Friday, 28 September 2007

ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ

- ನವರತ್ನ ಸುಧೀರ್

ಇಸವಿ ಕ್ರಿಸ್ತ ಶಕ ೨೦೦೭. ಸೆಪ್ಟೆಂಬರ್ ತಿಂಗಳಿನ ಒಂದು ದಿನ. ಇವತ್ತೇ ಎಂದಿಟ್ಟುಕೊಳ್ಳಿ. ಶ್ರೀ ರಾಮ ಹನುಮಂತನೊಂದಿಗೆ ರಾಮೇಶ್ವರದ ತಟದಲ್ಲಿ ನಿಂತು ದೂರದಿಂದಲೇ ರಾಮ ಸೇತುವೆಯನ್ನು ಸಿಂಹಾವಲೋಕನ ಮಾಡುತ್ತಿದ್ದ.

“ಪ್ರಿಯ ಹನುಮಾನ್, ನೀನು ಬೇರೆ ಕಪಿಗಳ ಸಹಾಯದಿಂದ ನಿರ್ಮಿಸಿದ ಈ ಸೇತುವೆ ಸಾವಿರಾರು ವರ್ಷಗಳ ಕಾಲ ಅದೆಷ್ಟು ಸುಭದ್ರ ಹಾಗೂ ಸುರಕ್ಷಿತವಾಗಿದೆಯಲ್ಲ! ಅದೇ ನೋಡು ಹೈದರಾಬಾದಿನಲ್ಲಿ ಮೊನ್ನೆ ಮೊನ್ನೆ ತಾನೆ ಗ್ಯಾಮನ್ ಕಂಪನಿಯವರು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಕಟ್ಟಿದ ಸೇತುವೆ ಹೇಗೆ ಕುಸಿದುಬಿದ್ದಿತು?”

ಹನುಮಾನ್ ಹೇಳಿದ “ಸ್ವಾಮಿಗಳೇ, ನಾವೆಲ್ಲರೂ ನಿಮ್ಮ ಮೇಲಿನ ಭಕ್ತಿಯೊಂದರ ಅಧಾರದ ಮೇಲೆ ಪ್ರತಿಯೊಂದು ಕಲ್ಲಿನ ಮೇಲೆಯೂ ನಿಮ್ಮ ನಾಮ ಮಾತ್ರವೊಂದನ್ನು ಬರೆದು ಸಮುದ್ರದಲ್ಲಿ ಎಸೆದಿದ್ದೆವು. ಅವೆಲ್ಲ ಒಂದಾಗಿ ಈ ಸೇತುವೆಯ ನಿರ್ಮಾಣವಾಯಿತು. ನಮಗೆ ನಿಮ್ಮ ಭಕ್ತಿಯೊಂದು ಬಿಟ್ಟು ಯಾವ ಟಾಟಾ ಸ್ಟೀಲ್‍ರವರ ಉಕ್ಕು ಅಥವಾ ಅಂಬುಜ ಕಂಪನಿಯ ಸಿಮೆಂಟ್‍ನ ಅವಶ್ಯಕತೆ ಇರಲಿಲ್ಲ. ಅದು ಸರಿ, ಈಗೇಕೆ ಅಷ್ಟು ಹಳೆಯ ವಿಷಯದ ಪ್ರಸ್ತಾಪ?”

“ ಅಲ್ಲವೋ ಹನುಮಾನ್, ನಿನಗೇಕೆ ಅರ್ಥವಾಗುತ್ತಿಲ್ಲ? ಈಗ ಭಾರತದಲ್ಲಿ ಕೆಲವರು ಈ ಸೇತುವೆಯನ್ನು ಕೆಡವಿ ಒಂದು ಮಹಾ ಕಾಲುವೆ ಕಟ್ಟಲು ಹೊರಟಿದ್ದಾರೆ. ಸೇತುವೆ ಕೆಡವುವ ಗುತ್ತಿಗೆ ಕೊಡುವುದರಲ್ಲಿ ಬಹಳ ಹಣ ಗಳಿಸಬಹುದು. ಇನ್ನು ಕಾಲುವೆ ಮಾಡುವ ಗುತ್ತಿಗೆಯಲ್ಲಿ ಇನ್ನೂ ಜಾಸ್ತಿ ಹಣ ಗಳಿಸಬಹುದು. ಅರ್ಥವಾಯಿತೆ ವಾನರರಾಜರಿಗೆ?” ರಾಮ ಉವಾಚ.

ಹನುಮಂತನಿಗೆ ಇನ್ನೂ ಅರ್ಥವಾಗಲಿಲ್ಲ. “ ನಾವು ಸ್ವತಃ ಸರ್ಕಾರದ ಮುಂದೆ ಹೋಗಿ ಮನವಿ ಸಲ್ಲಿಸಿದರೆ ಹೇಗೆ? ಆಗಲಾದರೂ ನಂಬಬೇಕಲ್ಲವೇ?”

ಶ್ರೀ ರಾಮ ನಕ್ಕು ಹೇಳಿದ “ ಅಯ್ಯಾ ಆಂಜನೇಯ, ಇದು ಕಲಿ ಯುಗ. ಎಲ್ಲ ಬದಲಾಗಿದೆ? ನಾವೀಗ ಅಲ್ಲಿಗೆ ಹೋದರೆ ಅವರಿಗೆ ಏಜ್ ಪ್ರೂಫ್ -ಅಂದರೆ ವಯಸ್ಸಿನ ಪುರಾವೆ ಗಾಗಿ ಬರ್ಥ್ ಸರ್ಟಿಫಿಕೇಟ್ ಅಥವಾ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಕೇಳುತ್ತಾರೆ. ಅದೆಲ್ಲಿಂದ ತರ್ತೀಯಾ? ಎಲ್ಲ ಕಡೆಯೂ ಬರಿಗಾಲಿನಲ್ಲಿ ಅಥವಾ ಎತ್ತಿನ ಬಂಡಿಯಲ್ಲೋ ಓಡಾಡಿದ ನಮಗೆ ಡ್ರೈವಿಂಗ್ ಲೈಸೆನ್ಸ್ ಕೂಡ ಇಲ್ಲ.
ಇನ್ನು ಅಡ್ರೆಸ್ ಪ್ರೂಫ್ ಗಾಗಿ ರೇಷನ್ ಕಾರ್ಡ್ ಕೂಡ ಇಲ್ಲ. ಹುಟ್ಟಿ ಬೆಳೆದ ಅಯೋಧ್ಯೆ ಇದೆಯೋ ಇಲ್ಲವೋ ಅಂತ ಇತಿಹಾಸಕಾರರು ಕಳೆದ ೫೦ ವರ್ಷಗಳಿಂದಲೂ ಹೊಡೆದಾಡುತ್ತಿದ್ದಾರೆ. ಇನ್ನು ನಾನು ಬಿಲ್ಲು ಬಾಣ ಹಿಡಿದು ದೆಹಲಿಗೆ ಹೋದೆನೋ, ಸಾಧಾರಣ ಮನುಷ್ಯ ನನ್ನನ್ನು ಗುರುತಿಸಿದರೂ, ಮಂತ್ರಿ ಅರ್ಜುನ್ ಸಿಂಗ್ ಮಾತ್ರ ನಾನು ಯಾವುದೋ ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂದುಕೊಂಡು ಯಾವುದೋ ಐ.ಐ ಟಿ ಯಲ್ಲಿ ಸುರಕ್ಷಿತ ಕೋಟಾದಲ್ಲಿ ಸೀಟ್ ಕೊಡಬಹುದಷ್ಟೇ.! ನಾರಾಯಣಮೂರ್ತಿಗಳ ಹಾಗೆ ಒಂದು “ತ್ರೀ ಪೀಸ್ ಸೂಟ್” ಹಾಕಿ ಕೊಂಡೇನಾದರೂ ಹೋದರೆ ಭಕ್ತರು ಕೂಡ ನನ್ನನ್ನು ನಂಬುವುದಿಲ್ಲ. ಒಂದು ವಿಚಿತ್ರ ರೀತಿಯ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ.”

ಹನುಮಾನ್ ಉವಾಚ. “ನಾನೇ ನಿಮ್ಮ ಪರವಾಗಿ ಹೋಗಿ ಈ ಸೇತುವೆ ಕಟ್ಟಿದವನು ನಾನೆ ಎಂದು ಡಿಕ್ಲೇರ್ ಮಾಡಿದರೆ?”

“ ಅಯ್ಯಾ ಪವನಸುತಾ! ನಿನಗೆ ಅದೇನು ಹೇಳಲಿ? ಅಲ್ಲಿ ನಿನ್ನ ಯಾವ ಬೇಳೆಯೂ ಬೇಯುವುದಿಲ್ಲ. ಅವರು ನಿನಗೆ ಸೇತುವೆಯ ನಕ್ಷೆ, ಸಂಪೂರ್ಣ ಪ್ರಾಜೆಕ್ಟ್ ರಿಪೋರ್ಟ್, ಒಟ್ಟು ಹಣ ಹೂಡಿಕೆಯ ವಿವರಗಳು ಇತ್ಯಾದಿ ಅನೇಕ ವಿವರ, ದಾಖಲೆಗಳನ್ನು ಸಲ್ಲಿಸಲು ಹೇಳುತ್ತಾರೆ. ವಿತ್ತ ಮಂತ್ರಿ ಚಿದಂಬರಂ ಕೂಡ ಅಷ್ಟು ಹಣ ಕಪಿಗಳಾದ ನಿಮಗೆಲ್ಲಿಂದ ಬಂತು? ಟ್ಯಾಕ್ಸ್ ಕೊಟ್ಟಿದ್ದೀರಾ? ಯಾವುದಾದರೂ ಹೊರ ದೇಶದಿಂದ ಹಣದ ಸಹಾಯವಿತ್ತೇ? ಹೀಗೇ ಏನೇನೋ ಕೇಳಿ ಸತಾಯಿಸುತ್ತಾರೆ. ಕೊನೆಗೆ ಕಂಪ್ಲೀಷನ್ ಸರ್ಟಿಫಿಕೇಟ್ ಎಲ್ಲಿ? ಯಾರು ಕೊಟ್ಟದ್ದು? ಯಾವಾಗ ಕೊಟ್ಟದ್ದು? ದಾಖಲೆಗಳಿಲ್ಲವೋ ನೀ ಸತ್ತೆ! ನಿನಗೆ ಕೆಮ್ಮು ಇರಬಹುದು. ಆದರೆ ಡಾಕ್ಟರ್ ಹೇಳಬೇಕು. ಪೆಂಷನ್ ತೊಗೊಳ್ಳುವಾಗಲೂ ನಿಮ್ಮ ಬ್ಯಾಂಕ್ ಮ್ಯಾನೇಜರ್ ನೀನು ಬದುಕಿರುವೆ ಎಂಬ ಸರ್ಟಿಫಿಕೇಟ್ ಕೊಡಬೇಕು! ನೀನಂದುಕೊಂಡಷ್ಟು ಸುಲಭವಲ್ಲ ಜೀವನ ಈಗಿನ ಭಾರತದಲ್ಲಿ” ಎಂದ ಶ್ರೀ ರಾಮ.

ಹನುಮಾನ್ ಹತಾಶನಾಗಿ “ನನಗೆ ಈ ಇತಿಹಾಸಕಾರರ ವರ್ತನೆಯೇ ಅರ್ಥವಾಗುವದಿಲ್ಲ. ನೀವು ಆಗಿಂದಾಗ್ಗೆ ಭೂಮಿಯಲ್ಲಿ ಅವತರಿಸಿ ಸಂತ ಸೂರದಾಸ, ತುಳಸೀದಾಸ, ತ್ಯಾಗರಾಜ, ಜಯದೇವ, ಭದ್ರಾಚಲ ರಾಮದಾಸ, ತುಕಾರಾಮ್ ಮುಂತಾದವರಿಗೆ ದರ್ಶನ ನೀಡಿದ್ದರೂ ಕೂಡ, ರಾಮಯಣ ಕೇವಲ ಕಾಲ್ಪನಿಕ, ಶ್ರೀ ರಾಮ ಯಾವದೋ ಕವಿಯ ಕಾಲ್ಪನಿಕ ಸೃಷ್ಟಿ ಎಂದೆಲ್ಲ ಹೇಳುತ್ತಾರಲ್ಲ. ಇವರಿಗೆ ಬೆಂಡೆತ್ತುವುದು ಹೇಗೆ? ನನಗೆ ತೋಚುವುದೊಂದೇ ಉಪಾಯ. ಭೂಮಿಯ ಮೇಲೆ ರಾಮಾಯಣದ ಪುನರಾವರ್ತನೆ ಮಾಡಿದರೆ ಹೇಗೆ? ಆಗಲಾದರೂ ನಂಬಲೇಬೇಕಲ್ಲ!”

ಶ್ರೀ ರಾಮ ಕರುಣಾಭರಿತ ದೃಷ್ಟಿಯಿಂದ ಹನುಮಂತನ ಕಡೆ ನೋಡುತ್ತ “ ಅಯ್ಯೋ ಮಂಕೇ ( ಮಂಕಿಯೇ?), ನನಗೂ ಈ ಐಡಿಯಾ ಮುಂಚೆಯೇ ಹೊಳೆದಿತ್ತು. ಆದರೆ ರಾವಣನ ಪ್ರಕಾರ ಆ ಬೃಹದ್ರಾಕ್ಷಸ ಕರುಣಾನಿಧಿಯ ತುಲನೆಯಲ್ಲಿ ರಾವಣ ಕೂಡ ಓರ್ವ ಸಂತನಂತೆ ಕಂಡುಬಂದು ಅವನೇ ನನ್ನ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಬಹುದು ಎಂಬ ಹೆದರಿಕೆಯಂತೆ. ಸುವರ್ಣ ಜಿಂಕೆಯಾಗಿ ಸೀತೆಯನ್ನು ಆಕರ್ಷಿಸಿದ ಅವನ ಮಾವ ಮಾರೀಚನೂ ಕೂಡ ಹಿಂದೀ ಚಲನಚಿತ್ರ ನಟ ಸಲ್ಮಾನ್ ಖಾನ್ ಬೇಲ್ ಮೇಲೆ ಇರುವವರೆಗೂ ನಾನು ಭೂಮಿಯಮೇಲೆ ಕಾಲಿಡುವುದಿಲ್ಲ ಅಂತ ಪ್ರತಿಜ್ನೆ ಮಾಡಿದ್ದಾನಂತೆ. ಹೀಗಿರಲು ರಾಮಾಯಣದ ಪುನರಾವರ್ತನೆ ಹೇಗೆ ತಾನೆ ಸಾಧ್ಯ?” ಎಂದು ಹೇಳಿ ತಲೆಯ ಮೇಲೆ ಕೈ ಇಟ್ಟು ಕುಳಿತುಕೊಂಡ.

**********************************************

A slightly modified version of above article was published by Thatskannada.com on 27th Sep 2007 . See the link below -
http://thatskannada.oneindia.in/column/humor/280907-Siyaram-Jaihanuman-Humor-Essay.html

Tuesday, 18 September 2007

ನರಸಿಂಹಾವತಾರದ್ Dilemma! ಆಗಿರೋದು ನಮ್ಮ ವಿಜ್ನಾನಿಗಳಿಗೆ!

To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ ಇರಬಹುದು ಅವರ Dilemma.

Dilemma ದ ಸರಿಯಾದ ಕನ್ನಡ ಭಾವಾರ್ಥ ಏನು? ತುಮುಲ, ದ್ವಂದ್ವ, - ಎರಡೂ ಆಗಬಹುದಾದರೂ ನನಗಿರುವ ಡಿಲೆಮ್ಮ ಎಂದರೆ ಕನ್ನಡದ ಎರಡು ಪದವೋ ಅಥವಾ ಇಂಗ್ಲೀಷಿನ ಒಂದು ಪದವೋ? I was on the horns of a dilemma! ಅಂದರೆ ಡಿಲೆಮ್ಮ ಅನ್ನೋದು ಒಂದು ಗೂಳಿಯೇ ಅಂತ ನನ್ನನ್ನು ಕೇಳಬೇಡಿ. ಶೀರ್ಷಿಕೆಯಲ್ಲಿ ಡಿಲೆಮ್ಮ ಎಂದು ಉದ್ಗರಿಸಿರೋದ್ರಿಂದ ಇಂಗ್ಲೀಷ್ ಡಿಲೆಮ್ಮದ ಅರ್ಥದಲ್ಲಿಯೇ ಮುಂದುವರಿಸುತ್ತೇನೆ.

ಈ ಡಿಲೆಮ್ಮ ಏನೋ ತೀರ್ಮಾನವಾಯಿತು. ಆದರೆ ಈ ನರಸಿಂಹ ಎಲ್ಲಿಂದ ಬಂದ?

ಭಕ್ತ ಪ್ರಹ್ಲಾದನ ಕಥೆ ಕೇಳಿದವರೆಲ್ಲರಿಗೂ ಅವನ ತಂದೆ ಹಿರಣ್ಯಕಶಿಪುವಿನ ಬ್ರಹ್ಮನಿಂದ ತಪಸ್ಸು ಮಾಡಿ ಪಡೆದ ವರ ಚೆನ್ನಾಗಿಯೇ ಗೊತ್ತಿರಬಹುದು. “ದೇವರಿಂದಾಗಲೀ, ಪ್ರಾಣಿಗಳಿಂದಾಗಲೀ, ಮನುಷ್ಯರಿಂದಾಗಲೀ, ಹಗಲಾಗಲೀ, ಇರುಳಾಗಲೀ, ಮನೆಯ ಹೊರಗಾಗಲೀ, ಒಳಗಾಗಲೀ, ಯಾವುದೇ ಅಯುಧದಿಂದಾಗಲೀ ತನಗೆ ಸಾವು ಬರಕೂಡದು.”

ಆಮೇಲೆ ಅವನ ಹಾವಳಿ ತಡೆಯಲಾಗದೆ, ಶ್ರಿಮನ್ನಾರಾಯಣನೆನಿಸಿಕೊಂಡ ಮಹಾವಿಷ್ಣು ಒಳ್ಳೆಯ ಡಿಲೆಮ್ಮದಲ್ಲಿ ಸಿಲುಕಿದ್ದ. ದೇವರಾದ್ದರಿಂದ ಈ ಡಿಲೆಮ್ಮದಿಂದ ಮುಕ್ತನಾಗಲು, ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ, ರಾತ್ರಿಯೂ ಅಲ್ಲದ ( ಸೂರ್ಯಾಸ್ತವಾಗುವ ) ಹೊತ್ತು ಮುಳುಗುವ ಹೊತ್ತಿನಲ್ಲಿ, ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ ಮನುಷ್ಯನಾಗಲೀ ಅಲ್ಲದ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ನಿಶ್ಚಿಂತನಾದ.

ಈಗ ಗೊತ್ತಾಯಿತೇ ಈ ಉದ್ದದ ಪೀಠಿಕೆಯ reference to the context? ಭಾರತದಲ್ಲಿ ಈಗ ಡಿಲೆಮ್ಮಗಳ ಸೀಸನ್. ಎಲ್ಲಿ ನೋಡಿದರಲ್ಲಿ ಡಿಲೆಮ್ಮವೇ ಡಿಲೆಮ್ಮ.

ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಿ.ಪಿ.ಎಮ್ ಮುಖಂಡರಿಗೆ ಅಣುಶಕ್ತಿ ಒಪ್ಪಂದ ಅಥವ ಮಧ್ಯಂತರ ಚುನಾವಣೆಯ ಡಿಲೆಮ್ಮ. ನಮ್ಮ ಕರ್ನಾಟಕದಲ್ಲಿಯೂ ಅಧಿಕಾರ ಹಸ್ತಾಂತರ ಕುರಿತು ದೇವೇಗೌಡರಿಗೆ, ಅವರ ಕುಮಾರ ಕಂಠೀರವರಿಗೆ, ಯೆಡಿಯೂರಪ್ಪನವರಿಗೆ ಬೇರೆ ಬೇರೆ ತರಹದ ಡಿಲೆಮ್ಮಗಳು. ಕ್ರಿಕೆಟ್ ಆಟಗಾರರಿಗೆ ಬಿ.ಸಿ.ಸಿ.ಐ ಅಥವ ಐ.ಸಿ.ಎಲ್ ನಡುವಣ ಡಿಲೆಮ್ಮ; ರಾಹುಲ್ ದ್ರಾವಿಡ್‍ಗೆ ಕಪ್ತಾನನ ಪಟ್ಟದ ಡಿಲೆಮ್ಮ; ಬಿ.ಸಿ.ಸಿ.ಐ ಗೆ ಸಚಿನ್, ಗಂಗೂಲಿ ಮತ್ತು ಧೋಣಿ ಬಗ್ಗೆ ಡಿಲೆಮ್ಮ .( ಟ್ರಿಲೆಮ್ಮ ಎನ್ನಬಹುದೋ ಇಲ್ಲವೋ ಗೊತ್ತಿಲ್ಲ.)

ಹೀಗೆ ಪಟ್ಟಿ ಹಾಕುತ್ತ ಹೋದಲ್ಲೆಲ್ಲ ಇನ್ನೂ ಉದ್ದವಾಗಿ ಬೆಳೆಯುತ್ತ ಹೋಗುತ್ತೆ. ಆದರೆ ಸಮಯ ಕಳೆಯುತ್ತಲೆಲ್ಲ ಇವೆಲ್ಲ ಡಿಲೆಮ್ಮಗಳು ಟೇಮಾಗಿ ಬಗೆಹರಿಯುತ್ತವೆ. ಆದರೆ ಹೊಸದಾಗಿ ಹುಟ್ಟಿಕೊಂಡಿರುವ ಒಂದು ಡಿಲೆಮ್ಮ ಮಾತ್ರ ಬೃಹದಾಕಾರವಾಗಿ ಬೆಳೆಯುವ ಲಕ್ಷಣಗಳಿದ್ದು ಕ್ಷುಲ್ಲಕ ಮಾನವ ಮಾತ್ರರಿಂದ ಬಗೆಹರಿಯಲು ಸಾಧ್ಯವಾಗುವುದೋ ಎಂದು ಶಂಕೆಯನ್ನುಂಟು ಮಾಡುತ್ತಿದೆ.

ಇದ್ಯಾವುದಪ್ಪ ಇಂಥ ನರಸಿಂಹಾವತಾರದ ಡಿಲೆಮ್ಮ ಅಂತ ಯೊಚಿಸುತ್ತಿದ್ದೀರೇನೋ. ನಮ್ಮ ಅನಂತಮೂರ್ತಿಯವರೇನೋ ಬಹಳ ಸುಲಭವಾಗಿ “ ನಮ್ಮ ವಿಜ್ನಾನಿಗಳಿಗೇನಾಗಿದೆ?” ಅಂತ ಪ್ರಶ್ನೆ ಕೇಳಿ ತಮ್ಮ ಕೈ ತೊಳೆದುಕೊಂಡಿದ್ದಾರೆ. ಚಾಮಲಾಪುರದ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕಾಗಿ ಆಯ್ದುಕೊಂಡಿರುವ ಜಾಗ, ಅದರಿಂದ ಪರಿಸರ ಹಾಗೂ ಪಶು, ಪಕ್ಷಿ, ಜಲಚರಗಳಿಗೆ ಆಗಬಹುದಾದ ಅಥವ ಆಗದೇ ಇರಬಹುದಾದ ಸಮಗ್ರ ಹಾನಿಯ ಬಗ್ಗೆ ಎಲ್ಲರೂ ಸ್ವಛ್ಛಂದವಾಗಿ ವ್ಯಾಖ್ಯಾನಿಸುವ ಮೂಲಕ ಒಂದು ಅತಿ ದೊಡ್ಡ ಡಿಲೆಮ್ಮ ವಿ(ಅ)ಜ್ನಾನಿಗಳ ಮುಂದೊಡ್ಡಿದ್ದಾರೆ. ಕರಾವಳಿಯಲ್ಲಿ ಬೇಡ. ಒಳನಾಡಿನಲ್ಲಿ ಬೇಡ. ಮಲೆನಾಡಿನಲ್ಲಿ ಬೇಡ. ನೀರಿದ್ದಲ್ಲಿ ಬೇಡ, ಅಲ್ಲಿ ಬೇಡ, ಇಲ್ಲಿ ಬೇಡ. ಕಡೆಗೆ ಸುಡುಗಾಡಿನಲ್ಲಿಯೂ ಜಾಗ ಸಿಕ್ಕುವುದು ಕಷ್ಟ. ನಿಜವಾಗಿಯೂ ಸುಡುಗಾಡೆ ಆಯ್ದರೂ, ಅದು ಹಿಂದುಗಳದೋ, ಬೇರಾರದೋ ಎಂದು ಕಿತ್ತಾಟದ ಆರಂಭ ಖಚಿತ.

ಸ್ಥಾವರದ ಜಾಗದ ಡಿಲೆಮ್ಮ ಬಗೆಹರಿಸಿದರೆ ಆಯಿತೆ? ಇಲ್ಲ. ಇದ್ದಿಲಿನಿಂದ ಶಾಖೋತ್ಪನ್ನವೋ ಅಥವ ಅಣುಶಕ್ತಿಯಿಂದ ಶಾಖೋತ್ಪನ್ನವೋ ಎಂಬುದರ ಬಗ್ಗೆ ಎರಡೂ ವಿಧಾನಗಳ ಗಂಧವೂ ಹತ್ತದ ಪಂಡಿತರಿಂದ ಪತ್ರಿಕೆಗಳಲ್ಲಿ, ಎಲ್ಲಿ ಕಂಡಲ್ಲಿ ಚರ್ಚೆ ಶುರುವಾಗುತ್ತದೆ. ಅಂತರ್ಜಾಲದ ಹಾವಳಿಯಿಂದ ನಮ್ಮ ಸಾಧಾರಣ ನಾಗರಿಕನ ಜ್ನಾನ ಅದೆಷ್ಟು ಮಟ್ಟಿಗೆ ಹೆಚ್ಚಿದೆಯೆಂದರೆ, ನಮ್ಮ ವಿಜ್ನಾನಿಗಳೆಲ್ಲ ಅಜ್ನಾನಿಗಳೆಂದು ಅನಂತಮೂರ್ತಿಯವರು ಸಂಶಯಿಸಿದ ಹಾಗೆಯೇ ಋಜುವಾತಾಗಿ ಹೋಗಿಬರುವ ಸಂಭವ ದೂರವಿಲ್ಲ.
ಎಲ್ಲ ಬಲ್ಲವರೇ ನಮ್ಮೂರಿನಲ್ಲಿ, ವಿಜ್ನಾನಿಗಳು ಮತ್ತು ಎಂಜಿನಿಯರ್‍ಗಳನ್ನು ಹೊರೆತು.

ವಿದ್ಯುತ್ ಮಾತ್ರ ಎಲ್ಲರಿಗೂ ಬೇಕು. ಆದರೆ ಉತ್ಪಾದನೆ ನಮ್ಮ ಹಿತ್ತಲಲ್ಲಿ ಬೇಡ. ಬೆಂಗಳೂರಿಗೆ ಬೇಕಾದ ವಿದ್ಯುತ್ತನ್ನು ಮಂಗಳೂರಿನ ಸ್ಥಾವರವೇಕೆ ನೀಡಬೇಕು ಅಂತ ಕರಾವಳಿ ಪರಿಸರವಾದಿಗಳ ಬೊಬ್ಬೆ. ಹಾಗೆಯೇ ಹೆಚ್. ಡಿ. ಕೋಟೆಯವರಿಗೆ ತಮ್ಮ ಪರಿಸರದ ಕಾಳಜಿ. ಯಾರಿಗೂ ಆಧುನಿಕ ವಿದ್ಯುತ್ ಸ್ಥಾವರಗಳ ವಿನ್ಯಾಸದ ಪರಿಕಲ್ಪನೆಯಾಗಲೀ; ಹೇಗೆ ತಂತ್ರಜ್ನರು ಕಳೆದ ವರ್ಷಗಳಲ್ಲಿ ನಿರಂತರ ಸಂಶೋಧನೆಯಿಂದ ಪರಿಸರ ಮಾಲಿನ್ಯದ ತೀವ್ರತೆಯನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದರ ಬಗೆಯಾಗಲೀ ತಿಳುವಳಿಕೆ ಇದ್ದಂತಿಲ್ಲ. ಹಿಂದಿಯಲ್ಲಿ ಹೇಳುವ ಹಾಗೆ “ಜಿಸ್ ಕಿ ಲಾಠಿ, ಉಸ್‍ಕಿ ಭೈನ್ಸ್” ( ಯಾರ ಕೈಯಲ್ಲಿ ದೊಣ್ಣೆಯಿದೋ, ಕೋಣ ಅವನದ್ದು). ನಿಮ್ಮಲ್ಲಿ ಬೊಬ್ಬೆ ಹೊಡೆಯುವ ಜನರನ್ನು ಕೂಡಿ ಹಾಕುವ ಸಾಮರ್ಥ್ಯವಿದ್ದರೆ ಸಾಕು. ನೀವು ಹೇಳಿದ್ದೇ ವೇದ, ಪುರಾಣ ಎಲ್ಲ. ಎಲ್ಲ ಬುಧ್ಧಿಜೀವಿಗಳೂ ಮಂಕಾಗಿ ನರಸತ್ತವರಾಗುತ್ತಾರೆ.

ಒಟ್ಟಾಗಿ ಹೇಳುವುದಾದರೆ, ಇದ್ದಲು ಹಾಗು ಅಣುಶಕ್ತಿಯಿಂದಾಗುವ ಪರಿಸರ ಮತ್ತನೇಕ ಮಾಲಿನ್ಯಗಳಿಂದ ಮುಕ್ತಿ ಸಿಗಬೇಕಾದರೆ ನಮ್ಮಲ್ಲಿಯ ವಿಜ್ನಾನಿಗಳು ಬೇರೆ ಯಾವುದಾದರೂ ಶಾಖೋತ್ಪನ್ನ ವಿಧಾನವನ್ನು ಕಂಡು ಹಿಡಿಯಬೇಕು. ನಮ್ಮ ಪತ್ರಿಕೆಗಳಲ್ಲಿಉತ್ಪತ್ತಿಯಾಗುವ ಶಾಖದಿಂದ ( ಅವನ್ನು ಸುಡುವುದರಿಂದಲ್ಲ; ಚರ್ಚೆಯ ತೀಕ್ಶ್ಣತೆ ಯಿಂದ) ವಿದ್ಯುತ್ಪಾದನೆ ಮಾಡಲು ಸಾಧ್ಯವೋ ಎಂದು ಕೂಡ ನಮ್ಮ ವಿಜ್ನಾನಿಗಳಿಗೆ ಸಲಹೆ ಮಾಡುತ್ತಾನೆ ನನ್ನೊಬ್ಬ ಕಿಡಿಗೇಡಿ ಸ್ನೇಹಿತ.

ಅಂತೂ ನಮ್ಮ ವಿಜ್ನಾನಿಗಳಿಗಿದೆ ಆಪತ್ತು - “ ಎ ಡಿಲೆಮ್ಮ ಆಫ್ ಮಾನ್ಯುಮೆಂಟಲ್ ಪ್ರಪೋರ್ಷನ್ಸ್.”

ಇಂತಹ ನರಸಿಂಹಾವತಾರದ ಡಿಲೆಮ್ಮದಿಂದ ಬಚಾವಾಗಲು ಅವರಿಗೆ ನಮ್ಮ ನರಸಿಂಹನೇ (ನೋ ಹೌ) ಜ್ನಾನ ದಯಪಾಲಿಸಬೇಕು. ಅಥವಾ ಸಾಕ್ಷಾತ್ ಶ್ರೀ ವಿಷ್ಣುವೇ ವಿದ್ಯುತ್ ಘಟಕದ ಚೀಫ್ ಡಿಸೈನರ್ ರೂಪದಲ್ಲಿ ಅವತರಿಸಿದರೆ ಮತ್ತಿಷ್ಟು ಚಂದ.

*************************************************************************

Friday, 14 September 2007

ಹನುಮಾನ್ - ಹಿಂದುವೋ? ಮುಸಲ್ಮಾನನೋ?

(ಮೂಲ: ಎಲ್ಲಿಯೋ ಕೇಳಿದ್ದು.)
ನಿನ್ನೆ ಮೊನ್ನೆಯ ಮಾತು. ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ನಡಿಯಲೇ ಇಲ್ಲ, ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು ನೀವೆಲ್ಲ ಕೇಳಿದಿರಷ್ಟೆ?

ಮೊದಲೂ ಒಂದು ಬಾರಿ ಶ್ರೀ ಮನಮೋಹನ್ ಸಿಂಗ್ ಇಂತಹುದೇ ಕೆಲಸ ಮಾಡಿದ್ದರಂತೆ. ಮುಂದೆ ಓದಿ ನೋಡಿ. ನಿಮಗೇ ವೇದ್ಯವಾಗುತ್ತೆ.



ರಾಮಜನ್ಮಭೂಮಿಯಲ್ಲಿ ಬಾಬರನ ಮಸೀದಿ ಉರುಳಿದ ಕೆಲವೇ ದಿನಗಳ ನಂತರ ವಿಶ್ವ ಹಿಂದೂ ಪರಿಷತ್ ಬೆಂಬಲ ಪಡೆದ ಹಿಂದುಗಳ ಗುಂಪೊಂದು ಆ ಜಾಗದಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ಬೇಡುವ ಮನವಿ ಸಲ್ಲಿಸಲು ಆಗಿನ ಪ್ರಧಾನ ಮಂತ್ರಿಗಳಾದ ನರಸಿಂಹರಾವ್ ಬಳಿ ಹೋಗಲು ನಿಶ್ಚಯಿಸಿತು. ಇದರ ಸುಳಿವಾದೊಡನೆಯೆ ದೆಹಲಿಯ ಜುಮ್ಮಾ ಮಸೀದಿಯ ಇಮಾಮರ ನೇತೃತ್ವದಲ್ಲಿ ಮುಸಲ್ಮಾನರ ಗುಂಪು ಕೂಡ ಉರುಳಿದ ಮಸೀದಿಯ ಪುನರ್ನಿರ್ಮಾಣದ ಆಗ್ರಹ ಮಾಡುವ ಉದ್ದೇಶ್ಯದಿಂದ ಪ್ರಧಾನಿಯವರ ಮನೆಗೆ ಲಗ್ಗೆ ಹಾಕಿತು.

ಎಂದೂ ನಿರ್ಧಾರ ತೊಗೊಳ್ಳಲಾರದ ರಾಯರು, ಎರಡೂ ಬಣಗಳ ಅಹವಾಲನ್ನು ಕೇಳಿ ಇಕ್ಕಟ್ಟಿಗೆ ಸಿಕ್ಕಿ , ನುಣಿಚಿಕೊಳ್ಳುವ ಹಾಗೂ ಸ್ವಲ್ಪ ಕಾಲಾವಕಾಶ ಕಲ್ಪಿಸಲು ಉಪಾಯ ಹುಡುಕಿದರು. ತಮ್ಮ ಏನೇ ನಿರ್ಧಾರವು ಆರ್ಕೆಯಲಾಜಿಕಲ್ ಸರ್ವೆ ಆಫ್ ಇಂಡಿಯಾದವರಿಂದ ಆ ಸ್ಥಳದ ಉತ್ಖನನ ನಡಿಸಿದ ನಂತರ ಅಲ್ಲಿ ಸಿಕ್ಕಬಹುದಾದ ಪ್ರಮಾಣಗಳ ಆಧಾರದ ಮೇಲೆ ಅವಲಂಬಿಸುತ್ತದೆ. ಅಲ್ಲಿಯ ವರೆಗೂ ತಾಳ್ಮೆಯಿಂದಿರಿ ಎಂದು ಸ್ಪಷ್ಟ ಪಡಿಸಿದರು.

ಆರ್ಕೆಯಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಅಗೆಯಲು ಪ್ರಾರಂಭಿಸಿದ ಹಲವು ದಿನಗಳ ನಂತರ ಅಲ್ಲಿ ಹೂತಿಕೊಂಡಿದ್ದ ಹನುಮಾನ್ ವಿಗ್ರಹವೊಂದು ದೊರಕಿದೆ ಎಂಬ ವರದಿ ಪ್ರಕಟವಾಗುತ್ತಿದ್ದಂತೆಯೆ ಹಿಂದುಗಳು ಜಯ ನಮಗೇ ಎಂದು ಸಂತೋಷದಿಂದ ಕುಣಿದು ಕುಪ್ಪಳಿಸಲಾರಂಭಿಸಿದರು.

ಇತ್ತಕಡೆ, ಮುಸಲ್ಮಾನರ ತಂಡದವರು ಕೂಡ ಹನುಮಾನ್ ಹೆಸರೇ ಸೂಚಿಸುವಂತೆ ಮುಸಲ್ಮಾನನೆಂದೂ, ಅವನ ವಿಗ್ರಹ ಅಲ್ಲಿದ್ದದ್ದು, ಮಸೀದಿಯ ಪುನರ್ನಿರ್ಮಾಣಕ್ಕೆ ಪುರಾವೆ ಕೊಟ್ಟಂತಿವೆ ಎಂದು ಸಂಭ್ರಮಿಸಲು ಆರಂಭಿಸಿದರು. ಕಾರಣ, ಉಸ್ಮಾನ್, ರಹಮಾನ್, ಸುಲೇಮಾನ್, ಹನುಮಾನ್ ಎಲ್ಲವೂ ಮುಸ್ಲಿಮರ ಹೆಸರುಗಳು ಎಂದು ಅವರ ವಾದ.

ಬೆದರಿ ಕಂಗಾಲಾದ ನರಸಿಂಹರಾಯರಿಗೆ ಏನು ಮಾಡಬೇಕೋ ತೋಚದಿದ್ದಾಗ, ಅವರ ಆಪ್ತ ಕಾರ್ಯದರ್ಶಿಗಳ ಸಲಹೆಯ ಮೇರೆಗೆ ಎರಡೂ ಬಣದವರನ್ನು ಕರೆದು “ ನೋಡಿ, ಇದೊಂದು ಬಹಳ ಜಟಿಲವಾದ ಪ್ರಶ್ನೆ. ನಿರ್ಣಯ ಮಾಡುವ ಮುನ್ನ ಬಹಳ ವಿವೇಚನೆಯಿಂದ ಸಂಶೋಧನೆ ಮಾಡಿ ಮುನ್ನಡೆಯಬೇಕಾಗಿದೆ. ನಮ್ಮ ಪಾರ್ಟಿಯಲ್ಲಿಯ ಅತಿ ಮೇಧಾವಿ ಶ್ರೀ ಮನಮೋಹನ್ ಸಿಂಗ್ ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿ. ನೀವೆಲ್ಲರೂ ಅವರ ಮುಂದೆ ನಿಮ್ಮ ಸಾಕ್ಷಿ ಪುರಾವೆಗಳನ್ನು ಮಂಡಿಸಿ. ಅವರ ಅಭಿಪ್ರಾಯ ಅರಿತ ನಂತರ ನಿರ್ಧಾರ ಮಾಡುತ್ತೇನೆ.” ಎಂದು ಹೇಳಿ ತಮಗೆ ಬಂದ ಸಂಕಟವನ್ನು ಬಡಪಾಯಿ ಸಿಂಗ್‍ರವರ ತಲೆಗೆ ಅಂಟಿಸಿ ಸದ್ಯಕ್ಕಂತೂ ಬಚಾವಾದರು.

ಪಾಪ ಪ್ರಾಧ್ಯಾಪಕ ಮನಮೋಹನ್ ಸಿಂಗ್‍ರವರು ಅನೇಕ ದಿನಗಳ ಕಾಲ ರಾಮಾಯಣದ ಎಲ್ಲ ರೂಪಗಳ (ತುಳಸಿ; ವಾಲ್ಮೀಕಿ, ಕಂಬ, ಇತರೆ ಇತರೆ… ) ಅಧ್ಯಯನ ಮಾಡಿದ ನಂತರ ಕೊರಾನ್, ಬಾಬರ್‍ನಾಮ ಮತ್ತು ಇತರೇ ಪರ್ಷಿಯನ್ ಗ್ರಂಥಗಳ ಕೂಲಂಕಷ ತನಿಖೆ ನಡೆಸಿದರು. ಅನೇಕ ಪಂಡಿತರುಗಳ, ವಿದ್ವಾಂಸರುಗಳ ಜೊತೆಗೇ ಎರಡೂ ಬಣದವರ ವಾದ ವಿವಾದಗಳನ್ನೆಲ್ಲ ತಾಳ್ಮೆಯಿಂದ ಕೇಳಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ನರಸಿಂಹರಾಯರಿಗೆ ತಿಳಿಸಿದರು.

ಅವರ ಪ್ರಕಾರ ಹನುಮಾನ್ ಹಿಂದುವೂ ಅಲ್ಲ! ಮುಸಲ್ಮಾನನೂ ಅಲ್ಲ! ಕಕ್ಕಾಬಿಕ್ಕಿಯಾಗಿ ಗಾಬರಿಯಿಂದ ಅವರ ಕಡೆ ನೋಡಿದ ರಾಯರಿಗೆ ಶ್ರೀ ಮನಮೋಹನ್ ಸಿಂಗ್ ಹೇಳಿದ್ದು ಹೀಗೆ. “ ನೋಡಿ ಸ್ವಾಮಿ. ಯಾರದೋ ಹೆಂಡತಿಯನ್ನು ಹುಡುಕಲು ಹೊರಟು, ತನ್ನ ಬಾಲಕ್ಕೇ ಬೆಂಕಿ ಹಚ್ಚಿಕೊಂಡು, ಬೇರಾರದೋ ಮನೆಮಠ ಸುಟ್ಟು ಹಾಕುವಂಥ ವ್ಯಕ್ತಿ ಒಬ್ಬ ಸರ್ದಾರ್ಜಿಯಲ್ಲದೆ ಮತ್ಯಾರು ಆಗಿರಲು ಸಾಧ್ಯ? ನೀವೆ ಯೋಚಿಸಿ! ಹಿಂದುವೂ ಅಲ್ಲ. ಮುಸಲ್ಮಾನನೂ ಅಲ್ಲ! ಅವನು ಹನುಮಾನ್ ಸಿಂಗ್. ನೀವು ಸುಮ್ಮನೆ ಆ ಜಾಗದಲ್ಲಿ ಒಂದು ಗುರುದ್ವಾರ ಕಟ್ಟಿಸಿಬಿಡಿ. ಈ ಗೊಂದಲ ತಾನೇ ನಿಂತು ಹೋಗತ್ತೆ.”

ನರಸಿಂಹರಾಯರ ಮುಖ ನೋಡುವಂತಿತ್ತು.

***********************************************************
Published on the web - http://www.ourkarnataka.com/kannada/articles/muslim07.htm

ಜೀವನ ರಹಸ್ಯ

( ಯಾರಿಂದಲೋ ಕೇಳಿ ತಿಳಿದದ್ದು. )

ಭಗವಂತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಮಾಡಿದ ಮೊದಲ ಕೆಲಸ ನಾಲ್ಕು ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದ್ದಂತೆ. ಅವೆಂದರೆ - ಮನುಷ್ಯ; ಕತ್ತೆ; ನಾಯಿ ಮತ್ತು ಎರೆಹುಳ. ಇವೆಲ್ಲದರಲ್ಲೂ ಮನುಷ್ಯನೊಬ್ಬನಿಗೆ ಮಾತ್ರ ಯೊಚನಾಶಕ್ತಿಯಿರುವ (ವಿಪರೀತ!!) ಮಿದುಳಿತ್ತು.

ಎಷ್ಟಾದರೂ ಭಗವಂತನಲ್ಲವೇ! ನಿಷ್ಪಕ್ಷಪಾತಿ! ಎಲ್ಲರಿಗೂ ಕೇವಲ ನಲವತ್ತು ವರುಷಗಳ ಆಯುಸ್ಸು ಕೊಟ್ಟನಂತೆ. ಎಲ್ಲರೂ ಈ ನಿರ್ಣಯವನ್ನು ಒಪ್ಪಿಕೊಂಡರಾದರೂ, ಬುಧ್ಧಿ ಜಾಸ್ತಿಯಿರುವ ಮನುಷ್ಯನಿಗೆ ತೃಪ್ತಿಯಾಗಲಿಲ್ಲ. ತನಗಿರುವ ಬುಧ್ಧಿ ಮತ್ತು ಚಾಲಾಕಿ ಉಪಯೋಗಿಸುವ ಹಂಚಿಕೆ ಹಾಕಿ, ಬೇರೆ ಪ್ರಾಣಿಗಳ ಆಯುಸ್ಸಿನ ಸ್ವಲ್ಪ ಭಾಗವನ್ನು ಒತ್ತುವರಿ ಮಾಡಲೆತ್ನಿಸಿದ.

ಮೊದಲಿಗೆ ಅವನು ಕತ್ತೆಯನ್ನು ಬಳಿಗೆ ಕರೆದು, ಅದರ ಬೆನ್ಸವರಿ, “ ಅಯ್ಯಾ ಕತ್ತೆ, ಎಂತಹುದಯ್ಯಾ ನಿನ್ನ ಜೀವನ! ಎಲ್ಲರ ಕೈಯಲ್ಲಿ ಭಾರ ಹೊರಸಿಕೊಂಡು, ತಿಪ್ಪೆಯಲ್ಲಿ ಬಿದ್ದಿದ್ದು, ಕಸ ಕಡ್ಡಿ ತಿಂದುಕೊಂಡು, ಮೈಮುರಿಸಿಕೊಳ್ಳುವ ಹಾಗೆ ಹೊಡಿಸಿಕೊಂಡು, ಎಲ್ಲರ ತಿರಸ್ಕಾರಕ್ಕೂ ಪಾತ್ರವಾಗುತ್ತೀಯಲ್ಲ. ನಲವತ್ತು ವರ್ಷ ಹೀಗೇಕೆ ಬದುಕಬೇಕು? ನನಗಾದರೋ ಬುಧ್ಧಿ ಇದೆ. ಅದನ್ನು ಉಪಯೋಗಿಸಿಕೊಂಡು ಜೀವನವನ್ನು ಸ್ವಲ್ಪ ಸುಖವಾಗಿಸಬಲ್ಲೆ. ನಿನ್ನ ಅರ್ಧ ಆಯುಸ್ಸನ್ನು ನನಗೇಕೆ ಕೊಡಬಾರದು ? " ಅಂತ ಪುಸಲಾಯಿಸಿ, ಅದರ ಇಪ್ಪತ್ತು ವರ್ಷ ಆಯುಸ್ಸನ್ನು ತನಗೆ ಸೇರಿಸಿಕೊಂಡ.

ಆಮೇಲೆ ನಾಯಿಯನ್ನು ಕರೆದು, “ ಎಲೇ ನಾಯಿ, ಎಲ್ಲರ ಎಂಜಲು ತಿಂದುಕೊಂಡು, ಎಲ್ಲರ ಬಳಿ ಒದಿಸಿಕೊಂಡು, ಕುಯ್ಯೋ ಮರ್ರೋ ಅಂತ ಗೋಳಾಡುತ್ತ, ಬೇರೆ ನಾಯಿಗಳ ಸಂಗಡ ಕಚ್ಚಾಡಿಕೊಂಡು, ಬೊಗಳಿಕೊಂಡೂ ಅದೆಷ್ಟು ಸುಖ ಪಡುತ್ತೀಯೋ ನಾ ಬೇರೆ ಕಾಣೆ. ನಿನಗೇಕೆ ನಲವತ್ತು? ನನಗೆ ಕೊಡು ಅದರಲ್ಲರ್ಧ ಇಪ್ಪತ್ತು” ಎಂದು ಪ್ರೇರೇಪಿಸಿದ. ಪೆದ್ದ ನಾಯಿ ಅವನ ಮಾತಿಗೆ ಮರುಳಾಗಿ, ತನ್ನ ಇಪ್ಪತ್ತು ವರ್ಷ ಅಯುಸ್ಸನ್ನು ಮನುಷ್ಯನಿಗೆ ಕೊಟ್ಟಿತು.

ಕತ್ತೆ ಮತ್ತು ನಾಯಿಗಳೇ ಮನುಷ್ಯನ ಮಾತಿನ ಮೋಡಿಗೆ ಮರುಳಾದ ಮೇಲೆ ಎರೆ ಹುಳದ ಸಾಸಿವೆ ಗಾತ್ರದ ಮಿದುಳದೆಷ್ಟುತಾನೆ ತಡೆದೀತು. ಅದರ ಇಪ್ಪತ್ತು ವರ್ಷ ಅಯುಸ್ಸನ್ನು ತನಗೆ ಜೋಡಿಸ್ಕೊಂಡ ಆ ಪಾಕಡಾ ಮನುಷ್ಯ. ಹೀಗೆ ತನ್ನದೇ ಆದ ನಲವತ್ತಕ್ಕೆ ಎರವಲು ಪಡೆದ ಅರವತ್ತನ್ನು ಜೋಡಿಸಿಕೊಂಡು ಮನುಷ್ಯನ ಆಯುಸ್ಸು ನೂರಾಯಿತಂತೆ.

ಅಂದಿನಿಂದ ಮನುಷ್ಯ ಮೊದಲ ನಲವತ್ತು ವರ್ಷ ಗಳ ಕಾಲ , ತಂದೆತಾಯಿಗಳಿಗೆ ವಿಧೇಯನಾಗಿ ಇದ್ದು, ಉತ್ತಮ ವಿದ್ಯಾಭ್ಯಾಸ ಪಡೆದು , ಕೆಲಸ ಹಿಡಿದು, ಮದುವೆಯಾಗಿ ಮನುಷ್ಯನಂತೆ ಜೀವಿಸುತ್ತಾನಂತೆ.

ನಲವತ್ತರಿಂದ ಅರವತ್ತರವರೆಗೆ, ಮಕ್ಕಳ ಮತ್ತು ಹೆಂಡತಿಯ ಸುಖಕ್ಕಾಗಿ ಹೆಣಗಿ, ಸಾಲ ಸೋಲ ಮಾಡಿಯಾದರೂ ಮಕ್ಕಳ ಮದುವೆ, ಮನೆ ಮಠ ಮಾಡಿಕೊಳ್ಳುವ ಸಲುವಾಗಿ ಕತ್ತೆಯಂತೆ ದುಡಿಯುತ್ತಾನಂತೆ.

ಆರವತ್ತಕ್ಕೂ ಹೆಚ್ಚು ವರ್ಷ ಬದುಕಿದ್ದರೆ, ನಿವೃತ್ತನಾಗಿದ್ದು, ಮನೆಯಲ್ಲಿ ತನ್ನ ಅಂತಸ್ತು ಬದಲಾಗಿರುವ ಅರಿವಿಲ್ಲದೆಯೇ, ತಾನಿನ್ನೂ ಮನೆಯ ಯಜಮಾನ, ತನ್ನ ಹೆಂಡತಿ ಮತ್ತು ಮಕ್ಕಳಿಗೆ ತಾನಿನ್ನೂ ಬೇಕಾದವ ಎಂಬ ಭ್ರಮೆಯಲ್ಲಿದ್ದುಕೊಂಡು, ತನ್ನ ಮಾತುಗಳನ್ನು ಯಾರೂ ಕಿವಿಗೆ ಕಾಕಿಕೊಳ್ಳುತ್ತಿಲ್ಲ ಎಂಬ ಜ್ನಾನವೂ ಇಲ್ಲದೆ ನಾಯಿಯಂತೆ ಬೊಗಳಿಕೊಂಡು ಜೀವಿಸುತ್ತಾನಂತೆ.

ಇನ್ನು ಎಂಭತ್ತಕ್ಕೂ ಹೆಚ್ಚು ವರ್ಷ ಬದುಕಿದನೋ, ಆ ವೇಳೆಗಾಗಲೇ ತಾನೇನು, ತನ್ನ ಅಂತಸ್ತು ಮತ್ತು ಯೋಗ್ಯತೆಯೇನು ಎಂಬ ಜ್ನಾನೋದಯವಾಗಿ ಎರೆ ಹುಳ ತನ್ನ ತಲೆಯನ್ನು ಮಣ್ಣೊಳಗೆ ಹುದುಗಿಕೊಂಡಿರುವ ಹಾಗೆ ಮುಳು ಮುಳು ಎಂದುಕೊಂಡು ಬದುಕಿರುತ್ತಾನಂತೆ.

**********************************
Published on the web - http://www.ourkarnataka.com/kannada/articles/rahasya07.htm

Thursday, 13 September 2007

ಮರಳಿ ಮಣ್ಣಿಗೆ - ನನ್ನ ಗೋಳು

ನನ್ನ ಕನ್ನಡದ ಲೇಖನ " ಮರಳಿ ಮಣ್ಣಿಗೆ- ಏನಾಗಿದೆ ಚೆಲುವ ಕನ್ನಡ ನಾಡಿಗೆ? " ಯನ್ನು OurKarnataka.com ನಲ್ಲಿ ಓದಬಹುದು. ಅದರ ಕೊಂಡಿ - http://www.ourkarnataka.com/kannada/articles/whatwrong.htm.

ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.

Height of Photography

Ismail or (i)smile?
(Courtesy : S.R. Pandrinath)

ಸ್ವಾಮಿ ರಿಷಿ (೨)


Contemplation?


Cocking a snook?

ಸ್ವಾಮಿ ರಿಷಿ (೧)