Friday, 28 September 2007

ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ

- ನವರತ್ನ ಸುಧೀರ್

ಇಸವಿ ಕ್ರಿಸ್ತ ಶಕ ೨೦೦೭. ಸೆಪ್ಟೆಂಬರ್ ತಿಂಗಳಿನ ಒಂದು ದಿನ. ಇವತ್ತೇ ಎಂದಿಟ್ಟುಕೊಳ್ಳಿ. ಶ್ರೀ ರಾಮ ಹನುಮಂತನೊಂದಿಗೆ ರಾಮೇಶ್ವರದ ತಟದಲ್ಲಿ ನಿಂತು ದೂರದಿಂದಲೇ ರಾಮ ಸೇತುವೆಯನ್ನು ಸಿಂಹಾವಲೋಕನ ಮಾಡುತ್ತಿದ್ದ.

“ಪ್ರಿಯ ಹನುಮಾನ್, ನೀನು ಬೇರೆ ಕಪಿಗಳ ಸಹಾಯದಿಂದ ನಿರ್ಮಿಸಿದ ಈ ಸೇತುವೆ ಸಾವಿರಾರು ವರ್ಷಗಳ ಕಾಲ ಅದೆಷ್ಟು ಸುಭದ್ರ ಹಾಗೂ ಸುರಕ್ಷಿತವಾಗಿದೆಯಲ್ಲ! ಅದೇ ನೋಡು ಹೈದರಾಬಾದಿನಲ್ಲಿ ಮೊನ್ನೆ ಮೊನ್ನೆ ತಾನೆ ಗ್ಯಾಮನ್ ಕಂಪನಿಯವರು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಕಟ್ಟಿದ ಸೇತುವೆ ಹೇಗೆ ಕುಸಿದುಬಿದ್ದಿತು?”

ಹನುಮಾನ್ ಹೇಳಿದ “ಸ್ವಾಮಿಗಳೇ, ನಾವೆಲ್ಲರೂ ನಿಮ್ಮ ಮೇಲಿನ ಭಕ್ತಿಯೊಂದರ ಅಧಾರದ ಮೇಲೆ ಪ್ರತಿಯೊಂದು ಕಲ್ಲಿನ ಮೇಲೆಯೂ ನಿಮ್ಮ ನಾಮ ಮಾತ್ರವೊಂದನ್ನು ಬರೆದು ಸಮುದ್ರದಲ್ಲಿ ಎಸೆದಿದ್ದೆವು. ಅವೆಲ್ಲ ಒಂದಾಗಿ ಈ ಸೇತುವೆಯ ನಿರ್ಮಾಣವಾಯಿತು. ನಮಗೆ ನಿಮ್ಮ ಭಕ್ತಿಯೊಂದು ಬಿಟ್ಟು ಯಾವ ಟಾಟಾ ಸ್ಟೀಲ್‍ರವರ ಉಕ್ಕು ಅಥವಾ ಅಂಬುಜ ಕಂಪನಿಯ ಸಿಮೆಂಟ್‍ನ ಅವಶ್ಯಕತೆ ಇರಲಿಲ್ಲ. ಅದು ಸರಿ, ಈಗೇಕೆ ಅಷ್ಟು ಹಳೆಯ ವಿಷಯದ ಪ್ರಸ್ತಾಪ?”

“ ಅಲ್ಲವೋ ಹನುಮಾನ್, ನಿನಗೇಕೆ ಅರ್ಥವಾಗುತ್ತಿಲ್ಲ? ಈಗ ಭಾರತದಲ್ಲಿ ಕೆಲವರು ಈ ಸೇತುವೆಯನ್ನು ಕೆಡವಿ ಒಂದು ಮಹಾ ಕಾಲುವೆ ಕಟ್ಟಲು ಹೊರಟಿದ್ದಾರೆ. ಸೇತುವೆ ಕೆಡವುವ ಗುತ್ತಿಗೆ ಕೊಡುವುದರಲ್ಲಿ ಬಹಳ ಹಣ ಗಳಿಸಬಹುದು. ಇನ್ನು ಕಾಲುವೆ ಮಾಡುವ ಗುತ್ತಿಗೆಯಲ್ಲಿ ಇನ್ನೂ ಜಾಸ್ತಿ ಹಣ ಗಳಿಸಬಹುದು. ಅರ್ಥವಾಯಿತೆ ವಾನರರಾಜರಿಗೆ?” ರಾಮ ಉವಾಚ.

ಹನುಮಂತನಿಗೆ ಇನ್ನೂ ಅರ್ಥವಾಗಲಿಲ್ಲ. “ ನಾವು ಸ್ವತಃ ಸರ್ಕಾರದ ಮುಂದೆ ಹೋಗಿ ಮನವಿ ಸಲ್ಲಿಸಿದರೆ ಹೇಗೆ? ಆಗಲಾದರೂ ನಂಬಬೇಕಲ್ಲವೇ?”

ಶ್ರೀ ರಾಮ ನಕ್ಕು ಹೇಳಿದ “ ಅಯ್ಯಾ ಆಂಜನೇಯ, ಇದು ಕಲಿ ಯುಗ. ಎಲ್ಲ ಬದಲಾಗಿದೆ? ನಾವೀಗ ಅಲ್ಲಿಗೆ ಹೋದರೆ ಅವರಿಗೆ ಏಜ್ ಪ್ರೂಫ್ -ಅಂದರೆ ವಯಸ್ಸಿನ ಪುರಾವೆ ಗಾಗಿ ಬರ್ಥ್ ಸರ್ಟಿಫಿಕೇಟ್ ಅಥವಾ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಕೇಳುತ್ತಾರೆ. ಅದೆಲ್ಲಿಂದ ತರ್ತೀಯಾ? ಎಲ್ಲ ಕಡೆಯೂ ಬರಿಗಾಲಿನಲ್ಲಿ ಅಥವಾ ಎತ್ತಿನ ಬಂಡಿಯಲ್ಲೋ ಓಡಾಡಿದ ನಮಗೆ ಡ್ರೈವಿಂಗ್ ಲೈಸೆನ್ಸ್ ಕೂಡ ಇಲ್ಲ.
ಇನ್ನು ಅಡ್ರೆಸ್ ಪ್ರೂಫ್ ಗಾಗಿ ರೇಷನ್ ಕಾರ್ಡ್ ಕೂಡ ಇಲ್ಲ. ಹುಟ್ಟಿ ಬೆಳೆದ ಅಯೋಧ್ಯೆ ಇದೆಯೋ ಇಲ್ಲವೋ ಅಂತ ಇತಿಹಾಸಕಾರರು ಕಳೆದ ೫೦ ವರ್ಷಗಳಿಂದಲೂ ಹೊಡೆದಾಡುತ್ತಿದ್ದಾರೆ. ಇನ್ನು ನಾನು ಬಿಲ್ಲು ಬಾಣ ಹಿಡಿದು ದೆಹಲಿಗೆ ಹೋದೆನೋ, ಸಾಧಾರಣ ಮನುಷ್ಯ ನನ್ನನ್ನು ಗುರುತಿಸಿದರೂ, ಮಂತ್ರಿ ಅರ್ಜುನ್ ಸಿಂಗ್ ಮಾತ್ರ ನಾನು ಯಾವುದೋ ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂದುಕೊಂಡು ಯಾವುದೋ ಐ.ಐ ಟಿ ಯಲ್ಲಿ ಸುರಕ್ಷಿತ ಕೋಟಾದಲ್ಲಿ ಸೀಟ್ ಕೊಡಬಹುದಷ್ಟೇ.! ನಾರಾಯಣಮೂರ್ತಿಗಳ ಹಾಗೆ ಒಂದು “ತ್ರೀ ಪೀಸ್ ಸೂಟ್” ಹಾಕಿ ಕೊಂಡೇನಾದರೂ ಹೋದರೆ ಭಕ್ತರು ಕೂಡ ನನ್ನನ್ನು ನಂಬುವುದಿಲ್ಲ. ಒಂದು ವಿಚಿತ್ರ ರೀತಿಯ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ.”

ಹನುಮಾನ್ ಉವಾಚ. “ನಾನೇ ನಿಮ್ಮ ಪರವಾಗಿ ಹೋಗಿ ಈ ಸೇತುವೆ ಕಟ್ಟಿದವನು ನಾನೆ ಎಂದು ಡಿಕ್ಲೇರ್ ಮಾಡಿದರೆ?”

“ ಅಯ್ಯಾ ಪವನಸುತಾ! ನಿನಗೆ ಅದೇನು ಹೇಳಲಿ? ಅಲ್ಲಿ ನಿನ್ನ ಯಾವ ಬೇಳೆಯೂ ಬೇಯುವುದಿಲ್ಲ. ಅವರು ನಿನಗೆ ಸೇತುವೆಯ ನಕ್ಷೆ, ಸಂಪೂರ್ಣ ಪ್ರಾಜೆಕ್ಟ್ ರಿಪೋರ್ಟ್, ಒಟ್ಟು ಹಣ ಹೂಡಿಕೆಯ ವಿವರಗಳು ಇತ್ಯಾದಿ ಅನೇಕ ವಿವರ, ದಾಖಲೆಗಳನ್ನು ಸಲ್ಲಿಸಲು ಹೇಳುತ್ತಾರೆ. ವಿತ್ತ ಮಂತ್ರಿ ಚಿದಂಬರಂ ಕೂಡ ಅಷ್ಟು ಹಣ ಕಪಿಗಳಾದ ನಿಮಗೆಲ್ಲಿಂದ ಬಂತು? ಟ್ಯಾಕ್ಸ್ ಕೊಟ್ಟಿದ್ದೀರಾ? ಯಾವುದಾದರೂ ಹೊರ ದೇಶದಿಂದ ಹಣದ ಸಹಾಯವಿತ್ತೇ? ಹೀಗೇ ಏನೇನೋ ಕೇಳಿ ಸತಾಯಿಸುತ್ತಾರೆ. ಕೊನೆಗೆ ಕಂಪ್ಲೀಷನ್ ಸರ್ಟಿಫಿಕೇಟ್ ಎಲ್ಲಿ? ಯಾರು ಕೊಟ್ಟದ್ದು? ಯಾವಾಗ ಕೊಟ್ಟದ್ದು? ದಾಖಲೆಗಳಿಲ್ಲವೋ ನೀ ಸತ್ತೆ! ನಿನಗೆ ಕೆಮ್ಮು ಇರಬಹುದು. ಆದರೆ ಡಾಕ್ಟರ್ ಹೇಳಬೇಕು. ಪೆಂಷನ್ ತೊಗೊಳ್ಳುವಾಗಲೂ ನಿಮ್ಮ ಬ್ಯಾಂಕ್ ಮ್ಯಾನೇಜರ್ ನೀನು ಬದುಕಿರುವೆ ಎಂಬ ಸರ್ಟಿಫಿಕೇಟ್ ಕೊಡಬೇಕು! ನೀನಂದುಕೊಂಡಷ್ಟು ಸುಲಭವಲ್ಲ ಜೀವನ ಈಗಿನ ಭಾರತದಲ್ಲಿ” ಎಂದ ಶ್ರೀ ರಾಮ.

ಹನುಮಾನ್ ಹತಾಶನಾಗಿ “ನನಗೆ ಈ ಇತಿಹಾಸಕಾರರ ವರ್ತನೆಯೇ ಅರ್ಥವಾಗುವದಿಲ್ಲ. ನೀವು ಆಗಿಂದಾಗ್ಗೆ ಭೂಮಿಯಲ್ಲಿ ಅವತರಿಸಿ ಸಂತ ಸೂರದಾಸ, ತುಳಸೀದಾಸ, ತ್ಯಾಗರಾಜ, ಜಯದೇವ, ಭದ್ರಾಚಲ ರಾಮದಾಸ, ತುಕಾರಾಮ್ ಮುಂತಾದವರಿಗೆ ದರ್ಶನ ನೀಡಿದ್ದರೂ ಕೂಡ, ರಾಮಯಣ ಕೇವಲ ಕಾಲ್ಪನಿಕ, ಶ್ರೀ ರಾಮ ಯಾವದೋ ಕವಿಯ ಕಾಲ್ಪನಿಕ ಸೃಷ್ಟಿ ಎಂದೆಲ್ಲ ಹೇಳುತ್ತಾರಲ್ಲ. ಇವರಿಗೆ ಬೆಂಡೆತ್ತುವುದು ಹೇಗೆ? ನನಗೆ ತೋಚುವುದೊಂದೇ ಉಪಾಯ. ಭೂಮಿಯ ಮೇಲೆ ರಾಮಾಯಣದ ಪುನರಾವರ್ತನೆ ಮಾಡಿದರೆ ಹೇಗೆ? ಆಗಲಾದರೂ ನಂಬಲೇಬೇಕಲ್ಲ!”

ಶ್ರೀ ರಾಮ ಕರುಣಾಭರಿತ ದೃಷ್ಟಿಯಿಂದ ಹನುಮಂತನ ಕಡೆ ನೋಡುತ್ತ “ ಅಯ್ಯೋ ಮಂಕೇ ( ಮಂಕಿಯೇ?), ನನಗೂ ಈ ಐಡಿಯಾ ಮುಂಚೆಯೇ ಹೊಳೆದಿತ್ತು. ಆದರೆ ರಾವಣನ ಪ್ರಕಾರ ಆ ಬೃಹದ್ರಾಕ್ಷಸ ಕರುಣಾನಿಧಿಯ ತುಲನೆಯಲ್ಲಿ ರಾವಣ ಕೂಡ ಓರ್ವ ಸಂತನಂತೆ ಕಂಡುಬಂದು ಅವನೇ ನನ್ನ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಬಹುದು ಎಂಬ ಹೆದರಿಕೆಯಂತೆ. ಸುವರ್ಣ ಜಿಂಕೆಯಾಗಿ ಸೀತೆಯನ್ನು ಆಕರ್ಷಿಸಿದ ಅವನ ಮಾವ ಮಾರೀಚನೂ ಕೂಡ ಹಿಂದೀ ಚಲನಚಿತ್ರ ನಟ ಸಲ್ಮಾನ್ ಖಾನ್ ಬೇಲ್ ಮೇಲೆ ಇರುವವರೆಗೂ ನಾನು ಭೂಮಿಯಮೇಲೆ ಕಾಲಿಡುವುದಿಲ್ಲ ಅಂತ ಪ್ರತಿಜ್ನೆ ಮಾಡಿದ್ದಾನಂತೆ. ಹೀಗಿರಲು ರಾಮಾಯಣದ ಪುನರಾವರ್ತನೆ ಹೇಗೆ ತಾನೆ ಸಾಧ್ಯ?” ಎಂದು ಹೇಳಿ ತಲೆಯ ಮೇಲೆ ಕೈ ಇಟ್ಟು ಕುಳಿತುಕೊಂಡ.

**********************************************

A slightly modified version of above article was published by Thatskannada.com on 27th Sep 2007 . See the link below -
http://thatskannada.oneindia.in/column/humor/280907-Siyaram-Jaihanuman-Humor-Essay.html

No comments: