Sunday 23 December 2007

“ಯಾದ್ ವಶೇಮ್” - ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ.

- ನವರತ್ನ ಸುಧೀರ್

ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು.

“ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು ಪುಸ್ತಕಗಳನ್ನು ಓದಿ ನಾನು ಕಳಿಸಿದ ಅಭಿನಂದನಾಪೂರ್ವಕ ಈ ಮೇಲ್ ಮೂಲಕ ಪರಿಚಿತರಾದ ಶ್ರೀಮತಿ ನೇಮಿಚಂದ್ರರವರು, ನಾನು ಕಳಿಸಿದ್ದ ದೀಪಾವಳಿ ಶುಭಾಶಯಕ್ಕೆ ಪ್ರತ್ಯುತ್ತರವಾಗಿ ತಮ್ಮ ಹೊಸ ಕಾದಂಬರಿಯ ಬಗ್ಗೆ ಬರೆದು ಅದನ್ನು ಓದಲು ಪ್ರೇರೇಪಿಸಿದರು.

ಹೋದ ವಾರ ಗಾಂಧೀಬಜಾರ್ ನಲ್ಲಿನ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡುತಂದು ಇದೀಗ ಓದಿ ಮುಗಿಸಿದೆ. ನನ್ನ ಇತಿ ಮಿತಿಗಳ ಅರಿವಿರುವ ನಾನು ಈ ಕಾದಂಬರಿಯನ್ನು ವಿಶ್ಲೇಷಿಸಿ ವಿಮರ್ಶೆಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಓದಿ ಮುಗಿದ ನಂತರ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ಸಂಪದ ಸಮುದಾಯದಲ್ಲಿ ಹಂಚಿಕೊಳ್ಳುವ ಪ್ರಯತ್ನ ಈ ಕಿರುಲೇಖನ.

ಚಿಕ್ಕಂದಿನಿಂದಲೂ ದ್ವಿತೀಯ ಮಹಾಯುಧ್ಧ ಹಾಗೂ ಜರ್ಮನಿಯಲ್ಲಾದ ಹಾಲೋಕಾಸ್ಟ್ ಮಹಾಪಾತಕದ ಬಗ್ಗೆ ಬರೆಯಲ್ಪಟ್ಟ ಅನೇಕ ಪುಸ್ತಕ, ಕಾದಂಬರಿಗಳನ್ನು ಓದಿದ್ದೆ. ಎರಡೂ ವಿಶ್ವ ಸಮರಗಳಲ್ಲಿ ಬ್ರಿಟನ್‍ನ ಯುಧ್ಧಮಂತ್ರಿಯಾಗಿದ್ದ ಚರ್ಚಿಲ್‍ರ ದ್ವಿತೀಯ ಸಮರದ ಆರು ಹೊತ್ತಿಗೆಗಳಲ್ಲಿ ಪ್ರಕಟಿತ ಬರಹಗಳು, ಅಮೇರಿಕದ ಯಹೂದಿ ಮೂಲದ ಖ್ಯಾತ ಲೇಖಕರಾಗಿದ್ದ ಮ್ಯಾಕ್ಸ್ ಡಿಮಾಂಟ್, ಲಿಯಾನ್ ಉರಿಸ್‍ ಇತ್ಯಾದಿಯವರು ಬರೆದ ಪುಸ್ತಕಗಳು, ಕಾದಂಬರಿಗಳನ್ನು ಓದಿದ್ದ, ಮತ್ತು ಈ ವಿಷಯ ಕುರಿತ ಅನೇಕ ಚಲನಚಿತ್ರಗಳನ್ನು ನೋಡಿದ್ದ ನನಗೆ ಆಗ ನಡೆದಿದ್ದ ಘಟನೆಗಳ ಬಗ್ಗೆ ಒಂದು ನಿರ್ದಿಷ್ಟ ನಿಲುವು ರೂಪುಗೊಂಡಿತ್ತು. ಯಹೂದಿಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸ, ಬೇರೆಯವರ ದಬ್ಬಾಳಿಕೆಯಲ್ಲಿ ಅವರು ಪಟ್ಟ ಕಷ್ಟ ಕಾರ್ಪಣ್ಯಗಳು, ಇವೆಲ್ಲವನ್ನೂ ದಿಟ್ಟತನದಿಂದ ಎದೆಗುಂದದೆ ಎದುರಿಸಿ ಕಾಪಾಡಿಕೊಂಡ ತಮ್ಮ ಸಂಸ್ಕಾರ, ಮತ್ತು ಸಂಸ್ಕೃತಿ, ಶತೃರಾಷ್ಟ್ರಗಳಿಂದ ಸುತ್ತುವರಿದ್ದಿದ್ದರೂ ಇಸ್ರೇಲ್ ದೇಶದ ನಾಗರಿಕರ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳ ಬಗ್ಗೆ ಬಹಳ ಓದಿದ್ದ ನನಗೆ ಯಹೂದಿ ಜನಾಂಗದ ಬಗ್ಗೆ ಗೌರವಭಾವ ಬೆಳೆದಿತ್ತು. ಆದರೂ ಆಗಾಗ ಭಾವನಾತ್ಮಕವಾಗಿ ನನ್ನ ಮೇಲೆ ಯಹೂದಿಪರ ಏಕಪಕ್ಷೀಯ ಪರಿಣಾಮವಾಗಿದೆಯೇನೋ ಅಂತ ಅನಿಸಿದ್ದುಂಟು. ನನಗೆ ತಿಳಿದಂತೆ ಇದಕ್ಕೆ ವಿರುಧ್ಧ ದೃಷ್ಟಿಕೋಣವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಮಾಧ್ಯಮ ಸಾಕಷ್ಟು ಇರಲಿಲ್ಲ ಅಥವಾ ಇದ್ದರೂ ಅಷ್ಟೊಂದು ಜನಜನಿತವಾಗಿರಲಿಲ್ಲ.

ಮೊದಲ ನೋಟಕ್ಕೆ, ಜೆರೂಸಲೆಂನ ಗೋಳುಗೋಡೆ ಮತ್ತು ಮಸೀದಿಯ ವರ್ಣಚಿತ್ರವಿರುವ ನೇಮಿಚಂದ್ರರ ಕಾದಂಬರಿಯ ಮುಖಪುಟ ಬಹಳ ಆಕರ್ಷಕವಾಗಿ ಕಂಡಿತು. ಅಚ್ಚುಕಟ್ಟಾದ ಮುದ್ರಣ. ಯುಧ್ಧ ಮುಗಿದ ಅರವತ್ತು ವರ್ಷಗಳ ನಂತರ ಬಹುಚರ್ಚಿತ ಹಾಲೋಕಾಸ್ಟ್ ಬಗ್ಗೆ ಬೆಂಗಳೂರಿನ ಈ ಇಂಜಿನಿಯರ್ ಲೇಖಕಿ ಅದೇನು ಹೊಸದಾಗಿ ಬರೆದಿರುತ್ತಾರೋ ನೋಡುವಾ ಎಂದು ಸ್ವಲ್ಪ ಸಂಶಯಪೂರಿತ ಕುತೂಹಲದಿಂದಲೆ ಓದಲಾರಂಭಿಸಿದೆ. ಮೊದಲ ಹತ್ತು ಹದಿನೈದು ಪುಟಗಳಲ್ಲೇ ಕಾದಂಬರಿ ನನ್ನನ್ನು ಸೆರೆಹಿಡಿಯಿತು. ನಮ್ಮ ಚಾಮರಾಜಪೇಟೆ, ಗೋರಿಪಾಳ್ಯ, ಸೌತ್ ಪರೇಡ್, ಕೋನೇನ ಅಗ್ರಹಾರಗಳಲ್ಲಿ ಶುರುವಾದ ಕಥೆ ಜರ್ಮನಿಯ ಡಕಾವ್, ಅಲ್ಲಿಂದ ಅಮೇರಿಕ, ಇಸ್ರೇಲ್‍ನ ಟೆಲ್ ಅವಿವ್ ಮತ್ತು ಜೆರೂಸಲೆಂ ಎಲ್ಲಾ ಸುತ್ತಿಕೊಂಡು ಮರಳಿ ಚಾಮರಾಜಪೇಟೆಯಲ್ಲಿಯೇ ಮುಕ್ತಾಯವಾಯಿತು. ಅಲ್ಲಲ್ಲಿಯೇ ಸೂಕ್ತವಾಗಿ ಮುದ್ರಿಸಿದ ಉಲ್ಲೇಖಿತ ಸ್ಥಳಗಳ, ಮನೆಗಳ ಕಪ್ಪು ಬಿಳುಪು ಛಾಯಾಚಿತ್ರಗಳ ನೆರವಿನಿಂದ ಮನಃಪಟಲದ ಮೇಲಣ ಚಲನಚಿತ್ರವಾಗಿ ತೋರತೊಡಗಿತು. ಅವರ ಸರಳ ಸುಂದರ ಕನ್ನಡ, ವಿವರಣಾ ಶೈಲಿ, ಕಥೆಯಲ್ಲಿ ಬಂದ ಆಕಸ್ಮಿಕ ತಿರುವುಗಳು, ಚಿರಪರಿಚಿತ ನಂಬಲರ್ಹ ಪಾತ್ರಗಳು, ನಲವತ್ತರಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಔದ್ಯೋಗಿಕ ಇತಿಹಾಸ, ಎಲ್ಲವನ್ನು ಚಾಣಾಕ್ಷತೆಯಿಂದ ಹೆಣೆದ ರೀತಿ ನಿಜಕ್ಕೂ ಪ್ರಶಂಶಾರ್ಹ. ನಾನು ಹಿಂದೆ ಓದಿದ್ದ ನೆವಿಲ್ ಶ್ಯೂಟ್ ಕಾದಂಬರಿಗಳಲ್ಲಿನ ಸಾಧಾರಣ ಭಾವೋದ್ವೇಗಗಳಿರುವ ಹುಲುಮಾನವ ಪಾತ್ರಗಳು ನೆನಪಿಗೆ ಬಂದವು. ಹಾಗೆಯೆ, ಫ್ರೆಡರಿಕ್ ಫೋರ್‍ಸೈಥ್‍ ಕಾದಂಬರಿಗಳಂತೆ ಕಾಲಚಕ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಹೋಗಿಬರುತ್ತ ಕಥೆ ಈಗಿನ ಇಪ್ಪತ್ತೊಂದನೇ ಶತಮಾನಕ್ಕೆ ಬಂದು ಸೇರಿ ಈಗಿನ ವಿದ್ಯಮಾನಗಳನ್ನು ಆ ಹಳೆಯ ಇತಿಹಾಸದ ಬೆಳಕಿನಲ್ಲಿನೋಡುವ ಪ್ರಯತ್ನ ಮಾಡುತ್ತದೆ. ನಾನು ಕಾದಂಬರಿಯ ಕಥೆಯನ್ನು ಹೇಳಿ ಓದುಗರ ಸ್ವಾರಸ್ಯವನ್ನು ಕಡಿಮೆ ಮಾಡಬಯಸುವುದಿಲ್ಲ.

ನನಗೆ ಬಹಳ ಮೆಚ್ಚಿಗೆಯಾದ ಅಂಶ ಉತ್ತರಾರ್ಧದಲ್ಲಿ ಕಾದಂಬರಿಯ ನಾಯಿಕೆಯ ಮನಸ್ಸಿನಾಳದ ಚಿಂತನ. ಮೊದಮೊದಲು ವಿಧಿಯ ಹೊಡೆತಕ್ಕೆ ಸಿಕ್ಕಿ ದಿಕಾಪಾಲಾಗಿದ್ದ ಹೆಣ್ಣೊಬ್ಬಳು, ಹೊರದೇಶದಲ್ಲಿ ಕಷ್ಟದ ಕುಲುಮೆಯಲ್ಲಿ ಬೆಂದರೂ ಧೃತಿಗೆಡದೆ, ಸುತ್ತಲಿನವರ ನಿರಪೇಕ್ಷ, ನಿಷ್ಕಾಮ ಪ್ರೀತಿ ವಾತ್ಸಲ್ಯಗಳ ನೆರವಿನಿಂದ ತನ್ನತನ ಕಂಡುಕೊಳ್ಳುತ್ತಾಳೆ. ತನ್ನವರ ಬಗ್ಗೆ ಅಪಾರ ಪ್ರೀತಿ ಅನುಕಂಪ ಇದ್ದಾಗ್ಯೂ, ಯಾವ ಭಾವಾತ್ಮಕ ಒತ್ತಡಕ್ಕೂ ಈಡಾಗದೆ ಯಾವ ಒಂದು ಪೂರ್ವಗ್ರಹವಿಲ್ಲದೆ, ಏಕಪಕ್ಷೀಯವಾಗಿಲ್ಲದ ತಾರ್ಕಿಕವಾದ ಒಂದು ದಿಟ್ಟ ನಿಲುವು ತಳಿಯುತ್ತಾಳೆ. ಯಹೂದಿಯಾದರೂ ತನ್ನವರ ನಂಬಿಕೆ, ತಾತ್ವಿಕ ನಿಲುವು, ಬೇರೆಯವರ ಬಗ್ಗೆ ಅವರ ನಡತೆ, ವರ್ತನೆ, ಯಾವುದೂ ಪ್ರಶ್ನಾತೀತವಲ್ಲ ಅವಳಿಗೆ.

ನೇಮಿಚಂದ್ರರವರಿಗೆ ಇತಿಹಾಸ ಒಂದು ನೆಪಮಾತ್ರ. ಬೇರೆ ಅನೇಕ ಕಾದಂಬರಿಗಳಂತೆ ಯಾವುದೋ ಒಂದು ಜಾಡು ಹಿಡಿದು, ಕಾದಂಬರಿಕಾರರ ಪೂರ್ವಗ್ರಹಗಳನ್ನು ಓದುಗರ ಮೇಲೆ ಹೇರುವ ಪ್ರಯತ್ನವಿಲ್ಲ. ಓದುಗರನ್ನು ಸಕಾರಾತ್ಮಕವಾಗಿ ಚಿಂತಿಸಲು ಪ್ರಚೋದಿಸುವ ಪ್ರಾಮಾಣಿಕ ಪ್ರಯತ್ನ ಈ ಕಾದಂಬರಿಯದು ಅಂತ ನನ್ನ ಅನಿಸಿಕೆ.

ಕಥೆಯ ಬೆನ್ನು ಹತ್ತಿ ಇವರು ಮಾಡಿದ ಸಂಶೋಧನೆ, ಸ್ವಂತ ಹಣ ಖರ್ಚುಮಾಡಿ ಕಥೆ ನಡೆಯುವ ಬೇರೆ ಬೇರೆ ಖಂಡಗಳ ಪ್ರತಿಯೊಂದು ನಗರಗಳಿಗೂ, ಸ್ಥಳಗಳಿಗೂ ಭೇಟಿಯಿತ್ತು, ಅಲ್ಲಿಯ ಜನರನ್ನು ಹುಡುಕಿ ಸಂದರ್ಶಿಸಿ, ಅಂತರ್ಜಾಲದಲ್ಲಿ ತಡಕಾಡಿ, ಅನೇಕ ಪುಸ್ತಕ, ಹೊತ್ತಿಗೆಗಳನ್ನು ಓದಿ ಎಲ್ಲವೂ “ ಆಥೆಂಟಿಕ್” ಆಗಿರಬೇಕೆಂಬ ಹಟ ಸಾಧಿಸಿ ತೋರಿಸಿದ ಇವರ ಪ್ರಯತ್ನ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಎಚ್. ಎ. ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು, ಸಂಸಾರ ಮತ್ತು ವೃತ್ತಿಜೀವನದ ಸಾಮರಸ್ಯ ಕಾಪಾಡಿಕೊಳ್ಳುತ್ತ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಾರ್ಯ ಅಸಾಧಾರಣವಲ್ಲದೆ ಮತ್ತೇನು?

ನವಕರ್ನಾಟಕ ಪ್ರಕಾಶನದ ಈ ಕಾದಂಬರಿ ಓದಿ ನೋಡಿ ಅಂತ ಆಗ್ರಹಿಸಲು ನನಗೆ ಸ್ವಲ್ಪವೂ ಸಂಕೋಚವಿಲ್ಲ.


( ಮೇಲ್ಕಂಡ ಪುಸ್ತಕ ಪರಿಚಯ ಮೊದಲು ಬಾರಿ "ಸಂಪದ" -ಅಂತರ್ಜಾಲ -ಪತ್ರಿಕೆಯಲ್ಲಿ ೨೨-೧೨-೨೦೦೭ರಂದು ಪ್ರಕಟವಾಯಿತು. http://sampada.net/article/6756 )

No comments: