಲ್ಲಿ ಚೀನಾ ಮತ್ತು ಭಾರತಗಳಿಗೂ ಸೋತು ಬಹಳ ಹಿಂದೆ ಬೀಳುವ ಸಂಭಾವನೆ ಹೆಚ್ಚಾಗಿ ತೋರುತ್ತಿದೆ.

ಭಾರತೀಯ ರೈಲು ಪ್ರತಿ ವರ್ಷ 640 ಕೋಟಿ ರೈಲು ಟಿಕೆಟ್ಟುಗಳನ್ನು ಮಾರುತ್ತವೆ. ಇದರಲ್ಲಿ ಮೂರನೇ ಒಂದು ಭಾಗ ದಿನಕೆಲಸಕ್ಕಾಗಿ ಓಡಾಡುವ ಕೆಲಸಗಾರರಿಗಾಗಿ ಎಂದಿಟ್ಟುಕೊಂಡರೆ, ಮಿಕ್ಕ ಸಂಖ್ಯೆ ನೂರಹತ್ತು ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ, ಪ್ರತಿಯೊಬ್ಬರಿಗೂ ವರ್ಷಪ್ರತಿ ನಾಲ್ಕು ಪ್ರವಾಸಗಳಿಗಾಗಿ ಟಿಕೆಟ್ ಕೊಂಡಂತೆ ಲೆಕ್ಕಾಚಾರವಾಗುತ್ತದೆ. ನಮ್ಮದು ನಿರಂತರ ಚಾಲನೆಯಲ್ಲಿರುವ ದೇಶ. ಅದರಲ್ಲೂ ಬಡವರು ಕೆಲಸಕ್ಕಾಗಿ, ಒಳ್ಳೆಯ ಜೀವನೋಪಾಯಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲೇಬೇಕಾಗುವ ದೇಶ. ನಮ್ಮ ನಗರಗಳು ಬಹು ದೇಶೀಯ ಜನ ಮತ್ತು ಸಂಸ್ಕೃತಿಗಳ ಆಗರಗಳಾಗಿ ಪರಿವರ್ತಿತಗೊಂಡು, ಕ್ರಮೇಣ ಪ್ರಾದೇಶಿಕ ಅಸ್ತಿತ್ವ ಮರೆಯಾಗಿ ಹೊಸ ಭಾರತೀಯತೆಯ ಕುರುಹನ್ನು ಪ್ರತಿಪಾದಿಸುತ್ತಿವೆ. ಈ ಪರಿಯ ವಿದ್ಯಮಾನಗಳು ರಾಜ್ ಠಾಕ್ರೆಯಂತಹ ದುರಾಗ್ರಹ ಪೀಡಿತರಿಗೆ ಬಹಳ ನೋವುಂಟುಮಾಡುತ್ತ ತಮ್ಮ ಉಳಿವಿಗಾಗಿ ಅವರು ಏನನ್ನಾದರೂ ಮಾಡಿಯೇ ತೀರಬೇಕೆಂಬ ಛಲ ಹುಟ್ಟಿಸುತ್ತವೆ.

ನಿಜವಾಗಿಯೂ ಮಹಾರಾಷ್ಟ್ರದ ಕಾರ್ಮಿಕರಿಗೊಂದು ದೊಡ್ಡ ಸಮಸ್ಯೆಯಿದೆ. ಅದೇನೆಂದರೆ ತಮಗಿಂತ ಚತುರ ಮತ್ತು ಹೆಚ್ಚು ಉತ್ಪಾದನಾ ಸಾಮರ್ಥ್ಯವುಳ್ಳ ವಲಸಿಗರೊಡ್ಡಿದ ಸವಾಲನ್ನೆದುರಿಸುವುದು. ಇದಕ್ಕಿರುವುದೊಂದೇ ಉತ್ತರ. ಅದು, ಮಹಾರಾಷ್ಟ್ರವನ್ನು ಹಣ ಹೂಡಿಕೆಗಾಗಿ ಮತ್ತಿಷ್ಟು ಆಕರ್ಷಕವನ್ನಾಗಿಸುವುದು. ರಾಜ್ ಠಾಕ್ರೆ ತಮ್ಮ ರಾಜ್ಯದಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉತ್ತಮ ದರ್ಜೆಯ ಶಾಲಾಕಾಲೇಜುಗಳು ಮತ್ತು ವೃತ್ತಿ ಪರ ಶಾಲೆಗಳ ಸ್ಥಾಪನೆಗಾಗಿ ಪ್ರಯತ್ನಿಸಬೇಕು. ಇದರಿಂದ ಮಹಾರಾಷ್ಟ್ರೀಯರು ಇತರರಿಗಿಂತ ಹೆಚ್ಚು ಕುಶಲರೂ ಮತ್ತು ಸ್ಪರ್ಧಿಸಲು ಶಕ್ತರೂ ಆಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಮುಂದುವರೆದು ಅವರು ಮಧ್ಯಮವರ್ಗಕ್ಕೆ ಭಡ್ತಿ ಪಡೆದು ಕೆಳ ಸ್ಥರದ ಕೆಲಸಗಳು ಮಾತ್ರ ವಲಸಿಗರ ಪಾಲಿಗೆ ಉಳಿಯುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಕಾಡುತ್ತಿರುವ ಪ್ರಶ್ನೆಯೊಂದಿದೆ. ಅದೇನೆಂದರೆ ಸಾಧಾರಣ ಹಾಗೂ ಸಭ್ಯ ಮನೆತನಗಳಲ್ಲಿ ಬೆಳೆದ ಮಹಾರಾಷ್ಟ್ರದ ಹುಡುಗರು ಹಿಂಸೆ ಮತ್ತು ಕ್ರೌರ್ಯಪೂರಿತ ಪುಂಡರ ಗುಂಪಾಗಿ ಮಾರ್ಪಾಡಾಗುವುದು ಹೇಗೆ? “ಅದು ಹೇಗೆ 1930ರಲ್ಲಿ ನಾವು ಅಂತಹ ಕ್ರೂರ ನಾಜಿಗಳಾಗಿಹೋದೆವು?” ಎನ್ನುವ ಪ್ರಶ್ನೆಗೆ ಉತ್ತರವನ್ನು ಜರ್ಮನಿಯ ಪ್ರಜೆಗಳು ಕೂಡ ಕಳೆದ ಎಪ್ಪತ್ತೈದು ವರ್ಷಗಳಿಂದ ಹುಡುಕುತ್ತಲಿದ್ದಾರಂತೆ. ತನ್ನ The Most Dangerous Animal ಪುಸ್ತಕದಲ್ಲಿ ಡೇವಿಡ್ ಲಿವಿಂಗ್‍ಸ್ಟೋನ್ ಈ ಪ್ರಶ್ನೆಗೆ ಉತ್ತರ ಕೊಡಲೆತ್ನಿಸುತ್ತಾನೆ. ಅವನ ಪ್ರಕಾರ ಪ್ರತಿ ಮಾನವನಲ್ಲೂ ಅಸುರೀ ಶಕ್ತಿಯ ಅಂಶ ಸುಪ್ತಚೇತನವಾಗಿರುತ್ತದೆ. ಇದಕ್ಕೆ ಕಿಡಿ ಹಚ್ಚಿ ಭುಗಿಲೇಳಿಸಲು ಹಿಟ್ಲರ್ ಅಥವಾ ರಾಜ್ ಠಾಕ್ರೆಯವರಂತಹ triggerನ ಅವಶ್ಯಕತೆಯಿದೆ ಮಾತ್ರ! ಆ ಒಂದು ಕರಾಳ ಮಧ್ಯಾಹ್ನ 38000 ಮಂದಿ ಯಹೂದಿಗಳನ್ನು ಗುಂಡಿಕ್ಕಿ ಕೊಂದ ಜರ್ಮನ್ ರಿಸರ್ವ್ ಪೋಲೀಸ್ ಬೆಟಾಲಿಯನ್ 101 ಪಡೆಯ ಸಿಪಾಯಿಗಳೆಲ್ಲರೂ “ ಯಾವ ಸೈಧ್ಧಾಂತಿಕ ನೆಲೆಗಟ್ಟೂ ಇಲ್ಲದ ಹಾಗೂ ಮಿಲಿಟರಿ ತರಬೇತಿಯಿಲ್ಲದ ಮಧ್ಯವಯಸ್ಕ ಕುಟುಂಬಸ್ಥರು”. ಇತಿಹಾಸದ ಎಲ್ಲ ನರಮೇಧಗಳ ಕಥೆಯೂ ಹೀಗೆಯೆ.
ಕೊಲೆಗಡುಕ ನೀವೂ ಆಗಬಹುದು ಅಥವಾ ನಾನೂ ಆಗಬಹುದು. ವಿಜ್ನಾನಿಗಳ ಪ್ರಕಾರ ಹಿಂಸಾತ್ಮಕ ಪ್ರವೃತ್ತಿ ನಮ್ಮೆಲ್ಲರ ಜೀವಾಣುಗಳಲ್ಲಿ ಅಡಗಿವೆ. ಬೇರೆಲ್ಲ ಸಾಮಾಜಿಕ ಪ್ರಾಣಿಗಳಂತೆಯೇ, ಇರುವೆಗಳಿಂದ ಹಿಡಿದು ಚಿಂಪಾಂಜಿಗಳನ್ನೂ ಒಳಗೊಂಡು ನಾವೆಲ್ಲರೂ ಪರರ ಬಗ್ಗೆ ವಿನಾಕಾರಣ ಅಪಾರ ಭೀತಿ ಮತ್ತು ದ್ವೇಷವುಳ್ಳವರು, ಅರ್ಥಾತ್ ಕಲಹಪ್ರಿಯರು. ನಾವೆಲ್ಲ ಒಟ್ಟಾಗಿ ಒಂದಾದಷ್ಟೂ ಹೊರಗಿನವರನ್ನು ಅಷ್ಟೇ ಆಕ್ರಮಣಶೀಲರಾಗಿ ಎದುರಿಸುತ್ತೇವೆ. ಬಹುಶಃ ನಮ್ಮ ಸಂವಿಧಾನದ ಕರ್ತರಿಗೆ ಈ ವಿಚಾರದ ಮನವರಿಕೆಯಿದ್ದಂತಿದೆ. ಅದಕ್ಕೇ ನಮ್ಮ ಸಂವಿಧಾನದಲ್ಲಿ, ಮನುಷ್ಯ ಪಶುವಿಗೆ ಅಧಿಕಾರ ನೀಡುವ ಮುನ್ನ ಅದನ್ನು ನಿರ್ವಹಿಸುವ ಹಾದಿಯಲ್ಲಿ ಅನೇಕ ಅಡೆ ತಡೆ, ನಿರ್ಬಂಧಗಳನ್ನು ರೂಪಿಸಲಾಗಿದೆ.

ಹೀಗೆ self goal ಮಾಡಿಕೊಳ್ಳುವ ಬೃಹಸ್ಪತಿ ರಾಜ್ ಠಾಕ್ರೆ ಒಬ್ಬರೇ ಅಲ್ಲ. ಮಲೇಶಿಯಾದಲ್ಲಿ ಕೂಡ ಪ್ರಸಕ್ತ ನಡೆಯುತ್ತಿರುವ “ಭೂಮಿಪುತ್ರ” ಚಳುವಳಿಯಿಂದಾಗಿ ಆ ದೇಶದಲ್ಲಿ ಆಗಬಹುದಿತ್ತಾದ ಹಣ ಹೂಡಿಕೆ ಬೇರೆ ಪೂರ್ವಾತ್ಯ ದೇಶಗಳೆಡೆ ಹರಿದುಹೋಗುತ್ತಿದೆ. ಹಾಗೆಯೇ ಹಲವು ವರ್ಷಗಳ ಹಿಂದೆ ಒಂದು ಆಕರ್ಷಕ ’ಗ್ರೀನ್ ಕಾರ್ಡ್” ಯೋಜನೆಯನ್ನು ರೂಪಿಸಿ ಕೂಡ ಜರ್ಮನಿ, ಭಾರತೀಯ ಸಾಫ್ಟ್‍ವೇರ್ ಎಂಜಿನಿಯರ್‍ಗಳನ್ನು ತನ್ನೆಡೆಗೆ ಆಕರ್ಷಿಸಲು ವಿಫಲವಾಯಿತು. ಕಾರಣ ಜರ್ಮನಿಯ ನಾಗರಿಕರು ವಲಸಿಗರನ್ನು ಗೌರವಿಸಿ ಆತಿಥ್ಯ ನೀಡುವುದಿಲ್ಲ ಎಂಬ ತಥ್ಯ ಎಲ್ಲೆಡೆ ಹರಡಿದ್ದು. ಒಂದು ಸ್ಪರ್ಧಾತ್ಮಕ ವಿಶ್ವದಲ್ಲಿ, ಸಮಾಜದ ಏಳಿಗೆಯಾಗಬೇಕಾದರೆ ವಲಸಿಗರಿಂದ ಆಗಬಹುದಾದ ಕಾಣಿಕೆಯ ಬಗೆಗಿನ ಪರಿಪಕ್ವ ಅರಿವು ಒಂದು ಸಮಾಜಕ್ಕಿರುವುದು ಅದೃಷ್ಟದ ಮಾತೇ ಸರಿ."

************************************************************************************
ಮೇಲಣ ಲೇಖನ ಮೊದಲ ಬಾರಿ 25-03-2008ರಂದು thatskannada.comನಲ್ಲಿ ಪ್ರಕಟವಾಯಿತು.

Tuesday, 25 March 2008

ವಿಶ್ವದ ಅತಿ ಜಾಣ ಮತ್ತು ಬುಧ್ಧಿವಂತ ಮಕ್ಕಳಿರುವ ದೇಶ ಯಾವುದು?

- ನವರತ್ನ ಸುಧೀರ್

ಇದೆ ಹಾಗೊಂದು ದೇಶ. ಈ ದೇಶದ ಮಕ್ಕಳು ಏಳು ವರ್ಷ ವಯಸ್ಸಾಗುವವರೆಗೂ ಶಾಲೆಗೆ ಹೋಗುವುದಿಲ್ಲ. ತಂದೆ ತಾಯಿಗಳು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೋಲ್ಲ. ಸ್ಕೂಲ್ ಯೂನಿಫಾರ್ಮ್‍ಗಳಿಲ್ಲ. ಸ್ಪೋರ್ಟ್ಸ್‍ ಕ್ಲಬ್‍ಗಳಿಲ್ಲ. ಹೈಸ್ಕೂಲಿನ ಮಕ್ಕಳಿಗೂ ದಿನಕ್ಕೆ ಅರ್ಧಘಂಟೆಗೂ ಹೆಚ್ಚಿನ ಹೋಮ್‍ವರ್ಕ್ ಇರೋಲ್ಲ. ವಿದ್ಯಾಭ್ಯಾಸಕ್ಕಾಗಿ ನಿಯಮಿತ ಸಿಲಬಸ್ ಅಂತ ಇಲ್ಲ. ಪುರಸ್ಕೃತ ಪುಸ್ತಕಗಳೂ ಅಂತಲೂ ಇಲ್ಲ. ಎಲ್ಲವೂ ಶಿಕ್ಷಕರ ಇಛ್ಛಾನುಸಾರ ನಿರ್ಧಾರಿತ. ದೇಶ ತಂತ್ರಜ್ನಾನದಲ್ಲಿ ವಿಶ್ವದ ಮುಂಚೂಣಿಯಲ್ಲಿದ್ದರೂ, ತರಗತಿಗಳಲ್ಲಿ ಪವರ್‍ಪಾಯಿಂಟ್ ಉಪಯೋಗವಿಲ್ಲದೆ ಕರಿಯ ಬಣ್ಣದ ಬರಿಯುವ ಹಲಗೆ - ಸೀಮೆಸುಣ್ಣದ ಬಳಪ, ಓವರ್‍ಹೆಡ್ ಪ್ರೊಜೆಕ್ಟರ್‍ಗಳ ಪ್ರಯೋಗ. ಇಲ್ಲಿಯ ಶಾಲಾ ಕಾಲೇಜುಗಳಲ್ಲಿ ಅಮೇರಿಕೆಯಲ್ಲಿರುವಂತೆ ಹಾರ್‍ವರ್ಡ್, ಪ್ರಿನ್ಸ್‍ಟನ್ ತರಹದ ಉಚ್ಛ ನೀಚ ಸ್ತರದ ತಾರತಮ್ಯಗಳಿಲ್ಲ. ಎಲ್ಲ ದೇಶದ ಮಕ್ಕಳಂತೆ ಇಲ್ಲಿಯ ಮಕ್ಕಳೂ ಜೀನ್ಸ್, ಟ್ಯಾಂಕ್‍ಟಾಪ್ ಧರಿಸುತ್ತಾರೆ. ಹಲವರು ಸ್ಟಿಲ್ಲೆಟೋ ಹೀಲ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಕೆಲ ಮಕ್ಕಳು ತಲೆಗೂದಲಿಗೆ ವಿಚಿತ್ರ ಶೈಲಿಯ ವಿನ್ಯಾಸ ಮಾಡಿಸಿಕೊಂಡು ಬಣ್ಣ ಬಣ್ಣಗಳಲ್ಲಿ ಡೈ ಮಾಡಿಸಿಕೊಂಡು ಬರುತ್ತಾರೆ. ಗಂಟೆ ಗಟ್ಟಲೆ ಇಂಟರ್ನೆಟ್‍ಗೆ ತಗಲಿಕೊಂಡು ಕಾಲವ್ಯಯ ಮಾಡುತ್ತಾರೆ. ರಾಕ್ ಮತ್ತುಹೆವಿ ಮೆಟಲ್ ಸಂಗೀತ ಕೇಳುತ್ತಾರೆ.

ಇಷ್ಟೆಲ್ಲಾ ಇದ್ದರೂ, Organisation for Economic Cooperation and Development ಇತ್ತೀಚೆಗೆ 57 ದೇಶಗಳ 400000ಕ್ಕೂ ಹೆಚ್ಚು ಸಂಖ್ಯೆಯಲ್ಲಿನ 15 ವರ್ಷ ವಯಸ್ಸಿನ ಮಕ್ಕಳಿಗಾಗಿ ನಡೆಸಿದ ಪರೀಕ್ಷೆಯ ಫಲಿತಾಂಶಾನುಸಾರ, ಮೇಲ್ಕಂಡ ದೇಶದ ಮಕ್ಕಳು ವಿಶ್ವದಲ್ಲೇ ಅತಿ ಪ್ರತಿಭಾವಂತ ಮಕ್ಕಳು ಎಂದು ಪರಿಗಣಿಸಲಾಗಿದೆ. ಮೇಧಾವಿತ್ವ ಮತ್ತು ಆಲೋಚನಾಶಕ್ತಿಯಲ್ಲಿ ಇವರನ್ನು ಮೀರಿಸಿದ ಮಕ್ಕಳಿಲ್ಲ. ವಿಜ್ನಾನ, ಗಣಿತ ಮತ್ತು ವಿಜ್ನಾನದ ಅನ್ವಯಪ್ರಾಕಾರಗಳಲ್ಲಿ ಈ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಮುಂದುವರೆದು ಈ ದೇಶದ ಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವುಳ್ಳ ಕಾರ್ಮಿಕ ಪೌರರಾಗಿ ಪರಿವರ್ತಿತರಾಗುವುದೂ ಅಷ್ಟೇ ಸತ್ಯ.

ಆಶ್ಚರ್ಯವೇ? ನೀವೊಬ್ಬರೇ ಏಕೆ? ಇಡೀ ವಿಶ್ವವೇ ಬೆರಗಾಗಿ ಕುಳಿತಿದೆ. ಯಾವುದು ಈ ದೇಶ? ಇದು ಹೇಗೆ ತಾನೇ ಸಾಧ್ಯ?
ಅತಿ ಆಧುನಿಕ ಹಾಗೂ Land of Opportunities ಎಂದು ಹೆಸರಾದ ಅಮೇರಿಕವೂ ಕೂಡಾ ಎಲ್ಲೋ ಇಪ್ಪತ್ತೊಂಭತ್ತನೇ ಸ್ಥಾನದಲ್ಲಿದೆ. ಅಮೇರಿಕದ ಶಿಕ್ಷಣ ತಜ್ನರು ಈ ದೇಶಕ್ಕೆ ಭೇಟಿಯಿತ್ತು ಅಲ್ಲಿಯ ಶಿಕ್ಷಣ ಪಧ್ಧತಿಯ ಬಗ್ಗೆ ಕೂಲಂಕಷ ಅಧ್ಯಯನ ಮಾಡತೊಡಗಿದ್ದಾರೆ.

ಈ ದೇಶ ಸ್ಕಾಂಡಿನೇವಿಯಾದ ಅಂಗವಾಗಿ ಸಂವಹನ(ನೋಕಿಯಾ), ಗಣಿಗಾರಿಕೆ, ಅರಣ್ಯಮೂಲದ ಉತ್ಪಾದನೆಗಳಲ್ಲಿ ಹೆಸರಾಂತ ದೇಶ ಫಿನ್ಲೆಂಡ್. ಅಮೇರಿಕದ “ದಿ ವಾಲ್ ಸ್ಟ್ರೀಟ್ ಜರ್ನಲ್”ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯ* ಪ್ರಕಾರ ಇಂಟರ್‍ನ್ಯಾಷನಲ್ ಪರೀಕ್ಷೆಯೊಂದರಲ್ಲಿ ಮೊದಲ ಸ್ಥಾನ ಗಳಿಸಿದ ಪ್ರಚಂಡ ಮಕ್ಕಳ ವಿದ್ಯಾಭ್ಯಾಸ ಕ್ರಮದಲ್ಲದೇನು ವಿಶೇಷ? ಸಂಕ್ಷಿಪ್ತವಾಗಿ ಹೇಳಬೇಕಂದರೆ - ಸುಶಿಕ್ಷಿತ ಶಿಕ್ಷಕರು ಮತ್ತು ವಯಸ್ಸಿಗೂ ಮೀರಿದ ಹೊಣೆಗಾರಿಕೆ ತೋರುವ ಮಕ್ಕಳು. ಪ್ರಾರಂಭದಲ್ಲಿ ದೊಡ್ಡವರ ಮೇಲು ಉಸ್ತುವಾರಿಯಿಲ್ಲದೆಯೇ ಬಹಳಷ್ಟು ಕಲಿಯುತ್ತವೆ ಇಲ್ಲಿನ ಮಕ್ಕಳು. ನಂತರ ಮಕ್ಕಳ ಕ್ಷಮತೆಗನುಗುಣವಾಗಿ ಪಠ್ಯಕ್ರಮ ನಿರೂಪಿಸಲಾಗುತ್ತದೆ. ಮೊದಲ ನೋಟಕ್ಕೆ ಅದೇನು ಮಹಾ ಅನಿಸಿದರೂ ಅನುಕರಿಸಲು ಅಷ್ಟು ಸುಲಭವಲ್ಲ ಅನ್ನುವುದು ತಥ್ಯ. ಇಲ್ಲಿನ ವಿದ್ಯಾಭ್ಯಾಸ ಕ್ರಮದ ಹಲವು ಕುತೂಹಲಕಾರಿ ಅಂಶಗಳು ಹೀಗಿವೆ.

೧. ಇಲ್ಲಿಯ ಪ್ರೈಮರಿ ಶಾಲೆಯಲ್ಲಿ ಕಲಿಸಲು ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಅವಕಾಶ. ಈ ಹುದ್ದೆಗೆ ಅತಿ ಹೆಚ್ಚಿನ ಸ್ಪರ್ಧೆ. ಶಿಕ್ಶಕರಾಗುವ ಮೊದಲು ನುರಿತ ಶಿಕ್ಷಕರೊಬ್ಬರ ಅಪ್ಪ್ರೈಂಟಿಸ್ ಆಗಿ ಹಲವು ವರ್ಷ ಕೆಲಸ ಮಾಡ ಬೇಕು. ಶಿಕ್ಷಕರಿಗೆ ಉತ್ತಮ ಸಂಭಾವನೆ ಕೂಡ ಸೌಲಭ್ಯ.


೨. ಹೊರಗೆ ಎಷ್ಟೇ ನಿರ್ಬಂಧವಿಲ್ಲದಿದ್ದರೂ ತರಗತಿಯಲ್ಲಿ ಮಾತ್ರ ಮೊಬೈಲ್, ಐಪಾಡ್ ಬಳಕೆ ನಿಷಿಧ್ಧ.

೩. ಬುಧ್ಧಿವಂತ ಮಕ್ಕಳಿಗಿಂತಲೂ ಕಡಿಮೆ ಕ್ಷಮತೆಯುಳ್ಳ ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಕಾಳಜಿ. ಪ್ರತಿಭಾವಂತ ಮಕ್ಕಳಿಗಾಗಿ ಯಾವ ವಿಶೇಷ ತರಬೇತಿಯೂ ಇಲ್ಲ. ಬುಧ್ಧಿವಂತ ಮಕ್ಕಳನ್ನು ಹಿಂದುಳಿದ ಸಹಪಾಠಿಗಳಿಗೆ ಸಹಾಯ ಮಾಡಲು ಪ್ರಚೋದಿಸಲಾಗುತ್ತದೆ. ಇದರಿಂದ ಇಬ್ಬರಿಗೂ ಸಹಾಯವಾಗುತ್ತೆ ಅಂತ ದೃಢ ನಂಬಿಕೆ.


೪. ಸರ್ಕಾರದ ವತಿಯಿಂದ ಪ್ರತಿ ಮನೆಯಲ್ಲೂ ಮಗುವಿನ ಜನ್ಮವಾದ ಕೂಡಲೆ ಒಂದು ಗಿಫ್ಟ್ ಹಾಂಪರ್ ಕೊಡಲಾಗುತ್ತೆ. ಅದರಲ್ಲಿ ಮಕ್ಕಳಿಗಾಗಿ ಚಿತ್ರಪುಸ್ತಕವೂ ಸೇರಿಸಲಾಗುತ್ತೆ. ಪ್ರತಿ ಮಾಲ್ ಮತ್ತು ಶಾಪಿಂಗ್ ಮಳಿಗೆಯಲ್ಲಿಯೂ ದೊಡ್ಡ ಪುಸ್ತಕ ಮಳಿಗೆ ಅಥವಾ ಲೈಬ್ರರಿ ಇರುವುದು ಕಡ್ಡಾಯ. ಮೊಬೈಲ್ ಪುಸ್ತಕ ಮಾರುವ ಮಳಿಗೆಗಳು ದೇಶದ ಮೂಲೆ ಮೂಲೆಗೂ ತಲುಪುತ್ತವೆ.


೫. ಮಕ್ಕಳ ಬಾಲ್ಯ ಯಾವ ರೀತಿಯ ಸ್ಪರ್ಧಾತ್ಮಕ ಮನೋಭಾವದ ಒತ್ತಡಗಳಿಲ್ಲದೆಯೇ ಕಳೆಯುತ್ತವೆ.


೬. ಮಕ್ಕಳನ್ನು ಮೊದಲಿನಿಂದಲೇ ಸ್ವಾವಲಂಬಿಗಳನ್ನಾಗಿ ಬೆಳೆಯಲು ಉತ್ತೇಜಿಸಲಾಗುತ್ತದೆ. ಶಾಲೆಗೆ ಕರೆದೊಯ್ಯಲು ಅಥವಾ ಮನೆಗೆ ಕರೆತರಲು ಪೋಷಕರು ಅಥವಾ ಆಯಾಗಳು ಹೋಗುವ ಪರಿಪಾಠವಿಲ್ಲ. ಎಷ್ಟೇ ಹಣವಂತರಿರಲಿ ಇದೇ ವ್ಯವಸ್ಥೆ. ಹರಿದ್ವರ್ಣ ಕಾಡುಗಳಲ್ಲಿ ನಸುಗತ್ತಲಿನಲ್ಲಿಯೇ ಒಬ್ಬೊಬ್ಬರೇ ದೂರದ ಶಾಲೆಗಳಿಗೆ ನಡೆದು ಹೋಗುವಷ್ಟು ಸಾಮರ್ಥ್ಯ ಕಲಿಯುತ್ತವೆ ಇಲ್ಲಿಯ ಮಕ್ಕಳು.


೭. ಶಾಲೆಗಳಲ್ಲಿ ತರಗತಿಯ ನಡುವೆ ಅಕಸ್ಮಾತ್ ತೂಕಡಿಸುವ ಅಥವಾ ನಿದ್ದೆ ಹೋಗುವ ಮಕ್ಕಳನ್ನು ಎಚ್ಚರಿಸಿ ಶಿಕ್ಷೆ ಕೊಡಲಾಗದು. ಅವರನ್ನು ಅವರ ಪಾಡಿಗೆ ಬಿಟ್ಟು ಪಾಠ ಮುಂದುವರಿಸುವಷ್ಟು ಸಂವೇದನೆ ಶಿಕ್ಷಕರಿಗಿದೆ.

“ಅಯ್ಯೋ ಬಿಡ್ರೀ. ಫಿನ್ಲೆಂಡ್ ಒಂದು ಚಿಕ್ಕ ದೇಶ. ಕಮ್ಮಿ ಜನಸಂಖ್ಯೆ. ಒಂದೇ ಭಾಷೆ, ಒಂದೇ ಜನಾಂಗ. ಅಲ್ಲಿ ಇದೆಲ್ಲಾ ಸಾಧ್ಯವಿರಬಹುದು ಕಣ್ರೀ! ನಮ್ಮ ದೇಶದ ಥರಾ ಇಷ್ಟೊಂದು ಜನಸಂಖ್ಯೆಯಿದ್ದು ನಾಕಾರು ಭಾಷೆಕಲೆತು ಪ್ರತಿಯೊಂದಕ್ಕೂ ಗುದ್ದಾಡ ಬೇಕಾದ ಪರಿಸ್ಥಿತೀಲಿ ಇಂಥಾದ್ದೆಲ್ಲಾ ಸಾಧ್ಯಾನೇನ್ರಿ?” ಅಂತ ಮೂಗೆಳೀಬೇಡಿ. ಚಿಕ್ಕ ಮಕ್ಕಳು ಎಲ್ಲಿದ್ರೂ ಚಿಕ್ಕ ಮಕ್ಕಳೇ. ಪ್ರಾಥಮಿಕ ಶಿಕ್ಷಣಕ್ಕೆ ಕೊಡಬೇಕಾದ ಮಹತ್ವ ನಮ್ಮಲ್ಲಿ ಸಿಗುತ್ತಾ ಇಲ್ಲ ಅನ್ನೋದು ಸರ್ವ ವಿದಿತ . ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಖ್ಯಾತ ವಿಜ್ನಾನಿ ಸಿ. ಎನ್. ಆರ್ . ರಾವ್ ಅವರು ತಮ್ಮ ಆತ್ಮಕಥೆಗಳಲ್ಲಿ ಸ್ಫೂರ್ತಿಗಾಗಿ ಕೃತಜ್ನತೆಯಿಂದ ಸ್ಮರಿಸೋದು ಕಡುಬಡತನದಲ್ಲಿದ್ದರೂ ನಿಸ್ವಾರ್ಥಭಾವದಿಂದ ದಾರಿ ತೋರಿಸಿದ ತಮ್ಮ ಶಾಲಾ ಮೇಷ್ಟ್ರುಗಳನ್ನೇ ಅಲ್ಲವೇ!

ಅರವತ್ತು ವರ್ಷಗಳ ಹಿಂದೆಯೇ ಖ್ಯಾತ ನಾಟಕಕಾರ ಕೈಲಾಸಂ “ಟೊಳ್ಳು ಗಟ್ಟಿ” ನಾಟಕದಲ್ಲಿ ಹೇಳಿದ ಹಾಗೆ “ಕೊಂಡಿಗಳಿಲ್ಲದ ಪಾತಾಳಗರಡಿ ಹಾಗಿರೋ ನಮ್ಮ ಇಂಗ್ಲೀಷ್ ವಿದ್ಯಾಭ್ಯಾಸ ಕ್ರಮ ಬಿಟ್ಬಿಟ್ಟು , ನಮ್ಮಕ್ಕಳ ಸ್ವಭಾವದಲ್ಲಿರೋ ಗುಣಗಳನ್ನು ಹೊರಕ್ಕೆ ಸೆಳೆಯುವ ವಿದ್ಯಾಭ್ಯಾಸಕ್ರಮವೊಂದನ್ನು ಏರ್ಪಡಿಸಿಕೊಂಡು ಅದನ್ನನುಸರಿದ್ರೇನೆ ನಮ್ಮ ದೇಶದೇಳಿಗೆ ಎಂಬೋ ” ಅವರ ಯೋಚ್ನೆ “ಕುಂಬಳಕಾಯಷ್ಟಿಲ್ದಿದ್ರೂನೂವೆ ರಾಗೀಕಾಳಷ್ಟಾದ್ರೂ” ನಮ್ಮಲ್ಲಿಯ ಶಿಕ್ಷಣ ತಜ್ನರಿಗೆ ಬಂದು ಪೂರ್ತಿ ಅಲ್ದಿದ್ರೂ ಸ್ವಲ್ಪಾನಾದ್ರೂ ಫಿನ್ಲೆಂಡಿನ ಒಳ್ಳೆಯ ವಿಧಾನಗಳನ್ನು ಅನುಕರಿಸೋಕ್ಕಾಗ್ಬಹುದೇನೋ! ಅಂತೂ ಯೋಚಿಸಲಾರ್ಹ ವಿಚಾರ.

**********************************************************************************

ಮೊದಲು ಈ ಲೇಖನ 17ನೆ ಮಾರ್ಚ್ 2008ರಂದು thatskannada.com ನಲ್ಲಿ ಪ್ರಕಟವಾಯಿತು.

http://thatskannada.oneindia.in/mixed-bag/lifestyle/2008/0317-brightkids-great-education-finland.html

Friday, 14 March 2008

ನಿಮ್ಮ ಮಕ್ಕಳು ಬುಧ್ಧಿವಂತರಾಗಬೇಕೆ? ಚಿಕ್ಕವರಾಗಿದ್ದಾಗಲೇ ಸಂಗೀತ ,ನೃತ್ಯ, ಚಿತ್ರಕಲೆ ಕಲಿಸಿ ಕೊಡಿ!

ಕೇವಲ ಬುಧ್ಧಿವಂತರು ಮಾತ್ರ ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ ವಹಿಸುತ್ತಾರೋ ಅಥವಾ ಕಲೆಗಳಲ್ಲಿ ಆಸಕ್ತಿಯಿರುವವರು ಬುದ್ಧ್ಧಿವಂತರಾಗುತ್ತರೋ? ಈ ಪ್ರಶ್ನೆಗೆ ಉತ್ತರ ಹುಡುಕಲೆತ್ನಿಸಿ ಅಮೇರಿಕದ ಡ್ಯಾನಾ ಫೌಂಡೇಷನ್ ವತಿಯಿಂದ ಏಳು ವಿಶ್ವವಿದ್ಯಾನಿಲಯಗಳ ಮೆದುಳು ತಜ್ನರು 2004ನೇ ಇಸವಿಯಲ್ಲಿ ಪ್ರಾರಂಭಿಸಿ ಒಂದು ಮೂರು ವರ್ಷಗಳ ಕಾಲ ನಡೆಸಿದ ಸಂಶೋಧನಾತ್ಮಕ ಅಧ್ಯಯನದಲ್ಲಿ ಕಂಡು ಬಂದ ಹೊಸ ಮಾಹಿತಿ ಹೀಗಿದೆ. ಚಿಕ್ಕಂದಿನಲ್ಲೇ ಸಂಗೀತ, ನೃತ್ಯ, ಮತ್ತು ಚಿತ್ರಕಲೆ ಕಲಿಸಲು ಪ್ರಾರಂಭಿಸುವುದರಿಂದ ಮಕ್ಕಳ ಮೆದುಳಿನ ಬಲಭಾಗ (ಮೇಧಾವಿತನಕ್ಕೆ ಕಾರಣವಾದ ಭಾಗ) ಬಹಳ ಉತ್ತಮವಾಗಿ ಬೆಳವಣಿಗೆಯಾಗಿ ಅವರು ಬಹಳ ಚತುರರೂ ಹಾಗೂ ಬುಧ್ಧಿವಂತರೂ ಆಗುವ ಸಂಭಾವನೆ ಬಹಳ ಹೆಚ್ಚು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟುಕಿಸಿ ಪಾಡಕಾಸ್ಟ್ ಕೇಳಬಹುದು.

ವಿದ್ಯಾಭ್ಯಾಸ ತಜ್ನರು ಮತ್ತಿತರ ಆಸಕ್ತರು ಪೂರ್ಣವಾದ ರಿಪೋರ್ಟ್ ಓದಲೆಣಿಸಿದರೆ ಡ್ಯಾನಾ ಫೌಂಡೇಷನ್ ವೆಬ್‍ಸೈಟ್‍ನಿಂದ ಪಿಡಿಎಫ್ ಕಡತವನ್ನು( 146ಪುಟಗಳು) ಉಚಿತವಾಗಿ ಡೌನ್‍ಲೋಡ್ ಮಾಡಿಕೊಂಡು ಓದಬಹುದು.

- ನವರತ್ನ ಸುಧೀರ್

ರಾನ್ ಮುಯೆಕ್‍ನ ಅಧ್ಭುತ ಶಿಲ್ಪಕಲೆ



ಆಸ್ಟ್ರೇಲಿಯಾದ ಶಿಲ್ಪಿ ರಾನ್ ಮುಯೆಕ್ ಅಗಾಧ ಪ್ರಮಾಣದ “ಹೈಪರ್ ರಿಯಲಿಸ್ಟಿಕ್” ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಅಪ್ರತಿಮ ಕೌಶಲವುಳ್ಳವನು.

ಕೆಳಗಿನ ಕೊಂಡಿಯನ್ನು ಚಿಟುಕಿಸಿ ನೀವೇ ನೋಡಿ.
http://paintalicious.org/2007/09/14/ron-mueck-hyper-realist-sculptor/

ಅವನ ತಂತ್ರದ ವಿಡಿಯೋ ನೋಡಲು ಕೆಳಗಿನ ಕೊಂಡಿಯನ್ನು ಚಿಟುಕಿಸಿ ಬರುವ ಪೇಜಿನಲ್ಲಿ ನೋಡಬಹುದು.
http://alexremy.com/2007/09/all-about-ron-mueck.html

- ನವರತ್ನ ಸುಧೀರ್

ಸೌಂದರ್ಯ ಸ್ಪರ್ಧೆ- ಹೀಗೂ ಉಂಟೆ?


ಇದೊಂದು ವಿಶಿಷ್ಟ ರೀತಿಯ ಸೌಂದರ್ಯ ಸ್ಪರ್ಧೆ.


ಆಫ್ರಿಕಾದ ಅಂಗೋಲಾದಲ್ಲಿ 1961ರ ಇಸವಿಯಲ್ಲಿ ಆರಂಭವಾಗಿ ನಲವತ್ತು ವರ್ಷಗಳ ಕಾಲ ನಡೆದ ಅಂತರ್ಯುಧ್ಧದ ಸಮಯದಲ್ಲಿ ಅನೇಕ ಲ್ಯಾಂಡ್‍ಮೈನ್‍ಗಳನ್ನು ದೇಶದ ಎಲ್ಲೆಡೆ ಅಳವಡಿಸಲಾಯಿತು. ಇದರ ಪರಿಣಾಮ ಈಗಲೂ ಜನರು ತಮ್ಮ ಅಂಗಾಂಗಗಳನ್ನೋ ಪ್ರಾಣಗಳನ್ನೋ ಕಳೆದುಕೊಳ್ಳುತ್ತಿದ್ದಾರೆ.
ಈ ಲ್ಯಾಂಡ್‍ಮೈನ್‍‍ಗಳಿಂದ ಆಗುವ ಅನಾಹುತಗಳ ಬಗ್ಗೆ ವಿಶ್ವದ ಗಮನ ಸೆಳೆಯಲೋಸುಗ ಬರುವ ಏಪ್ರಿಲ್ ತಿಂಗಳಲ್ಲಿ, ಲ್ಯಾಂಡ್‍ಮೈನ್ ಅನಾಹುತಗಳಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಂಡ ಅಂಗನೆಯರಿಗಾಗಿ ಒಂದು ವಿಶೇಷ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಇದರ ವಿಜೇತರಿಗೆ “ಮಿಸ್ ಲ್ಯಾಂಡ್‍ಮೈನ್ 2007” ಪ್ರಶಸ್ತಿ ವಿತರಿಸಲಾಗುವುದು.
ಎಲ್ಲರಿಗೂ ತಾನು ಸುಂದರಿ ಎಂದು ಹೇಳಿಕೊಳ್ಳುವ ಹಕ್ಕಿದೆಯಲ್ಲವೇ? ಹಾಗೆಯೇ ಸೌಂದರ್ಯ ನೋಡುವರ ಕಣ್ಣಲ್ಲಿ ಎಂಬುದೂ ನಿಜವೇ.
ಕೆಳಗಿನ ಕೊಂಡಿ ಚಿಟುಕಿಸಿ ನೋಡಿ.
http://www.miss-landmine.org/misslandmine_team.html
- ನವರತ್ನ ಸುಧೀರ್

Tuesday, 4 March 2008

ಆಧುನಿಕ ಔದ್ಯೋಗಿಕ ಭಾರತದ ಶಿಲ್ಪಿ , ಅಪ್ರತಿಮ ದೇಶಪ್ರೇಮಿ - ಶ್ರೀ ಜಮ್‍ಷೆಡ್ಜಿ ಟಾಟಾ.

- ನವರತ್ನ ಸುಧೀರ್


3rd March 2008 - ಶ್ರೀ ಜಮ್‍ಷೆಡ್ಜಿ ಟಾಟಾ ಅವರ 169ನೇ ಜನ್ಮದಿನ. ಭಾರತೀಯ ವಿಜ್ನಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day. 2008-2009 ಭಾರತೀಯ ವಿಜ್ನಾನ ಸಂಸ್ಥೆಯ ಶತಮಾನೋತ್ಸವ ವರ್ಷ ಕೂಡ.

ಇಸವಿ 1822. ಈಗಿನ ಗುಜರಾತ್‍ನ ನವಸಾರಿ ಎಂಬ ಸಣ್ಣ ಊರಿನಲ್ಲಿ ಒಂದು ಬಡ ಪಾರಸೀ ಅಗ್ನಿ ದೇವಾಲಯದ ಪುರೋಹಿತರ ಕುಟುಂಬದಲ್ಲಿ ಜನಿಸಿದ ಮಗು ನಸ್ಸರ್‍ವಾನ್ಜೀ ಟಾಟಾ. ಹುಟ್ಟಿದ ಮಗುವನ್ನು ಕಂಡ ಜ್ಯೋತಿಷಿಯೊಬ್ಬರು “ ಈ ಮಗು ಬಹಳ ದೇಶ ವಿದೇಶಗಳ ಪ್ರಯಾಣ ಮಾಡಿ, ಹೇರಳ ಹಣ ಸಂಪಾದಿಸಿ ಏಳು ಮಹಡಿಯ ಮನೆ ಕಟ್ಟುತ್ತಾನೆ” ಅಂತ ಭವಿಷ್ಯ ನುಡಿದರು. ಇದನ್ನು ನಂಬಲಾಗದ ತಂದೆ ತಾಯಿಗಳು ಜ್ಯೋತಿಷಿಗೆ ಅವಮಾನವಾಗದಿರಲಿ ಅಂತ ಸುಮ್ಮನೆ ಮುಗುಳ್ನಕ್ಕು ದಕ್ಷಿಣೆ ಕೊಟ್ಟು ಕಳಿಸಿದರು. ಆ ಚಾಣಾಕ್ಷ ಮಗು ಬೆಳೆದು ದೊಡ್ಡವನಾಗಿ ವಂಶಪಾರಂಪರ್ಯವಾದ ಪೌರೋಹಿತ್ಯ ತ್ಯಜಿಸಿ, ವ್ಯಾಪಾರ ವಹಿವಾಟಿನಲ್ಲಿ ಪಾರಂಗತನಾಗಿ, ದೇಶ ವಿದೇಶ ಪರ್ಯಟಿಸಿ ಭವಿಷ್ಯವಾಣಿಯನ್ನು ನಿಜಮಾಡಿದ. ಹೇರಳ ಸಂಪತ್ತನ್ನು ಗಳಿಸಿ ಮುಂಬೈನಗರದಲ್ಲಿ ಒಂದು ಏಳು ಮಹಡಿಯ ಮನೆಯನ್ನು ಕೂಡ ಕೊಳ್ಳಲು ಸಾಧ್ಯವಾಯಿತು. ಹದಿನಾರು ವರ್ಷದವರಾಗಿದ್ದಾಗಲೇ ಜೀವನ್‍ಬಾಯಿಯೊಡನೆ ವಿವಾಹವಾಯಿತು.

3ನೇ ಮಾರ್ಚ್ 1839ರಂದು ನವಸಾರಿಯಲ್ಲಿಯೇ ಜೇಷ್ಠ ಪುತ್ರ ಜಮ್‍ಶೆಡ್ಜೀಯವರ ಜನ್ಮವಾಯಿತು. ವಂಶದ ಸಂಪ್ರದಾಯಕ್ಕೆ ತಕ್ಕಂತೆಯೇ ಜಮ್‍ಶೆಡ್ಜಿ ಕೂಡ ಪೌರೋಹಿತ್ಯಕ್ಕೆ ಬೇಕಾದ ಆಚಾರ ಸಂಸ್ಕಾರಗಳನ್ನು ಕಲಿಯಲಾರಂಭಿಸಿದರು. ಶಾಲೆಗೆ ಹೋಗಿ ಕಲಿಯಬೇಕೆಂಬ ನಿರ್ವಾಹವೂ ಆಗಿನ ದಿನಗಳಲ್ಲಿ ಇರಲಿಲ್ಲ. ಆದರೆ ಅವರ ಹದಿಮೂರನೆ ವಯಸ್ಸಿನಲ್ಲೇ ತಂದೆ ನಸ್ಸೆರ್‍ವಾನ್ಜೀ ಅವರನ್ನು ಮುಂಬೈಗೆ ಕರೆತಂದು ಮೊದಲು ಮನೆಯಲ್ಲಿಯೇ ಆಮೇಲೆ ಎಲ್ಫಿನ್‍ಸ್ಟೋನ್ ಕಾಲೇಜಿನಲ್ಲಿ ಶಿಕ್ಷಣ ಕೊಡಿಸಲು ಏರ್ಪಾಡು ಮಾಡಿದರು. ಕುಶಾಗ್ರ ಮತಿಯ ಯುವಕ ಬಹು ಬೇಗ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ 1858ರಲ್ಲಿಯೇ ಪದವೀಧರನಾದರು. ಉತ್ತಮ ಪುಸ್ತಕಗಳನ್ನು ಓದಿ ಜ್ನಾನ ವಿಸ್ತಾರಮಾಡಿಕೊಳ್ಳುವ ಗೀಳು ಹತ್ತಿದ್ದೂ ಇಲ್ಲಿಯೇ. ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ತಮಗಿಂತ ಐದು ವರ್ಷ ಚಿಕ್ಕವಳಾದ ಒಬ್ಬ ಪುರೋಹಿತರ ಮಗಳು ಹೀರಾಬಾಯಿಯೊಡನೆ ವಿವಾಹ ಕೂಡ ಜರುಗಿತು. ಮೊದ ಮೊದಲು ಒಬ್ಬ ವಕೀಲರ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಜಮ್‍ಶೆಡ್ಜಿಗೆ ಬಹುಬೇಗ ತಂದೆಯಾಗುವ ಯೊಗ ಬಂದಿತು. ಹಿರಿಯ ಮಗ ದೊರಾಬ್‍ನ ಜನ್ಮ 1859ರಲ್ಲಿ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಹೆಸರಾದ ಸಿಪಾಯಿ ದಂಗೆ ಮುಗಿದ ಕೇವಲ ಎರಡು ವರ್ಷಗಳು ಕೂಡ ಕಳೆದಿರಲಿಲ್ಲ. ವ್ಯಾಪಾರ ವಹಿವಾಟಿಗೆ ಅನುಕೂಲ ಸಮಯವೂ ಅದಾಗಿರಲಿಲ್ಲ. ತಂದೆಯಾದ ಹೊಣೆಗಾರಿಕೆ ಬೇರೆ. ಹಣ ಸಂಪಾದಿಸಲೇ ಬೇಕಿತ್ತು. ಹೀಗಾಗಿ ಅವರು ವಕೀಲರ ಸಂಸ್ಥೆಯ ಕೆಲಸ ತ್ಯಜಿಸಿ ತಂದೆಯವರ ಆಯಾತ ನಿರ್ಯಾತ ನಡೆಸುತ್ತಿದ್ದ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಉತ್ತಮ ವಿದ್ಯಾಭ್ಯಾಸದ ತಳಹದಿ, ತೀಕ್ಷ್ಣ ಬುಧ್ಧಿ, ಮತ್ತು ತಂದೆಯವರ ಮಾರ್ಗದರ್ಶನದಿಂದ ಜಮ್‍ಶೆಡ್ಜೀ ಬಹುಬೇಗ ವ್ಯಾಪಾರ ಮತ್ತು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ನುರಿತವರಾದರು.

1864ರಲ್ಲಿ ಇಪ್ಪತ್ತೈದು ವರ್ಷ ವಯಸ್ಸಿನ ಯುವಕ ಜಮ್‍ಶೆಡ್ಜಿ ಮೊದಲ ಬಾರಿಗೆ ತಮ್ಮಕಂಪನಿಯ ವತಿಯಿಂದ ಇಂಗ್ಲೆಂಡಿನ ಪ್ರವಾಸ ಕೈಗೊಂಡರು. ಅವರ ಸಂಸ್ಥೆ ಅದಾಗಲೇ ಭಾರತದಿಂದ ಹೇರಳ ಪ್ರಮಾಣದಲ್ಲಿ ಹತ್ತಿಯನ್ನು ಇಂಗ್ಲೆಂಡಿನ ಲಿವರ್‍ಪೂಲ್ ‍ನಲ್ಲಿನ ಟೆಕ್ಸ್‍ಟೈಲ್ ಮಿಲ್ಲುಗಳಿಗೆ ನಿರ್ಯಾತ ಮಾಡುತ್ತಿತ್ತು. ಈ ಪ್ರವಾಸದಲ್ಲಿಮ್ಯಾನ್‍ಚೆಸ್ಟರ್ ಮತ್ತು ಲ್ಯಾಂಕಶೈರ್ ನಗರಗಳಲ್ಲಿನ ಕಾಟನ್ ಮಿಲ್ಲುಗಳನ್ನು ಅಧ್ಯಯನ ಮಾಡುವ ಅವಕಾಶ ದೊರಕಿತು. ಸುಮಾರು ಹತ್ತು ವರ್ಷಗಳ ಕಾಲ ಆ ಉದ್ಯಮದ ಎಲ್ಲ ಮುಖಗಳನ್ನು ಪರಿಚಯಿಸಿಕೊಂಡ ಜಮ್‍ಶೆಡ್ಜಿ ಭಾರತಕ್ಕೆ ಹಿಂತಿರುಗಿ ಬಂದರು. ಅದುವರೆಗೂ ಕೇವಲ ಬ್ರಿಟಿಷರ ಹತೋಟಿಯಲ್ಲಿದ್ದ ಟೆಕ್ಸ್‍ಟೈಲ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂದ ಪ್ರಥಮ ಭಾರತೀಯರಾದರು. ಎಲ್ಲರಂತೆ ಹೊಸ ಮಿಲ್ಲನ್ನು ಮುಂಬೈನಲ್ಲಿ ಸ್ಥಾಪಿಸದೆ, ಮಹಾರಾಷ್ಟ್ರದ ಹತ್ತಿ ಬೆಳೆಯ ಕೇಂದ್ರವಾದ ನಾಗಪುರದಲ್ಲಿಸ್ಥಾಪಿಸಲೆಣಿಸಿದರು. 1874ರಲ್ಲಿ ಒಂದೂವರೆ ಲಕ್ಷ ರೂಪಾಯಿನ ಬಂಡವಾಳದಿಂದ ಸೆಂಟ್ರಲ್ ಇಂಡಿಯಾ ಸ್ಪಿನ್ನಿಂಗ್ ವೀವಿಂಗ್ ಅಂಡ್ ಮ್ಯಾನುಫಾಕ್ಚರಿಂಗ್ ಕಂಪನಿ ಅಸ್ಥಿತ್ವಕ್ಕೆ ಬಂದಿತು. 1877ರ ಜನವರಿಯಲ್ಲಿ ರಾಣಿ ವಿಕ್ಟೋರಿಯಾ ಭಾರತದ ಚಕ್ರವರ್ತಿನಿಯಾಗಿ ಅಭಿಷಿಕ್ತಳಾದ ಸಂದರ್ಭದಲ್ಲಿ ಎಂಪ್ರೆಸ್ ಮಿಲ್ ಹೆಸರಿನ ಒಂದು ಅತ್ಯಾಧುನಿಕ ಟೆಕ್ಸ್‍ಟೈಲ್ ಮಿಲ್ ಒಂದನ್ನು ನಾಗಪುರದಲ್ಲಿಪ್ರಾರಂಭಿಸಿದರು. ಭಾರತೀಯ ಒಡೆತನದ ಪ್ರಪ್ರಥಮ ಮಿಲ್. ಇಲ್ಲಿಯ ಬ್ರಿಟಿಷ್ ಆಡಳಿತದ ಭಾರತ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಯಾವ ರೀತಿಯ ಕಾನೂನು ನಿಯಮ ನಿರ್ಬಂಧಗಳನ್ನು ವಿಧಿಸದಿದ್ದಾಗಲೂ ಜಮ್‍ಶೆಡ್ಜಿ ತಮ್ಮ ಮಿಲ್‍ನಲ್ಲಿ ಸ್ವಪ್ರೇರಣೆಯಿಂದ ಕಾರ್ಮಿಕರ ಪರವಾದ ಅನೇಕ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು.

ಅಪ್ರತಿಮ ದೇಶಭಕ್ತರಾದ ಅವರಿಗೆ ದಾದಾಭಾಯ್ ನವರೋಜಿ , ಫಿರೋಜ್‍ಶಾ ಮೆಹ್ತಾರಂತಹ ಸ್ವತಂತ್ರ ಸೇನಾನಿಗಳ ನಿಕಟ ಸಂಪರ್ಕವಿತ್ತು. ಇದರ ಜೊತೆಗೇ ಅವರಿಗೆ ಭಾರತದ ಪ್ರಜೆಗಳು ನಿಜವಾಗಿಯೂ ಸ್ವತಂತ್ರರಾಗಬೇಕಾದರೆ ರಾಜಕೀಯ ಸ್ವಾತಂತ್ರದೊಡನೆಯೇ ಅರ್ಥಿಕ ಸ್ವಾಯತ್ತತೆ ಬಹಳ ಮುಖ್ಯ ಎಂಬ ಅರಿವಿತ್ತು. ಆದ್ದರಿಂದ ಅವರು ಎಲ್ಲೇ ಪ್ರಯಾಣ ಮಾಡಲಿ ಯಾರನ್ನೇ ಭೇಟಿಯಾಗಲಿ ಸದಾಕಾಲ ಆಧುನಿಕ ಭಾರತದ ಕನಸು ಕಾಣುವುದೇ ಒಂದು ಪರಿಪಾಠವಾಗಿಹೋಯಿತು.

ಭಾರತಕ್ಕಾಗಿ ಅವರು ಕಂಡ ಕನಸುಗಳಲ್ಲಿ ಮಹತ್ತರವಾದದ್ದು ಈ ಕೆಳಗಿನವು.

· ಭಾರತ ಉನ್ನತ ಶ್ರೇಣಿಯ ರಾಷ್ಟ್ರವೆನಿಸಿಕೊಳ್ಳಬೇಕಾದರೆ ಅಧುನಿಕ ಉಕ್ಕಿನ ಉದ್ಯಮ ಸ್ಥಾಪಿಸಬೇಕು. ಉಕ್ಕು ರಾಷ್ಟ್ರದ
ಬೆನ್ನೆಲುಬಾಗಬೇಕು.
· ಭಾರತದಲ್ಲಿ ವಿಜ್ನಾನ ಮತ್ತು ತಂತ್ರಜ್ನಾನಗಳ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆಯನ್ನು ಮುಕ್ತ ವಾತಾವರಣದಲ್ಲಿ ನಡೆಸಲು
ಸಾಧ್ಯವಾಗುವಂತಹ ವಿಶ್ವ ಸ್ತರದ ಸಂಸ್ಥೆಯನ್ನು ಸ್ಥಾಪಿಸಬೇಕು.
· ಭಾರತದಲ್ಲಿ ಒಂದು ಹೈಡ್ರೋ ಎಲೆಕ್ಟ್ರಿಕ್ ವಿದ್ಯುತ್ ಸ್ಥಾವರ ಸ್ಥಾಪಿಸಬೇಕು.
· ಭಾರತದಲ್ಲಿ ಭಾರತೀಯರಿಗೆ ಪ್ರವೇಶಾವಕಾಶವಿರುವ ಒಂದು ಲಕ್ಷುರಿ ಹೋಟೆಲ್ ಪ್ರಾರಂಭಿಸಬೇಕು.

ಆಗಿನ ಭಾರತ ಸರ್ಕಾರದಲ್ಲಿನ ಬ್ರಿಟಿಷ ಅಧಿಕಾರಿಗಳು ಅವರ ಹಾದಿಯಲ್ಲಿ ಒಡ್ಡಿದ ಅನೇಕ ಅಡಚಣೆಗಳನ್ನು ಲೆಕ್ಕಿಸದೆ ತಮ್ಮ ಉದ್ದೇಶ್ಯವನ್ನು ಸಾಧಿಸುವ ಛಲ ಹಿಡಿದು ತಮ್ಮ ಕನಸನ್ನು ನನಸಾಗಿಸಲು ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಬೇರೆಯವರಾಗಿದ್ದಿದ್ದರೆ ಯಾವಾಗಲೋ ಕೈಚೆಲ್ಲಿ ಕೂಡುತ್ತಿದ್ದರು.

ವಿಪರ್ಯಾಸವೆಂದರೆ ಈ ಮೇಲಿನ ಪ್ರಥಮ ಮೂರು ಯೋಜನೆಗಳು ಕಾರ್ಯರೂಪಕ್ಕೆ ಬರುವುದನ್ನು ನೋಡುವ ಭಾಗ್ಯ ಜಮ್‍ಷೆಡ್ಜಿಯವರದಾಗಿರಲಿಲ್ಲ. 19 ಮೇ 1904ರಲ್ಲಿ ಜಮ್‍ಷೆಡ್ಜಿಯವರ ನಿಧನವಾಯಿತು. ಮುಂಬೈನಲ್ಲಿ 1902ರಲ್ಲಿ ಪ್ರಾರಂಭವಾದ ತಾಜ್‍ಮಹಲ್ ಹೋಟೆಲ್ ಅನಾವರಣವನ್ನು ನೋಡುವ ಭಾಗ್ಯ ಮಾತ್ರ ಅವರದಾಗಿತ್ತು.

ಆದರೆ ಅವರ ದೂರದೃಷ್ಟಿ ಮತ್ತು ಮುಂದಾಲೋಚನೆಗಳ ಪೂರ್ಣ ವಿವರಗಳು ಲಿಖಿತ ರೂಪದಲ್ಲಿ ವ್ಯಕ್ತಗೊಂಡಿದ್ದರಿಂದ ಅವರ ಯೋಜನೆಗಳನ್ನು ಸಾಕಾರಗೊಳಿಸಲು ಅವರ ಮಕ್ಕಳು ಮತ್ತು ಒಬ್ಬ ಸ್ವಾಮಿನಿಷ್ಠ ಅನುಯಾಯಿಗೆ ಸಾಧ್ಯವಾಯಿತು.

ಉಕ್ಕಿನ ಸ್ಥಾವರ:

ತಮ್ಮ ಕಾಟನ್ ವ್ಯಾಪಾರದ ನಿಮಿತ್ತ ಅನೇಕ ಸಾರಿ ಇಂಗ್ಲೆಂಡ್‍ಗೆ ಪ್ರಯಾಣ ಮಾಡುತ್ತಿದ್ದ ಜಮ್‍ಶೆಡ್ಜಿ ಒಮ್ಮೆ ಮ್ಯಾನ್‍ಚೆಸ್ಟರ್‍ಗೆ ಭೇಟಿಯಿತ್ತಾಗ ಅಲ್ಲಿ ಸ್ಕಾಟ್ಲೆಂಡಿನ ಪ್ರಖ್ಯಾತ ಲೇಖಕ ಥಾಮಸ್ ಕಾರ್ಲೈಲ್‍ನ ಭಾಷಣ ಕೇಳುವ ಅವಕಾಶ ದೊರಕಿತು. ಭಾಷಣದಲ್ಲಿ ಒಂದು ವಾಕ್ಯ “the nation which gains control of iron soon acquires the control of gold” ಅವರ ಮನಸ್ಸಿನಲ್ಲಿ ನಾಟಿತು. ಭಾರತದಲ್ಲಿ ಒಂದು ಆಧುನಿಕ ಉಕ್ಕು ಉತ್ಪಾದನಾ ಸ್ಥಾವರ ಸ್ಥಾಪಿಸಬೇಕು ಎನ್ನುವ ಆಸೆ ಅವರ ಮನದಲ್ಲಿ ಮೊಳೆಯತೊಡಗಿತು. ಈ ಆಸೆ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಮತ್ತಷ್ಟು ಪ್ರಬಲವಾಗಿ ಮುಂದೆ ಭಾರತದ ಸರ್ವ ಪ್ರಥಮ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಎಡೆಯಾಯಿತು.

1899ರಲ್ಲಿ ಕಾಸಿಪೋರ್ ಆರ್ಡಿನೆನ್ಸ್ ಕಾರ್ಖಾನೆಯ ಸೂಪರಿಡೆಂಟ್ ಆಗಿದ್ದ ಮೇಜರ್ ಆರ್. ಎಚ್. ಮಹೋನ್ ಭಾರತದಲ್ಲಿ ಉಕ್ಕಿನ ಉತ್ಪಾದನೆಯ ಸಂಭಾವನೆಯ ಬಗ್ಗೆ ಬರೆದ ವರದಿಯನ್ನು ಆಧರಿಸಿ ಆಗಿನ ವೈಸ್‍ರಾಯ್ ಲಾರ್ಡ್ ಕರ್ಜನ್ ಅನೇಕ ಬ್ರಿಟಿಷ್ ಉದ್ಯಮಿಗಳಿಗೆ ಬಂಡವಾಳ ಹೂಡಲು ಆಹ್ವಾನವಿತ್ತರು. ಗಣಿಗುತ್ತಿಗೆ ನಿಯಮಗಳನ್ನು ಸಡಿಲಗೊಡಿಸಿ, ಗಣಿಗಾರಿಕೆ ಉದ್ಯಮಕ್ಕೆ ಅನೇಕ ಸವಲತ್ತು ಒದಗಿಸಲು ಮುಂದಾದರು. ಬ್ರಿಟಿಷ್ ಉದ್ಯಮಿಗಳು ಯಾರೂ ಮುಂದೆ ಬರದಿದ್ದಾಗ ಜಮ್‍ಶೆಡ್ಜಿ ಈ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡು ಅತ್ಯಾಧುನಿಕ ಉಕ್ಕಿನ ಸ್ಥಾವರದ ನಿರ್ಮಾಣಕ್ಕೆ ಅಣಿಯಾದರು.ಟಾಟಾರವರ ಉಕ್ಕಿನ ಉತ್ಪಾದನಾ ಘಟಕದ ಸುದ್ದಿ ಬಯಲಾದಾಗ ಅವರನ್ನು ಲೇವಡಿ ಮಾಡಿದವರದೆಷ್ಟೋ ಮಂದಿ. ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆಯ ಚೀಫ್ ಕಮೀಷನರ್ ಆಗಿದ್ದ ಸರ್ ಫ್ರೆಡರಿಕ್ ಅಪ್ಕಾಟ್ ಅವರ “ I promise to eat every pound of steel rail [the Tatas] succeed in making" ಹೇಳಿಕೆ ಜಮ್‍ಶೆಡ್ಜಿಯವರ ನಿರ್ಧಾರವನ್ನು ಇನ್ನೂ ಬಲಪಡಿಸಿತು.
ತಮ್ಮ ಆರೊಗ್ಯ ಸರಿ ಇಲ್ಲದಿದ್ದರೂ ೧೯೦೨ರಲ್ಲಿ ಅಮೇರಿಕದ ಪ್ರವಾಸ ಕೈಗೊಂಡರು. ಅಮೇರಿಕದ ಪ್ರಖ್ಯಾತ ಕನ್ಸಲ್ಟಿಂಗ್ ಎಂಜಿನಿಯರ್ ಚಾರ್ಲ್ಸ್ ಪೇಜ್ ಪೆರಿನ್ ನೆರವಿನಿಂದ ಬಿಹಾರದ ಸಾಕ್ಚಿಯ ಬಳಿ ಉಕ್ಕಿನ ಸ್ಥಾವರ ಸ್ಥಾಪಿಸುವುದು ಎಂಬ ನಿಶ್ಚಯವಾಯಿತು. ದುರದೃಷ್ಟವಶಾತ್ ತಮ್ಮ ಕನಸು ನನಸಾಗುವುದನ್ನು ಜಮ್‍ಷೆಡ್ಜಿ ನೋಡಲಾಗಲಿಲ್ಲ. ಟಾಟಾ ಐರನ್ ಅಂಡ್ ಸ್ಟೀಲ್ ವರ್ಕ್ಸ್ ಪ್ರಾರಂಭವಾಗಿದ್ದು 1912ರಲ್ಲಿ ಅಂದರೆ ಜಮ್‍ಷೆಡ್ಜಿಯವರ ನಿಧನದ ಎಂಟು ವರ್ಷಗಳ ನಂತರ. ಆಗಿನ ಸಾಕ್ಚಿ ಈಗಿನ ಝಾರ್ಖಂಡ್ ರಾಜ್ಯದ ಜಮ್‍ಷೆಡ್‍ಪುರ್.

ಭಾರತೀಯ ವಿಜ್ನಾನ ಸಂಸ್ಥೆ:

ತನ್ಮಧ್ಯೆ 1890ರ ವೇಳೆಗೆ ಜಮ್‍ಷೆಡ್ಜಿಯವರಿಗೆ ಭಾರತದಲ್ಲಿ ವಿಜ್ನಾನ ಮತ್ತು ತಂತ್ರ ಜ್ನಾನದ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆ ನಡೆಸಲು ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಪ್ರಬಲ ಇಛ್ಛೆ ಜಾಗೃತವಾಗಿತ್ತು. ಈ ನಿಟ್ಟಿನಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಅನೇಕರಲ್ಲಿ ತೋಡಿಕೊಂಡಿದ್ದರು. 1898ರಲ್ಲಿ ಜಪಾನಿನಿಂದ ಅಮೇರಿಕಕ್ಕೆ ಹೋಗುತ್ತಿದ್ದ ಹಡಗಿನಲ್ಲಿ ಜಮ್‍ಶೆಡ್ಜಿಯವರಿಗೆ ಅದೇ ಹಡಗಿನಲ್ಲಿ ಶಿಕಾಗೋ ಸರ್ವಧರ್ಮ ಸಮ್ಮೇಳನಕ್ಕಾಗಿ ಹೋಗುತ್ತಿದ್ದ ಸ್ವಾಮಿ ವಿವೇಕಾನಂದರ ಪರಿಚಯವಾಯಿತು. ಜಮ್‍ಶೆಡ್ಜಿಯವರು ಭಾರತದಲ್ಲಿ ತಮ್ಮ ಉಕ್ಕಿನ ಕಾರ್ಖಾನೆಯ ಮತ್ತು ವಿಜ್ನಾನ ಸಂಶೋಧನಾ ಕೇಂದ್ರದ ಕನಸುಗಳ ಬುತ್ತಿ ಬಿಚ್ಚಿಟ್ಟರು. ಸ್ವಾಮಿ ವಿವೇಕಾನಂದರು ಅವರ ಪ್ರಯತ್ನವನ್ನು ಹರಸಿ ಅವರ ಪ್ರಯತ್ನಕ್ಕಾಗಿ ಶುಭ ಕೋರಿದರು.
ಆಮೇಲೆ 1898 ರಲ್ಲಿ ಜಮ್‍ಷೆಡ್ಜಿ ತಮ್ಮ ಸ್ವಂತ ಆಸ್ತಿಯಿಂದ30 ಲಕ್ಷ ರೂಪಾಯಿಗಳನ್ನು ಇಂತಹ ಸಂಸ್ಥೆಗಾಗಿ ಮುಡಿಪಾಗಿಟ್ಟರು. ಆಗಿನ ವೈಸ್‍ರಾಯ್ ಲಾರ್ಡ್ ಕರ್ಜನ್‍ರವರಿಗೆ ತಮ್ಮ ಯೋಜನೆಯ ವಿವರಗಳನ್ನು ಸಲ್ಲಿಸಿ ಸ್ವಾಮಿ ವಿವೇಕಾನಂದರಿಗೆ ತಮ್ಮ ಯೋಜನೆಯ ಬೆಂಬಲ ಕೋರಿದರು.

23ನೇ ನವೆಂಬರ್ 1898ರಂದು ಸ್ವಾಮಿ ವಿವೇಕಾನಂದರಿಗೆ ಬರೆದ ಕಾಗದದಲ್ಲಿ

Dear Swami Vivekananda,

I trust you remember me as a fellow traveler on your voyage from Japan to Chicago. I very much recall at this moment your views on the growth of the ascetic spirit in India, and the duty, not of destroying, but of diverting it into useful channels.

I recall these ideas in connection with my scheme of Research Institute of Science for India , of which you have doubtless heard or read. It seems to me that no better use can be made of the ascetic spirit than the establishment of monasteries or residential halls for men dominated by this spirit, where they should live with ordinary decency, and devote their lives to the cultivation of sciences – natural and humanistic. I am of the opinion that, if such a crusade in favour of an asceticism of this kind were undertaken by a competent leader, it would greatly help asceticism, science, and the good name of our common country; I know not who would make a more fitting general of such a campaign than Vivekananda. Do you think you would care to apply yourself to the mission of galvanizing into life of our traditions in this respect? Perhaps you had better begin with a fiery pamphlet rousing our people in this matter. I should cheerfully defray all the expenses of publication.

I am, Dear Swami,
Yours faithfully,
Jamsetji N. Tata

ಇದಕ್ಕೆ ಪ್ರತ್ಯುತ್ತರವಾಗಿ ಸ್ವಾಮಿ ವಿವೇಕಾನಂದರು ತಮ್ಮ ಬೆಂಬಲ ಸೂಚಿಸಿ ಲಾರ್ಡ್ ಕರ್ಜನ್‍ರವರಿಗೆ ಬರೆದ ಪತ್ರದಲ್ಲಿ

"I am not aware if any project at once so opportune and so far reaching in its beneficent effects has ever been mooted in India... The scheme grasps the vital point of weakness in our national well-being with a clearness of vision and tightness of grip, the mastery of which is only equalled by the munificence of the gift that is being ushered to the public." ಎಂದು ಬರೆದರು.

ಇಷ್ಟೆಲ್ಲ ಜನರ ಬೆಂಬಲವಿದ್ದಾಗ್ಯೂ ಈ ವಿಜ್ನಾನ ಸಂಸ್ಥೆ ಅಸ್ಥಿತ್ವಕ್ಕೆ ಬರಲು ಇನ್ನೂ ಹನ್ನೆರಡು ವರ್ಷಗಳು ಬೇಕಾಯಿತು. ಆದರೆ ಇದನ್ನು ನೋಡುವ ಭಾಗ್ಯ ಸ್ವಾಮಿ ವಿವೇಕಾನಂದ ( ನಿಧನ 1902) ಹಾಗೂ ಜಮ್‍ಷೆಡ್ಜಿ (ನಿಧನ 1904) ಇಬ್ಬರಿಗೂ ಇರಲಿಲ್ಲ.

ಕನಸು ನನಸಾದ ಬಗೆ:

ಜಮ್‍ಷೆಡ್ಜಿಯವರ ಯೋಜನೆಗಳನ್ನು ಅವರ ನಿಧನಾನಂತರ ಕಾರ್ಯರೂಪಕ್ಕೆ ತರಲು ಅವರ ಮಕ್ಕಳಾದ ದೊರಾಬ್ ಮತ್ತು ರತನ್ ಟಾಟಾರವರು ಅವರ ಇಛ್ಛಾನುಸಾರ ಶ್ರಧ್ಧಾಪೂರ್ವಕವಾಗಿ ನಡೆದುಕೊಂಡದ್ದೇನೋ ಸರಿಯೇ. ಆದರೆ ಜಮ್‌ಷೆಡ್ಜಿಯವರ vision ಮತ್ತು passion ಅನ್ನು ರಕ್ತಗತ ಮಾಡಿಕೊಂಡು ಅವರ ಊಹೆಗೂ ಮೀರಿದ ರೀತಿಯಲ್ಲಿ ಸಾಕಾರಗೊಳಿಸುವಲ್ಲಿ ಅವರ ಅತ್ಯಂತ ಸ್ವಾಮಿನಿಷ್ಠ ಪ್ರತಿಭಾಶಾಲಿ ಅನುಯಾಯಿಯೊಬ್ಬರ ದೇಣಿಗೆ ಬಹಳ ಜನರಿಗೆ ತಿಳಿದಿಲ್ಲದಿರಬಹುದು.

ಈ ವ್ಯಕ್ತಿಯ ಹೆಸರು ಬುರ್ಜೊರ್ಜಿ ಜಮಾಸ್ಪ್ಜಿ ಪಾದ್‍ಶಾ ( 1864-1941). ಈತ ಜಮ್‍ಷೆಡ್ಜಿಯ ಆಪ್ತ ಸ್ನೇಹಿತರ ಮಗ. 1994ರಲ್ಲಿ ಜಮ್‍ಶೆಡ್ಜಿಯವರ ಆಪ್ತಸಹಾಯಕನಾಗಿ ಸೇರಿದ ಅಪ್ರತಿಮ ಮೇಧಾವಿ ಇವರು. ವಿದ್ಯಾಭ್ಯಾಸದಲ್ಲಿ ಫಸ್ಟ್ ಕ್ಲಾಸ್ ಫಸ್ಟ್. Walking encyclopaedia ಎಂದು ಹೆಸರಾಗಿದ್ದ ಇವರ ಜ್ನಾಪಕ ಶಕ್ತಿ ವಿಸ್ಮಯಕಾರಿಯಾಗಿತ್ತಂತೆ. ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಕಾಗದದ ಮೇಲೆ ಬರೆಯದೆ ಮನಸ್ಸಿನಲ್ಲೇ ಬಿಡಿಸುವ ಚಾತುರ್ಯವಿತ್ತೆಂದು ಪ್ರತೀತಿ. ಸೌಮ್ಯ ಸ್ವಭಾವ ಆದರೂ ಬಿಡದ ಹಠ. ವ್ಯವಹಾರ ಮತ್ತು ಚರ್ಚೆಯಲ್ಲಿ ಮೀರಿಸುವರಿಲ್ಲ. ಅಂಕಿ ಅಂಶಗಳೆಲ್ಲ ಬೆರಳ ತುದಿಯಲ್ಲಿ.
ಸರ್ಕಾರಿ ಅಧಿಕಾರಿಗಳು , ತಂತ್ರಜ್ನರು, ಕಾರ್ಮಿಕರು ಎಲ್ಲರೊಡನೆಯೂ ಹೊಂದಿಕೊಂಡು ದಿನಕ್ಕೆ ಸುಮಾರು ಹದಿನೆಂಟಕ್ಕೂ ಹೆಚ್ಚು ಘಂಟೆ ದುಡಿಯುವ ಕ್ಷಮತೆ. ಭಾರತೀಯ ವಿಜ್ನಾನ ಸಂಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅದರ ಮೊದಲ ಡೈರೆಕ್ಟರ್ ಅವರನ್ನು ಆರಿಸುವುದರಿಂದ ಅದರ ಸಂವಿಧಾನದ ಕರಡು ಪ್ರತಿಯನ್ನು ಬರೆಯುವ ತನಕ ಎಲ್ಲ ಕೆಲಸವನ್ನೂ ಸ್ವತಃ ತನ್ನ ಕೈಯಲ್ಲೇ ಮಾಡಿದ ಸೂಪರ್‍ಮ್ಯಾನ್. ಭಾರತೀಯ ವಿಜ್ನಾನ ಸಂಸ್ಥೆ 1911ರಲ್ಲಿ ಪ್ರಾರಂಭವಾದ ಕೂಡಲೆ ಅದರ ಕೌನ್ಸಿಲ್‍ಗೆ ರಾಜಿನಾಮೆಯಿತ್ತು ಟಾಟಾ ಉಕ್ಕಿನ ಸ್ಥಾವರದ ಕೆಲಸದಲ್ಲಿ ತೊಡಗಿಸಿಕೊಂಡರು. ಟಾಟಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಂಪನಿಯ ವಿನ್ಯಾಸದಿಂದ ಅನಾವರಣದವರೆಗೂ ಎಲ್ಲ ಹೊಣೆಗಾರಿಕೆಯೂ ಈತನದೆ. ಜಮ್‍ಷೆಡ್ಜಿಯವರ ಮರಣಾನಂತರ 1905ರಲ್ಲಿ ದೊರಾಬ್ ಮತ್ತು ರತನ್ ಟಾಟಾ ರವರನ್ನು ಹುರಿದುಂಬಿಸಿ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣಕರ್ತರಾದರು. ಇನ್ಶೂರೆನ್ಸ್ ವ್ಯವಹಾರದ ಆಳ ಅಧ್ಯಯನ ಮತ್ತು ಸಂಶೋಧನೆ ಮಾಡಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸ್ಥಾಪನೆಗೆ ಹಾದಿ ಮಾಡಿಕೊಟ್ಟರು. ‘simple living and high thinking” ಎಂಬ ಹೇಳಿಕೆಗೆ ಇವರೇ ನಿದರ್ಶನ ಎಂದು ಬಾಳಿ ತೋರಿಸಿದರು. ಸೌಮ್ಯ ಸ್ವಭಾವದ ಬುರ್ಜೋರ್ಜಿ ಪಾದ್‍ಶಾ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿ ಭಾರತದ ಏಳಿಗೆಗಾಗಿ ಮಾಡಿದ ಅನುದಾನ ಅಪರಿಮಿತ.

ಜಮ್‍ಷೆಡ್ಜಿಯವರ ಅದೃಷ್ಟವೋ ಭಾರತದ ಭಾಗ್ಯವೋ, ಪಾದ್‍ಶಾರಂತಹ ಸ್ವಾಮಿನಿಷ್ಠರ ಸಾಧನೆಯಿಂದ ಭಾರತದ ಘನತೆಗೆ ಮೆರುಗು ಹತ್ತಿದೆ.

ಜಮ್‍ಷೆಡ್ಜಿ ಮತ್ತು ಬೆಂಗಳೂರು:

ಬೆಂಗಳೂರಿಗೂ ಟಾಟಾರವರಿಗೂ ಅದೇನೋ ಅದೃಷ್ಟದ ನಂಟು.

ಭಾರತೀಯ ವಿಜ್ನಾನ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಕಾರಣಿಭೂತರು ಇನ್ನೂ ಹಲವರನ್ನು ನೆನೆಸಿಕೊಳ್ಳುವುದು ಉಚಿತ. 1898ರಲ್ಲಿ ಲಾರ್ಡ್ ಕರ್ಜನ್ ನೇಮಿಸಿದ ಸಮಿತಿಯೊಂದು ಉತ್ತರ ಪ್ರದೇಶದ ರೂರ್ಕಿಯಲ್ಲಿ ಸ್ಥಾಪಿಸಬೇಕೆಂದು ಶಿಫಾರಸು ಮಾಡಿತ್ತು. ಇದರ ಸುಳಿವು ಹತ್ತಿದ ಕೂಡಲೆ ಆಗಿನ ಮೈಸೂರಿನ ದಿವಾನ್ ಶೇಷಾದ್ರಿ ಅಯ್ಯರ್ ಅವರು ಮಹಾರಾಣಿ ರೀಜೆಂಟ್‍ರವರ ಮನವೊಲಿಸಿ 1899ರಲ್ಲಿಯೇ ಬೆಂಗಳೂರಿನ ಉತ್ತರದಲ್ಲಿ 372 ಎಕರೆ ಜಮೀನನ್ನು ಸಂಸ್ಥೆಗಾಗಿ ದಾನ ಮಾಡಿಸಿದರು. ಇದಾದ ಹತ್ತು ವರ್ಷಗಳ ನಂತರ ವಿಜ್ನಾನ ಸಂಸ್ಥೆಯ ಕಟ್ಟಡದ ಶಂಕುಸ್ಠಾಪನೆ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಅಮೃತ ಹಸ್ತದಿಂದ ನೆರವೇರಿತು. ಸರಿಯಾದ ಹೊತ್ತಿನಲ್ಲಿ ರಾಜಮನೆತನದ ಹಾಗೂ ದಿವಾನ್ ಶೇಷಾದ್ರಿ ಅಯ್ಯರ್‍ರವರ ಹಸ್ತಕ್ಷೇಪವಾಗಿಲ್ಲದಿದ್ದರೆ ಭಾರತೀಯ ವಿಜ್ನಾನ ಸಂಸ್ಥೆ ಬೆಂಗಳೂರಿನಲ್ಲಂತೂ ಇರುತ್ತಿರಲಿಲ್ಲ.

ಜಮ್‍ಶೆಡ್ಜಿಯವರು ಮೈಸೂರು ಸಿಲ್ಕ್ ಉದ್ಯಮದ ಬೆಳವಣಿಗೆಗಾಗಿ ಶ್ರಮಿಸಿ 1902ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಟಾಟಾ ಸಿಲ್ಕ್ ಫಾರ್ಮ್ ಸ್ಥಾಪಿಸಿ ಎಂಟು ವರ್ಷಗಳ ಕಾಲ ನಡೆಸಿ ಮೈಸೂರು ಸಂಸ್ಥಾನಕ್ಕೆ ಬಿಟ್ಟು ಕೊಟ್ಟದ್ದು ಇಂದಿನ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
1893ನೇ ಇಸವಿಯಲ್ಲಿ ಜಪಾನ್ ದೇಶಕ್ಕೆ ಭೇಟಿಯಿತ್ತ ಜಮ್‍ಷೆಡ್ಜಿ ಅಲ್ಲಿಯ ರೇಷ್ಮೆ ಕೃಷಿಯಿಂದ ಆಕರ್ಷಿತರಾದರು. ಭಾರತದಲ್ಲಿಯೂ ಜಪಾನ್ ಮಾದರಿಯ ಕೃಷಿಯನ್ನು ನಮ್ಮ ರೈತರಿಗೆ ಹೇಳಿಕೊಡುವ ಉದ್ದೇಶದಿಂದ ಬೆಂಗಳೂರಿನ ದಕ್ಷಿಣದಲ್ಲಿ ಒಂದು ಸಿಲ್ಕ್ ಫಾರ್ಮ್ ಸ್ಥಾಪಿಸಲೋಸುಗ ಮೈಸೂರು ಸರ್ಕಾರದಿಂದ ಜಮೀನನ್ನು ಬಾಡಿಗೆಗೆ ತೆಗೆದುಕೊಂಡರು. ಹತ್ತು ಬೇಸಿನ್‍ಗಳ ಸಾಮರ್ಥ್ಯವುಳ್ಳ ಫಿಲೇಚರ್ ಅನ್ನು ಅಣಿಗೊಳಿಸಿ ಫಾರ್ಮ್‍ನಲ್ಲಿ ವಿವಿಧ ಜಾತಿಯ ಮುಲ್ಬೆರಿ ಸೊಪ್ಪಿನ ಗಿಡಗಳನ್ನು ಬೆಳೆಸಿದರು. ಈ ಫಾರ್ಮ್ ಜಪಾನೀ ಪಧ್ಧತಿಯ ಅನುಸಾರ ನಡೆಯಬೇಕೆಂದು ಜಪಾನಿನಿಂದ ತಜ್ನ ದಂಪತಿಗಳ ನ್ನು ಕರೆಸಿಕೊಂಡರು. ಈ ಫಾರ್ಮ್‍ನಲ್ಲಿ ಅನೇಕ ಯುವಕರಿಗೆ ಮತ್ತು ರೈತರಿಗೆ ರೇಷ್ಮೆ ಕೃಷಿಯ ಬಗ್ಗೆ, ಹುಳಗಳ ಬೆಳೆಸುವ, ಹುಳಗಳಿಗೆ ಬರುವ ಖಾಯಿಲೆಗಳನ್ನು ನಿವಾರಿಸುವ, ರೇಷ್ಮೆ ಗೂಡುಗಳ ಉಸ್ತುವಾರಿ, ರೇಷ್ಮೆ ಎಳೆಗಳ ರೀಲಿಂಗ್ ಮತ್ತು ರೀರೀಲಿಂಗ್ ಬಗ್ಗೆ ಜಪಾನಿ ತಂತ್ರಜ್ನಾನ ಕಲಿಸುವುದರಲ್ಲಿ ಯಶಸ್ವಿಯಾಯಿತು. ಈ ಸಿಲ್ಕ್ ಫಾರ್ಮ್‍ನ ಮಾದರಿಯಾಗಿಟ್ಟುಕೊಂಡು ಪಂಜಾಬ್. ಸಿಲೋನ್ ಮುಂತಾದ ಸ್ಠಳಗಳಲ್ಲಿ ಹೊಸ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಲಾಭದ ದೃಷ್ಟಿಯಿಲ್ಲದ ಇಂತಹ ಪ್ರಯತ್ನ ಯಶಸ್ವಿಯಾದೊಡನೆ ಫಾರ್ಮ್‍ನ ಉಸ್ತುವಾರಿಯನ್ನು ಮೈಸೂರು ಸರ್ಕಾರಕ್ಕೆ ಒಪ್ಪಿಸಲಾಯಿತು. ಆದರೆ ಇಂದು ಈ ಫಾರ್ಮ್ ಅಸ್ತಿತ್ವದಲ್ಲಿ ಇಲ್ಲದೆ , ಹೆಸರೊಂದನ್ನು ಬಿಟ್ಟು ಬೇರೆ ಯಾವ ಕುರುಹೂ ಕಾಣಿಸದು.

ಜಮ್‍ಶೆಡ್ಜಿಯವರು ಸ್ಥಾಪಿಸಿದ ಭಾರತೀಯ ವಿಜ್ನಾನ ಸಂಸ್ಥೆ ಈ ವರ್ಷ ಮೇ ತಿಂಗಳಲ್ಲಿ ಶತಮಾನೋತ್ಸವ ಆಚರಿಸಲಿದೆ. ಕರ್ನಾಟಕದಲ್ಲಿಯೇ 1000ಎಕರೆಗೂ ಹೆಚ್ಚಿನ ಇನ್ನೊಂದು ಕ್ಯಾಂಪಸ್ ಉದ್ಘಾಟಿಸುವ ಯೋಜನೆಯಿದೆ. ಪ್ರಸ್ತುತ ವಿಜ್ನಾನ ಸಂಸ್ಥೆಯ ಕೋರ್ಟ್ ಅಧ್ಯಕ್ಷ ರತನ್ ಟಾಟಾ ಅವರ ನೇತೃತ್ವದಲ್ಲಿ ಮುಂದಿನ ನೂರು ವರ್ಷಗಳ Vision Statement ರೂಪಿಸುವ ನಿಟ್ಟಿನಲ್ಲಿ ವಿಶ್ವ ವ್ಯಾಪಿ ವಿಚಾರ ವಿನಿಮಯ ಆರಂಭವಾಗಿವೆ.

ಜಮ್‍ಶೆಡ್ಜಿಯವರ ಕಾರ್ಮಿಕರಿಗಾಗಿ ಕಾಳಜಿ ಮತ್ತು ಪರಿಸರ ಪ್ರೇಮ:

ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮುನ್ನವೇ ಜಮ್‍ಷೆಡ್ಜಿಯವರು ತಮ್ಮ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಬೇರೆಡೆಗಿಂತ ಕಡಿಮೆ ಕಾರ್ಯದ ಸಮಯ, ಗಾಳಿ ಬೆಳಕಿರುವ ಆರೋಗ್ಯಕರ ಕಾರ್ಯ ಪರಿಸರ, ಕಾರ್ಮಿಕರಿಗಾಗಿ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚುಟಿಯಂತಹ ಸವಲತ್ತುಗಳನ್ನು ತಮ್ಮ ಕಾರ್ಖಾನೆಯ ಕಾರ್ಮಿಕರಿಗೆ ಆಗಿನ ಕಾಲದಲ್ಲಿಯೇ ಕೊಡುವ ವ್ಯವಸ್ಥೆ ಮಾಡಿದ್ದರು. ಉಕ್ಕಿನ ಸ್ಥಾವರದ ಸ್ಥಾಪನೆ ಗೆ ಇನ್ನೂ ಐದು ವರ್ಷದ ಮುನ್ನವೇ ಕಾರ್ಮಿಕರಿಗಾಗಿ ಸುಂದರ ನಗರವನ್ನು ವಿನ್ಯಾಸ ಮಾಡಲು ತಮ್ಮ ಮಕ್ಕಳಾದ ದೊರಾಬ್ ಮತ್ತು ರತನ್ ಟಾಟಾ ರವರಿಗೆ ಒಂದು ಪತ್ರ ಬರೆದು ತಮ್ಮ ಆಸೆಯನ್ನು ತೋಡಿಕೊಂಡಿದ್ದರು.

"Be sure to lay wide streets planted with shady trees, every other of a quick-growing
variety, Be sure that there is plenty of space for lawns and gardens. Reserve large areas for football, hockey and parks. Earmark areas for Hindu temples, Mohammedan mosques and Christian churches."

ಜೆ. ಆರ್. ಡಿ ಟಾಟಾ ರವರ ಕಾಲದಲ್ಲಿ ಜಮ್‍ಷೆಡ್ಜಿಯವರ ಇಛ್ಛೆಯ ಪ್ರಕಾರ ಜಮ್‍ಷೆಡ್‍ಪುರ್ ಒಂದು ಸುಂದರ ಔದ್ಯೋಗಿಕ ನಗರವಾಗಿ ರೂಪುಗೊಂಡಿದೆ.

ತಾವು ಸಂಪಾದಿಸಿದ ಅಪಾರ ಸಂಪತ್ತನ್ನು ಭಾರತದ ನಾಗರಿಕರ ಕಲ್ಯಾಣಕ್ಕಾಗಿ ನೀರಿನಂತೆ ಖರ್ಚು ಮಾಡಿದ ತ್ಯಾಗಜೀವಿ ಜಮ್‍ಷೆಡ್ಜಿ ಟಾಟಾ. ಅವರ ಪ್ರತಿಯೊಂದು ಕೆಲಸದಲ್ಲೂ ಭಾರತೀಯ ಸ್ವಾಭಿಮಾನದ ಕಿಡಿಯನ್ನು ಗುರುತಿಸಿದ ಬ್ರಿಟಿಷರು ಅವರಿಗೆ ಯಾವ ಬಿರುದು ಬಾವಲಿಗಳನ್ನು ಕೂಡ ಕೊಡಲು ಸಿಧ್ಧರಿರಲಿಲ್ಲ. ಜೀವನದುದ್ದಕ್ಕೂ ಸಂಘರ್ಷ ನಡೆಸಿ ತಮ್ಮ ಗುರಿ ಸಾಧಿಸುವ ಏಕೈಕ ಆತ್ಮವಿಶ್ವಾಸ ಮತ್ತು ಕೆಚ್ಚು ಅವರಲ್ಲಿತ್ತು. ತಮ್ಮ ಸಮಕಾಲೀನರ ಹೋಲಿಕೆಯಲ್ಲಿ ಜಮ್‍ಷೆಡ್ಜಿ ಅನೇಕ ವರ್ಷಗಳ ಮುಂದಿದ್ದರು.

ಅಪ್ರತಿಮ ದೇಶಭಕ್ತಿ, ಉದಾತ್ತ ಧ್ಯೇಯ, ನಿಷ್ಕಾಮ ಕರ್ಮ, ಪ್ರಾಮಾಣಿಕತೆಗಳ ನೆಲಗಟ್ಟಿನ ಮೇಲೆ ಜಮ್‍ಷೆಡ್ಜಿ ನಸ್ಸೆರ್ವಾನ್‍ಜಿ ಟಾಟಾ ಕಟ್ಟಿದ ಆಧುನಿಕ ಔದ್ಯೋಗಿಕ ಸಾಮ್ರಾಜ್ಯ ಸಮಯದ ಪರೀಕ್ಷೆಯನ್ನು ಮೀರಿ ವಿಶ್ವದ ಒಕ್ಕೂಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದೆ.

********************************
Published on 3rd March 2008 in thatskannada.com
http://thatskannada.oneindia.in/literature/people/2008/0303-TATA-institutions-founder-day.html
and on 4th March 2008 in ಸಂಪದ
http://sampada.net/article/7711