Friday, 15 August 2008
ಅಭಿನವ್ ಬಿಂದ್ರಾ - ಸ್ವರ್ಣ ಪದಕ ಗೆದ್ದಮೇಲೆ ಏನನಿಸಿತು? - ಅವರ ಮನದಾಳದ ಆಲೋಚನೆಗಳು.
ಆಭಿನವ್ ಬಿಂದ್ರಾ ಬ್ಲಾಗ್
ಇದರಲ್ಲಿ ವ್ಯಕ್ತವಾದ ಅವರ ಅನಿಸಿಕೆಗಳಿಂದ, ಅವರ ಸರಳ, ಸಂಯಮಯುತ ವ್ಯಕ್ತಿತ್ವದ ಅರಿವು ನಮಗಾಗುತ್ತದೆ.
ಹೆಮ್ಮೆಯಿಂದ ಬೀಗುತ್ತಿರುವ ಭಾರತೀಯರಿಗೆ ಅವರ ಈ ಕೆಳಗಿನ ಕಳಕಳಿಯ ಮನವಿ ನನಗೆ ಬಹಳ ಹಿಡಿಸಿತು
"I would like to reiterate that everyone who represents India at the Olympic Games has put in years of toil and sweat. I ask the Indian people to support our athletes more. It is fine to celebrate our achievements but it is just as important to keep up the backing when we are not on top of our game."
ಗೆದ್ದೆತ್ತಿನ ಬಾಲ ಎಲ್ಲರೂ ಹಿಡಿಯುತ್ತೇವೆ.ಅಸಾಧಾರಣ ಪ್ರಯತ್ನ ಪಟ್ಟು ಕೂಡಾ ಸ್ವಲ್ಪದರಲ್ಲಿ ವಿಫಲರಾದವರನ್ನು ಮರೆತೇಬಿಡುತ್ತೆವೆಲ್ಲವೆ?
ವಿಜಯದ ಆನಂದದ ನಡುವೆ ಕೂಡಾ ಬಿಂದ್ರಾ ಅಂಥವರನ್ನು ನೆನೆದು ನಮಗೆಲ್ಲ ಸಕಾಲಿಕ ಎಚ್ಚರಿಕೆ ಕೊಟ್ಟಿದ್ದಾರೆ.
ಸಂಗೀತದಿಂದ ಪರಮಾಣು ಸ್ಫೋಟ, ವಿಶ್ವ ವಿನಾಶ ! ಇದು ಸಾಧ್ಯವೇ?
ನಿಮ್ಮಲ್ಲನೇಕರು ಐ ಪಾಡ್ ( iPod) ಉಪಯೋಗಿಸಲು iTunes ಅನ್ನೋ ಸಾಫ್ಟ್‍ವೇರ್ ಡೌನ್‍ಲೋಡ್ ಮಾಡಿಕೊಂಡಿರಬಹುದು. ಅದರ ಲೇಟೆಸ್ಟ್ ವರ್ಷನ್‍ನ EULA ನಲ್ಲಿ ಕೆಳಕಂಡ ಒಕ್ಕಣೆ ಇದೆ ಅಂತ ಎಷ್ಟು ಜನ ಗಮನಿಸಿರುತ್ತಾರೆ? {Clause 8 page 4 }
“Licensee also agrees that Licensee will not use the Apple Software for any purposes prohibited by United States law, including, without limitation, the development, design, manufacture, or production of nuclear missiles or chemical or biological weapons.”
iTune ನ ಹಳೆಯ ವರ್ಷನ್ EULA ಒಂದರಲ್ಲಿ ( Clause 10 Page2)
“The Apple software is not intended for use in the operation of nuclear facilities, aircraft navigation or communication systems, life support machines, or other equipment in which the failure of the Apple software could lead to death, personal injury, or severe physical or environmental damage.”
iTunes ಸಾಫ್ಟ್‍ವೇರ್‍ನಿಂದ ಪರಮಾಣು ಬಾಂಬ್ ತಯಾರಿಸಬೇಕಾದ ಸೃಜನಶೀಲ ಉಗ್ರವಾದಿಗಳೆಲ್ಲಿದ್ದಾರೋ ನಿಮಗೇನಾದರೂ ಗೊತ್ತೆ? ಇಂತಹ ವಿಚಿತ್ರವಾದ ಸಂಬಂಧವಿಲ್ಲದ ಷರತ್ತುಗಳನ್ನು ಬರೆದ ಅಮೇರಿಕನ್ ಲಾಯರ್‍ಗಳ ಬುಧ್ಧಿಯನ್ನು ಹೊಗಳಬೇಕೋ ಅಥವಾ ತೆಗಳಬೇಕೋ?
ಇಂತಹದೇ ಷರತ್ತುಗಳು McAfee Antivirus ಮತ್ತು Desktop Weather Reader ಗಳ
ನಲ್ಲೂ ಕಾಣಬಹುದು.
ಅನೇಕರು EULA ಸರಿಯಾಗಿ ಓದುವುದಿಲ್ಲ ಎಂದು ಪ್ರಮಾಣಿಸಲು PC Pitstop ಸಾಫ್ಟ್‍ವೇರ್ ಕಂಪನಿಯೊಂದು ತನ್ನ EULAದಲ್ಲಿ ಕೊನೆಯ ಷರತ್ತಾಗಿ EULA ಪೂರ್ತಿ ಓದಿ ಕಂಪನಿಗೆ ಈ ಮೈಲ್ ಕಳಿಸಿದವರಿಗೆ ಒಂದು ಸಾವಿರ ಡಾಲರ್ ಬಹುಮಾನ ಘೋಷಣೆ ಮಾಡಿತ್ತಂತೆ. ನಾಲ್ಕು ತಿಂಗಳ ನಂತರ ೩೦೦೦ ಡೌನ್‍ಲೋಡ್ ಗಳಾದ ಮೇಲೆ ಒಬ್ಬ ಡೌಗ್ ಹೆಕ್‍ಮನ್ ಅನ್ನುವವನು ಆ ಬಹುಮಾನ ಗೆದ್ದನಂತೆ.
ಇನ್ನುಮೇಲಾದರೂ EULA ಕ್ಲಿಕ್ಕಿಸುವ ಮುನ್ನ ಪೂರ್ಣವಾಗಿ ಓದಿನೋಡಿ. ಯಾರಿಗೆ ಗೊತ್ತು? ಏನು ಅದೃಷ್ಟ ಕಾದಿದೆಯೋ.
ಮುಗಿಯಿತು ರಜೆ! ಮತ್ತೆ ಬ್ಲಾಗಿಂಗ್ ಶುರು.
ಈಗ ಸುಮಾರಾಗಿ ಮೊದಲಿನ ಹಾಗೆ ಆರೋಗ್ಯ ಸರಿ ಹೋಗಿರುವುದರಿಂದ, ನನ್ನ ಬ್ಲಾಗಿಂಗ್ ಗತಿವಿಧಿಗಳನ್ನು ಶುರು ಮಾಡಿ ಸ್ನೇಹಿತರ ಮತ್ತು ಓದುಗ ಹಿತೈಷಿಗಳ ತಲೆ ತಿನ್ನಲು ಸಿಧ್ಧನಾಗಿದ್ದೇನೆ.
ಸ್ವಾತಂತ್ರ್ಯೋತ್ಸವದ ಸಂದರ್ಭ ಪ್ರಾರಂಭಕ್ಕೆ ಸರಿ ಅಂದುಕೊಂಡು ಹಾಳು ಮೂಳು ಅಂತೆ ಕಂತೆಗಳ ಅನ್ವೇಷಣೆ ಆರಂಭವಾಗಿದೆ.
ನನ್ನ ಬ್ಲಾಗ್ ಸೈಟ್‍ಗೆ ಆಗಾಗ ಬರುತ್ತಾ ಇರಿ. ಪ್ರತಿಕ್ರಯಿಸಿ. ಸಂತೋಷವಾಗುತ್ತೆ. ನಮಸ್ಕಾರ.
Thursday, 3 April 2008
ಹೊಸದೊಂದು ಗೀತೋಪದೇಶ?

ಒಂದೇ ನೆರೆಹೊರೆಯ ಎರಡು ಮಕ್ಕಳು ಚೆಸ್ ಆಡುತ್ತಿದ್ದಾರೆ. ಇಬ್ಬರೂ ಬುದ್ಧಿವಂತರೇ. ಆದರೆ ಅದರಲ್ಲೊಬ್ಬ ಅಜಯ್ ಅಂತ ಕರೆಯೋಣ. ಅವನಿಗೆ “ದೈವದತ್ತ ಪ್ರತಿಭೆ” ಇದೆ. ಇದು ಅವನಿಗೂ ಗೊತ್ತು ಏಕೆಂದರೆ ಅವನ ತಂದೆ ತಾಯಿಗಳು ಮೊದಲಿನಿಂದಲೂ ಅವನಿಗೆ ಹಾಗೆಯೇ ಹೇಳುತ್ತ ಬಂದಿದ್ದಾರೆ. ತಮ್ಮ ಮಗ ಬಹಳ 'ಜಾಣ’ ನಾಗಿರುವುದು ಒಂದು ಹೆಮ್ಮೆಯ ವಿಚಾರವಲ್ಲವೇ? ಎರಡನೇ ಹುಡುಗ ಪ್ರಯಾಸ್ ಕೂಡ ತಾನು ಯಾವ ರೀತಿಯಲ್ಲೂ ಕಮ್ಮಿ ಎಂದು ತಿಳಿದಿಲ್ಲವಾದ್ದರಿಂದ ಆಟವನ್ನು ಕೆಚ್ಚಿನಿಂದ ಎದುರಿಸುತ್ತಾನೆ.
ಅಜಯ್ ಮೊದಲ ಗೇಮ್ ಗೆಲ್ಲುತ್ತಾನೆ. ಅದರ ಹಿಂದೆಯೇ ಎರಡನೆಯ ಮತ್ತು ಮೂರನೆಯದು ಕೂಡ ಗೆಲ್ಲುತ್ತಾನೆ. ಆದರೆ ಪ್ರತಿ ಬಾರಿಯು ಸೋಲು ಗೆಲುವಿನ ಅಂತರ ಕಡಿಮೆಯಾಗಿರುತ್ತೆ. ಪ್ರಯಾಸ್ ಪ್ರತಿ ಬಾರಿ ಸೋತಾಗಲೂ ಮತ್ತಷ್ಟು ಹುರುಪಿನಿಂದ ಮತ್ತೊಂದು ಗೇಮ್ ಆಡಲು ಅಣಿಯಾಗುತ್ತಾನೆ. ಕೊನೆಗೂ ಒಂದು ಗೇಮ್ ಗೆಲ್ಲುತ್ತಾನೆ. ಸೋತ ಅಜಯ್ ಅಷ್ಟೇನೂ ಉತ್ಸಾಹ ತೋರದೆ ಗೊಣಗುತ್ತ ಮತ್ತೊಮ್ಮೆ ಬೋರ್ಡ್ ತಯಾರಿ ಮಾಡುತ್ತಾನೆ. ಪ್ರಯಾಸ್ ಈ ಬಾರಿಯೂ ಗೆಲ್ಲುತ್ತಾನೆ. ಈಗಂತೂ ಅಜಯ್‍ಗೆ ಎಲ್ಲಿಲ್ಲದ ಕೋಪ ಬಂದು ನಿನ್ನ ಗೆಲುವು “ಅದೃಷ್ಟ” ಚೆನ್ನಾಗಿದ್ದರಿಂದ ಅಷ್ಟೇ ಹೊರತು ಮತ್ತೇನೂ ಇಲ್ಲ ಎಂದು ಪ್ರಯಾಸ್‍ನನ್ನು ಮೂದಲಿಸಿ ಮುಂದೆ ಆಡಲು ನಿರಾಕರಿಸುತ್ತಾನೆ.
ನೀವು ಕೂಡ ಇಂತಹ ಸನ್ನಿವೇಶಗಳನ್ನು ಅನೇಕ ಬಾರಿ ಕಂಡಿರಬಹುದಲ್ಲವೇ? ಪ್ರಖ್ಯಾತ ಮನೋವಿಜ್ನಾನಿ ಕೆರೋಲ್ ಡ್ವೆಕ್ ಪ್ರಕಾರ ಈ ಕಥೆಯಲ್ಲ್ಲಿ ಪ್ರಯಾಸ್ “ಬೆಳವಣಿಗೆ”ಯ ಮನೋಭಾವ ತೋರುತ್ತಿದ್ದರೆ, ಅಜಯ್ ಅದೆಷ್ಟೇ ಪ್ರತಿಭಾವಂತನಾದರೂ ನಿರುತ್ಸಾಹಿಯಾಗಿ “ಸ್ಥಗಿತ” ಮನೋಭಾವಕ್ಕೆ ಬಲಿಯಾಗಿದ್ದಾನೆ.
ನ್ಯೂಯಾರ್ಕ್ ನಗರದ 400 ಶಾಲಾಬಾಲಕರ ಮೇಲೆ ನಡೆಸಿದ ಸಂಶೋಧನೆಯ ಫಲಿತಾಂಶದ ಪ್ರಕಾರ “ಸಾಧನೆ”ಯ ಪ್ರಶಂಸೆಯೇ ಜಾಣ ಮಕ್ಕಳಿಗೆ ಮುಳುವಾಗುವ ವಿಸ್ಮಯಕಾರಿ ತಥ್ಯವೊಂದನ್ನು ಹೊರಗೆಡಹಿದೆ. ಬಹುಪಾಲು ತಂದೆ ತಾಯಿಯರ ಪ್ರಕಾರ ಮಕ್ಕಳ ಸಾಧನೆಯನ್ನು ಪ್ರಶಂಸಿಸುವುದರಿಂದ ಅವರನ್ನು ಹುರಿದುಂಬಿಸಿ ಮತ್ತಷ್ಟು ಹೆಚ್ಚಿನ ಸಾಧನೆಗೆ ಅಣಿಗೊಳಿಸಬಹುದೆಂಬ ಅಭಿಪ್ರಾಯ ಇರುವುದು ನಿಜವಷ್ಟೆ! ಆದರೆ ಕೆರೋಲ್‍ರ ಸಂಶೋಧನೆ ಈ ನಂಬಿಕೆಯನ್ನು ತಲೆಕೆಳಗಾಗಿಸಿದೆ.
ಅವರ ಪ್ರಕಾರ ಪ್ರಶಂಸೆ ಎರಡು ಅಲಗಿನ ಕತ್ತಿ. ಸರಿಯಾಗಿ ಉಪಯೋಗಿಸದಿದ್ದರೆ ಜೀವಕ್ಕೆ ಕುತ್ತು ಖಂಡಿತ. ಪ್ರಶಂಸೆ ಪ್ರೋತ್ಸಾಹಜನಕವಾಗಬೇಕಾದರೆ ಅದು ಪ್ರಾಮಾಣಿಕ ಹಾಗೂ ಸಮಯೋಚಿತವಾಗಿರಬೇಕು. ಅನಾವಶ್ಯಕ ಮತ್ತು ಅತಿರೇಕದ ಪ್ರಶಂಸೆ ಪರಿಣಾಮಕಾರಿಯಾಗುವುದಿಲ್ಲ. ಹಾಗೆಯೇ ಅತಿ ಕಡಿಮೆಯೂ ಒಳ್ಳೆಯದಲ್ಲ. ಎಲ್ಲವೂ ಹಿತಮಿತವಾಗಿ ಸಮತೋಲಿತವಾಗಿರಬೇಕು.
ಯಾವುದು ಪ್ರಶಂಸಾರ್ಹ? ಪ್ರಯತ್ನವೋ? ಸಾಧನೆಯೋ?
ಅವರ ಅಧ್ಯಯನದಲ್ಲಿ ಹಲವು ಮಕ್ಕಳ ಸಾಧನೆಯ ಬದಲಾಗಿ ಅವರ “ಪ್ರಯತ್ನ”ದ ಶ್ಲಾಘನೆ ಮಾಡಲಾಯಿತು. ಇಂತಹ ಮಕ್ಕಳು ಸಣ್ಣ ಪುಟ್ಟ ವೈಫಲ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಮತ್ತಷ್ಟು ಹುರುಪಿನಿಂದ ಇನ್ನೂ ಹೆಚ್ಚಿನ ಪ್ರಯತ್ನಕ್ಕೆ ಮುಂದಾದದ್ದು ಕಂಡು ಬಂದಿತು. ಇಂತಹ ಮಕ್ಕಳು ಅತಿ ಪ್ರತಿಭಾವಂತರಾಗದಿದ್ದಾಗ್ಯೂ ತಮ್ಮ ಶ್ರಮ ಮತ್ತು ಉತ್ಸಾಹದಿಂದ ಸಫಲತೆಯ ಹಾದಿಯಲ್ಲಿ ಮುನ್ನಡೆಯುತ್ತಾರೆ. ಈ ಮಕ್ಕಳಿಗೆ ಸಾಧನೆ ಅಥವಾ ಗುರಿ ತಲೆ ಹೋಗುವಷ್ಟು ಮುಖ್ಯವಲ್ಲ. ಅತಿಕ್ಲಿಷ್ಟವಾದ ಗಣಿತ ಸಮಸ್ಯೆ ಬಿಡಿಸುವ ಅಥವಾ ಪ್ರಶ್ನೆ ಉತ್ತರಿಸುವ ಪ್ರಕ್ರಿಯೆಯಲ್ಲಿಯೇ ಅವರು ಆನಂದ ಕಂಡುಕೊಂಡು ಮುಂದುವರಿಯುತ್ತಾರೆ. ಎಡವಿ ಮುಗ್ಗರಿಸುವುದು, ಸಣ್ಣ ಪುಟ್ಟ ವೈಫಲ್ಯಗಳು ಇವೆಲ್ಲ ಸಫಲತೆಯ ಹಾದಿಯಲ್ಲಿನ ಕಲ್ಲು ಮುಳ್ಳುಗಳು ಎಂದು ನಂಬಿ ಎದೆಗೆಡದೆ ಮುನ್ನುಗ್ಗುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಇದನ್ನೇ ಅವರು “ಬೆಳವಣಿಗೆ”ಯ ಮನೋಭಾವ ಎಂದು ಬಣ್ಣಿಸುವುದು.
ಈ ಸಂಶೋಧನೆಯ ಹೆಚ್ಚಿನ ವಿವರಗಳು ನ್ಯೂಯಾರ್ಕ್ ಪತ್ರಿಕೆಯಲ್ಲಿ ಕಳೆದ ವರ್ಷ ಪೋ ಬ್ರ್ಯಾನ್‍ಸನ್‍ರವರು ಬರೆದ How not to talk to your kids – The inverse Power of praise ಎನ್ನುವ ಲೇಖನದಲ್ಲಿ ಕೊಡಲಾಗಿದೆ.
ಕೆರೋಲ್ ಡ್ವೆಕ್‍ರವರ ಜೀವನ, ಕಲಿಕೆ ಮತ್ತು ಸಾಧನೆಗಳ ಕುರಿತಾದ ಮರೀನಾ ಕ್ರಾಕೊವ್ಸ್ಕಿ ಬರೆದ The Effort Effect ಲೇಖನ ಸ್ಟ್ಯಾನ್‍ಫೋರ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಒಟ್ಟಾರೆ ಕೆರೋಲ್ ಸಂಶೋಧನೆಯ ಸಾರಾಂಶ “ಪ್ರಯತ್ನದಿಂದ ಏನನ್ನಾದರೂ ಸಾಧಿಸಬಹುದು. ಕೇವಲ ಸಾಧನೆಯೇ ಗುರಿಯಾದರೆ, ಅಕಸ್ಮಾತ್ ಎಡವಿ ಮುಗ್ಗರಿಸಿದರೆ ಮೇಲೆದ್ದು ಕೊಡವಿಕೊಂಡು ಮರಳಿ ಯತ್ನಿಸುವ ಚೈತನ್ಯ ಇಲ್ಲದಿರಬಹುದು. ಪ್ರಶಂಸೆ ಮಾಡುವುದಾದರೆ ಪ್ರಯತ್ನವನ್ನು ಶ್ಲಾಘಿಸಿ, ಸಾಧನೆಯನ್ನಲ್ಲ.” ಪ್ರತಿಫಲಾಪೇಕ್ಷೆಯಿಲ್ಲದೆ ಕರ್ಮ ಮಾಡು ಎಂದುಬೋಧಿಸುವ ಪಾಠ. ಇದೊಂದುರೀತಿಯ ಗೀತೋಪದೇಶವೇ ಅಲ್ಲವೇ
ನಮ್ಮಲ್ಲಿ ಇಂದು ಅದೆಷ್ಟು ಮಕ್ಕಳು ಪ್ರೈಮರಿ ಶಾಲೆಯಿಂದಲೇ ಆರಂಭವಾಗಿ ಅವಿರತ ತಮ್ಮ ತಂದೆ ತಾಯಿಗಳ ಸಾಧನೆಯ ಅಪೇಕ್ಷೆ ಮತ್ತು ಅದರಿಂದ ಸಿಗಲಿರುವ ಪ್ರಶಂಸೆಯ ಉರುಳಲ್ಲಿ ಸಿಲುಕಿ, 99.9% ಅಂಕಗಳಿಸುವ ಸ್ಪರ್ಧೆಯಲ್ಲಿ ತೀವ್ರ ಮಾನಸಿಕ ಒತ್ತಡ ಮತ್ತು ಹಿಂಸೆ ಅನುಭವಿಸುತ್ತಿದ್ದಾರೋ ಊಹಿಸಲಸಾಧ್ಯ. ವಿಫಲತೆಯ ಹೆದರಿಕೆಯಿಂದ ನಡೆಯುತ್ತಿರುವ ಆತ್ಮಹತ್ಯೆಗಳೇ ಇದಕ್ಕೆ ಸಾಕ್ಷಿ.
ನಮ್ಮ ವಿದ್ಯಾಭ್ಯಾಸ ಪಧ್ಧತಿಯ ಸುಧಾರಣೆಯಾಗಬೇಕಾದರೆ ಇಂತಹ ಗೀತೋಪದೇಶ ಸಮಯೋಚಿತ ಅಲ್ಲವೇ?
Wednesday, 26 March 2008
ವಲಸಿಗರ ಬಗ್ಗೆ ಅಸಹಜ ದ್ವೇಷವೇಕೆ?

ಅನುವಾದ: ನವರತ್ನ ಸುಧೀರ್
ನಮಗೆ ಇಷ್ಟವಿರಲಿ, ಇಲ್ಲದಿರಲಿ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ ಸೃಷ್ಟಿಯಾಗುವುದು ಅನಿವಾರ್ಯ. ಈ ಪ್ರಕ್ರಿಯೆಯಿಂದ ಅನೇಕ ಸಾಮಾಜಿಕ ಬದಲಾವಣೆಗಳಾಗುವುದೂ ಅಷ್ಟೇ ಅನಿವಾರ್ಯ. ಜೀವನೋಪಾಯ ಹುಡುಕುತ್ತ ಹುಟ್ಟಿ ಬೆಳೆದ ನಾಡನ್ನು ಬಿಡಬೇಕಾಗಿ ಬಂದು, ಎಂದೂ ಕಂಡೂ ಕೇಳದ ದೂರದ ನಾಡಿಗೆ ವಲಸೆಹೋಗಿ. ಬೇರೆ ಭಾಷೆ ಮತ್ತು ಸಂಸ್ಕೃತಿಯ ಜನರ ನಡುವೆ ಜೀವಿಸಬೇಕಾಗುವ ಅವಶ್ಯಕತೆ ಇಂದು ಅನೇಕರಿಗೆ ಇದೆ. ಸ್ವಾಭಾವಿಕವಾಗಿಯೆ ವಲಸಿಗರು ತಮ್ಮ ಶ್ರಮ ಮತ್ತು ಕಾರ್ಯ ತತ್ಪರತೆಗಳಿಂದ ಹೊಸ ಸಮಾಜಕ್ಕೆ ಪ್ರಯೋಜನಕಾರಿ ದೇಣಿಗೆ ನೀಡಲು ಉತ್ಸುಕರಾಗಿರುತ್ತಾರೆ. ಹಾಗಾಗಿ ಮಣ್ಣಿನ ಮಕ್ಕಳೆಂದೆನಿಸಿಕೊಂಡು ತಮ್ಮ ಕಲ್ಪಿತ ಪ್ರಪಂಚ ಶಾಶ್ವತ ಎಂದು ನಂಬಿಕೊಂಡಿರುವ ಸ್ಥಳೀಯರ ಮತ್ತು ವಲಸಿಗರ ಹಿತಾಸಕ್ತಿಗಳ ನಡುವಣ ಘರ್ಷಣೆ ಪ್ರಾರಂಭವಾಗಲು ಹೊತ್ತೇನೂ ಹಿಡಿಯುವುದಿಲ್ಲ. ಸಮಾಜ ಶಾಸ್ತ್ರದಲ್ಲಿ Xenophobia ಎಂಬ ಒಂದು ಪದವಿದೆ. ಕನ್ನಡ ಕಸ್ತೂರಿ. ಕಾಂ ನಿಘಂಟಿನ ಪ್ರಕಾರ ಈ ಪದದ ಅರ್ಥ - ಪರ ದೇಶದವರ ಬಗ್ಗೆ ಇರುವ ದ್ವೇಷಪೂರ್ಣ ಭೀತಿ. ಸ್ಥಳೀಯರ ಮನದಲ್ಲಿನ ಈ ಅವ್ಯಕ್ತ ಭೀತಿ ಸಮಯ ಸಮಯಕ್ಕೆ ಅನೇಕ ನಕಾರಾತ್ಮಕ ಹಾಗೂ ಹಿಂಸಾತ್ಮಕ ರೂಪಗಳಲ್ಲಿ ಪ್ರಕಟವಾಗುವುದುಂಟು.
23ನೇ ಮಾರ್ಚ್ 2008 ರಂದು “ಟೈಮ್ಸ್ ಆಫ್ ಇಂಡಿಯಾ” ಇಂಗ್ಲೀಷ್ ಪತ್ರಿಕೆಯಲ್ಲಿ ಖ್ಯಾತ ಚಿಂತಕ ಹಾಗೂ ಲೇಖಕ ಗುರುಚರಣ್ ದಾಸ್‍ರವರು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಗಳ ಬಗ್ಗೆ ಬರೆದ Thackeray scores a self-goal ಎನ್ನುವ ಲೇಖನದಲ್ಲಿ ಈ Xenophobia ಎಂಬ ಸಾಮಾಜಿಕ ಪಿಡುಗಿನ ಉಲ್ಲೇಖವಿದೆ. ಮಹಾರಾಷ್ಟ್ರದಲ್ಲಿ ನಡೆದದ್ದು ನಮ್ಮ ಕರ್ನಾಟಕದಲ್ಲೂ ಮುಂದೆ ನಡೆಯಬಹುದಾದ್ದರಿಂದ ಈ ಲೇಖನದ ಅನ್ವಯತೆ ನಮಗೂ ಇದೆ ಎಂದೆನಿಸಿ, ಕೆಳಕಂಡಂತೆ ಕನ್ನಡಕ್ಕೆ ಅನುವಾದ ಮಾಡಲಾಗಿದೆ.
“ಆಗಬಾರದ ಅನಾಹುತ ಆಗಿ ಹೋಗಿದೆ. ರಾಜ್ ಠಾಕ್ರೆಯವರ ಮಹಾರಾಷ್ಟ್ರೀಯವಾದಿ ಆಕ್ರೋಶದಿಂದ ಹೆದರಿ ಊರು ಬಿಟ್ಟು ಹೋಗುತ್ತಿರುವ ಉತ್ತರ ಭಾರತೀಯ ಕಾರ್ಮಿಕರ ಕೊರತೆಯಿಂದಾಗಿ ಪುಣೆ, ನಾಸಿಕ್ ಮತ್ತು ಠಾಣೆಯಲ್ಲಿನ ಉದ್ಯಮಿಗಳು ತಮ್ಮ ಉದ್ಯಮಗಳನ್ನು ವಿಸ್ತರಿಸುವ ಯೋಜನೆಗಳನ್ನು ನಿಲ್ಲಿಸಿ ಇತರೆ ರಾಜ್ಯಗಳತ್ತ ಕಣ್ಣು ಹಾಯಿಸಿದ್ದಾರೆ. ಹಿಂದೊಮ್ಮೆ ದತ್ತ ಸಾಮಂತರ ಕಾರ್ಮಿಕರ ತೀವ್ರವಾದ ಮತ್ತು ಬಾಲಾಸಾಹೇಬ್ ಠಾಕ್ರೆಯವರ ಪರದೇಶಿಗರ ಬಗೆಗಿನ ದ್ವೇಷಪೂರ್ಣ ಭೀತಿಯುಕ್ತ ಚಳುವಳಿಗಳಿಂದಾಗಿ ಉನ್ನತ ಸ್ಥರದ ಹುದ್ದೆಗಳೆಲ್ಲ ಬೆಂಗಳೂರಿಗೆ ಮತ್ತು ಕಾರ್ಮಿಕ ಸ್ಥರದ ಕೆಲಸಗಳೆಲ್ಲ ಗುಜರಾತಿಗೆ ಸ್ಥಳಾಂತರಗೊಂಡ ದುಃಸ್ವಪ್ನ ಮತ್ತೊಮ್ಮೆ ಕಾಡಲಾರಂಭಿಸಿದೆ.
ಒಂದು ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳದ ಹೊಳೆ ಆಕರ್ಷಕ ಪ್ರದೇಶಗಳಿಗೆ ಮಾತ್ರ ಹರಿಯುತ್ತದೆ. ಒಂದು ನಗರ ಅಥವಾ ರಾಜ್ಯ ಈ ಪರಿ ಆಕರ್ಷಕವೆನಿಸುವುದರಲ್ಲಿ ಒಂದು ಮುಖ್ಯ ಕಾರಣ ಉತ್ತಮ ಉತ್ಪಾದನಾ ಸಾಮರ್ಥ್ಯವುಳ್ಳ ಕೆಲಸಗಾರರ ಸುಲಭವಾಗಿ ದೊರಕುವಿಕೆ. ಹೊರಗಿನಿಂದ ವಲಸೆಬಂದ ಕಾರ್ಮಿಕರು ಸ್ಥಳೀಯ ಕಾರ್ಮಿಕರಿಗಿಂತ ಹೆಚ್ಚು ಆಸಕ್ತಿ ಮತ್ತು ಶ್ರಮವಹಿಸಿ ದುಡಿಯುತ್ತಾರೆಂಬುದು ನಮಗೆ ಎಷ್ಟೇ ಅಪ್ರಿಯವೆನಿಸಿದರೂ ಅಲ್ಲಗೆಳೆಯಲಾಗದ ಸತ್ಯ. ರಿಚರ್ಡ್ ಫ್ರೀಮನ್‍ನಂತಹ ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಿಗಳು ಹಾಗೂ ಮತ್ತಿತರರ ಸಂಶೋಧನೆಯ ಪ್ರಕಾರ ಯಾವ ಸಮಾಜ ಮತ್ತು ಸಂಸ್ಕೃತಿಗಳು ವಲಸಿಗರನ್ನು ಪ್ರೋತ್ಸಾಹಿಸಿ ತಮ್ಮದಾಗಿಸಿಕೊಳ್ಳುತ್ತವೆಯೋ ಅಂಥವು ಬೇರೆಲ್ಲ ಸಮಾಜಗಳಿಗಿಂತ ಬಹಳ ಮುಂದುವರೆದು ಏಳಿಗೆ ಸಾಧಿಸುತ್ತವೆ ಎಂದು ಪ್ರತಿಪಾದಿಸಲಾಗಿದೆ. ಅದಕ್ಕೇ ತಜ್ನರ ಪ್ರಕಾರ 21ನೇ ಶತಮಾನದಲ್ಲಿ, ಅಮೇರಿಕೆ ಎಲ್ಲ ದೇಶಗಳಿಗಿಂತ ಸ್ಪರ್ಧೆಯಲ್ಲಿ ಮುಂದಾಗಿ ಉಳಿದು ಯೂರೋಪ್ ಮತ್ತು ಜಪಾನ್ ಕ್ರಮೇಣ ಹಿಂದುಳಿಯುತ್ತವೆ. ಏಕೆಂದರೆ ಅಮೇರಿಕ ವಲಸಿಗರನ್ನು ತನ್ನ ಸಮಾಜದಲ್ಲಿ ಗೌರವಯುತ ಸ್ಥಾನ ಮತ್ತು ಅವಕಾಶ ನೀಡಿ ಐಕ್ಯಗೊಳಿಸುವುದರಲ್ಲಿ ಸಫಲವಾದರೆ, ಐತಿಹಾಸಿಕವಾಗಿ ಯೂರೋಪ್ ಮತ್ತು ಜಪಾನ್ ಈ ಕಾರ್ಯದಲ್ಲಿ ಬಹಳ ವಿಫಲವಾಗಿವೆ. ವೃಧ್ಧರ ಸಂಖ್ಯೆ ಹೆಚ್ಚುತ್ತ, ಪ್ರಾಪ್ತವಯಸ್ಕ ಕಾರ್ಮಿಕರ ಸಂಖ್ಯೆ ನಶಿಸುತ್ತಿರುವಂತಹ ಯೂರೋಪ್ ಮತ್ತು ಜಪಾನ್ ದೇಶಗಳು ಮುಂಬರುವ ದಿನಗಳಲ್ಲಿ ಚೀನಾ ಮತ್ತು ಭಾರತಗಳಿಗೂ ಸೋತು ಬಹಳ ಹಿಂದೆ ಬೀಳುವ ಸಂಭಾವನೆ ಹೆಚ್ಚಾಗಿ ತೋರುತ್ತಿದೆ.
ಭಾರತೀಯ ರೈಲು ಪ್ರತಿ ವರ್ಷ 640 ಕೋಟಿ ರೈಲು ಟಿಕೆಟ್ಟುಗಳನ್ನು ಮಾರುತ್ತವೆ. ಇದರಲ್ಲಿ ಮೂರನೇ ಒಂದು ಭಾಗ ದಿನಕೆಲಸಕ್ಕಾಗಿ ಓಡಾಡುವ ಕೆಲಸಗಾರರಿಗಾಗಿ ಎಂದಿಟ್ಟುಕೊಂಡರೆ, ಮಿಕ್ಕ ಸಂಖ್ಯೆ ನೂರಹತ್ತು ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ, ಪ್ರತಿಯೊಬ್ಬರಿಗೂ ವರ್ಷಪ್ರತಿ ನಾಲ್ಕು ಪ್ರವಾಸಗಳಿಗಾಗಿ ಟಿಕೆಟ್ ಕೊಂಡಂತೆ ಲೆಕ್ಕಾಚಾರವಾಗುತ್ತದೆ. ನಮ್ಮದು ನಿರಂತರ ಚಾಲನೆಯಲ್ಲಿರುವ ದೇಶ. ಅದರಲ್ಲೂ ಬಡವರು ಕೆಲಸಕ್ಕಾಗಿ, ಒಳ್ಳೆಯ ಜೀವನೋಪಾಯಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲೇಬೇಕಾಗುವ ದೇಶ. ನಮ್ಮ ನಗರಗಳು ಬಹು ದೇಶೀಯ ಜನ ಮತ್ತು ಸಂಸ್ಕೃತಿಗಳ ಆಗರಗಳಾಗಿ ಪರಿವರ್ತಿತಗೊಂಡು, ಕ್ರಮೇಣ ಪ್ರಾದೇಶಿಕ ಅಸ್ತಿತ್ವ ಮರೆಯಾಗಿ ಹೊಸ ಭಾರತೀಯತೆಯ ಕುರುಹನ್ನು ಪ್ರತಿಪಾದಿಸುತ್ತಿವೆ. ಈ ಪರಿಯ ವಿದ್ಯಮಾನಗಳು ರಾಜ್ ಠಾಕ್ರೆಯಂತಹ ದುರಾಗ್ರಹ ಪೀಡಿತರಿಗೆ ಬಹಳ ನೋವುಂಟುಮಾಡುತ್ತ ತಮ್ಮ ಉಳಿವಿಗಾಗಿ ಅವರು ಏನನ್ನಾದರೂ ಮಾಡಿಯೇ ತೀರಬೇಕೆಂಬ ಛಲ ಹುಟ್ಟಿಸುತ್ತವೆ.
ನಿಜವಾಗಿಯೂ ಮಹಾರಾಷ್ಟ್ರದ ಕಾರ್ಮಿಕರಿಗೊಂದು ದೊಡ್ಡ ಸಮಸ್ಯೆಯಿದೆ. ಅದೇನೆಂದರೆ ತಮಗಿಂತ ಚತುರ ಮತ್ತು ಹೆಚ್ಚು ಉತ್ಪಾದನಾ ಸಾಮರ್ಥ್ಯವುಳ್ಳ ವಲಸಿಗರೊಡ್ಡಿದ ಸವಾಲನ್ನೆದುರಿಸುವುದು. ಇದಕ್ಕಿರುವುದೊಂದೇ ಉತ್ತರ. ಅದು, ಮಹಾರಾಷ್ಟ್ರವನ್ನು ಹಣ ಹೂಡಿಕೆಗಾಗಿ ಮತ್ತಿಷ್ಟು ಆಕರ್ಷಕವನ್ನಾಗಿಸುವುದು. ರಾಜ್ ಠಾಕ್ರೆ ತಮ್ಮ ರಾಜ್ಯದಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉತ್ತಮ ದರ್ಜೆಯ ಶಾಲಾಕಾಲೇಜುಗಳು ಮತ್ತು ವೃತ್ತಿ ಪರ ಶಾಲೆಗಳ ಸ್ಥಾಪನೆಗಾಗಿ ಪ್ರಯತ್ನಿಸಬೇಕು. ಇದರಿಂದ ಮಹಾರಾಷ್ಟ್ರೀಯರು ಇತರರಿಗಿಂತ ಹೆಚ್ಚು ಕುಶಲರೂ ಮತ್ತು ಸ್ಪರ್ಧಿಸಲು ಶಕ್ತರೂ ಆಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಮುಂದುವರೆದು ಅವರು ಮಧ್ಯಮವರ್ಗಕ್ಕೆ ಭಡ್ತಿ ಪಡೆದು ಕೆಳ ಸ್ಥರದ ಕೆಲಸಗಳು ಮಾತ್ರ ವಲಸಿಗರ ಪಾಲಿಗೆ ಉಳಿಯುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಕಾಡುತ್ತಿರುವ ಪ್ರಶ್ನೆಯೊಂದಿದೆ. ಅದೇನೆಂದರೆ ಸಾಧಾರಣ ಹಾಗೂ ಸಭ್ಯ ಮನೆತನಗಳಲ್ಲಿ ಬೆಳೆದ ಮಹಾರಾಷ್ಟ್ರದ ಹುಡುಗರು ಹಿಂಸೆ ಮತ್ತು ಕ್ರೌರ್ಯಪೂರಿತ ಪುಂಡರ ಗುಂಪಾಗಿ ಮಾರ್ಪಾಡಾಗುವುದು ಹೇಗೆ? “ಅದು ಹೇಗೆ 1930ರಲ್ಲಿ ನಾವು ಅಂತಹ ಕ್ರೂರ ನಾಜಿಗಳಾಗಿಹೋದೆವು?” ಎನ್ನುವ ಪ್ರಶ್ನೆಗೆ ಉತ್ತರವನ್ನು ಜರ್ಮನಿಯ ಪ್ರಜೆಗಳು ಕೂಡ ಕಳೆದ ಎಪ್ಪತ್ತೈದು ವರ್ಷಗಳಿಂದ ಹುಡುಕುತ್ತಲಿದ್ದಾರಂತೆ. ತನ್ನ The Most Dangerous Animal ಪುಸ್ತಕದಲ್ಲಿ ಡೇವಿಡ್ ಲಿವಿಂಗ್‍ಸ್ಟೋನ್ ಈ ಪ್ರಶ್ನೆಗೆ ಉತ್ತರ ಕೊಡಲೆತ್ನಿಸುತ್ತಾನೆ. ಅವನ ಪ್ರಕಾರ ಪ್ರತಿ ಮಾನವನಲ್ಲೂ ಅಸುರೀ ಶಕ್ತಿಯ ಅಂಶ ಸುಪ್ತಚೇತನವಾಗಿರುತ್ತದೆ. ಇದಕ್ಕೆ ಕಿಡಿ ಹಚ್ಚಿ ಭುಗಿಲೇಳಿಸಲು ಹಿಟ್ಲರ್ ಅಥವಾ ರಾಜ್ ಠಾಕ್ರೆಯವರಂತಹ triggerನ ಅವಶ್ಯಕತೆಯಿದೆ ಮಾತ್ರ! ಆ ಒಂದು ಕರಾಳ ಮಧ್ಯಾಹ್ನ 38000 ಮಂದಿ ಯಹೂದಿಗಳನ್ನು ಗುಂಡಿಕ್ಕಿ ಕೊಂದ ಜರ್ಮನ್ ರಿಸರ್ವ್ ಪೋಲೀಸ್ ಬೆಟಾಲಿಯನ್ 101 ಪಡೆಯ ಸಿಪಾಯಿಗಳೆಲ್ಲರೂ “ ಯಾವ ಸೈಧ್ಧಾಂತಿಕ ನೆಲೆಗಟ್ಟೂ ಇಲ್ಲದ ಹಾಗೂ ಮಿಲಿಟರಿ ತರಬೇತಿಯಿಲ್ಲದ ಮಧ್ಯವಯಸ್ಕ ಕುಟುಂಬಸ್ಥರು”. ಇತಿಹಾಸದ ಎಲ್ಲ ನರಮೇಧಗಳ ಕಥೆಯೂ ಹೀಗೆಯೆ.
ಕೊಲೆಗಡುಕ ನೀವೂ ಆಗಬಹುದು ಅಥವಾ ನಾನೂ ಆಗಬಹುದು. ವಿಜ್ನಾನಿಗಳ ಪ್ರಕಾರ ಹಿಂಸಾತ್ಮಕ ಪ್ರವೃತ್ತಿ ನಮ್ಮೆಲ್ಲರ ಜೀವಾಣುಗಳಲ್ಲಿ ಅಡಗಿವೆ. ಬೇರೆಲ್ಲ ಸಾಮಾಜಿಕ ಪ್ರಾಣಿಗಳಂತೆಯೇ, ಇರುವೆಗಳಿಂದ ಹಿಡಿದು ಚಿಂಪಾಂಜಿಗಳನ್ನೂ ಒಳಗೊಂಡು ನಾವೆಲ್ಲರೂ ಪರರ ಬಗ್ಗೆ ವಿನಾಕಾರಣ ಅಪಾರ ಭೀತಿ ಮತ್ತು ದ್ವೇಷವುಳ್ಳವರು, ಅರ್ಥಾತ್ ಕಲಹಪ್ರಿಯರು. ನಾವೆಲ್ಲ ಒಟ್ಟಾಗಿ ಒಂದಾದಷ್ಟೂ ಹೊರಗಿನವರನ್ನು ಅಷ್ಟೇ ಆಕ್ರಮಣಶೀಲರಾಗಿ ಎದುರಿಸುತ್ತೇವೆ. ಬಹುಶಃ ನಮ್ಮ ಸಂವಿಧಾನದ ಕರ್ತರಿಗೆ ಈ ವಿಚಾರದ ಮನವರಿಕೆಯಿದ್ದಂತಿದೆ. ಅದಕ್ಕೇ ನಮ್ಮ ಸಂವಿಧಾನದಲ್ಲಿ, ಮನುಷ್ಯ ಪಶುವಿಗೆ ಅಧಿಕಾರ ನೀಡುವ ಮುನ್ನ ಅದನ್ನು ನಿರ್ವಹಿಸುವ ಹಾದಿಯಲ್ಲಿ ಅನೇಕ ಅಡೆ ತಡೆ, ನಿರ್ಬಂಧಗಳನ್ನು ರೂಪಿಸಲಾಗಿದೆ.
ಹೀಗೆ self goal ಮಾಡಿಕೊಳ್ಳುವ ಬೃಹಸ್ಪತಿ ರಾಜ್ ಠಾಕ್ರೆ ಒಬ್ಬರೇ ಅಲ್ಲ. ಮಲೇಶಿಯಾದಲ್ಲಿ ಕೂಡ ಪ್ರಸಕ್ತ ನಡೆಯುತ್ತಿರುವ “ಭೂಮಿಪುತ್ರ” ಚಳುವಳಿಯಿಂದಾಗಿ ಆ ದೇಶದಲ್ಲಿ ಆಗಬಹುದಿತ್ತಾದ ಹಣ ಹೂಡಿಕೆ ಬೇರೆ ಪೂರ್ವಾತ್ಯ ದೇಶಗಳೆಡೆ ಹರಿದುಹೋಗುತ್ತಿದೆ. ಹಾಗೆಯೇ ಹಲವು ವರ್ಷಗಳ ಹಿಂದೆ ಒಂದು ಆಕರ್ಷಕ ’ಗ್ರೀನ್ ಕಾರ್ಡ್” ಯೋಜನೆಯನ್ನು ರೂಪಿಸಿ ಕೂಡ ಜರ್ಮನಿ, ಭಾರತೀಯ ಸಾಫ್ಟ್‍ವೇರ್ ಎಂಜಿನಿಯರ್‍ಗಳನ್ನು ತನ್ನೆಡೆಗೆ ಆಕರ್ಷಿಸಲು ವಿಫಲವಾಯಿತು. ಕಾರಣ ಜರ್ಮನಿಯ ನಾಗರಿಕರು ವಲಸಿಗರನ್ನು ಗೌರವಿಸಿ ಆತಿಥ್ಯ ನೀಡುವುದಿಲ್ಲ ಎಂಬ ತಥ್ಯ ಎಲ್ಲೆಡೆ ಹರಡಿದ್ದು. ಒಂದು ಸ್ಪರ್ಧಾತ್ಮಕ ವಿಶ್ವದಲ್ಲಿ, ಸಮಾಜದ ಏಳಿಗೆಯಾಗಬೇಕಾದರೆ ವಲಸಿಗರಿಂದ ಆಗಬಹುದಾದ ಕಾಣಿಕೆಯ ಬಗೆಗಿನ ಪರಿಪಕ್ವ ಅರಿವು ಒಂದು ಸಮಾಜಕ್ಕಿರುವುದು ಅದೃಷ್ಟದ ಮಾತೇ ಸರಿ."
************************************************************************************
Tuesday, 25 March 2008
ವಿಶ್ವದ ಅತಿ ಜಾಣ ಮತ್ತು ಬುಧ್ಧಿವಂತ ಮಕ್ಕಳಿರುವ ದೇಶ ಯಾವುದು?
- ನವರತ್ನ ಸುಧೀರ್
ಇದೆ ಹಾಗೊಂದು ದೇಶ. ಈ ದೇಶದ ಮಕ್ಕಳು ಏಳು ವರ್ಷ ವಯಸ್ಸಾಗುವವರೆಗೂ ಶಾಲೆಗೆ ಹೋಗುವುದಿಲ್ಲ. ತಂದೆ ತಾಯಿಗಳು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೋಲ್ಲ. ಸ್ಕೂಲ್ ಯೂನಿಫಾರ್ಮ್‍ಗಳಿಲ್ಲ. ಸ್ಪೋರ್ಟ್ಸ್ ಕ್ಲಬ್‍ಗಳಿಲ್ಲ. ಹೈಸ್ಕೂಲಿನ ಮಕ್ಕಳಿಗೂ ದಿನಕ್ಕೆ ಅರ್ಧಘಂಟೆಗೂ ಹೆಚ್ಚಿನ ಹೋಮ್‍ವರ್ಕ್ ಇರೋಲ್ಲ. ವಿದ್ಯಾಭ್ಯಾಸಕ್ಕಾಗಿ ನಿಯಮಿತ ಸಿಲಬಸ್ ಅಂತ ಇಲ್ಲ. ಪುರಸ್ಕೃತ ಪುಸ್ತಕಗಳೂ ಅಂತಲೂ ಇಲ್ಲ. ಎಲ್ಲವೂ ಶಿಕ್ಷಕರ ಇಛ್ಛಾನುಸಾರ ನಿರ್ಧಾರಿತ. ದೇಶ ತಂತ್ರಜ್ನಾನದಲ್ಲಿ ವಿಶ್ವದ ಮುಂಚೂಣಿಯಲ್ಲಿದ್ದರೂ, ತರಗತಿಗಳಲ್ಲಿ ಪವರ್‍ಪಾಯಿಂಟ್ ಉಪಯೋಗವಿಲ್ಲದೆ ಕರಿಯ ಬಣ್ಣದ ಬರಿಯುವ ಹಲಗೆ - ಸೀಮೆಸುಣ್ಣದ ಬಳಪ, ಓವರ್‍ಹೆಡ್ ಪ್ರೊಜೆಕ್ಟರ್‍ಗಳ ಪ್ರಯೋಗ. ಇಲ್ಲಿಯ ಶಾಲಾ ಕಾಲೇಜುಗಳಲ್ಲಿ ಅಮೇರಿಕೆಯಲ್ಲಿರುವಂತೆ ಹಾರ್‍ವರ್ಡ್, ಪ್ರಿನ್ಸ್‍ಟನ್ ತರಹದ ಉಚ್ಛ ನೀಚ ಸ್ತರದ ತಾರತಮ್ಯಗಳಿಲ್ಲ. ಎಲ್ಲ ದೇಶದ ಮಕ್ಕಳಂತೆ ಇಲ್ಲಿಯ ಮಕ್ಕಳೂ ಜೀನ್ಸ್, ಟ್ಯಾಂಕ್‍ಟಾಪ್ ಧರಿಸುತ್ತಾರೆ. ಹಲವರು ಸ್ಟಿಲ್ಲೆಟೋ ಹೀಲ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಕೆಲ ಮಕ್ಕಳು ತಲೆಗೂದಲಿಗೆ ವಿಚಿತ್ರ ಶೈಲಿಯ ವಿನ್ಯಾಸ ಮಾಡಿಸಿಕೊಂಡು ಬಣ್ಣ ಬಣ್ಣಗಳಲ್ಲಿ ಡೈ ಮಾಡಿಸಿಕೊಂಡು ಬರುತ್ತಾರೆ. ಗಂಟೆ ಗಟ್ಟಲೆ ಇಂಟರ್ನೆಟ್‍ಗೆ ತಗಲಿಕೊಂಡು ಕಾಲವ್ಯಯ ಮಾಡುತ್ತಾರೆ. ರಾಕ್ ಮತ್ತುಹೆವಿ ಮೆಟಲ್ ಸಂಗೀತ ಕೇಳುತ್ತಾರೆ.
ಇಷ್ಟೆಲ್ಲಾ ಇದ್ದರೂ, Organisation for Economic Cooperation and Development ಇತ್ತೀಚೆಗೆ 57 ದೇಶಗಳ 400000ಕ್ಕೂ ಹೆಚ್ಚು ಸಂಖ್ಯೆಯಲ್ಲಿನ 15 ವರ್ಷ ವಯಸ್ಸಿನ ಮಕ್ಕಳಿಗಾಗಿ ನಡೆಸಿದ ಪರೀಕ್ಷೆಯ ಫಲಿತಾಂಶಾನುಸಾರ, ಮೇಲ್ಕಂಡ ದೇಶದ ಮಕ್ಕಳು ವಿಶ್ವದಲ್ಲೇ ಅತಿ ಪ್ರತಿಭಾವಂತ ಮಕ್ಕಳು ಎಂದು ಪರಿಗಣಿಸಲಾಗಿದೆ. ಮೇಧಾವಿತ್ವ ಮತ್ತು ಆಲೋಚನಾಶಕ್ತಿಯಲ್ಲಿ ಇವರನ್ನು ಮೀರಿಸಿದ ಮಕ್ಕಳಿಲ್ಲ. ವಿಜ್ನಾನ, ಗಣಿತ ಮತ್ತು ವಿಜ್ನಾನದ ಅನ್ವಯಪ್ರಾಕಾರಗಳಲ್ಲಿ ಈ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಮುಂದುವರೆದು ಈ ದೇಶದ ಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವುಳ್ಳ ಕಾರ್ಮಿಕ ಪೌರರಾಗಿ ಪರಿವರ್ತಿತರಾಗುವುದೂ ಅಷ್ಟೇ ಸತ್ಯ.
ಆಶ್ಚರ್ಯವೇ? ನೀವೊಬ್ಬರೇ ಏಕೆ? ಇಡೀ ವಿಶ್ವವೇ ಬೆರಗಾಗಿ ಕುಳಿತಿದೆ. ಯಾವುದು ಈ ದೇಶ? ಇದು ಹೇಗೆ ತಾನೇ ಸಾಧ್ಯ?
ಅತಿ ಆಧುನಿಕ ಹಾಗೂ Land of Opportunities ಎಂದು ಹೆಸರಾದ ಅಮೇರಿಕವೂ ಕೂಡಾ ಎಲ್ಲೋ ಇಪ್ಪತ್ತೊಂಭತ್ತನೇ ಸ್ಥಾನದಲ್ಲಿದೆ. ಅಮೇರಿಕದ ಶಿಕ್ಷಣ ತಜ್ನರು ಈ ದೇಶಕ್ಕೆ ಭೇಟಿಯಿತ್ತು ಅಲ್ಲಿಯ ಶಿಕ್ಷಣ ಪಧ್ಧತಿಯ ಬಗ್ಗೆ ಕೂಲಂಕಷ ಅಧ್ಯಯನ ಮಾಡತೊಡಗಿದ್ದಾರೆ.
ಈ ದೇಶ ಸ್ಕಾಂಡಿನೇವಿಯಾದ ಅಂಗವಾಗಿ ಸಂವಹನ(ನೋಕಿಯಾ), ಗಣಿಗಾರಿಕೆ, ಅರಣ್ಯಮೂಲದ ಉತ್ಪಾದನೆಗಳಲ್ಲಿ ಹೆಸರಾಂತ ದೇಶ ಫಿನ್ಲೆಂಡ್. ಅಮೇರಿಕದ “ದಿ ವಾಲ್ ಸ್ಟ್ರೀಟ್ ಜರ್ನಲ್”ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯ* ಪ್ರಕಾರ ಇಂಟರ್‍ನ್ಯಾಷನಲ್ ಪರೀಕ್ಷೆಯೊಂದರಲ್ಲಿ ಮೊದಲ ಸ್ಥಾನ ಗಳಿಸಿದ ಪ್ರಚಂಡ ಮಕ್ಕಳ ವಿದ್ಯಾಭ್ಯಾಸ ಕ್ರಮದಲ್ಲದೇನು ವಿಶೇಷ? ಸಂಕ್ಷಿಪ್ತವಾಗಿ ಹೇಳಬೇಕಂದರೆ - ಸುಶಿಕ್ಷಿತ ಶಿಕ್ಷಕರು ಮತ್ತು ವಯಸ್ಸಿಗೂ ಮೀರಿದ ಹೊಣೆಗಾರಿಕೆ ತೋರುವ ಮಕ್ಕಳು. ಪ್ರಾರಂಭದಲ್ಲಿ ದೊಡ್ಡವರ ಮೇಲು ಉಸ್ತುವಾರಿಯಿಲ್ಲದೆಯೇ ಬಹಳಷ್ಟು ಕಲಿಯುತ್ತವೆ ಇಲ್ಲಿನ ಮಕ್ಕಳು. ನಂತರ ಮಕ್ಕಳ ಕ್ಷಮತೆಗನುಗುಣವಾಗಿ ಪಠ್ಯಕ್ರಮ ನಿರೂಪಿಸಲಾಗುತ್ತದೆ. ಮೊದಲ ನೋಟಕ್ಕೆ ಅದೇನು ಮಹಾ ಅನಿಸಿದರೂ ಅನುಕರಿಸಲು ಅಷ್ಟು ಸುಲಭವಲ್ಲ ಅನ್ನುವುದು ತಥ್ಯ. ಇಲ್ಲಿನ ವಿದ್ಯಾಭ್ಯಾಸ ಕ್ರಮದ ಹಲವು ಕುತೂಹಲಕಾರಿ ಅಂಶಗಳು ಹೀಗಿವೆ.
೧. ಇಲ್ಲಿಯ ಪ್ರೈಮರಿ ಶಾಲೆಯಲ್ಲಿ ಕಲಿಸಲು ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಅವಕಾಶ. ಈ ಹುದ್ದೆಗೆ ಅತಿ ಹೆಚ್ಚಿನ ಸ್ಪರ್ಧೆ. ಶಿಕ್ಶಕರಾಗುವ ಮೊದಲು ನುರಿತ ಶಿಕ್ಷಕರೊಬ್ಬರ ಅಪ್ಪ್ರೈಂಟಿಸ್ ಆಗಿ ಹಲವು ವರ್ಷ ಕೆಲಸ ಮಾಡ ಬೇಕು. ಶಿಕ್ಷಕರಿಗೆ ಉತ್ತಮ ಸಂಭಾವನೆ ಕೂಡ ಸೌಲಭ್ಯ.
೨. ಹೊರಗೆ ಎಷ್ಟೇ ನಿರ್ಬಂಧವಿಲ್ಲದಿದ್ದರೂ ತರಗತಿಯಲ್ಲಿ ಮಾತ್ರ ಮೊಬೈಲ್, ಐಪಾಡ್ ಬಳಕೆ ನಿಷಿಧ್ಧ.
೩. ಬುಧ್ಧಿವಂತ ಮಕ್ಕಳಿಗಿಂತಲೂ ಕಡಿಮೆ ಕ್ಷಮತೆಯುಳ್ಳ ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಕಾಳಜಿ. ಪ್ರತಿಭಾವಂತ ಮಕ್ಕಳಿಗಾಗಿ ಯಾವ ವಿಶೇಷ ತರಬೇತಿಯೂ ಇಲ್ಲ. ಬುಧ್ಧಿವಂತ ಮಕ್ಕಳನ್ನು ಹಿಂದುಳಿದ ಸಹಪಾಠಿಗಳಿಗೆ ಸಹಾಯ ಮಾಡಲು ಪ್ರಚೋದಿಸಲಾಗುತ್ತದೆ. ಇದರಿಂದ ಇಬ್ಬರಿಗೂ ಸಹಾಯವಾಗುತ್ತೆ ಅಂತ ದೃಢ ನಂಬಿಕೆ.
೪. ಸರ್ಕಾರದ ವತಿಯಿಂದ ಪ್ರತಿ ಮನೆಯಲ್ಲೂ ಮಗುವಿನ ಜನ್ಮವಾದ ಕೂಡಲೆ ಒಂದು ಗಿಫ್ಟ್ ಹಾಂಪರ್ ಕೊಡಲಾಗುತ್ತೆ. ಅದರಲ್ಲಿ ಮಕ್ಕಳಿಗಾಗಿ ಚಿತ್ರಪುಸ್ತಕವೂ ಸೇರಿಸಲಾಗುತ್ತೆ. ಪ್ರತಿ ಮಾಲ್ ಮತ್ತು ಶಾಪಿಂಗ್ ಮಳಿಗೆಯಲ್ಲಿಯೂ ದೊಡ್ಡ ಪುಸ್ತಕ ಮಳಿಗೆ ಅಥವಾ ಲೈಬ್ರರಿ ಇರುವುದು ಕಡ್ಡಾಯ. ಮೊಬೈಲ್ ಪುಸ್ತಕ ಮಾರುವ ಮಳಿಗೆಗಳು ದೇಶದ ಮೂಲೆ ಮೂಲೆಗೂ ತಲುಪುತ್ತವೆ.
೫. ಮಕ್ಕಳ ಬಾಲ್ಯ ಯಾವ ರೀತಿಯ ಸ್ಪರ್ಧಾತ್ಮಕ ಮನೋಭಾವದ ಒತ್ತಡಗಳಿಲ್ಲದೆಯೇ ಕಳೆಯುತ್ತವೆ.
೬. ಮಕ್ಕಳನ್ನು ಮೊದಲಿನಿಂದಲೇ ಸ್ವಾವಲಂಬಿಗಳನ್ನಾಗಿ ಬೆಳೆಯಲು ಉತ್ತೇಜಿಸಲಾಗುತ್ತದೆ. ಶಾಲೆಗೆ ಕರೆದೊಯ್ಯಲು ಅಥವಾ ಮನೆಗೆ ಕರೆತರಲು ಪೋಷಕರು ಅಥವಾ ಆಯಾಗಳು ಹೋಗುವ ಪರಿಪಾಠವಿಲ್ಲ. ಎಷ್ಟೇ ಹಣವಂತರಿರಲಿ ಇದೇ ವ್ಯವಸ್ಥೆ. ಹರಿದ್ವರ್ಣ ಕಾಡುಗಳಲ್ಲಿ ನಸುಗತ್ತಲಿನಲ್ಲಿಯೇ ಒಬ್ಬೊಬ್ಬರೇ ದೂರದ ಶಾಲೆಗಳಿಗೆ ನಡೆದು ಹೋಗುವಷ್ಟು ಸಾಮರ್ಥ್ಯ ಕಲಿಯುತ್ತವೆ ಇಲ್ಲಿಯ ಮಕ್ಕಳು.
೭. ಶಾಲೆಗಳಲ್ಲಿ ತರಗತಿಯ ನಡುವೆ ಅಕಸ್ಮಾತ್ ತೂಕಡಿಸುವ ಅಥವಾ ನಿದ್ದೆ ಹೋಗುವ ಮಕ್ಕಳನ್ನು ಎಚ್ಚರಿಸಿ ಶಿಕ್ಷೆ ಕೊಡಲಾಗದು. ಅವರನ್ನು ಅವರ ಪಾಡಿಗೆ ಬಿಟ್ಟು ಪಾಠ ಮುಂದುವರಿಸುವಷ್ಟು ಸಂವೇದನೆ ಶಿಕ್ಷಕರಿಗಿದೆ.
“ಅಯ್ಯೋ ಬಿಡ್ರೀ. ಫಿನ್ಲೆಂಡ್ ಒಂದು ಚಿಕ್ಕ ದೇಶ. ಕಮ್ಮಿ ಜನಸಂಖ್ಯೆ. ಒಂದೇ ಭಾಷೆ, ಒಂದೇ ಜನಾಂಗ. ಅಲ್ಲಿ ಇದೆಲ್ಲಾ ಸಾಧ್ಯವಿರಬಹುದು ಕಣ್ರೀ! ನಮ್ಮ ದೇಶದ ಥರಾ ಇಷ್ಟೊಂದು ಜನಸಂಖ್ಯೆಯಿದ್ದು ನಾಕಾರು ಭಾಷೆಕಲೆತು ಪ್ರತಿಯೊಂದಕ್ಕೂ ಗುದ್ದಾಡ ಬೇಕಾದ ಪರಿಸ್ಥಿತೀಲಿ ಇಂಥಾದ್ದೆಲ್ಲಾ ಸಾಧ್ಯಾನೇನ್ರಿ?” ಅಂತ ಮೂಗೆಳೀಬೇಡಿ. ಚಿಕ್ಕ ಮಕ್ಕಳು ಎಲ್ಲಿದ್ರೂ ಚಿಕ್ಕ ಮಕ್ಕಳೇ. ಪ್ರಾಥಮಿಕ ಶಿಕ್ಷಣಕ್ಕೆ ಕೊಡಬೇಕಾದ ಮಹತ್ವ ನಮ್ಮಲ್ಲಿ ಸಿಗುತ್ತಾ ಇಲ್ಲ ಅನ್ನೋದು ಸರ್ವ ವಿದಿತ . ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಖ್ಯಾತ ವಿಜ್ನಾನಿ ಸಿ. ಎನ್. ಆರ್ . ರಾವ್ ಅವರು ತಮ್ಮ ಆತ್ಮಕಥೆಗಳಲ್ಲಿ ಸ್ಫೂರ್ತಿಗಾಗಿ ಕೃತಜ್ನತೆಯಿಂದ ಸ್ಮರಿಸೋದು ಕಡುಬಡತನದಲ್ಲಿದ್ದರೂ ನಿಸ್ವಾರ್ಥಭಾವದಿಂದ ದಾರಿ ತೋರಿಸಿದ ತಮ್ಮ ಶಾಲಾ ಮೇಷ್ಟ್ರುಗಳನ್ನೇ ಅಲ್ಲವೇ!
ಅರವತ್ತು ವರ್ಷಗಳ ಹಿಂದೆಯೇ ಖ್ಯಾತ ನಾಟಕಕಾರ ಕೈಲಾಸಂ “ಟೊಳ್ಳು ಗಟ್ಟಿ” ನಾಟಕದಲ್ಲಿ ಹೇಳಿದ ಹಾಗೆ “ಕೊಂಡಿಗಳಿಲ್ಲದ ಪಾತಾಳಗರಡಿ ಹಾಗಿರೋ ನಮ್ಮ ಇಂಗ್ಲೀಷ್ ವಿದ್ಯಾಭ್ಯಾಸ ಕ್ರಮ ಬಿಟ್ಬಿಟ್ಟು , ನಮ್ಮಕ್ಕಳ ಸ್ವಭಾವದಲ್ಲಿರೋ ಗುಣಗಳನ್ನು ಹೊರಕ್ಕೆ ಸೆಳೆಯುವ ವಿದ್ಯಾಭ್ಯಾಸಕ್ರಮವೊಂದನ್ನು ಏರ್ಪಡಿಸಿಕೊಂಡು ಅದನ್ನನುಸರಿದ್ರೇನೆ ನಮ್ಮ ದೇಶದೇಳಿಗೆ ಎಂಬೋ ” ಅವರ ಯೋಚ್ನೆ “ಕುಂಬಳಕಾಯಷ್ಟಿಲ್ದಿದ್ರೂನೂವೆ ರಾಗೀಕಾಳಷ್ಟಾದ್ರೂ” ನಮ್ಮಲ್ಲಿಯ ಶಿಕ್ಷಣ ತಜ್ನರಿಗೆ ಬಂದು ಪೂರ್ತಿ ಅಲ್ದಿದ್ರೂ ಸ್ವಲ್ಪಾನಾದ್ರೂ ಫಿನ್ಲೆಂಡಿನ ಒಳ್ಳೆಯ ವಿಧಾನಗಳನ್ನು ಅನುಕರಿಸೋಕ್ಕಾಗ್ಬಹುದೇನೋ! ಅಂತೂ ಯೋಚಿಸಲಾರ್ಹ ವಿಚಾರ.
**********************************************************************************
ಮೊದಲು ಈ ಲೇಖನ 17ನೆ ಮಾರ್ಚ್ 2008ರಂದು thatskannada.com ನಲ್ಲಿ ಪ್ರಕಟವಾಯಿತು.
Friday, 14 March 2008
ನಿಮ್ಮ ಮಕ್ಕಳು ಬುಧ್ಧಿವಂತರಾಗಬೇಕೆ? ಚಿಕ್ಕವರಾಗಿದ್ದಾಗಲೇ ಸಂಗೀತ ,ನೃತ್ಯ, ಚಿತ್ರಕಲೆ ಕಲಿಸಿ ಕೊಡಿ!
ವಿದ್ಯಾಭ್ಯಾಸ ತಜ್ನರು ಮತ್ತಿತರ ಆಸಕ್ತರು ಪೂರ್ಣವಾದ ರಿಪೋರ್ಟ್ ಓದಲೆಣಿಸಿದರೆ ಡ್ಯಾನಾ ಫೌಂಡೇಷನ್ ವೆಬ್‍ಸೈಟ್‍ನಿಂದ ಪಿಡಿಎಫ್ ಕಡತವನ್ನು( 146ಪುಟಗಳು) ಉಚಿತವಾಗಿ ಡೌನ್‍ಲೋಡ್ ಮಾಡಿಕೊಂಡು ಓದಬಹುದು.
- ನವರತ್ನ ಸುಧೀರ್